ದೀಪಾವಳಿ ಸಡಗರದಲ್ಲಿ ಪರಿಸರ ಹಿತವಿರಲಿ
ದೀಪಾವಳಿ ಎಂದರೆ ಪಟಾಕಿ, ಪಟಾಕಿಯೆಂದರೆ ದೀಪಾವಳಿ ಎನ್ನಿಸುವಷ್ಟು ಈ ಹಬ್ಬ ಪಟಾಕಿ ಜತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಆದರೆ, ಪರಿಸರ ಮಾಲಿನ್ಯದ ಘನಘೋರ ಸವಾಲನ್ನು ಎದುರಿಸುತ್ತಿರುವ ಈ ದಿನಗಳಲ್ಲಿ ರಾಸಾಯನಿಕಯುಕ್ತ ಪಟಾಕಿಗಳ ಹೊಗೆ, ವಾಯುಮಾಲಿನ್ಯಕ್ಕೂ ಕೊಡುಗೆ ನೀಡುತ್ತಿರುವುದು ಒಂದು ಗಂಭೀರ ವಿಚಾರ. ದಶಕಗಳ ಹಿಂದೆಯೇ ಪಟಾಕಿಗಳ ಹೊಗೆ ಉಗುಳುವಿಕೆ ಕುರಿತು ಆತಂಕ ಕೇಳಿ ಬಂದಿತ್ತಾದರೂ, ಆ ದಿನಗಳಲ್ಲಿ ಪರಿಸರ ಮಾಲಿನ್ಯ ಅಷ್ಟಾಗಿ ಚಿಂತೆ ಮಾಡುವಂತ ಸಂಗತಿ ಆಗಿರಲಿಲ್ಲ. ಪ್ರಸ್ತುತ, ಹವಾಮಾನದ ಪರಿಣಾಮಗಳು ಪ್ರತಿಯೊಬ್ಬರ ಮನೆಬಾಗಿಲಿಗೂ ಬಂದು ಕುಳಿತಿವೆ. ಅದರಲ್ಲೂ ಹೊಸದಿಲ್ಲಿ ಸೇರಿದಂತೆ ಹಲವು ಮಹಾನಗರಗಳಲ್ಲಿ ಉಸಿರಾಡುವ ಗಾಳಿಯ ಗುಣಮಟ್ಟ ಚಿಂತಾಜನಕ ಸ್ಥಿತಿ ತಲುಪುತ್ತಿರುವುದು ಎಚ್ಚರಿಕೆಯ ಗಂಟೆಯೇ ಆಗಿದೆ.
ಈ ಕಾರಣಕ್ಕಾಗಿಯೇ ಸುಪ್ರೀಂ ಕೋರ್ಟ್ ನ ಆದೇಶದಂತೆ ಹಸಿರು ಪಟಾಕಿ ಮೂಲಕ ಪರಿಸರಸ್ನೇಹಿ ಹಬ್ಬ ಆಚರಿಸಲು ದೇಶದ ಎಲ್ಲ ರಾಜ್ಯ ಸರಕಾರಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿವೆ. ರಾತ್ರಿ ೮ ರಿಂದ ೧೦ರವರೆಗೆ ಮಾತ್ರ ಹಸಿರು ಪಟಾಕಿ ಸಿಡಿಸಲು ಅನುಮತಿ ಸೇರಿದಂತೆ ಅಗತ್ಯ ಮಾರ್ಗಸೂಚಿಗಳನ್ನು ರಾಜ್ಯದಲ್ಲೂ ಜಾರಿಗೊಳಿಸಿರುವುದು ಸೂಕ್ತವೇ ಆಗಿದೆ. ಹಸಿರು ಪಟಾಕಿಗಳು ಪರಿಸರಕ್ಕೆ ಹೆಚ್ಚು ತೊಂದರೆ ಕೊಡದಂತೆ ತಯಾರಾಗಿರುವ ಕಾರಣ ಇವುಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಕಡಿಮೆ ಶಬ್ಧದೊಂದಿಗೆ , ಕಡಿಮೆ ಹೊಗೆ ಉಗುಳುವ, ಆರೋಗ್ಯದ ಮೇಲಿನ ಹಾನಿಯನ್ನು ತಗ್ಗಿಸುವ ಉದ್ದೇಶದೊಂದಿಗೆ ಹಸಿರು ಪಟಾಕಿಗಳನ್ನೇ ಆರಿಸಿಕೊಳ್ಳುವುದು ನಾಗರಿಕ ಸಮಾಜ ಪರಿಸರಕ್ಕೆ ಮಾಡಬಹುದಾದಂಥ ಬಹುದೊಡ್ದ ಉಪಕಾರ.
ಸಾಮಾನ್ಯವಾಗಿ ಪಟಾಕಿ ತಯಾರಿಕೆಯಲ್ಲಿ ಸಲ್ಫರ್ ಡೈ ಆಕ್ಸೈಡ್, ಪೊಟಾಷಿಯಂ ನೈಟ್ರೇಟ್, ಅಮೋನಿಯಂ, ಬೋರಿಯಂ ನೈಟ್ರೇಟ್ ಸೇರಿದಂತೆ ಹಲವಾರು ರಾಸಾಯನಿಕಗಳು ಬಳಕೆಯಾಗುತ್ತವೆ. ಇವು ಕೇವಲ ಉರಿದು ಹೋಗದೆ, ವಾತಾವರಣದ ಗಾಳಿಯಲ್ಲಿ ಹಲವು ಗಂಟೆಗಳ ಕಾಲ ಉಳಿದುಕೊಳ್ಳುತ್ತವೆ. ಅಲ್ಲದೆ, ಗಾಳಿಯಲ್ಲಿನ ವಿಷಾನಿಲಗಳ ಜತೆ ಬೆರೆತು, ವಾತಾವರಣವನ್ನು ಇನ್ನಷ್ಟು ಕಲುಷಿತಗೊಳಿಸುತ್ತದೆ ಎಂಬುದನ್ನು ಹಲವು ಸಂಶೋಧನೆಗಳು ಹೇಳಿವೆ. ಪರಿಸರವೆಂದರೆ ಕೇವಲ ಮನುಷ್ಯರಷ್ಟೇ ಅಲ್ಲ, ಪಶು, ಪಕ್ಷಿಗಳೂ ಇಲ್ಲಿ ಭೂಪರಿಸರದ ಕುಟುಂಬವೇ ಆಗಿದೆ. ಅವುಗಳನ್ನೂ ಭೀತಗೊಳಿಸದಂತೆ ಕಾಳಜಿ ವಹಿಸುವುದು ಮನುಕುಲದ ಜವಾಬ್ದಾರಿಯೂ ಹೌದು.
ಪಟಾಕಿ ಸಿಡಿಸುವುದು ಪ್ರತಿಷ್ಟೆಯ ವಿಚಾರ ಅಲ್ಲ. ಹಾಗೆಯೇ ‘ನಾನು ಇಷ್ಟು ಸಿಡಿಸಿದೆ' ಎಂದು ಹೆಮ್ಮೆ ಪಡುವಂಥ ಸಂಗತಿಯೂ ಆಗಬಾರದು. ಅಕ್ಕಪಕ್ಕದ ಮನೆಯವರು ಸಿಡಿಸಿದರು, ನಾವೇಕೆ ಹೆಚ್ಚು ಸಿಡಿಸಬಾರದು ಎಂದು ಪೈಪೋಟಿಗೆ ಬಿದ್ದು ಪಟಾಕಿಯನ್ನು ಅಬ್ಬರದಿಂದ ನೋಡುವವರೂ ಇಲ್ಲದ್ದಿಲ್ಲ. ಈ ಪ್ರವೃತ್ತಿ ನಿಲ್ಲಬೇಕಿದೆ. ಹಬ್ಬದ ಸಡಗರ ಯಾರ ಆರೋಗ್ಯ, ಆನಂದವನ್ನೂ ಕಸಿದುಕೊಳ್ಳದಿರಲಿ. ಪರಿಸರ ಸುರಕ್ಷತೆ, ಜೀವಗಳ ಹಿತ ಕಾಯುತತ್ತಾ ಹಬ್ಬವನ್ನು ಆಚರಿಸೋಣ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೩೦-೧೦-೨೦೨೪
ಚಿತ್ರ ಕೃಪೆ: ಇಂಟರ್ನೆಟ್ ತಾಣ