ದೀಪದ ಕತ್ತಲೆ
'ಲೇ ಈರಾs..
ನೋಡೊ ಆ ದೀಪದ ಕೆಳಗ ಕತ್ತಲಾs..'
'ವ್ಯವಸ್ಥಾ ಮಾಡೆನಿ ಗೌಡ್ರ,ಹಚ್ಚೆನಿ ಅದರಡಿಗೆ ಇನ್ನೊಂದ್ ದೀಪಾ..'
'ಮತ್ತದರಡಿಗೆ?'
'ಚಿಂತೀ ಬ್ಯಾಡ್ರಿ,ಒಂದರ ಅಡಿಗೆ ಒಂದು,
ಅದರ ಕೆಳಗ ಮತ್ತೊಂದು,ಮಗದೊಂದು...ಹಿಂಗs..
ನಿಮ್ಮಂಗಳದ ತುಂಬ ದೀಪದ ಸಾಲs..ಥೇಟ್ ಬೆಳದಿಂಗಳs..'
'ಹಂಗಾದ್ರ ಹೊಡಿ ಢಂಗೂರ ಊರಿಗೆ
ಲಕ್ಷದೀಪೋತ್ಸವ ಗೌಡರಿಂದ...'
'ಲೇ ಈರಾs..
ವಸೂಲಿ ಮಾಡಿದ್ಯೇನೋ ಎಲ್ಲಾರ ಸಾಲಾs..'
'ಇರೋಬಾರೋ ನೆಲಕ್ಕೆಲ್ಲ ನಿಮ್ಹೆಸರ ಬರ್ದನ್ರಿ..'
'ಮತ್ತೇನ ಬಳಕೊಂಡ್ಯೋ..'
'ಅದರ ಉಸಾಬರಿನ ಬಿಡ್ರಿ,ಬಡ್ಡಿಗೆ ರೊಕ್ಕಾ,
ಚಕ್ರಬಡ್ಡಿಗೆ ಮನಿ ಮಠಾ..ಬರೋಬ್ಬರಿ ಹಸನ ಹಿಂಗs..
ಅವ್ರ ಮಾಂಸಾ,ಎಲುವು ಯಾರೊ ಕೊಟ್ಟಿದ್ದಂತ,ದೇವ್ರ!
ತಿರುಪತಿ ಹುಂಡಿ ನಿಮ್ ಭಂಡಾರ..'
'ಹಂಗಾರ ಕೂಗಿ ಹೇಳ ಊರಿಗೆ
ತುಲಾಭಾರ ಗೌಡ್ರಿಗೆ..!'
'ಲೇ ಈರಾs..
ಆ ಮೂಲಿಮನಿ ಮಾದೇವಿ ಸತ್ಲಂತಲ್ಲೋ..'
'ಗೊತ್ತಮಾಡ್ಸಿಲ್ಲ ಬಿಡ್ರಿ ಯಾರಿಗೂ,ನೀವ್ ಆಕಿ ಮೈಯುಂಡ ಸುದ್ದಿ'
'ಮತ್ತ ನಂ ಹಳೇ ಹೆಣ್ಣಗೋಳು?'
'ಆರಾಮಿರ್ರೀ..ಮೊನ್ನೆ ಪರವ್ವ,ಗಂಗವ್ವ ನಿನ್ನೆ
ಇಂದ ಈಕಿ..ಎಲ್ಲಾರೂ ಮಣ್ಣಾಗ!
ನಿಮ್ಮ (ದಲ್ಲದ)ಸಂತಾನ,ಅಕ್ರಮ ಬಾಣಿಂತನ'
ಹಂಗಾರ ಕರಿ ಎಲ್ಲಾ ಹೆಣ್ಮಕ್ಳನ್ನೂ
ಮುತ್ತೈದೇರಿಗೆ ಉಡಿ ತುಂಬೂನು..'
ಈರಾs..ಲೇ ಈರಾss..
ನನ್ನ ಕೈಗೆ ಕೋಲ ತಾ…ಹಿತ್ತಲಕ್ಕ ಹೊಗಬೇಕ
ಹಿಡಿ ನನ್ನ ಕೈ..ನಡಸ ನನ್ನ ಕಣ್ಣಿಲ್ಲದ ದಾರ್ಯಾಗ
ಎಲ್ಲಿ ಸತ್ತಿ?..
ಈರಾs..ಲೇ ಈರಾss..
ನಡು ಮನೆ ಜಂತಿಯಲಿ ತಣ್ಣಗೆ ಸರಕ್ ಎಂಬ ಬಿರುಕು!