ದೀಪಾವಳಿಯಲ್ಲಿ ಮರ ಹಾಕುವುದು: ತುಳುನಾಡ ವಿಶೇಷ ಆಚರಣೆ

ದೀಪಾವಳಿಯಲ್ಲಿ ಮರ ಹಾಕುವುದು: ತುಳುನಾಡ ವಿಶೇಷ ಆಚರಣೆ

ಬರಹ

ದೀಪಾವಳಿ ಹಬ್ವವನ್ನು ಮಾತ್ರ ಜನ ಹಬ್ಬ (ಪರ್ಬ)ಎಂದು ಕರೆಯುವುದು. ಅದರಲ್ಲಿ ಬಲಿ ಪಾಡ್ಯಮಿಯು ಜನಪದರ ಪ್ರಮುಖ ಆಚರಣೆ. ಅಮಾವಾಸ್ಯೆ ಮರುದಿನ ಪಾಡ್ಯದಂದು ಮನೆಯ ಮುಖ್ಯಸ್ಥನು ಪಕ್ಕದ ಕಾಡಿಗೆ ಹೋಗಿ ಹಾಲೆ ಮರದ ಕವಲಿರುವ ಕಂಬವನ್ನು ಕಡಿದು ತಂದು ನೆಟ್ಟು ಅಲಂಕರಿಸುವುದನ್ನೆ ಮರ ಹಾಕುವುದು ಎನ್ನುತ್ತಾರೆ. ಇದು ಹೆಚ್ಚಾಗಿ ಕೃಷಿಪ್ರಧಾನ ಜನಾಂಗದಲ್ಲಿ ಮಾತ್ರ ಕಂಡು ಬರುತ್ತದೆ. ಸಂಜೆಯಾಗುತ್ತಲೆ ಕೆಲವರು ಒಂದೇ ಮರ ಹಾಕಿದರೆ ಇನ್ನು ಕೆಲವರು ಮೂರು ಕವಲಿರುವ ಮರ ಹಾಕುತ್ತಾರೆ. ಅದರಲ್ಲಿ ಒಂದಾದರೂ ಹಾಲೆಮರ (ಸಪ್ತಪರ್ಣ)ಇರಬೇಕು. ಉಳಿದದ್ದು ಶೇರೆಮರವಾದರೂ ನಡೆಯುತ್ತದೆ. ತುಳಸಿ ಕಟ್ಟೆಯ ಬಳಿ ಮರ ನೆಟ್ಟು ಅದಕ್ಕೆ ಬಾಳೆ ದಿಂದಿನ ಅಂಕಣ ಹಾಕುತ್ತಾರೆ. ಹಿಂದಿನ ದಿನಗಳಲ್ಲಿ ಮರ ಕಡಿದರೆ ಆಗುವುದಿಲ್ಲ. ಅದೇ ದಿವಸ ಕಡಿದು ತರಬೇಕು. ಇದು ಹೆಚ್ಚಾಗಿ ಪುತ್ತೂರು, ಬೆಳ್ತಂಗಡಿ ತಾಲೂಕಿನ ಗ್ರಾಮಗಳಲ್ಲಿ ದೇವಸ್ಥಾನದಲ್ಲಿ ಅಮಾವಾಸ್ಯೆಯಂದು ಮರ ಹಾಕಿದರೆ ಊರಿನಲ್ಲಿ ಮರುದಿನ ಹಾಕುತ್ತಾರೆ. ಈ ಆಚರಣೆಯ ಬಳಿಕವೇ ಭೂತಾರಾಧನೆ ಶುರು. ಪತ್ತನಾಜೆಯಂದು ಭೂತಸ್ಥಾನಗಳಲ್ಲಿ ಹಾಕಿದ ಬಾಗಿಲು ದೀಪಾವಳಿ ಬಳಿಕವೇ ತೆರೆಯುತ್ತಾರೆ. ಮರ ಹಾಕಲು ಶುದ್ಧಾಚಾರ ಅಗತ್ಯ. ಸೂತಕ ಬಂದರೆ ಹಬ್ಬವನ್ನು ಮುಂದಿನ ಹುಣ್ಣಿಮೆಗೆ ಆಚರಿಸಲಾಗುವುದು.

ತುಳುನಾಡಿನ ಅರಸು ಬಲೀಂದ್ರ :- ಹಾಲೆ ಮರಕ್ಕೆ ಕಾಡಿನ ಕಾಯಿಯನ್ನು ದಾರ ಪೋಣಿಸಿ ಕಟ್ಟುತ್ತಾರೆ. ಪಾರೆ ಹೂ, ಅಂಬಲಿಕಾಯಿ, ನರಿಕೊಂಬು, ಸೀತೆ ಹೂವು, ಸೇವಂತಿಗೆ, ತುಳಸಿ ಮಾಲೆ, ಕೇಪುಳು ವೀಳ್ಯದೆಲೆ, ಅಡಿಕೆ, ಹಿಂಗಾರಹಾಕಿ ರಂಗೋಲಿ ಇಡುತ್ತಾರೆ. ಮೇಲ್ಗಡೆ ಬಿದಿರಿನ ಪ್ರಭಾವಳಿ ಇರುತ್ತದೆ. ಮಹಾವಿಷ್ಣುವಿನ ವರದಂತೆ ಬಲಿಯು ಪಾತಾಳ ಲೋಕದಿಂದ ರಾಜ್ಯ ಆಳಲು ಬರುತ್ತಾನೆ. ಪುರಾಣದ ಬಲಿ ಚಕ್ರವರ್ತಿ ಮಹತ್ವಾಕಾಂಕ್ಷಿಯಾಗಿದ್ದರೆ ತುಳುನಾಡಿನ ಬಲಿ ಇದಕ್ಕಿಂತ ಭಿನ್ನ. ಆತ ಜನಪರ, ಶಕ್ತಿವಂತ, ದಾನಶೂರ. ತುಳುವಿನವರ ಪ್ರಕಾರ " ಮುಡಾಯಿ ಘಟ್ಟಡ್ದ್ ಪಡ್ಡಾಯಿ ಸಮುದ್ರಬರಿ ಮುಟ್ಟ ಆಳೊಂದಿತ್ತೆ ರಾಜೆ" ಆತನ ದಾನ ಧರ್ಮವೇ ಆತನಿಗೆ ಮುಳುವಾಗುತ್ತದೆ. ಸ್ವರ್ಗಲೋಕದ ಮತ್ಸರದಿಂದ ಬಲಿ ರಾಜ್ಯಬಿಟ್ಟು ಹೋಗಬೇಕಾಗುತ್ತದೆ. ಕೊನೆಗೆ ಮೋಟು ಜಲ್ಲದಲ್ಲಿ, ತೂತಾದ ದೋಣಿಯಲ್ಲಿ ಊರುಬಿಡುತ್ತಾನೆ. ಹಿಂದುರುಗಿ ನೋಡಿದ ಆತನಿಗೆ ನಾರಾಯಣ ದೇವರಿಂದ (ವಾಮನ)ತುಲಾಮಾಸದ ಹಬ್ಬುಕ್ಕೆ (ತುಳು ತಿಂಗಳು ಬೊಂತೆಲ್) ಬಂದು ಹೋಗೆಂದು ವರ ಸಿಗುತ್ತದೆ. ಮೋಸದ ಬಲಿಗೆ ಸಿಲುಕಿ ರಾಜ್ಯ ಕಳೆದು ಪ್ರಜೆಗಳು ದುಃಖಿಸುತ್ತಾ ಪ್ರತಿ ವರ್ಷ ಆತನ ಬರುವಿಕೆಗಾಗಿ ಕಾಯುತ್ತಾರೆ.
ಕಲಿ ಗೆತೊಂದ್ ಪೊಲಿ ಕೊರ್ಲ:- ಆದ್ದರಿಂದಲೇ ಕಾರ್ತಿಕ ಶುದ್ಧ ಪಾಡ್ಯದಂದು ಸಂಜೆ ಎಲ್ಲರೂ ಸೇರಿ ಸುತ್ತಲು ದೀಪ ಹಚ್ಚುತ್ತಾರೆ. ಬಾಳೆ ಎಲೆಯಲ್ಲಿ ಸುತ್ತಿ ಇಟ್ಟ ಅಕ್ಕಿ, ತೆಂಗಿನಕಾಯಿ, ಪೊರಿ,ಸಿಯಾಳ,ಅವಲಕ್ಕಿ ಇರಿಸಿ ಊದುಬತ್ತಿ ಹಚ್ಚಿ ಆರಾಧಿಸುತ್ತಾರೆ. 'ಹರಿ ಹರಿ ಬಲೀಂದ್ರ... ಸಿರಿ ಸಿರಿ ಬಲೀಂದ್ರ...ಆ ಊರುದ ಪೊಲಿ ಕೊರುದು ಈ ಊರುದ ಕಲಿ ಗೆತೊಂದು ಪೋಲ ಕೂ ಕೂ....' ಎಂದು ಕರೆಯುತ್ತಾರೆ. ಭಜನೆ ಹಾಡಿ, ಆರತಿ ಬೆಳಗುತ್ತಾರೆ. ಕೃಷಿದೇವತೆ ಬಲೀಂದ್ರನನ್ನು ಜನಪದರು ಇಂದು ಕೂಡಾ ನಿರೀಕ್ಷೆಯಿಂದ ಕಾಯುತ್ತಾರೆ. ದೀಪಾವಳಿಗೆ ವಿಧ ವಿಧ ತೀಡಿಗಳಿದ್ದರೂ ದೋಸೆಗೆ ಪ್ರಥಮ ಸ್ಥಾನ. ಭೂ ಮಸೂದೆ ಬರುವ ಮೊದಲು ಒಂದು ಮುಡಿ (೪೦ಕಿಲೊ) ಅಕ್ಕಿಯ ದೋಸೆ ತಯಾರಿಸುವ ಮನೆತನದವರು ಇದ್ದರು. ಈಗ ಆ ಸೊಬಗು ಇಲ್ಲವಾದರೂ ಸಂಪ್ರದಾಯಕ್ಕೆ ಚ್ಯುತಿ ಬಂದಿಲ್ಲಾ.

ಇದು ಉದಯವಾಣಿಯಲ್ಲಿ ಬಂದ ಸಿಂಧುಶ್ರೀ ನೆಲ್ಯಾಡಿ ಇವರ ಲೇಖನ.

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.