ದಿವ್ಯ “ಕುರ್ ಆನ್” ನಲ್ಲಿ ಗೋವು
“ಗೋಹತ್ಯೆ ಕುರಿತು ಕುರ್’ ಆನಿನಲ್ಲಿ ಏನು ಹೇಳಿದೆ?” ಎಂದು ‘ಸಂಪದ’ ದಲ್ಲಿ ಪ್ರಕಟವಾದ ಲೇಖನಕ್ಕೆ ಪೂರಕವಾಗಿ ಮತ್ತು ತಪ್ಪು ತಿಳಿವಳಿಕೆಯನ್ನು ನಿವಾರಿಸುವ ನಿಟ್ಟಿನಲ್ಲಿ ಈ ಲೇಖನ. ಹಾಗೆಯೇ, “ಇತರರ ಶ್ರದ್ಧಾವಿಷಯಗಳಲ್ಲಿ ಅವರ ಅಸಹನೆ, ಕರುವನ್ನು ಪೂಜಿಸುವ ಜನರನ್ನು ಕೊಲ್ಲಿರಿ ಎಂಬ ಕುರ್ ಆನ್ ಹೇಳಿಕೆ ದಿಗ್ಭ್ರಮೆ ಹುಟ್ಟಿಸುವಂಥದ್ದು” ಎಂಬ ಲೇಖಕರ ಅಭಿಪ್ರಾಯಕ್ಕೆ ಉತ್ತರ ಈ ಬರಹ.
ದಿವ್ಯ ಕುರ್’ಆನಿನ ಎರಡನೇ ಅಧ್ಯಾಯ ಸೂರ ‘ಅಲ್-ಬಕರ’ ದಲ್ಲಿ ಬರುವ ಸೂಕ್ತಗಳು ಸಂವಾದದ ರೀತಿಯಲ್ಲಿ ಇದೆ. ಪ್ರವಾದೀ ಮೋಸೆಸ್ ಧರ್ಮ ಪ್ರಚಾರಣೆ ಸಮಯ ಎದುರಿಸುವ ಕಷ್ಟಗಳು, ಅವರ ಅನುಯಾಯಿಗಳ ನಡವಳಿಕೆ ಕುರಿತು ಈ ಅಧ್ಯಾಯದಲ್ಲಿ ಪ್ರಸ್ತಾಪವಿದೆ. ಈ ಅಧ್ಯಾಯ ಕುರಾನಿನ ಅತಿ ದೊಡ್ಡದು (೨೮೬ ಸೂಕ್ತಗಳು), ಮಾತ್ರವಲ್ಲ, ಸಾಮಾಜಿಕ, ರಾಜಕೀಯ, ಧಾರ್ಮಿಕ, ನೈತಿಕ ವಿಷಯಗಳ ಕುರಿತು ವಿಸ್ತೃತವಾದ ಪ್ರಸ್ತಾಪ ಈ ಅಧ್ಯಾಯದಲ್ಲಿ ಕಾಣಲು ಸಿಗುತ್ತದೆ. ಅಲ್-ಬಕರ ದ ೪೦ ನೇ ಸೂಕ್ತದಿಂದ ೯೬ ನೇ ಸೂಕ್ತದವರೆಗೆ ಮೋಸೆಸ್ ಮತ್ತು ಅವರ ಜನಾಂಗದವರ ಬಗ್ಗೆ ಉಲ್ಲೇಖವಿದೆ.
ಪ್ರವಾದೀ ಮೋಸೆಸ್ ದಾರಿ ತಪ್ಪಿ ನಡೆಯುತ್ತಿದ್ದ ತನ್ನ ಜನಾಂಗದವರನ್ನು ಸರಿ ದಾರಿಗೆ ತರಲು ಅಹರ್ನಿಶಿ ಶ್ರಮಿಸುತ್ತಾರೆ. ಅವರ ಬೇಡಿಕೆಗಳಿಗೆಲ್ಲಾ ದೇವರು ಅಸ್ತು ಎನ್ನುತ್ತಾನೆ. ಅವರ ಎಲ್ಲಾ ಪಾಪಗಳನ್ನೂ ಕ್ಷಮಿಸುತ್ತಾನೆ. ಕ್ಷಮಾದಾನ ಮಾಡುತ್ತಾನೆ. ದೇವರು ಹೇಳುತ್ತಾನೆ, “ನನ್ನ ಕೊಡುಗೆಗಳನ್ನು ಸ್ಮರಿಸಿರಿ, ಸತ್ಯ ಮಾರ್ಗದಲ್ಲಿ ನಡೆಯಿರಿ, ಅಸತ್ಯದೊಂದಿಗೆ ಸತ್ಯವನ್ನು ಬೆರಕೆ ಮಾಡಬೇಡಿ, ದೇವರ ಸ್ಮರಣೆ ಮಾಡಿರಿ, ದಾನ ನೀಡಲು ಹಿಂದೇಟು ಹಾಕಬೇಡಿ, ತಾಳ್ಮೆ ಸಂಯಮವನ್ನು ಪ್ರದರ್ಶಿಸಿ, ಸಜ್ಜನರ ಗುಣಗಳನ್ನು ರೂಢಿಸಿ ಕೊಳ್ಳಿ, ಭೂಮಿಯ ಮೇಲಿನ ಈ ಬದುಕು ತಾತ್ಕಾಲಿಕ, ನಿಜವಾದ ಬದುಕು ಕೈಲಾಸದಲ್ಲಿ, ಮುಕ್ತಿಯ ಮಾರ್ಗಕ್ಕಾಗಿ ಒಳ್ಳೆಯ ಕೆಲಸಗಳಲ್ಲಿ ತೊಡಗಿಸಿ ಕೊಳ್ಳಿ ಎಂದು”. ಮುಂದುವರೆದು, ಮೋಸೆಸ್ ರವರ ಜನಾಂಗದವರು ಅವರ ರಾಜನಿಂದ ಅನುಭವಿಸಿದ ಕಿರುಕುಳ, ಅವನ ದುರಾಡಳಿತದಿಂದ, ಆಕ್ರಮಣದಿಂದ ಅವರನ್ನು ರಕ್ಷಿಸಲು ಸಮುದ್ರವನ್ನ್ನು ಇಬ್ಭಾಗವಾಗಿಸಿದ್ದು ಮುಂತಾದ ಅನುಗ್ರಹಗಳ ಉಲ್ಲೇಖ ಸೂಕ್ತ ೫೦ ರವರೆಗೆ ಇದೆ.
ಮೋಸೆಸ್ ರವರು ೪೦ ದಿನಗಳ ಕಾಲ “ತೂರ್” ಪರ್ವತಕ್ಕೆ ಧ್ಯಾನ ಮತ್ತು ದೇವನ ಭೇಟಿಗೆಂದು ಹೋಗಿ ಬರುವಷ್ಟರಲ್ಲಿ ಅವರ ಅನುಯಾಯಿಗಳು ಮೋಸೆಸ್ ರವರ ಬೋಧನೆಗಳನ್ನೂ, ದೇವಾಜ್ಞೆ ಗಳನ್ನೂ ಧಿಕ್ಕರಿಸಿ ಕರಗಿಸಿದ ಚಿನ್ನದಿಂದ ತಯಾರಿಸಿದ ಕರುವಿನ ಆರಾಧನೆಯಲ್ಲಿ ತೊಡಗುತ್ತಾರೆ. ಆಗಲೂ ಸಹ ದೇವರು ಅವರನ್ನು ಕ್ಷಮಿಸುತ್ತಾನೆ.
೫೪ ನೇ ಸೂಕ್ತದಲ್ಲಿ ದೇವರು ಹೇಳುತ್ತಾನೆ, ಮೋಸೆಸ್ ಹೇಳಿದ್ದನ್ನು ನೆನಪಿಟ್ಟು ಕೊಳ್ಳಿ, “ ನನ್ನ ಜನರೇ, ಕರುವನ್ನು ಆರಾಧಿಸುವ ಮೂಲಕ ದೊಡ್ಡ ಅಪಚಾರವನ್ನೇ ನೀವು ಎಸಗಿದ್ದೀರಿ, ಈಗಲಾದರೂ ಪಶ್ಚಾತ್ತಾಪ ಪಟ್ಟುಕೊಳ್ಳಿ, ನಿಮ್ಮನ್ನು ನೀವು ಸಂಹರಿಸಿಕೊಳ್ಳಿ”. Apostrophe ಒಳಗೆ ಇರುವ ಮಾತನ್ನು ಗಮನಿಸಿ, ಈ ಮಾತನ್ನು ದೇವರು ಹೇಳಿದ್ದಲ್ಲ. ಇದು ದಿವ್ಯ ‘ಕುರ್ ಆನ್’ ನ ಹೇಳಿಕೆ ಅಲ್ಲ. ತನ್ನ ನಿರಂತರ ಬೋಧನೆಯ ನಂತರವೂ, ದೇವರ ಕ್ಷಮಾದಾನದ ನಂತರವೂ ಪದೇ ಪದೇ ಬೋಧನೆಗಳನ್ನು ಧಿಕ್ಕರಿಸುವ ಜನರಿಗೆ ಖಿನ್ನರಾಗಿ, ಹತಾಶರಾಗಿ ಮೋಸೆಸ್ ಹೇಳುವ ಮಾತುಗಳು.
ಏಕದೇವೋಪಾಸನೆ ಸತ್ಯಾನ್ವೇಷಣೆಯ ಹಾದಿ. ಏಕದೇವೋಪಾಸನೆಯ ವಿಷಯದಲ್ಲಿ ಇಸ್ಲಾಮಿನ ನಿಲುವು ಅಚಲ. ಪ್ರಪಂಚದ ಸೃಷ್ಟಿಯಾದಂದಿನಿಂದ ಎಲ್ಲಾ ಸಂದೇಶ ವಾಹಕರುಗಳು, ಪ್ರವಾದಿಗಳು ಈ ಸಂದೇಶವನ್ನು ಸಾರುತ್ತಾ ಬಂದಿದ್ದಾರೆ. ದೇವನೊಬ್ಬನೇ ಎಂದ ಪ್ರವಾದಿಯನ್ನು ದೈವತ್ವಕ್ಕೆ ಏರಿಸುವುದಾಗಲೀ, ದೇವರೇ ಇಲ್ಲ ಎಂದವನನ್ನೂ ದೇವರು ಎಂದು ಪರಿಗಣಿಸುವುದಾಗಲೀ ಇಸ್ಲಾಮಿನಲ್ಲಿ ನಿಷಿದ್ಧ. ವಿಶ್ವದ ಅನೇಕ ಧರ್ಮಗಳು ಏಕದೇವೋಪಾನೆಯ ಬಗ್ಗೆ ಪ್ರಸ್ತಾಪ ಮಾಡಿದ್ದರೂ, ಏಕದೇವೋಪಾಸನೆಯನ್ನು ಯಥಾವತ್ತಾಗಿ ಅರ್ಥೈಸಿಕೊಂಡು, ದೇವರು ಒಬ್ಬನೇ, ಆರಾಧನೆ ಸರ್ವಶಕ್ತನಾದ ಅಲ್ಲಾಹನಿಗೆ ಮಾತ್ರ ಎಂದು ಘೋಷಿಸುತ್ತಾ, ಏಕದೇವೋಪಾಸನೆಯ ಸಂಪೂರ್ಣ ಆಚರಣೆಗೆ ಇಸ್ಲಾಂ ನಾಂದಿ ಹಾಡಿತು.
ಪ್ರಪಂಚದ ಸೃಷ್ಟಿ, ಮತ್ತು ಮೊದಲ ಮಾನವನ ಸೃಷ್ಟಿಯೊಂದಿಗೆ ದೇವರು ಇಸ್ಲಾಂ ಧರ್ಮವನ್ನೂ ಮನುಷ್ಯನ ಒಳಿತಿಗಾಗಿ, ಮಾರ್ಗದರ್ಶನಕ್ಕಾಗಿ ಜಗತ್ತಿಗೆ ನೀಡಿದ. ಪ್ರಥಮ ಮಾನವ ‘ಆಡಂ’ ಮೊದಲ ಪ್ರವಾದಿಗಳಾಗಿದ್ದರು. ಮತ್ತು ಕಾಲಕ್ರಮೇಣ ಸಾವಿರಾರು ಪ್ರವಾದಿಗಳು ದೇವ ಸಂದೇಶವನ್ನು ಜನರಿಗೆ ತಲುಪಿಸಲು ನಿಯುಕ್ತರಾದರು. ನೋಹಾ, ಸಾಲೋಮನ್, ಡೇವಿಡ್, ಅಬ್ರಹಾಂ, ಇಸ್ಮಾಯಿಲ್, ಇಸ್ಹಾಕ್, ಏರಾನ್, ಜೋಸೆಫ್, ಮೋಸಸ್, ಜೀಸಸ್, ಇವರೆಲ್ಲರೂ ತಂತಮ್ಮ ಜನಾಂಗದವರಿಗಾಗಿ ನಿಯುಕ್ತರಾದ ಸಂದೇಶವಾಹಕರುಗಳು. ಕೊನೆಯದಾಗಿ ಪ್ರವಾದೀ ಮುಹಮ್ಮದರು ಸರ್ವ ಜನರಿಗಾಗಿ ನಿಯುಕ್ತರಾದ ಪ್ರವಾದಿಗಳಾಗುತ್ತಾರೆ. ಮೇಲೆ ಹೇಳಿದ ಎಲ್ಲಾ ಸಂದೇಶವಾಹಕ, ಪ್ರವಾದಿಗಳ ಕರ್ತವ್ಯ ಜನರನ್ನು ಅನಾಚಾರದಿಂದ ಸದಾಚಾರದ ಕಡೆಗೆ ನಡೆಸುವುದಾಗಿತ್ತು. ಎಲ್ಲರೂ ಏಕದೇವೋ ಪಾಸನೆಯ ಆದರ್ಶಗಳನ್ನು ಬೋಧಿಸಿದರು. ಇವರುಗಳು ದೇವರ ಸಂಪ್ರೀತಿಗೆ ಭಾಜನರಾಗಿದ್ದರು. ಶ್ರೇಷ್ಠ ಸಾಧಕರಾಗಿದ್ದರು, ದೇವರ ಆಜ್ಞಾನುವರ್ತಿಗಳಾಗಿದ್ದರು. ಆದರೆ ಈ ಎಲ್ಲಾ ವಿಭೂತಿ ಪುರುಷರು ಎಲ್ಲರ ಥರ ಸಾಮಾನ್ಯ ಮನುಷ್ಯರಾಗಿದ್ದರು. ಮೇಲೆ ಹೇಳಿದ ಸಂದೇಶವಾಹಕರು ಏಕದೇವೋಪಾಸನೆ ಬೋಧಿಸಿದರೆಂದ ಮಾತ್ರಕ್ಕೆ ಅವರನ್ನು ಆರಾಧಿಸುವಂತಿಲ್ಲ. ಅವರುಗಳನ್ನು ದೇವ ನಿಯುಕ್ತಿ ಕಾರಣ ದೇವಸಮಾನರೆಂದು ಪರಿಗಣಿಸುವಂತೆಯೂ ಇಲ್ಲ. ಈ ಸಂದೇಶವಾಹಕರ ಶಿಫಾರಸ್ಸನ್ನು ಮುಂದಿಟ್ಟು ಕೊಂಡು ದೇವಾರಾಧನೆ ಮಾಡುವಂತೆಯೂ ಇಲ್ಲ. ಆರಾಧನೆ ಸರ್ವಶಕ್ತನಾದ ದೇವರಿಗೆ ಮಾತ್ರ ಸಲ್ಲಬೇಕು. ಇದು ಏಕ ದೇವೋಪಾಸನೆಯ ಸಂದೇಶ. ಯಾವುದೇ ಕಾರಣಕ್ಕೂ ಈ ನಿಯಮವನ್ನು ಉಲ್ಲಂಘಿಸುವಂತಿಲ್ಲ, ಉಲ್ಲಂಘಿಸಿದವನಿಗೆ ಮೋಕ್ಷ ಇಲ್ಲ, ಇದು ಇಸ್ಲಾಮಿನ ಸ್ಪಷ್ಟ ಸಂದೇಶ, ನಿರ್ದೇಶ.
ದಿವ್ಯ ‘ಕುರ್ ಆನ್’ ನ ಹಲವು ಸೂಕ್ತಗಳು ಇಸ್ಲಾಂ ಟೀಕಾಕಾರರ ಕಟು ಟೀಕೆಗೆ, ನಿಂದನೆಗೆ ಒಳಗಾಗಿವೆ. ಜಿಹಾದ್, ಹೋರಾಟ, ಹಿಂಸೆ ಗಳ ಪ್ರಸ್ತಾಪಗಳನ್ನು ಯಾವ ಯಾವ ಸಂದರ್ಭಗಳಲ್ಲಿ ಹೇಳಲಾಯಿತು ಎಂದು ಯೋಚಿಸುವ ಗೊಡವೆಗೆ ಹೋಗದೆ ತಮಗೆ ತಿಳಿದ ರೀತಿಯಲ್ಲಿ ತಿರುಚಿ ಜನರನ್ನು ತಪ್ಪು ದಾರಿಗೆಳೆಯುವ ಜಾಯಮಾನ ಕಾಣಲು ಸಿಗುತ್ತದೆ.
ಧರ್ಮ ಮತ್ತು ನ್ಯಾಯ, ನೀತಿಯ ಸಂಸ್ಥಾಪನೆಗಾಗಿ ಯುದ್ಧ ಮಾಡಲು ಶ್ರೀ ಕೃಷ್ಣ ಅರ್ಜುನನನ್ನು ಪ್ರೇರೇಪಿಸಲಿಲ್ಲವೇ? ಶ್ರೀ ಕೃಷ್ಣನ ಈ ಬೋಧನೆಯ ಎಳೆಯನ್ನು ಹಿಡಿದುಕೊಂಡು ಧರ್ಮವನ್ನ ದೂಷಿಸುತ್ತಾ ಕೂತರೆ ಆಗುವ ನಷ್ಟ ಯಾರಿಗೆ?
೧೯೮೨ ರ ರಾಮೋನ್ ಮ್ಯಾಗ್ಸೇಸೆ ಪ್ರಶಸ್ತಿ ವಿಜೇತ ಭಾರತೀಯ ಪತ್ರಕರ್ತರೊಬ್ಬರು “The world of Fatawas” ಎನ್ನುವ ಪುಸ್ತಕದಲ್ಲಿ ಪವಿತ್ರ ‘ಕುರ್ ಆನ್’ ನ ಅಧ್ಯಾಯ ೯ ರಲ್ಲಿನ ಸೂಕ್ತಗಳಿಗೆ ತನ್ನದೇ ಆದ ವಿಶ್ಲೇಷಣೆ ಕೊಟ್ಟು ತಮ್ಮ ಜ್ಞಾನದ ಪ್ರಖರತೆಯನ್ನು ಪ್ರದರ್ಶಿಸಿದರು. ಇದರಿಂದ ಇಸ್ಲಾಮಿಗಾಗಲೀ, ಮುಸ್ಲಿಮರಿಗಾಗಲೀ, ಅಥವಾ ಪವಿತ್ರ ಗ್ರಂಥ ಕುರ್ ಆನ್ ಗಾಗಲೀ ಯಾವುದೇ ನಷ್ಟವಿಲ್ಲ. ಪೂರ್ವಾಗ್ರಹ ಪೀಡಿತರಾಗದೆ, ತಿಳಿಯಾದ, ತೆರೆದ ಮನಸ್ಸಿನಿಂದ ಧರ್ಮ ಗ್ರಂಥಗಳ ಅಧ್ಯಯನ ಮಾಡಿದರೆ ಅದರ ಸೌಂದರ್ಯ ಅರಿವಾಗುವುದು. ಅಲ್ಲಿ ಇಲ್ಲಿ ಎಂದು ಸೂಕ್ತಗಳನ್ನು ಹೆಕ್ಕಿ ತೆಗೆದಾಗ ಟೀಕೆಗೆ, ಮೂದಲಿಕೆಗೆ ಮಾತ್ರ ಲಾಭ ಉಂಟಾಗುತ್ತದೆ. ಕ್ಷಣಿಕ ಕೀರ್ತಿಯೂ ಒಲಿಯುತ್ತದೆ. ಆದರೆ ಈ ನಡವಳಿಕೆಯಿಂದ ಆದಿ ಶಂಕರರ ‘ಸಾ ವಿದ್ಯಾ ಯಾ ವಿಮುಕ್ತಯೇ” ಬೋಧನೆಗೆ ವಿರುದ್ಧವಾಗುತ್ತದೆ.
ಕೊನೆಯದಾಗಿ, ಇಸ್ಲಾಂ ಎಂದರೆ ಜನರ ಬುದ್ಧಿ ಶಕ್ತಿಗೆ ನಿಲುಕದ ಒಂದು ಐಡಿಯಾಲಜಿ ಅಲ್ಲ. ಇಸ್ಲಾಂ ಧರ್ಮ ವಿಶ್ವದ ಆರಂಭದಿಂದಲೂ ಇರುವ ಧರ್ಮ.
ಕಳಬೇಡ ಕೊಲಬೇಡ
ಹುಸಿಯ ನುಡಿಯಲುಬೇಡ
ಮುನಿಯಬೇಡ
ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ
ಇದಿರ ಹಳಿಯಲುಬೇಡ
ಇದೇ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ
ಮೇಲಿನ ಈ ಆದರ್ಶಗಳನ್ನೇ ಪ್ರವಾದೀವರ್ಯರು ಜನರ ಬಳಿ ತೆಗೆದು ಕೊಂಡು ಹೋಗಿದ್ದು. ಅದರೊಂದಿಗೆ, ಸಾತ್ವಿಕ ಬದುಕಿಗೆ ಬೇಕಾದ ಸೂತ್ರಗಳನ್ನು ಕಲಿಸುತ್ತಾ ಅಂದಿನ ಜನರಲ್ಲಿ ಮನೆ ಮಾಡಿದ್ದ ಮೌಡ್ಯ ಗಳನ್ನು, ಅನಾಚಾರಗಳನ್ನು ತೊರೆಯಲು ಆಗ್ರಹಿಸಿದರು. ಇಸ್ಲಾಂ ಧರ್ಮವನ್ನು ಜಗದೊಳಿತಿಗಾಗಿ ಅರ್ಪಿಸಿದರು.
Comments
ಅಬ್ದುಲ್ ಅವರೇ,
ಅಬ್ದುಲ್ ರವರೇ, ಹೇಳಿದಂತೆ