ದುಬೈನ ಬುರ್ಜ್ ಖಲೀಫಾ, ವಿಶ್ವದ ಅತ್ಯ೦ತ ಎತ್ತರದ ಕಟ್ಟಡ

ದುಬೈನ ಬುರ್ಜ್ ಖಲೀಫಾ, ವಿಶ್ವದ ಅತ್ಯ೦ತ ಎತ್ತರದ ಕಟ್ಟಡ

ಬರಹ

ನಿನ್ನೆ, ೦೪/೦೧/೨೦೧೦, ದುಬೈನ ಇತಿಹಾಸದಲ್ಲಿ ಸುವರ್ಣ ದಿನ ಎಂದು ದಾಖಲಾಗಿದೆ.  ವಿಶ್ವದ ಅತ್ಯ೦ತ ಎತ್ತರದ ಕಟ್ಟಡ, "ಬುರ್ಜ್ ದುಬೈ" ಉದ್ಘಾಟನೆಯಾಗಿ ವಿಶ್ವದ ಭೂಪಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ.  ನೆಲದಿ೦ದ ೮೨೮ ಮೀಟರ್ ಎತ್ತರದ,  ೧೯೬ ಮಹಡಿಗಳಈ ಕಟ್ಟಡ ಸಧ್ಯಕ್ಕೆ ವಿಶ್ವದಲ್ಲಿ ನಂಬರ್ ೧ ಸ್ಥಾನದಲ್ಲಿದೆ. 

ಉದ್ಘಾಟನೆಯ ಕ್ಷಣಕ್ಕಾಗಿ ಸಾವಿರಾರು ಜನ ಸಿಕ್ಕ ಸಿಕ್ಕ ಮಹಡಿಗಳನ್ನು ಎತ್ತರದ ಸ್ಥಳಗಳನ್ನು ಹತ್ತಿ ಕಾಯುತ್ತಿದ್ದರು.  ಟಿವಿಯಲ್ಲಿ ಸ್ವಲ್ಪ ಹೊತ್ತು ಉದ್ಘಾಟನಾ ಕಾರ್ಯಕ್ರಮವನ್ನು ನೋಡಿದ ನಾವು ಸ್ನೇಹಿತರೆಲ್ಲಾ ಹೊರಗೆ ಬ೦ದು ಕರಾಮಾದ ಮೇಲ್ಸೇತುವೆಯ ಮೇಲೆ ನಿಂತೆವು.  ಆಗಸದೆತ್ತರಕ್ಕೆ ಚಿಮ್ಮುವ ಬಾಣ ಬಿರುಸುಗಳ ಆರ್ಭಟವನ್ನು ನೋಡಲು ಸಕಲರೂ ಕುತೂಹಲದಿ೦ದ ಕಾಯುತ್ತಿದ್ದರು.  ಸಮಯಕ್ಕೆ ಸರಿಯಾಗಿ ರಾತ್ರಿ ಎ೦ಟೂವರೆಗೆ ಆ ಕ್ಷಣ ಬಂದೆ ಬಿಟ್ಟಿತು. ಬಾನೆತ್ತರಕ್ಕೆ ನಿ೦ತ ಆ ಭವ್ಯ ಕಟ್ಟಡ ಆ ಪಟಾಕಿ, ಬಾಣ ಬಿರುಸುಗಳ ಹೂ ಮಳೆಯಲ್ಲಿ ತೋಯ್ದು ಹೋಯಿತು, ನೋಡುಗರ ಕಂಗಳಿಗೆ ಸ್ವರ್ಗ ಸಮಾನ ದೃಶ್ಯವನ್ನೇ ಸೃಷ್ಟಿಸಿತು.

೧೯೬ ಅ೦ತಸ್ತುಗಳ ಈ ಕಟ್ಟಡದಲ್ಲಿ ಸರಿಯಾಗಿ ನೂರನೆಯ ಮಹಡಿ ನಮ್ಮ ಕನ್ನಡಿಗ ಡಾ. ಬಿ. ಆರ್ .ಶೆಟ್ಟಿಯವರದು. ಇದನ್ನು ತಮ್ಮ ವಾಸಕ್ಕಾಗಿ ಕೊಂಡಿದ್ದಾರೆ, ೧೪೧ನೆಯ ಮಹಡಿಯು ಇವರ ಕಚೇರಿಗಾಗಿ ಕೊ೦ಡಿದ್ದಾರೆ. ಕನ್ನಡದ ಬಾವುಟ ಈ ಭವ್ಯ ಕಟ್ಟಡದಲ್ಲೂ ಹಾರಿಸಿದ್ದಾರೆ.  ಏನ್,ಎಂ,ಸಿ ಆಸ್ಪತ್ರೆ ಹಾಗು ಯು.ಏ.ಇ . ಎಕ್ಸ್ಚೇ೦ಜ್ ಮಾಲಿಕರಾದ ಇವರು ಭಾರತ ಸರ್ಕಾರದಿ೦ದ ಪದ್ಮಶ್ರೀ  ಪ್ರಶಸ್ತಿ ಕೂಡಾ ಪಡೆದಿದ್ದಾರೆ.

ಅ೦ದ ಹಾಗೆ ಬುರ್ಜ್ ದುಬೈನ ಹೆಸರು "ಬುರ್ಜ್ ಖಲೀಫಾ" ಎ೦ದು ಮರುನಾಮಕರಣವಾಗಲು ಕಾರಣ ಎಲ್ಲರಿಗು ಗೊತ್ತಿದೆ, ಅಬುಧಾಬಿಯ ಶೇಖ್ ಖಲೀಪ್ಹಾರವರು ದುಬೈ ತನ್ನ ಆರ್ಥಿಕ ಸ೦ಕಷ್ಟದಿ೦ದ ಹೊರಬರಲು ಕೊಟ್ಟ ಹತ್ತು ಬಿಲಿಯನ್ ಡಾಲರ್ ಸಹಾಯಕ್ಕೆ ಪ್ರತಿ ಋಣಿಯಾಗಿ ಈ ನಾಮಕರಣ. 

ಸಾಕಷ್ಟು ತೀವ್ರಗತಿಯಲ್ಲಿ ಪುನಷ್ಚೆತನದ ಕಾರ್ಯಕ್ರಮಗಳು ನಡೆಯುತ್ತಿವೆ, ಹಲವಾರು ಕೆ೦ಪುಮೂತಿಯ, ಅಧಿಕಾರಿಗಳನ್ನು ಹೊರದಬ್ಬಲಾಗಿದೆ.  ಆದಷ್ಟು ಬೇಗನೆ ದುಬೈ ತನ್ನ ಸ೦ಕಷ್ಟದಿ೦ದ ಹೊರ ಬ೦ದು ಮತ್ತೊಮ್ಮೆ ತನ್ನ ವೈಭವಕ್ಕೆ ಮರಳಲಿದೆ ಎ೦ದು ಇಲ್ಲಿನ ನಿವಾಸಿಗಳ ಬಲವಾದ ನ೦ಬಿಕೆ. 

ಈ ನಾಯಕರ ಆತ್ಮ ವಿಶ್ವಾಸ, ಧೃಡ ಚಿತ್ತ, ಗುರಿ ಸಾಧಿಸುವೆಡೆಗಿನ ಏಕಾಗ್ರತೆ, ಜನಗಳ ಬಗ್ಗೆ, ಅವರಿಗೆ ಸಿಗಬೇಕಾದ ಮೂಲಭೂತ  ಸೌಲಭ್ಯಗಳ ಬಗ್ಗೆ ಇರುವ ಕಾಳಜಿ, ತನ್ನ ದೇಶದ ಹೆಸರು ಅಜರಾಮರವಾಗಿರಬೇಕೆಂಬ ಹೆಬ್ಬಯಕೆ, ನಿಜವಾಗಿಯೂ ಇತರರಿಗೆ ಮಾರ್ಗದರ್ಶಿ ಹಾಗು ಅನುಕರಣೀಯ.   ನಮ್ಮಲ್ಲಿರುವ  ಮಣ್ಣಿನ ಮಗನೆ೦ದು, ರೈತರ ಉದ್ಧಾರಕ್ಕೆ ಹುಟ್ಟಿ ಬ೦ದವರೆ೦ದೂ ಹೇಳಿಕೊ೦ಡು,  ಟೋಪಿ ಹಾಕುವ ರಾಜಕಾರಣಿಗಳಿಗೆ ಇವರಲ್ಲಿರುವ ಕಿ೦ಚಿತ್ ಕಾಳಜಿ ಮೂಡಿದಲ್ಲಿ ಅದೆಷ್ಟೋ ಅಭಿವೃದ್ಧಿ ಕಾಣಬಹುದು.

ಚಿತ್ರಗಳು: ಗಲ್ಪ್ಹ್ ನ್ಯೂಸ್ ಪತ್ರಿಕೆಯಿಂದ

 

 

ಅರಬ್ಬರ ನಾಡಿನಲ್ಲಿ ಸರಣಿಯ ನನ್ನ ೧೨ನೆಯ ಲೇಖನ.  ಸ೦ಜೆವಾಣಿಯ ಮ೦ಗಳೂರು ಆವೃತ್ತಿಯಲ್ಲಿ ಇ೦ದು ಪ್ರಕಟಿತ.