ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ

ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ

ಬರಹ

ಗಿಡಗಳಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ತ್ರಾಸು ಕೊಡಬೇಕು!?

ನನ್ನಲ್ಲಿ ಗಿಡಗಳಿಗೆ ತ್ರಾಸು ಕೊಡಬೇಕು ಎಂಬ ಚಿಂತನೆ ಮೂಡಲು ವಿಶೇಷ ಕಾರಣವಿದೆ. ಇತ್ತೀಚೆಗೆ ನಮ್ಮ ಮನೆಯ ಅಂಗಳದಲ್ಲಿ ಕೆಂಪು ದಾಸವಾಳ ಗಿಡದ ದಪ್ಪ ಪೊಟರೆಗಳಲ್ಲಿ ಒಂದಲ್ಲ..ಎರಡಲ್ಲ..ಮೂರು ಬುಲ್-ಬುಲ್ ಜೋಡಿ ಹಕ್ಕಿಗಳು ಮೂರು ಗೂಡು ಕಟ್ಟಿದ್ದವು. ನಮ್ಮ ಮನೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು.

ಬೆಕ್ಕು, ನಾಯಿ ಗಿಡದ ಪಕ್ಕ ಸುಳಿದರೆ ಮನೆ ಮಂದಿ ಓಡಿ ಬಂದು ತಮ್ಮ ಮೊಟ್ಟೆ ಉಳಿಸಿಕೊಡುವಂತೆ, ಅಪಾಯದ ಮುನ್ಸೂಚನೆ ಎಂಬಂತೆ ಬುಲ್-ಬುಲ್ ದಂಪತಿಗಳು ಕೂಗುತ್ತಿದ್ದವು. ಆ ಧಾವಂತದಲ್ಲಿ ನಮ್ಮ ಮನೆಯಲ್ಲಿ ಎಲ್ಲರೂ ಪಕ್ಷಿ ತಜ್ನರು, ಪ್ರಿಯರು ಹಾಗು ರಕ್ಷಕರು ಹೀಗೆ ನಾನಾ ಅವತಾರ ತಾಳಿದ್ದರು. ಪಾಪ ಅವುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯ್ದವಳು ನನ್ನ ತಂಗಿ ದಿವ್ಯಾ.

೬-೭ ದಿನ ಹೀಗೆಯೇ ಕಳೆಯುತ್ತಿದ್ದಂತೆ ಪ್ರತಿಯೊಂದು ಗೂಡಿನಲ್ಲಿ ೩ ಮೊಟ್ಟೆಗಳು ಮಿನುಗತೊಡಗಿದವು. ಬಿಳಿ ಮೊಟ್ಟೆಯ ಮೇಲೆ ಕಂದು, ಕೆಂಪು ಬಣ್ಣದ ಚುಕ್ಕೆಗಳು. ಮನೆಯ ಚಿಕ್ಕಮಕ್ಕಳನ್ನು ದಂಡಿಸಿದ್ದಾಯಿತು. ಮೊಟ್ಟೆ ಬಾಚಲು ಯತ್ನಿಸುವ ಬೆಕ್ಕು, ನಾಯಿ, ಕಾಗೆ ಹಾಗು ಗಿಡುಗಗಳ ಕಾವಲು ಕಾಯ್ದಿದ್ದಾಯಿತು. ಆದರೆ ೧೦ನೇ ದಿನ ಮೊಟ್ಟೆಯೊಡೆದು ಪುಟ್ಟ-ಪುಟ್ಟ ಬುಲ್-ಬುಲ್ ಮರಿಗಳು ಬರಬಹುದು ಎಂದು ಕಾಯ್ದಿದ್ದ ನಮಗೆಲ್ಲ ಆಘಾತ ಕಾಯ್ದಿತ್ತು.

ಎಲ್ಲ ಸಂಭವನೀಯ ದಾಳಿಯಿಂದ ರಕ್ಷಿಸಲು ಕ್ರಮ ಕೈಗೊಂಡಿದ್ದ ನಾವು ಇರುವೆಗಳನ್ನು ಗಮನಿಸಿಯೇ ಇರಲಿಲ್ಲ. ದಾಸವಾಳ ಗಿಡದ ಹೂವಿನಲ್ಲಿರುವ ಮಧು ಹೀರಲು ಸಾವಿರಾರು ಇರುವೆಗಳ ದಂಡು ಎಲ್ಲ ಟೊಂಗೆಗಳನ್ನು ಆಕ್ರಮಿಸಿದ್ದವು. ೨ ದಿನಗಳ ಅಂತರದಲ್ಲಿ ೩ ಗೂಡು ಹೊಕ್ಕ ಇರುವೆಗಳು ಬುಲ್-ಬುಲ್ ಹಕ್ಕಿಗಳ ಮೊಟ್ಟೆಗಳ ತೂತು ಕೊರೆದು ಒಳಗಿನ ರಸ ಹೀರಿದ್ದವು. ಮೊಟ್ಟೆಗಳ ಮಾರಣ ಹೋಮ ನಡೆದೇ ಹೋಯಿತು.

ಭೂಮಿಯ ಮೇಲಿರುವ ಸಾಕಷ್ಟು ಇರುವೆಗಳು ತಮ್ಮ ಹೊಟ್ಟೆಪಾಡಿಗಾಗಿ ಕಾರ್ಬೋಹೈಡ್ರೇಟ್ ಗಳಿಂದ ತುಂಬಿರುವ ಹೂವು ಬಿಡುವ ಸಸ್ಯಗಳನ್ನು ಆಶ್ರಯಿಸಿವೆ ಎಂಬುದು ನನ್ನ/ ನಮ್ಮ ಗಮನಕ್ಕೆ ಬಂದಿರಲಿಲ್ಲ. ‘ಬಡಿಗೇರ್ ಇರುವೆ’ ಎಂದು ಗುರುತಿಸಲಾಗುವ ಒಂದು ಜಾತಿಯ ಇರುವೆಗಳ ದಂಡು ಆಹಾರಕ್ಕಾಗಿ ಗಿಡದ ಬುಡದಲ್ಲಿಯೇ ತಮ್ಮ ಸೈನ್ಯ ಹರಡುತ್ತವೆ ಎಂಬುದು ನಂತರ ಗೊತ್ತಾಯಿತು. ಅಲ್ಲಿಯೇ ಮನೆ ನಿರ್ಮಿಸಿ, ಮೇಲಿಂದ ಇಳಿಸಿ ತಂದ ಆಹಾರವನ್ನು ಗೂಡುಗಳಲ್ಲಿ ಸಂಗ್ರಹಿಸಿಟ್ಟು ಬೇರೆ ಜಾತಿಯ ಇರುವೆಗಳಿಂದ ರಕ್ಷಿಸಿಕೊಳ್ಳುತ್ತವೆ. ಅಕ್ಷರಶ: ಕೋಟೆಯಂತೆ! ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಲುಕಿಕೊಂಡು ಸಾಯುವಂತೆ ತಂತ್ರ ರೂಪಿಸಿದ್ದವು ಆ ಕ್ರೂರಿ ಇರುವೆಗಳು.

ಅರಿಝೋನಾ ವಿಶ್ವವಿದ್ಯಾಲಯದಲ್ಲಿ ಕೀಟ ಶಾಸ್ತ್ರ ಪ್ರಾಧ್ಯಾಪಕರಾಗಿರುವ ಅಲೆಕ್ಸ್ ವೈಲ್ದ್ ಹೇಳುವಂತೆ, ಗಂಡು ಇರುವೆಗಳು ತುಸು ಹಾರಬಲ್ಲ ವೀರ್ಯ ಕ್ಷಿಪಣಿಗಳು! ಎಲ್ಲ ಇರುವೆಗಳು ಸಮಾಜ ಜೀವಿಗಳೇ. ಆದರೆ ಕೆಲವು ಮಾತ್ರ ಸಂಕೀರ್ಣವಾದ ಕಾಲೋನಿ ರೂಪಿಸಿಕೊಳ್ಳುತ್ತವೆ. ಕೆಲವು ಪ್ರಭೇಧಗಳು ಆದಿ ಮಾನವರಂತೆ ಇನ್ನೂ ಬೆಳೆಯುವ ಹಂತದಲ್ಲಿವೆ. ಕೆಲವು ಇರುವೆಗಳು ಗುಂಪು ಕಟ್ಟಿಕೊಂಡು ಬೇಟೆಗೆ ತೆರಳಿದರೆ, ಕೆಲವು ಒಂಟಿ ಸಲಗದಂತೆ ಏಕಾಂಗಿಯಾಗಿ ತೆರಳುತ್ತವೆ. ಉದಾಹರಣೆಗೆ: ಬುಲ್ ಡಾಗ್ ಇರುವೆ, ಮಿಲಿಟರಿ ಇರುವೆ, ಟ್ರ್ಯಾಪ್-ಜಾ-ಆಂಟ್ ಇರುವೆ, ಎಂಟೇನಾ ಇರುವೆ ಇತ್ಯಾದಿ.

ಒಟ್ಟಾರೆ ನಮ್ಮ ಮನೆ ಅಂಗಳದ ಆ ದಾಸವಾಳ ಗಿಡ ತನ್ನ ಮೈಕೊಡವಿಕೊಂಡಿದ್ದರೂ ೯ ಬುಲ್-ಬುಲ್ ಮರಿಗಳು ನಮ್ಮ ಅಂಗಳದಲ್ಲಿ ಜೀವ ತಳೆಯುತ್ತಿದ್ದವು. ಪಾಪ ತಂದೆ, ತಾಯಿ ಬುಲ್-ಬುಲ್ ಹಕ್ಕಿ ಆಗೊಮ್ಮೆ-ಈಗೊಮ್ಮೆ ಬಟ್ಟೆ ಒಣಗಿಸಲು ಕಟ್ಟಿರುವ ತಂತಿಯ ಮೇಲೆ ಬಂದು ಕುಳಿತು ಎರಡು ಸುತ್ತು ಕೂಗಿ, ಚಡಪಡಿಸಿ ಮತ್ತೆ ಎತ್ತಲೋ ಹಾರಿ ಹೋಗುತ್ತವೆ.

ಆ ಬುಲ್-ಬುಲ್ ದಂಪತಿಗಳನ್ನು ನೋಡಿದಾಗಲೊಮ್ಮೆ ಮೈ ಜುಮ್ ಎನ್ನುತ್ತದೆ. ವಿಷಾದ ಆವರಿಸುತ್ತದೆ. ಆ ದಾಸವಾಳ ಗಿಡಕ್ಕೆ ಶಾಕ್ ಕೊಡಲೆ ಎನ್ನುತ್ತದೆ ಮನಸ್ಸು. ಕಾಂಕ್ರೀಟ್ ಕಾಡೇ ಎದ್ದು ಹೊಡೆಯುವ ಧಾರವಾಡದಲ್ಲಿ ಅಪರೂಪಕ್ಕೆ ಕೆಲ ಮನೆಗಳ ಅಂಗಳದಲ್ಲಿ ಹೂ ಗಿಡಗಳಿವೆ. ಆದರೆ ಪಕ್ಷಿಗಳ ಪಾಲಿಗೆ ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯಿತು ಎಂಬುವಂತಾಗಿದ್ದು ವಿಪರ್ಯಾಸ. ಬಹುಶ:ನಮಗೆ ಅರಗಿಸಿ ಕೊಳ್ಳಲು ಕಷ್ಟವಾದ ಸೃಷ್ಟಿ ನಿಯಮ.

ಮಲ್ಲಿಗೆಯ ಕವಿ ಕೆ.ಎಸ್.ನರಸಿಂಹಸ್ವಾಮಿಗಳ ಈ ಮಾತು-

ಮಾವೊಂದೇ ಚಿಗುರಲಿಲ್ಲ;
ಚಿಗುರುತ್ತದೆ ಬೇವು.
ನಲಿವೊಂದೇ ಹರಸಲಿಲ್ಲ;
ಜತೆಯಲ್ಲಿತ್ತು ನೋವು.

ಬಹುಶ: ಈ ಸಂದರ್ಭದಲ್ಲಿ ಔಷಧಿ.