ದಿನ(ಕರ)ಚರಿ

ದಿನ(ಕರ)ಚರಿ

ಬರಹ

ಮಿಸುಗುತಿರುವಾಗ ಹಾಸಿಗೆಯಲಿ ಸೂರ್ಯ
ಎಚ್ಚರಗೊಂಡ ನಿಶೆ ಸೂರ್ಯನ ಮೈಯಾವರಿಸಿದ್ದ
ಸೆರಗನ್ನು ಮೆಲ್ಲನೆ ಬಿಡಿಸಿಕೊಂಡು ಅಲ್ಲಿಂದ
ಸರಿದು ಒಳ ನೆಡೆದಳು.
ಕಣ್ಣು ಹೊಸಕಿ, ಎರಡೂ ಕೈ ಮೇಲೆತ್ತಿ
ಕಾಲು ನಿಡಿದಾಗಿಸಿ ಲಟ ಲಟ ಎನಿಸಿ
ಎದ್ದು ಕುಳಿತು ಮೈ ಮುರಿದ ಸೂರ್ಯ
ಪಕ್ಕಕ್ಕೆ ತಿರುಗಿದ.
ನಿಶೆ ಇಲ್ಲ! "ಓ ನನಗಾಗಿ ತಿಂಡಿಯ
ಸಿದ್ಧತೆಯಲ್ಲಿದ್ದಾಳೆ.ಸಮಯ ಪ್ರಜ್ಞೆ
ನನಗಿಂತ ಅವಳಲ್ಲೆ ಜಾಸ್ತಿ" ಮಲ್ಲಿಗೆಯ
ಉಸಿರಾಗಿಸಿಕೊಂಡ ತಂಗಾಳಿ ಮುಖ
ತೀಡಿದಂತಾಗಿ ಮುದಗೊಂಡು ನಕ್ಕ ಸೂರ್ಯ
ಹೂ ಬಿಸಿಲು.

ಎಲ್ಲಿ ಅವಳು? ಹೊತ್ತುಗೊತ್ತಿನ
ಪರಿವೆಯೇ ಇಲ್ಲ. ಚುರುಗುಟ್ಟುತ್ತಿದೆ ಹೊಟ್ಟೆ.
ರಟ್ಟೆ ಮುರಿದು ದುಡಿವ ಗಂಡಸು ನಾನು
ಬೆಳಗಿನ ತಿಂಡಿ ಹೋಗಲಿ ಎಂದರೆ
ಮದ್ಯ್ಹಾನದ ಊಟವೂ ತಯಾರಾಗಿಲ್ಲ
ಹೇಗೆ ತಾಳಲಿ ಹಸಿವೆ? ಸಿಡಿಮಿಡಿಗೊಂಡು
ಉರಿಯತೊಡಗಿದ ಸೂರ್ಯ
ಸುಡುಬಿಸಿಲು.

ಸೂರ್ಯನ ಅಚ್ಚುಮೆಚ್ಚಿನ ತಾಮ್ರ ಬಣ್ಣದ
ಒಡಲಿಗೆ ಕಾಡಿಗೆ ಬಣ್ಣದ ಸೆರಗಿರುವ
ಸೀರೆಯುಟ್ಟು, ಇನ್ನೇನು ಸ್ವಲ್ಪ ಹೊತ್ತಿಗೆ
ಅರಳುತ್ತವೆ ಎನ್ನುವಂತಹ ಮೊಲ್ಲೆ
ಮೊಗ್ಗಿನ ಮಾಲೆ ಮುಡಿದು ಒನಪು
ವಯ್ಯಾರದೊಂದಿಗೆ ನಸುನಗುತ್ತಾ ಬರುತ್ತಿರುವ
ನಿಶೆಯ ಕಂಡ ಸೂರ್ಯ ಸಿಟ್ಟು ಮರೆತು ಮೆತ್ತಗಾದ.
ಹುರುಪಿನಿಂದ ತಾನೂ ಎರಡು ಹೆಜ್ಜೆ
ನಡೆದ ಅವಳೆಡೆ ನಗುಮುಖ ಹೊತ್ತು
ಹೊಂಬಿಸಿಲು.

ಹತ್ತಿರ ಬಂದ ನಿಶೆ
ನಾಚಿ ನೀರಾದುದನು ಕಂಡ ಸೂರ್ಯ
ತಾನೂ ಲಜ್ಜೆಯಿಂದ ಕೆಂಪು ಕೆಂಪಾದ
ನಿಶೆಯ ಬಾಹುಗಳಲ್ಲೀಗ ಸೂರ್ಯ ಬಂಧಿ
ಸೂರ್ಯನ ಮರೆಮಾಚಿಸಿತು ನಿಶೆಯ ಸೆರಗು
ನಕ್ಕಳು ನಿಶೆ. ಉದುರಿದ ಮುತ್ತುಗಳೆಲ್ಲ
ಆಗಸದ ಅಂಗಳದಲ್ಲಿ ಚೆಲ್ಲಾಪಿಲ್ಲಿ.
ನಗುವ ನಕ್ಷತ್ರಗಳು.

* * * * * * * * * * *