ದುರ್ಗೆಯ ನವರಾತ್ರಿ ನವರೂಪಗಳು

ದುರ್ಗೆಯ ನವರಾತ್ರಿ ನವರೂಪಗಳು

ಚಿತ್ರ ಕೃಪೆ: ವಿಕೀಪೀಡಿಯಾದಿಂದ http://en.m.wikipedia.org/wiki/Navratri

ಇಂದು ಈ ಬಾರಿಯ ನವರಾತ್ರಿಯ ಆರಂಭದ ದಿನ (ಸೆಪ್ಟಂಬರ 25). ಎಂದಿನಂತೆ ಒಂಭತ್ತು ಹೆಜ್ಜೆಯಿಡುತ್ತ ಆಯುಧಪೂಜೆ ಮತ್ತು ನಂತರ ವಿಜಯ ದಶಮಿಯತ್ತ ಸಾಗಿಸುವ ಈ ನವರಾತ್ರಿ ನಮ್ಮಲ್ಲಿ ಮೈಸೂರಿನ ದಸರೆಯಿಂದಾಗಿ ಜಗದ್ವಿಖ್ಯಾತವಾದರೂ, ಇದೇ ಸಮಯದಲ್ಲಿ ಪಶ್ಚಿಮ ಬಂಗಾಳ ಮತ್ತಿತರ ಕೆಲವೆಡೆ ನಡೆಯುವ ದುರ್ಗಾಪೂಜೆಯೂ ಅಷ್ಟೆ ಹೆಸರುವಾಸಿ. ಒಮ್ಮೆ ಅಲ್ಲಿನ ದುರ್ಗ ಪೂಜೆಯ ವಿವರಗಳತ್ತ ಅಂತರ್ಜಾಲದಲ್ಲಿ ಕಣ್ಣಾಡಿಸುತ್ತಿದ್ದಾಗ ಅಲ್ಲಿಯ ನವರಾತ್ರಿಯಲ್ಲಿ ಪ್ರತಿ ದಿನವೂ ದುರ್ಗೆಯ ಬೇರೆ ಬೇರೆ ಅವತಾರ, ನಾಮರೂಪಗಳನ್ನು ಪೂಜಿಸಿ, ಆರಾಧಿಸುತ್ತಾರೆಂದು ತಿಳಿದು ಬಂತು. ಪ್ರತಿ ದಿನದ ಪೂಜೆಯ ಅವತಾರ ಯಾವ ದೇವಿಯದೆಂದು, ಆ ದೇವಿಗೆ ಯಾವ ಆಹಾರ ಪ್ರಿಯವೆಂದು, ಆ ದೇವಿ ರೂಪದ ಪೂಜೆಯ ಫಲಶೃತಿಯೇನೆಂದು, ಆ ದೇವಿಯ ವಾಹನವಾವುದೆಂದು, ಆ ದಿನಗಗಳಿಗೆ ನಿಗದಿತವಾದ ಬಣ್ಣವಾವುದೆಂದು - ಹೀಗೆ ಪ್ರತಿ ದಿನದ ದೇವಿಯ ರೂಪಕ್ಕು ತನ್ನದೆ ಆದ ವಿಶೇಷ ಸ್ವರೂಪ, ಗುಣ ಲಕ್ಷಣಗಳನ್ನು ಆರೋಪಿಸಿ ಆರಾಧಿಸುವುದು ನಡೆದುಕೊಂಡು ಬಂದ ಸಂಪ್ರದಾಯ. ಆ ಪ್ರತಿ ರೂಪದ ಹಿನ್ನಲೆಯಾಗಿ ಇರುವ ಆ ದಿನದ ರೂಪಕ್ಕೆ ಹೊಂದುವ ಕಥೆಯೊ, ಪುರಾಣವೊ ಮತ್ತೊಂದು ಗಮನೀಯ ಅಂಶ. ಅದರ ಜತೆಗೆ ನವರಾತ್ರಿಯಲ್ಲಿ ಪೂಜೆಗಿಡುವ ಕಲಶ ಸ್ಥಾಪನೆ, ಮೊಳಕೆಯ್ಹೊಡೆಸಿಡುವ ಧಾನ್ಯಗಳು, ಆ ಸಮಯದಲ್ಲಿ ನಡೆಸುವ ಕನ್ಯಾಪೂಜೆ ಎಲ್ಲವೂ ವಿಶಿಷ್ಠವಾಗಿಯೆ ಕಾಣುತ್ತವೆ.

ಆ ಒಂಭತ್ತು ದಿನಗಳಲ್ಲಿ ಪೂಜಿಸುವ ಒಂಭತ್ತು ರೂಪಗಳ ಸಂಕ್ಷಿಪ್ತ ವಿವರಣೆ ಮತ್ತು ಆಗ ಪೂಜೆಗಿಡುವ ತಿನಿಸಿನ ವಿವರಗಳನ್ನು ಕವನ ರೂಪದಲ್ಲಿಡುವ ಒಂದು ಪುಟ್ಟ ಯತ್ನ ಈ ಕೆಳಗೆ. ಇದರಲ್ಲಿ ಸೂಚಿಸಿದ ತಿನಿಸುಗಳೆಲ್ಲ ಪರಿಚಿತವಾದದ್ದೆ ಆದರು, ಕೆಲವೆಡೆ ಇಂಗ್ಲೀಷಿನಲ್ಲಿ ಬರೆದಿದ್ದ ಮೂಲ ರೂಪದಲ್ಲಿದ್ದ ಹೆಸರನ್ನೆ ಯಥಾವತ್ತಾಗಿ ನಕಲಿಸಿ ಹಾಕಿದ್ದೇನೆ - ಅದರ ಕನ್ನಡೀಕರಿಸಿದ ಭಾಷಾಂತರಿಸಿದ ರೂಪದ ಅರಿವಿಲ್ಲದ ಕಾರಣ.

ಎಲ್ಲರಿಗೂ ನವರಾತ್ರಿಯ ಶುಭ ಹಾರೈಕೆಗಳೊಡನೆ, ಈ ದುರ್ಗೆಯ ನವರೂಪಗಳ ಅನಾವರಣ, ತಮ್ಮ ಅವಗಾಹನೆಗೆ :-)

00267. ನವರಾತ್ರಿ ನವರೂಪ
_______________________________

ಮಹಾ ನವರಾತ್ರಿಯ ನವದಿನ ಪ್ರತೀಕ
ದುರ್ಗೆಯ ನವ ರೂಪಾರಧನೆ ಸುಮುಖ
ಪ್ರತಿದಿನ ರಾತ್ರಿಗೊಬ್ಬಳ ಪೂಜೆ ದುರ್ಗಿಣಿ
ಭಕ್ತಿಭಾವದಿಂದೊಸರುವ ಸಮೂಹ ದನಿ || ೦೧ ||

ಮೊದಲ ದಿನದ ಮಾತೆಯೆ ಶೈಲಪುತ್ರಿ
ಹಿಮಾಲಯ ಹಿಮವಂತನ ಸುತೆ ಧಾತ್ರಿ
ಒಲಿಸಲು ಸಾಕು ಪರಿಶುದ್ಧ ಘೃತಾರ್ಪಣ
ರೋಗರುಜಿನವಿಲ್ಲದ ಜೀವನಕೀವ ತ್ರಾಣ || ೦೨ ||

ದ್ವಿತೀಯ ರೂಪವೆ ಮಾತ ಬ್ರಹ್ಮಚಾರಿಣಿ
ಸಮಾಧಿಯೋಗ ನಿರತೆ ಸರಳಾಚಾರಿಣಿ
ಹಣ್ಣು ಸಕ್ಕರೆ ಸಾಕು ಕರುಣಿಸುವ ಹರಕೆ
ಸಕುಟುಂಬ ಧೀರ್ಘಾಯುವಾಗಿಸೆ ವರಕೆ || ೦೩ ||

ತೃತೀಯ ರೂಪವೆ ಮಾತ ಚಂದ್ರಘಂಟಾ
ಶಿರದರ್ಧಚಂದ್ರನ ವದನ ಹಣೆಗೆ ತೊಟ್ಟ
ಆಸೆ ಪೂರೈಸಿ, ನೋವ ನಿವಾರಿಸುವಾಕೆ
ಸಿಹಿಖಾದ್ಯ ಹಾಲು ಖೀರ ಓಲೈಕೆ ಸಾಕೆ || ೦೪ ||

ಚತುರ್ಥ ರೂಪಿನಲಿ ಮಾತಾ ಖುಷ್ಮಾಂಡ
ಹಸನ್ಮುಖಿ ಮುಗುಳ್ನಗೆ ಸೃಷ್ಟಿ ಬ್ರಹ್ಮಾಂಡ
ಮಲಪುವಾ ಅರ್ಪಿಸುತ ಬುದ್ಧಿಮತ್ತೆ ಹೆಚ್ಚೆ
ದೃಢನಿರ್ಧಾರ ಕ್ಷಮತೆಯೀ ದೇವಿಯ ಇಚ್ಛೆ || ೦೫ ||

ಪಂಚಮ ರೂಪಲಿ ಮಾತಾ ಸ್ಕಂದಮಾತ
ಕಾರ್ತಿಕೇಯನ ತಾಯಾಗಿ ದುರ್ಗಾ ವ್ಯಕ್ತ
ಬಾಳೆ ಹಣ್ಣಿನ ಅರ್ಪಣೆ ದೇವಿ ಸಂತೃಪ್ತಿಗೆ
ನೀಡಲು ಭೌತಿಕ ದೃಢಕಾಯದ ಕೊಡುಗೆ || ೦೬ ||

ಷಷ್ಠ ರೂಪಿ ದುರ್ಗ ಮಾತಾ ಕಾತ್ಯಾಯನಿ
ಕಾತ್ಯಾಯನ ಋಷಿವರನ ಮಗಳೀ ಜನನಿ
ಸವಿ ಆರೋಗ್ಯದ ಛವಿ ಮಧುವರ್ಪಣೆ ನಗೆ
ದೈತ್ಯ ದಮನಕೆ ಬಂದವಳ ಸೊಗ ಸೊಬಗೆ || ೦೭ ||

ಸಪ್ತಮ ರೂಪೆ ಕರಾಳ ಮಾತಾ ಕಾಳರಾತ್ರಿ
ಪಾಪ ಕೂಪಗಳೆಲ್ಲವ ಹರಿಸೊ ರೌದ್ರತೆ ಸಿರಿ
ಸಿಹಿ ಬೆಲ್ಲದ ಖಾದ್ಯ, ಬೆಲ್ಲವೆ ಆಗಿ ನೈವೇದ್ಯ
ಕಾಳ ರಾತ್ರಿಯಲು ಹರಸಿ ಸಲಹೆ ಸಮೃದ್ಧ || ೦೮ ||

ಅಷ್ಟಮ ರೂಪಿಣಿ ಗೌರವರ್ಣದೆ ಮಹಾಗೌರಿ
ಯಶ ಪ್ರದಾಯಿನಿಗೆ ತೆಂಗ ಕಲ್ಪತರು ಭೂರಿ
ಸಂತಾನ ಪ್ರದಾಯಿನಿ ತೆಂಗಿನದಾನದೆ ಸಿಕ್ಕೆ
ಕನ್ಯಾಪೂಜೆಯ ರೂಪದಿ ಆರಾಧನೆ ಬಯಕೆ || ೦೯ ||

ಅಂತಿಮ ನವಮರೂಪ ಮಾತಾ ಸಿದ್ಧಿ ಧಾತ್ರಿ
ಸಕಲ ಸಿದ್ಧಿ ಪ್ರಾಪ್ತಿಗೆ, ಶರಣಾಗಲೆ ನವರಾತ್ರಿ
ಎಳ್ಳು ಕನ್ಯಾಪೂಜೆಯ ಆರಾಧನೆಯ ನಿಮಿತ್ತ
ಯೋಗಿ ದೇವದೇವಿಯರಿಂದಲು ತಾ ಪೂಜಿತ || ೧೦ ||