ದೃಢ ನಿರ್ಧಾರ

ದೃಢ ನಿರ್ಧಾರ

ಛೇ ,ಹೀಗೂ ಆಗಿಹೋಯಿತೇ ನನ್ನ ಬದುಕು? ಎಷ್ಟೊಂದು ಆಸೆ ಕನಸುಗಳನ್ನು ಮನಸ್ಸಿನಲ್ಲಿ ಕಟ್ಟಿಕೊಂಡವಳು ನಾನು. ಒಡಹುಟ್ಟಿದವರಿಂದಲೇ ಈ ರೀತಿಯ ನೋವೇ? ಹೇಳುವುದು ಕೇಳಿದ್ದೇನೆ ಹಿರಿಯರು, ಜನಪದರು ‘ಹೆಣ್ಣಿಗೆ ಇರಬೇಕ ಅಣ್ಣತಮ್ಮಾರು’

‘ಬ್ಯಾನೆ ಬ್ಯಾಸರಿಕೆ ಕಳೆಯಲು| ತಂಗವ್ವಾ| ಇರಬೇಕು ತವರೀನ ಕುಡಿಗಳು’||

ನನ್ನ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಹೆಸರಿಗೆ ಹಿರೀತನಕ್ಕೆ ಮಾತ್ರ ಅಣ್ಣ ಅನಿಸಿಕೊಂಡಿದ್ದಾನೆ. ಎರಡು ಅಕ್ಕಂದಿರು, ಇಬ್ಬರು ತಂಗಿಯರು, ಓರ್ವ ತಮ್ಮನ ಮಧ್ಯೆ ಇರುವ ನನ್ನ ಪಾಡು ಹೇಳಿ ಸುಖವಿಲ್ಲ. ಆದರೂ ನಾನೋರ್ವ ತುಂಬು ಕುಟುಂಬದ ಹಳ್ಳಿ ಮನೆಯ ಸಮರ್ಥ ಗೃಹಿಣಿ ಎನ್ನುವುದಕ್ಕೆ ಈಗ ಹೆಮ್ಮೆ ಪಡುತ್ತಿರುವೆ. ಏನಾಗಿದ್ದೆ, ಹೇಗಿದ್ದೆ ಎಂಬುದನ್ನು ಮೆಲುಕು ಹಾಕಿದರೆ,ಅಬ್ಬಬ್ಬಾ! ಮೈನಡುಗುತ್ತಿದೆ.

ಆಗಿನ್ನೂ ಏಳನೆಯ ತರಗತಿ ಪಾಸಾಗಿದ್ದೆ. ಪ್ರೌಢಶಾಲೆ ಕನಸಿನ ಮಾತಾಗಿತ್ತು. ಬಡತನವಿದ್ದರೂ ಮೂರು ಹೊತ್ತಿನ ಊಟ, ಬಟ್ಟೆಗೆಂದೂ ಅಪ್ಪ ಕೊರತೆ ಮಾಡಿರಲಿಲ್ಲ. ಅಪ್ಪನ ಪ್ರೀತಿಗೆ ಎಣೆಯಿರಲಿಲ್ಲ. ಅದ್ಯಾಕೊ ಸಾಲಾಗಿ ಹೆಣ್ಣು ಹೆತ್ತ ನಂತರದ ಗಂಡು ಮಗು ಎಂದು ಮುದ್ದಿನಿಂದ ಬೆಳೆಸಿದ ಅಣ್ಣನ ಮೊಂಡುತನ, ಹಠ ಎಲ್ಲದರಲ್ಲೂ ಮುಂದೆಯೇ. ಅಮ್ಮನ ಅಸಡ್ಡೆಗೆ ಅಣ್ಣನಿಂದಾಗಿ ನಿತ್ಯವೂ ಗುರಿಯಾಗುತ್ತಿದ್ದವಳು ನಾನು.

ಮೂರು ದಿನ ಹಗಲುರಾತ್ರಿ ಉಪವಾಸ ಮಾಡಿದ ಫಲ ಐದು ಮೈಲು ದೂರದ ಪ್ರೌಢಶಾಲೆಯ ಮುಖ ನೋಡುವಂತಾಯಿತು. ಅಲ್ಲಿಯೂ ತರಗತಿಗೆ ಮೊದಲಿಗಳಾಗಿ ಬರುವುದು ಅಣ್ಣನ ಕೆಂಗಣ್ಣಿಗೆ ಕಾರಣವಾಯಿತು. ಮುದ್ದಿನ ಫಲವಾಗಿ ಒಂದೊಂದು ತರಗತಿಯಲ್ಲಿ ಎರಡೆರಡು ವರ್ಷ ಕೂತ ಅಣ್ಣ ಅಪ್ಪನ ಕೈಯಿಂದ ಛೀಮಾರಿಗೆ ಒಳಗಾಗುತ್ತಿದ್ದ. ಇದೇ ದ್ವೇಷದ ಹೊಗೆಯೆದ್ದು ನನ್ನನ್ನು ಮತ್ತಷ್ಟೂ ಪೀಡಿಸಲು, ಹೊಡೆದು ಬಡಿಯಲು, ಹಿಂಸಿಸಲು ಕಾರಣವಾಯಿತು.

ತೋಟದ ಬದಿಯಲ್ಲಿ ದೊಡ್ಡ ಹೊಳೆ ಹರಿಯುತಿತ್ತು. ಮಳೆಗಾಲದ ಒಂದು ದಿನ ಅಣ್ಣ ನನ್ನನ್ನು ಸಿಟ್ಟಿನಿಂದ ಮಳೆಯ ನೀರು ತುಂಬಿ ಹರಿಯುತ್ತಿರುವಾಗ ಹೊಳೆಗೆ ನೂಕಿದ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿಯವರು ನೋಡಿ, ಓಡಿಬಂದು ನನ್ನನ್ನು ದಡಕ್ಕೆ ತಂದು ಹಾಕಿದರು.

ಅಪ್ಪನ ಹತ್ತಿರ ಕಾಲುಜಾರಿ ಬಿದ್ದದ್ದು ಎಂದು ಸತ್ಯವನ್ನು ಮರೆಮಾಚಿ ಹೇಳಿದೆ. "ಹೇಳಿದರೆ ಕೊಂದು ಬಿಡ್ತೇನೆ" ಎಂಬ ಅಣ್ಣನ ಬೆದರಿಕೆಗಂಜಿ ಹಾಗೆ ಹೇಳಬೇಕಾಯಿತು. ಹತ್ತನೇ ತರಗತಿ ಆದ ಕೂಡಲೇ ‘ಒಲೆ ಬೂದಿ ತೋಡುವ ಹುಡುಗಿಗೆ ಕಾಲೇಜು ಯಾಕೆ’ ಎಂದು ಗಂಡು ಹುಡುಕಿ ಮದುವೆ ಮಾಡಿಯೇ ಬಿಟ್ಟರು. ೨೫ ಜನರಿಂದ ತುಂಬಿದ ದೊಡ್ಡ ಹಳ್ಳಿಯ ಮನೆ, ಗಂಡ ಶಂಕರ ಕೃಷಿಕ.

ಅತ್ತೆ ಮಾವ, ಮೈದುನರು, ನಾದಿನಿಯರು, ಆಳುಕಾಳುಗಳು, ಹಟ್ಟಿ ದನಕರುಗಳು ಎಲ್ಲವೂ ಇದ್ದ ಮನೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಗಾಣದೆತ್ತಿನಂತೆ ದುಡಿದರೂ ಕೆಲಸ ಮುಗಿಯುತ್ತಿರಲಿಲ್ಲ. ತಾಯಿ ಮನೆಗೆ ಹೋಗುವುದೇ ಅಪರೂಪವಾಗಿತ್ತು. ಒಡಹುಟ್ಟಿದ ಅಣ್ಣನ ಪ್ರೀತಿ, ಮಮತೆ, ವಾತ್ಸಲ್ಯ ಯಾವುದೂ ಇಲ್ಲ. ಹೇಗೋ ದಿನಗಳು ಜಾರುತಿತ್ತು. ಅದಾಗಲೇ ‘ಬಂಜೆ’ಯೆಂಬ ಪಟ್ಟವನ್ನು ತಲೆಯಮೇಲೆ ಹೊರಿಸಿಯಾಗಿತ್ತು.

ಈ ನಡುವೆ ಹೆತ್ತವರನ್ನು ಕಳಕೊಂಡೆ. ಶಾಸ್ತ್ರಕ್ಕೆ ಕರಕೊಂಡು ಹೋಗಿ ಬಂದಿದ್ದರು. ಅಣ್ಣನ ಮದುವೆಯೂ ಆಯಿತು. ಅತ್ತಿಗೆಯ ಪ್ರೀತಿಗೆ ಮಾರುಹೋದೆ, ಬಹಳ ಸಜ್ಜನಿಕೆ, ಸರಳತೆಯ ಮನಸ್ಸು.

ಇಲ್ಲಿ ಅತ್ತೆಯವರ ಕಿರಿಕಿರಿ, ಮೊಮ್ಮಗು ಬೇಕು ಎಂದು. ಒಟ್ಟಿನಲ್ಲಿ ನನ್ನ ಹಣೆಯಲ್ಲಿ ಶಾಂತಿ ಎಂಬುದೇ ಬರೆದಿಲ್ಲವೇ ಅನ್ನಿಸಿತು. ಹಳೇ ಸಂಪ್ರದಾಯಗಳ ಮನಸ್ಸು, ನಾನೇ ಹೊಂದಾಣಿಕೆ ಮಾಡತೊಡಗಿದೆ. ತವರು ಮನೆಯಲ್ಲಿ ಕಂಡ ಸುಖ ಅಷ್ಟಕ್ಕಷ್ಟೆ. ಮನಸ್ಸಿನಲ್ಲಿ ‘ದೃಢ ನಿರ್ಧಾರ’ ಮಾಡಿದೆ. ಹೇಗಾದರೂ ಮಾಡಿ ಎಲ್ಲರ ಮನವ ಗೆಲ್ಲಲೇ ಬೇಕೆಂಬ ಪಣತೊಟ್ಟೆ. ಪ್ರತಿಯೊಬ್ಬರಿಗೂ ಬೇಕಾದ ಹಾಗೆ ಬದುಕುವುದನ್ನು ರೂಢಿ ಮಾಡಿಕೊಂಡೆ. ಯಾಕೋ ಇತ್ತೀಚೆಗೆ ನನ್ನವರು ಸಹ ಪ್ರೀತಿ , ವಿಶ್ವಾಸ, ವಿಶೇಷ ಕಾಳಜಿ ತೋರಿಸಲು ಪ್ರಾರಂಭಿಸಿದರು. ನಾದಿನಿಯರಿಗೆ, ಮೈದುನರಿಗೆಲ್ಲ ಮದುವೆಯಾಗಿ ಅವರವರ ಸಂಸಾರ ಸುರುವಾಯಿತು. ಕಂಡ ಕಂಡ ದೇವರಿಗೆ ಹರಕೆ ಹೊತ್ತ ಅತ್ತೆಯವರ ಮನೋಭಿಲಾಷೆ, ನನ್ನ ಆಸೆ ಎರಡೂ ಈಡೇರುವ ಸೂಚನೆ ಸಿಕ್ಕಿತು. ಚೊಚ್ಚಲ ಬಾಣಂತನ ತವರಿನಲ್ಲಿ ಹೆಣ್ಣಿಗೆ ಆಸೆ. ಅಮ್ಮನಿಲ್ಲದ ಮನೆಯಾದರೂ ಅಮ್ಮನಂತೆ ಅತ್ತಿಗೆಯಿದ್ದರು. ಆದರೆ ಅಣ್ಣ ನನಗೆ ನೀಡಿದ ಒಂದೊಂದು ಶಿಕ್ಷೆ ನೆನಪಿಗೆ ಬಂದು 'ಮೈಯೆಲ್ಲಾ ಕಂಬಳಿಹುಳ ಹರಿದಾಡಿದಂತಾಯಿತು.' ಎಂದೋ ಒಮ್ಮೆ ಹೋಗಿದ್ದಾಗ 'ಅವಳನ್ನು ಗಂಡನ ಮನೆಗೆ ಕಳುಹಿಸುವಾಗ ಎಲ್ಲಾ ಕೊಟ್ಟಾಗಿದೆ, ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ, ಇನ್ನು ಏನೂ ಸಿಗದು' ಅಣ್ಣನಾಡಿದ ಮಾತು ಕಿವಿಗಳಲ್ಲಿ ಗುಂಯ್ ಗುಟ್ಟುತ್ತಿದೆ. ಹೋಗುವ ಯೋಚನೆ ಬಿಟ್ಟೆ.

ಅತ್ತೆಯವರು ಇತ್ತೀಚೆಗೆ ವಾತ್ಸಲ್ಯದ ಮೂರುತಿಯಾಗಿದ್ದರು. ಆರೋಗ್ಯವಂತ ಹೆಣ್ಣು ಮಗುವಿನ ತಾಯಿಯಾದೆ. ಬಂಜೆ ಎಂಬ ಹೆಸರು ಅಳಿಸಿತು. ಊರ ಪಂಚಾಯತ್ ಚುನಾವಣೆಯಲ್ಲಿ ನನ್ನವರ, ಊರಿನವರ ಅಪೇಕ್ಷೆಯಂತೆ ನಿಂತು, ಮನೆಯ ಸದ್ಗೃಹಿಣಿಯಾಗಿ, ಗಂಡನ ಮನವರಿತ ಮಡದಿಯಾಗಿ, ಊರಿನ ಪ್ರಥಮ ಪ್ರಜೆಯಾಗಿ, ಸಮರ್ಥವಾಗಿ ಮತ್ತು ಸಮರ್ಪಕವಾಗಿ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿರುವೆ. ಅಂದಹಾಗೆ ನನ್ನ ಹೆಸರು ‘ಸೌಪರ್ಣಿಕಾ’.

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ