ದೇವರು ಕೊಟ್ಟಿದ್ದರಲ್ಲಿ ನೆಮ್ಮದಿಯಿಂದ ಇರೋಣ!

ದೇವರು ಕೊಟ್ಟಿದ್ದರಲ್ಲಿ ನೆಮ್ಮದಿಯಿಂದ ಇರೋಣ!

ಹಿರಿಯರೇ ... ವಯೋವೃದ್ದರೇ... ನಿವೃತ್ತಿ ಜೀವನ ನಡೆಸುತ್ತಿರುವವರೇ...... ವಿಶ್ರಾಂತಿ ಜೀವನದಲ್ಲಿ ಜಿಗುಪ್ಸೆ ಹೊಂದಿರುವವರೇ.. ಯಾರೇ ಇರಲಿ ಇಲ್ಲಿ ಬರೆದಿರುವ ವಿಷಯವನ್ನು ಅರ್ಥ್ಯ ಸಿಕೊಳ್ಳುವದರೊಂದಿಗೆ ಜೀವನ ಶೈಲಿಯ ಬದಲಾವಣೆ ಮಾಡಿ ಕೊಂಡು ಅನುಭವಿಸೋಣ... ನೆಮ್ಮದಿಯ ಬದುಕು ನಡೆಸೋಣ... ಓದಿ... ಬಹಳ ಇದೆ ಎಂದು... ನಿಲ್ಲಿಸಬೇಡಿ... ಓದಿ....

ಸುಮಾರು 65-70 ವಯಸ್ಸಿನ ವ್ಯಕ್ತಿಯೊಬ್ಬರು ಯಾಕೋ ಖಿನ್ನತೆಯಿಂದ ನರಳುತ್ತಿದ್ದರು. ಅವರ ಮಡದಿ ಪತಿಯನ್ನು ಮನೋಚಿಕಿತ್ಸಕರ ಬಳಿಯಲ್ಲಿ ತೋರಿಸುವ ಸಲುವಾಗಿ ನಗರದ ಪ್ರಖ್ಯಾತ ಮನೋವೈದ್ಯರ ಬಳಿ ಹೋಗಲು ಸಮಯ ನಿಗದಿ ಮಾಡಿಕೊಂಡಳು. 

ವೈದ್ಯರಿಗೆ ಹೇಳಿದಳು - “ ಡಾಕ್ಟರ್ರೇ, ನಮ್ಮ ಹಸ್ಬೆಂಡ್ ತುಂಬಾ ಡಿಪ್ರೆಶನ್ ಗೆ ಹೋಗಿ ಬಿಟ್ಟಿದ್ದಾರೆ. ದಯವಿಟ್ಟು ಚೆಕ್ ಅಪ್ ಮಾಡಿ ನೋಡಿ ಡಾಕ್ಟ್ರೇ “.

ಮನೋವೈದ್ಯರು ಹೇಳಿದರು - ಆಗಲಮ್ಮಾ, ನೋಡ್ತೀನಿ, ಇವರಿಗೆ ನಾನೊಂದಷ್ಟು ಪ್ರಶ್ನೆ ಕೇಳಬೇಕಾಗುತ್ತೆ. ನೀವು ದಯವಿಟ್ಟು ಸ್ವಲ್ಪ ಹೊತ್ತು ಹೊರಗೆ ಕುಳಿತಿರಿ“. ಆಕೆ ಆಚೆ ಹೋಗಿ ಕುಳಿತಳು. ಡಾಕ್ಟರ್ ವೃದ್ಧರಿಗೆ ಪ್ರಶ್ನೆ ಕೇಳುತ್ತಾ ಹೋದರು, ವ್ಯಕ್ತಿ ಉತ್ತರಿಸುತ್ತಾ ಹೋದರು. ಅವರ ಸಂಭಾಷಣೆ ಈ ರೀತಿ ಇತ್ತು.

ವೃದ್ಧರು ಹೇಳಿದರು- “ ನನಗೆ ತುಂಬಾ ಚಿಂತೆಯಾಗಿದೆ. ನಿಜವಾಗಿ ಹೇಳಬೇಕೆಂದರೆ, ಚಿಂತೆಯೆಂಬ ಸಮುದ್ರದಲ್ಲಿ ಮುಳುಗಿ ಹೋಗಿದ್ದೇನೆ. ಕುಟುಂಬ ಸಮಸ್ಯೆಗಳು, ಕೆಲಸದೊತ್ತಡ, ಗೆಳೆಯರ ಸಹವಾಸ, ಮಕ್ಕಳ ವಿದ್ಯಾಭ್ಯಾಸ, ಅವರ ಉದ್ಯೋಗಕ್ಕಾಗಿ ಪರದಾಟ, ಮನೆ ಸಾಲ, ವೆಹಿಕಲ್ ಲೋನ್, ಒಂದೇ, ಎರಡೇ. ಈ ಒತ್ತಡಗಳಿಂದಾಗಿ ಯಾವುದರಲ್ಲಿಯೂ ಆಸಕ್ತಿಯೇ ಇಲ್ಲ. ಮುಂಚೆ ಯಾವು ಯಾವುದನ್ನು ಇಷ್ಟ ಪಡುತ್ತಿದ್ದೆನೋ, ಈಗ ಅವೆಲ್ಲಾ ಆಕರ್ಷಣೆ ಕಳೆದುಕೊಂಡಿವೆ. ಆದರೆ ಹೊರ ಜಗತ್ತು ನನ್ನನ್ನು ಬೇರೆಯೇ ತಿಳಿದಿದೆ.

ಅದು ತಿಳಿದಿದೆ - ನಾನೊಂದು missile ಎಂದು. ನಾನೊಬ್ಬ ಎಲ್ಲವನ್ನೂ ಪಡೆದುಕೊಂಡು ಬಂದಿರುವ ಭಾಗ್ಯಶಾಲಿ. ಆದರೆ ನನಗೆ ಗೊತ್ತು - ನಾನು ಏನೂ ಅಲ್ಲ, missile ಹೋಗಲಿ, ಸಾಧಾರಣ ಬಂದೂಕಿನ ಬುಲೆಟ್ ಸಹ ಅಲ್ಲ ಎಂದು. ಇದರಿಂದಾಗಿಯೇ ನಾನು ತುಂಬಾ ಖಿನ್ನನಾಗಿದ್ದೇನೆ. ಮನೋವೈದ್ಯರು ಒಂದು ನಿಮಿಷ ಏನೂ ಮಾತನಾಡದೆ ಶಾಂತವಾಗಿ ಕುಳಿತರು. ನಂತರ ಕೇಳಿದರು - “ ನೀವು ಯಾವ ಹೈಸ್ಕೂಲಿನಲ್ಲಿ ಓದಿದ್ದು “? ವೃದ್ಧರು ಆ ಶಾಲೆಯ ಹೆಸರು ಹೇಳಿದರು.

ಡಾಕ್ಟರ್ ಮುಂದುವರೆಸಿದರು - “ ದಯವಿಟ್ಟು ಈಗ ನೀವು ಆ ಶಾಲೆಗೆ ಹೋಗಿ. ಹೋದ ನಂತರ ನಿಮ್ಮ ತರಗತಿಯ ಅಂದಿನ ಹಾಜರಾತಿ ಪಟ್ಟಿ ಸಿಗುವುದೋ ಕೇಳಿ. ಸಿಕ್ಕಿದರೆ ನಿಮ್ಮ ಪುಣ್ಯ. ರಿಜಿಸ್ಟರ್ ಸಿಕ್ಕಿದಲ್ಲಿ, ನಿಮ್ಮ ಜೊತೆ ಓದಿದ ಎಲ್ಲ ಸಹಪಾಠಿಗಳ ಹೆಸರುಗಳ ಮೇಲೆ ಕಣ್ಣು ಹಾಯಿಸುತ್ತಾ ಹೋಗಿ. ಈಗ ಅವರುಗಳೆಲ್ಲಾ ಎಲ್ಲೆಲ್ಲಿದ್ದಾರೆ, ಹೇಗಿದ್ದಾರೆ ಎಂಬ ಮಾಹಿತಿಯನ್ನು ಎಷ್ಟು ಸಾಧ್ಯವೋ ಅಷ್ಟು ಸಂಗ್ರಹಿಸುತ್ತಾ ಹೋಗಿ. ಸಿಕ್ಕ ಮಾಹಿತಿಯನ್ನು ನೋಟ್ ಮಾಡಿಕೊಳ್ಳುತ್ತಾ ಹೋಗಿ. ಒಂದು ತಿಂಗಳ ನಂತರ ನನ್ನನ್ನು ಇನ್ನೊಮ್ಮೆ ಭೇಟಿ ಮಾಡಿ”

ಡಾಕ್ಟರ ಸಲಹೆಯಂತೆ ವೃದ್ಧರು ತಮ್ಮ ಹಳೆಯ ಶಾಲೆಯನ್ನು ಹುಡುಕಿಕೊಂಡು ಹೋದರು. ಅವರ ಅದೃಷ್ಟಕ್ಕೆ ಅವರು ಓದುತ್ತಿದ್ದಾಗಿನ ಅಂದಿನ ಅವರ ತರಗತಿಯ ಹಾಜರಾತಿ ಪಟ್ಟಿ ದೊರಕಿತು. ವೃದ್ಧರು ಇಡೀ ಪುಸ್ತಕವನ್ನೇ ನಕಲು ಮಾಡಿಕೊಂಡರು. ಅವರ ತರಗತಿಯಲ್ಲಿ ಒಟ್ಟು 120 ವಿದ್ಯಾರ್ಥಿಗಳಿದ್ದರು. ಹಗಲೂ ರಾತ್ರಿ ಕಷ್ಟಪಟ್ಟು ಅವರೆಲ್ಲರ ಈಗಿನ ಮಾಹಿತಿಯನ್ನು ಸಂಗ್ರಹಿಸಿದರು. ತುಂಬಾನೇ ಕಷ್ಟ ಪಡಬೇಕಾಯಿತು. ಎಷ್ಟೇ ಕಷ್ಟಪಟ್ಟರೂ 70-80 ಹಳೆಯ ಗೆಳೆಯರ ಮಾಹಿತಿ ಮಾತ್ರ ಕಲೆ ಹಾಕಲು  ಸಾಧ್ಯವಾಯಿತು. ಒಂದು ತಿಂಗಳ ನಂತರ ಮಾಹಿತಿಯೊಂದಿಗೆ ಡಾಕ್ಟರನ್ನು ಭೇಟಿ ಮಾಡಿದರು.

ಆಶ್ಚರ್ಯವೇನೆಂದರೆ, ಮಾಹಿತಿ ಹೀಗಿತ್ತು. 20 ಮಂದಿ ಈಗಾಗಲೇ ಸತ್ತು ಹೋಗಿದ್ದರು. 7 ಮಂದಿ ವಿಧವೆ ಅಥವಾ ವಿಧುರರಾಗಿದ್ದರು. 13 ಮಂದಿ ವಿವಾಹ ವಿಚ್ಛೇದನ ಪಡೆದಿದ್ದರು. 10 ಮಂದಿ ಮಾದಕ ವ್ಯಸನಿಗಳಾಗಿದ್ದರು. 5 ಮಂದಿ ದಟ್ಟ ದರಿದ್ರರಾಗಿದ್ದರು. 6 ಮಂದಿ ಊಹಿಸಲಾಗದಷ್ಟು 

ಶ್ರೀಮಂತರಾಗಿದ್ದರು. ಆದರೆ ಪಾಪ ಅವರಲ್ಲಿಯೂ ಕೆಲವರ  ಸ್ಥಿತಿ ಹೇಗಿತ್ತೆಂದರೆ, ಒಬ್ಬರಿಗೆ ಕ್ಯಾನ್ಸರ್ ಆಗಿತ್ತು. ಒಬ್ಬರಿಗೆ ಪಾರ್ಶ್ವವಾಯು ಬಡಿದಿತ್ತು. ಒಬ್ಬರಿಗೆ ಮಧುಮೇಹ. ಒಬ್ಬರಿಗೆ ಅಸ್ತಮಾ. ಇನ್ನೊಬ್ಬರಿಗೆ ಹೃದಯ ತೊಂದರೆ. ಇನ್ನು ಕೆಲವರಿಗೆ ಮಂಡಿನೋವು, ಬೆನ್ನು ಮೂಳೆಯ ತೊಂದರೆ. ಕೆಲವರ ಮಕ್ಕಳು ಬುದ್ಧಿಮಾಂದ್ಯರಾಗಿದ್ದರು. ಕೆಲವರ ಮಕ್ಕಳು ಪೋಕರಿಗಳಾಗಿದ್ದರು. ಒಬ್ಬಾತನ ಮಗ ಜೈಲಿನಲ್ಲಿದ್ದ. ಇನ್ನೊಬ್ಬಾತನ ಮಗ ಎರಡು ಮದುವೆ ಮುರಿದುಕೊಂಡು, ಮೂರನೆಯದಕ್ಕೆ ಪ್ರಯತ್ನಿಸುತ್ತಿದ್ದ. ಇಷ್ಟೆಲ್ಲಾ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ಮನೋವೈದ್ಯರು ವೃದ್ಧರನ್ನು ಕೇಳಿದರು - “ ಈಗ ನಿಮ್ಮ ಮನಸ್ಸಿನ ಖಿನ್ನತೆ ಹೇಗಿದೆ “?

ಆ ವೃದ್ಧರಿಗೆ ಈಗ ಅರಿವಾಗಿತ್ತು - ತನಗೆ ಯಾವುದೇ ಖಾಯಿಲೆಯಿಲ್ಲ. ತನಗೆ ಬಡತನವಿಲ್ಲ. ಮೆದುಳು ಸಕ್ರಿಯವಾಗಿದೆ. ತಾನು ಅದೃಷ್ಟ ವಂಚಿತನಲ್ಲ. ತನ್ನ ಹೆಂಡತಿ ಮಕ್ಕಳು ಕೂಡ ಅನುಕೂಲಕರವಾಗಿಯೇ ಇದ್ದಾರೆ. ತನ್ನ ಸಮಸ್ಯೆ ಇತರರ ಸಮಸ್ಯೆಗಳ ಮುಂದೆ ಏನೂ ಅಲ್ಲ. ಆ ವೃದ್ಧರಿಗೆ ಈಗ ಜ್ಞಾನೋದಯವಾಗಿತ್ತು ಜಗತ್ತಿನಲ್ಲಿ ಎಷ್ಟೋ ಜನರಿಗೆ ಸಿಗದ ಸುಖ ಸಂತೋಷಗಳು ತನಗೆ ದೊರೆತಿವೆ.

ವೈದ್ಯರು ವೃದ್ಧರಿಗೆ ಹೇಳಿದರು - ದಯವಿಟ್ಟು ಮತ್ತೊಬ್ಬರ ಊಟದ ತಟ್ಟೆಯಲ್ಲಿ ಇಣುಕಿ ನೋಡುವ ಅಭ್ಯಾಸವನ್ನು ಬಿಡಿ. ನಿಮ್ಮ ತಟ್ಟೆಯಲ್ಲಿನ ಊಟವನ್ನು ಸಂತೃಪ್ತಿಯಿಂದ ತಿನ್ನಿ. ಇನ್ನೊಬ್ಬರ ಜೀವನದೊಂದಿಗೆ ನಮ್ಮ ಜೀವನವನ್ನು ಹೋಲಿಸಿಕೊಳ್ಳುವುದೇ ತಪ್ಪು. ಪ್ರತಿಯೊಬ್ಬನೂ ಅವನ ಗಮ್ಯದ ಕಡೆಗೆ ನಡೆದುಕೊಂಡು ಹೋಗುತ್ತಲೇ ಇರುತ್ತಾನೆ. ಇವರಲ್ಲಿ ಯಾರೂ ಮುಂಚಿಲ್ಲ, ಯಾರೂ ತಡವಿಲ್ಲ. ಅವನವನಿಗೆ ಅವನವನದೇ ಸಮಯ ನಿಗದಿಯಾಗಿರುತ್ತದೆ. ಎಲ್ಲದರಲ್ಲಿ ಒಳ್ಳೆಯದೂ ಇರುತ್ತದೆ, ಕೆಟ್ಟದ್ದೂ ಇರುತ್ತದೆ. ದೊಡ್ಡದೂ ಇರುತ್ತದೆ, ಚಿಕ್ಕದೂ ಇರುತ್ತದೆ. ದೇವರು ಕೊಟ್ಟಿದ್ದರಲ್ಲಿ ನೆಮ್ಮದಿಯಿಂದ ಇರೋಣ.

ಗೆಳೆಯರೇ, ಆ ವೃದ್ಧ ನಾನಾಗಿರಬಹದೇ ? ಅಥವಾ ನೀವು ? ಅಥವಾ ನಿಮ್ಮ ಗೆಳೆಯರು ಯಾರಾದರೂ ? ನನಗೆ, ನಿಮಗೆ, ಅಥವಾ ಆ ಯಾರಿಗಾದರೂ ಈ ಲೇಖನ ಸೂಕ್ತ ಸಮಾಲೋಚನೆ ಆಗಬಹುದಲ್ಲವೇ ?

(ಆಧಾರ) ಪರಮೇಶ್ವರಪ್ಪ ಜಿ ಕುದರಿ, ಚಿತ್ರದುರ್ಗ

ಚಿತ್ರ ಕೃಪೆ: ಇಂಟರ್ನೆಟ್ ತಾಣ