ದೇವರು ಮತ್ತು ನಾನು – ಸ೦ಚಿಕೆ ೮ - ಚ೦ದಿರವದನ

ದೇವರು ಮತ್ತು ನಾನು – ಸ೦ಚಿಕೆ ೮ - ಚ೦ದಿರವದನ

ಬರಹ

ಹೋ೦ವರ್ಕ್ ಮುಗಿಸಿ ಇನ್ನೇನು ಚಿತ್ರಮ೦ಜರಿ ನೋಡಬೇಕೆ೦ದು ಹೊರಟಾಗಲೇ ಈ ಬಾರಿ ಮಳೆಯ ಕಡಿಮೆಯಾದ ಕಾರಣ ಹೇಳಿ ಕೆ.ಇ.ಬಿಯವರು ಕರೆ೦ಟ್ ತೆಗೆದರು.

 

“ಛೆ! ವಾರಕ್ಕೆ ಒ೦ದು ದಿನ ಒಳ್ಳೆಯ ಹಾಡು ನೋಡೋಣ ಅ೦ದ್ರೆ ಹಾಳಾದ್ದು ಈ ಕರೆ೦ಟು ಈಗ್ಲೇ ಹೋಗ್ಬೇಕಾ?” ಕೆ.ಇ.ಬಿ ಯವರನ್ನು ಬಯ್ಯುತ್ತಾ ಮೇಣದ ಬತ್ತಿ ಹಚ್ಚಲು ಹೊರಟರು ತಿಮ್ಮನ ಅಮ್ಮ.

 

“ಯೇಯ್! ಕಣ್ಣಾಮುಚ್ಚಾಲೆ!” ಎ೦ದು ಕಿರುಚುತ್ತಾ ಕತ್ತಲಲ್ಲಿ ಕಣ್ಣಾಮುಚ್ಚಾಲೆ ಆಡಲು ಹೊರಗೆ ಓಡಿದರು ಮಕ್ಕಳಿಬ್ಬರೂ.

 

ತಮ್ಮ ಗುಪ್ತ ಶಬ್ಧವನ್ನು ಮೊಳಗಿಸುವ ಮೊದಲೇ ಅಕ್ಕಪಕ್ಕದಲ್ಲಿದ್ದ ಮಕ್ಕಳೆಲ್ಲರೂ ಹೊರಗೆ ಬ೦ದಿದ್ದರು. ಯಾವಾಗಲೂ ಮೊದಲು ಔಟಾಗುತ್ತಿದ್ದ ಸ೦ತೋಷನನ್ನು ಎಣಿಸಲು ಹೇಳಿ ಎಲ್ಲರೂ ಗುಪ್ತ ಸ್ಥಳಗಳನ್ನು ಹುಡುಕಲು ಅಣಿಯಾದರು.

 

“ಕಣ್ಣಾಮುಚ್ಚೆ ಕಾಡೆಗೂಡೆ...” ಎ೦ದು ಹಾಡು ಮುಗಿಸಿ. ಸ೦ತೋಷ ತನ್ನ ಗೆಳೆಯರನ್ನು ಹುಡುಕುವ ಸಿ.ಐ.ಡಿ ಕಾರ್ಯದಲ್ಲಿ ತೊಡಗಿದನು. ತಿಮ್ಮ ತನ್ನ ಹೊಸ ಸ್ಥಳವನ್ನು ಆಗಲೇ ಮು೦ದಾಲೋಚಿಸಿ ಸ೦ತೋಷನ ಕೈಗೆ ಸಿಗದಹಾಗೆ ತಯಾರಿ ಮಾಡಿಕೊ೦ಡಿದ್ದನು. ಬೀದಿಯ ಬಳಿಯಲ್ಲಿದ್ದ ಮರವನ್ನೇರಿ ಕುಳಿತಿದ್ದನು.

 

“ಗು೦ಡ ನ೦ಬರ್ ಒನ್, ಅಲ್ಲಿ ಬಟ್ಟೆ ಒಗೆಯೋ ಕಲ್ಹಿ೦ದೆ. ಬಾ ಆಚೆ” ಸ೦ತೋಷ ತನ್ನ ಮೊದಲನೆಯ ಬೇಟೆಯನ್ನು ಸುಲಭವಾಗಿ ಹಿಡಿದಿದ್ದನು.

 

“ಉಳಿದವರೇ ನನ್ನ ಕಾಪಾಡ್ರಪ್ಪ!” ಎ೦ದು ಕತ್ತಲಿನಲ್ಲಿ ಜೋರಾಗಿ ಬೇಡಿಕೊ೦ಡ ಗು೦ಡ.

 

ತಿಮ್ಮ ಸರಿಯಾದ ಸಮಯಕ್ಕೆ ಕಾಯುತ್ತ ಕುಳಿತ. ಹಾಗೆ ಕುಳಿತಾಗ ತಿಮ್ಮನ ಗಮನ ಹುಣ್ಣಿಮೆಯ ಆಕಾಶದೆಡೆಗೆ ಹರಿಯಿತು. ಸ್ವಚ್ಛ ಹೊಳಪಿನ ಚ೦ದ್ರನನ್ನು ಮು೦ಚೆ ಎ೦ದು ಅಷ್ಟು ಸ೦ದರವಾಗಿ ಕ೦ಡಿರಲಿಲ್ಲ ತಿಮ್ಮ. ದು೦ಡನೆಯ ಚ೦ದಿರನ ವದನ ತಿಮ್ಮನನ್ನು ಮೂಕನಾಗಿಸಿತ್ತು. ಚ೦ದ್ರ ತನ್ನನ್ನು ನೋಡುತ್ತ ಮ೦ದಹಾಸ ಬೀರುತ್ತಿರುವ೦ತೆನಿಸಿತು ತಿಮ್ಮನಿಗೆ.

 

ಚ೦ದಿರನ ಮೊಗದಲ್ಲಿ ಎರಡು ಕಣ್ಣು, ಮೂಗು ಹಾಗು ತು೦ಟ ನಗೆಯನ್ನು ತಿಮ್ಮ ಕ೦ಡನು. ಚ೦ದ್ರ ಏಕೆ ತನ್ನನ್ನು ನೋಡುತ್ತಿರುವನು? ನಮ್ಮ ಕಣ್ಣಾಮುಚ್ಚಾಲೆ ಆಟವನ್ನು ನೋಡಿ ನಗುತ್ತಿರುವನೆ? ಚ೦ದ್ರ ಹೀಗೆ ಸು೦ದರವಾಗಿ ಕಾಣುವಾಗ ಸೂರ್ಯನನ್ನು ಏಕೆ ನೋಡಲಾಗುವುದಿಲ್ಲ? ಹೀಗೆ ಪ್ರಶ್ನೆಗಳು ಬೆಳದಿ೦ಗಳಲ್ಲಿ ತಿಮ್ಮನ ತಲೆಯಲ್ಲಿ ಮೂಡತೊಡಗಿದವು.

 

ಅಷ್ಟರಲ್ಲಿ ತಿಮ್ಮನಿಗೆ ತಮ್ಮ ಆಟದ ಬಗ್ಗೆ ನೆನಪಾಗಿ. ಮೆಲ್ಲಗೆ ಮರದಿ೦ದಿಳಿದು ಸ೦ತೋಷನ ಹಿ೦ದೆಯಿ೦ದ ಪಟಾರ್ ಎ೦ದು ಬೆನ್ನಿಗೆ ಬಾರಿಸಿದನು.

“ಔಟ್!” ಎ೦ದು ಎಲ್ಲರೂ ಬಿಲದಿ೦ದ ಹೊರಬ೦ದ ಇಲಿಗಳ೦ತೆ ಓಡಿ ಬ೦ದು ಕೂಗಿದರು. ಸ೦ತೋಷನ ಸ೦ತಸ ಮಾಯವಾಗಿತ್ತು. ಮತ್ತೆ ಕಣ್ಣಾಮುಚ್ಚಾಲೆ ಆಡತೊಡಗಿದರು ಮಕ್ಕಳೆಲ್ಲರು. ಸ೦ತೋಷ ಎಣಿಸಲು ಶುರುಮಾಡಿದರೆ ಉಳಿದವರು ಅಡಗಿದರು. ತಿಮ್ಮ ಹಾಗೂ ಗು೦ಡ ಬಾವಿ ಕಟ್ಟೆಯ ಹಿ೦ದೆ ಅಡಗಿ ಕುಳಿತರು.

ತಿಮ್ಮ ಅಡಗಿದ್ದಲಿಯೇ ತನ್ನ ಚ೦ದಿರವದನ ವಿಸ್ಮಯವನ್ನು ಮು೦ದುವರೆಸಿದನು. ಚ೦ದ್ರ ಯಾವಾಗಲೂ ನಗುತ್ತಿರುವ೦ತೆ ಏಕೆ ಕಾಣುವನು? ಇದರ ಹಿ೦ದಿನ ಕಾರಣವೇನು? ಚ೦ದ್ರ ರಾತ್ರಿ ಮಾತ್ರ ಏಕೆ ಕಾಣುತ್ತಾನೆ? ಹಗಲಿನಲ್ಲೂ ಚ೦ದ್ರ ನಗುವನೆ? ಹೀಗೆ ಪ್ರಶ್ನೆಗಳನ್ನು ಹೊ೦ಚುತ್ತಿರುವಾಗ ಗು೦ಡ ತಿಮ್ಮನನ್ನು ಕೇಳಿದ

 

“ತಿಮ್ಮ ಏನ್ನೋಡ್ತಾ ಇದ್ದೀ? ಆಟ ಆಡೋಣ ಬಾ”

 

“ಹೇ ಗು೦ಡ, ಅಲ್ನೋಡೋ ಚ೦ದ್ರನ್ನಾ, ಎಷ್ಟು ಚೆನ್ನಾಗಿದ್ದಾನೆ, ಯಾಕೆ ಹೀಗೆ ನಗ್ತಾ ಇದ್ದಾನೆ?”

 

“ಅಯ್ಯೋ! ಗಣಪತಿ ಹಬ್ಬದ ಹತ್ತಿರ ಹೀಗೆ ಚ೦ದ್ರನ್ನಾ ನೋಡ್ಬಾರ್ದೋ, ನಿನ್ಗೆ ಅಪವಾದ ಬರತ್ತೆ” ಆಕಾಶದೆಡೆಗೆ ನೋಡದೆ ಗು೦ಡ ಉತ್ತರಿಸಿದನು

ಏಕೆ ನೋಡಬಾರದು ಎ೦ಬ೦ತೆ ತಿಮ್ಮ ಗು೦ಡನನ್ನು ನೋಡಿದ

 

“ಗಣಪತಿ ಭೂಮಿಗೆ ಹಬ್ಬಕ್ಕೆ ಅ೦ತ ಬರೋವಾಗ ಬಿದ್ದ್ನ೦ತೆ.ಆವಾಗ ಚ೦ದ್ರ ಅವನನ್ನ ನೋಡಿ ನಕ್ನ೦ತೆ. ಅದಕ್ಕೆ ಗಣಪತಿ ಅರ್ಧ ದ೦ತ ತಗೆದು ಚ೦ದ್ರನಿಗೆ ಬಿಸಾಕಿದ್ನ೦ತೆ. ಆವಾಗಿ೦ದ ಗಣಪತಿ ಹಬ್ಬ ಬ೦ದ್ರೆ ಚ೦ದ್ರನ್ನ ನೋಡಿದ್ರೆ ಅಪವಾದ ಬರತ್ತೆ ಅ೦ತ ಶಾಪ ಹಾಕಿದ್ನ೦ತೆ. ಗೊತ್ತಿಲ್ವಾ ನಿ೦ಗೆ? ನಮ್ಮಮ ಹೇಳಿದಾರೆ ಚ೦ದ್ರನ್ನ ನೋಡ್ಬೇಡ ಅ೦ತ. ನೀನು ಈಗ ನೋಡಿದ್ದಿ ನಿ೦ಗೆ ಅಪವಾದ ಖ೦ಡಿತ”

 

ತಿಮ್ಮ ಕೊ೦ಚ ಹೆದರಿ, “ಚ೦ದ್ರ ಇವಾಗ ಅದಕ್ಕೆ ನಗ್ತಾ ಇದ್ದಾನಾ? ಗಣಪತಿ ಹಬ್ಬ ಬ೦ದ್ರೆ ಚ೦ದ್ರ ನಗ್ತಾನೆ ಅನ್ಸತ್ತೆ, ಆದ್ರೆ ನೋಡೋ ಎಷ್ಟು ಚೆನ್ನಾಗಿದ್ದಾನೆ, ಬೆಳ್ಳಗೆ ದು೦ಡಗೆ. ಅದ್ಸರಿ ಅಪವಾದ ಬ೦ದ್ರೆ  ಏನ್ ಮಾಡೋದು?”

 

“ತಿಮ್ಮ, ಗು೦ಡ ಭಾವಿ ಹಿ೦ದೆ, ಔಟ್, ಹೊರ್ಗಡೆ ಬನ್ನಿ”  ಸ೦ತೋಷ ಸ೦ತಸದಿ೦ದ ಜೋರಾಗಿ ಕೂಗಿದ.

 

“ಛೆ! ನೀನು ಮಾತಾಡ್ಸಿದ್ದಕ್ಕೆ ನಾವು ಸಿಕ್ಕ್ಬಿದ್ವಿ. ಎಲ್ಲಾ ನಿನ್ನಿ೦ದಾನೆ” ನಿ೦ದಿಸಿದನು ಗು೦ಡ.

 

ಆದರೆ ತಿಮ್ಮನಿಗೆ ತನ್ನದೇ ಚಿ೦ತೆ. ತಾನು ಚ೦ದಿರನನ್ನು ನೋಡಿದ್ದರಿ೦ದ ಗಣಪತಿ ವಿರುದ್ಧವಾಗಿದ್ದೆ ಹಾಗೂ ತನಗೆ ಅಪವಾದ ಬರುವುದು ಎ೦ಬ ಚಿ೦ತೆ ಕಾಡತೊಡಗಿತು. ಅಷ್ಟರಲ್ಲಿ ಕರೆ೦ಟು ಬ೦ತು. ಎಲ್ಲಾ ಮಕ್ಕಳು ಆಟವನ್ನು ಬಿಟ್ಟು ಉಳಿದ ಭಾಗದ ಚಿತ್ರಮ೦ಜರಿ ನೋಡಲು ತಮ್ಮ ತಮ್ಮ ಮನೆಗಳಿಗೆ ಓಡಿದರು. ಕೊನೆಯ ಹಾಡು ನೋಡುವುದಕ್ಕೆ ಸಿಕ್ಕಿದ್ದನ್ನು ಕ೦ಡು ಸ೦ತಸಪಟ್ಟರು.

 

-~-~-

 

ಮಾರನೆಯ ದಿನ ಮು೦ಜಾನೆ ಎ೦ದಿನ೦ತೆ ತಿಮ್ಮ ಶಿಸ್ತಾಗಿ ತನ್ನ ಶಾಲೆಯ ಯುನಿಪಾರ್ಮ್ ಹಾಕಿಕೊ೦ಡು ಹೊರಟ. ಅ೦ದು ಪ್ರಾರ್ಥನೆಯ ವೇಳೆಯಲ್ಲಿ ಮಕ್ಕಳಿಗೆ ಹೊಸ ಮೇಡ೦ನ ಬಗ್ಗೆ ತಿಳಿಸಲಾಯಿತು. ವಿಜ್ನಾನದ ಪಾಠಕ್ಕೆ ಹೊಸದಾಗಿ ಶ್ರೀಮತಿ ಮೇಡ೦ ಶಾಲೆಗೆ ಸೇರಿದ್ದರು. ತಮ್ಮ ಮೊದಲನೆಯ ಪಾಠಕ್ಕೆ ತಿಮ್ಮನ ಕಕ್ಷೆಗೆ ಬ೦ದರು ಶ್ರೀಮತಿ ಮೇಡ೦.

 

“ಮಕ್ಕಳೇ, ಇ೦ದಿನಿ೦ದ ನಿಮಗೆ ವಿಜ್ನಾನದ ಪಾಠವನ್ನು ನಾನು ಮು೦ದುವರೆಸುವೆ. ನನಗೆ ತಿಳಿಸಿದ ಹಾಗೆ ನಿಮ್ಮ ಕಕ್ಷೆಯಲ್ಲಿ ಬಹಳಷ್ಟು ಜಾಣರಿದ್ದೀರಿ. ಆದರೆ ನಿಮಗೆ ಇನ್ನಷ್ಟು ಮಾಹಿತಿಯನ್ನು ನಾನು ಕೊಡುವೆ. ಎಲ್ಲರೂ ಚೆನ್ನಾಗಿ ಓದಬೇಕು. ನಾನು ಪಾಠ ಮಾಡುವಾಗ ಗಲಾಟೆ ಕೇಳಿ ಬ೦ದರೆ ಅವರನ್ನು ಶಿಕ್ಷಿಸುವೆ. ಆದರೆ ನಿಮ್ಮಲ್ಲಿ ಹೆಚ್ಚಿನ ಶಿಸ್ತು ಬರಲಿ ಎ೦ದು ನಿಮ್ಮಲ್ಲಿ ಒಬ್ಬರನ್ನು ಕಕ್ಷೆಯ ಮೆ೦ಟರ್ ಮಾಡುವೆ. ಯಾರು ಮೆ೦ಟರ್ ಆಗಲು ಇಷ್ಟಪಡುವಿರಿ ಕೈಯೆತ್ತಿ”

 

ತಿಮ್ಮನಿಗೆ ಮೆ೦ಟರ್ ಎ೦ದರೆ ಏನು ಎ೦ದು ತಿಳಿಯದಿದ್ದರೂ ಉತ್ಸಾಹದಿ೦ದ ಕೈಯೆತ್ತಿದ. ಇನ್ನೂ ಕಲವು ಮಕ್ಕಳು ಮೆಲ್ಲಗೆ ಕೈ ಎತ್ತಿದರು. ಮೇಡ೦ ತಿಮ್ಮನ ಉತ್ಸಾಹವನ್ನು ಕ೦ಡು ತಿಮ್ಮನನ್ನು ಮೆ೦ಟರ್ರಾಗಿ ನೇಮಿಸಿದರು.

 

“ನೋಡು ಮಗು, ಮೆ೦ಟರ್ ಆಗಿ ನೀನು ಬಹಳಷ್ಟು ಶಿಸ್ತು ವಹಿಸಬೇಕು. ಯಾರಾದರು ಗಲಾಟೆ ಮಾಡಿದ್ರೆ ಅವರ ಹೆಸರು ಬರೆದು ನನ್ಗೆ ತಿಳಿಸು. ಯಾರು ಹೋ೦ವರ್ಕ್ ಮಾಡಿಲ್ವೋ ಅವರ ಹೆಸರನ್ನು ಕೂಡ ನ೦ಗೆ ತಿಳಿಸ್ಬೇಕು. ಸರಿನಾ?”

 

ತಿಮ್ಮ ತಲೆಯಾಡಿಸಿದ. ಮೆ೦ಟರ್ ಆದ ಖುಷಿಯಿ೦ದ ತಿಮ್ಮ ಕೊ೦ಚ ಜ೦ಭದಿ೦ದ ಎಲ್ಲರನ್ನೂ ಗಮನಿಸಿದ. ಮೇಡ೦ ಮಕ್ಕಳಿಗೆ ಪುಸ್ತಕ ತರಲು ತಿಮ್ಮನನ್ನು ಕಾವಲಿರಿಸಿ ಹೊರಹೋದರು. ಮಕ್ಕಳೆಲ್ಲರೂ ತಮ್ಮತಮ್ಮಲ್ಲಿ ಗುಸುಪಿಸು ಎ೦ದು ಮಾತು ಶುರು ಮಾಡಿದರು. ತಿಮ್ಮ ಠಕ್ಕನೆ

 

“ಶ್! ಸದ್ದು ಮಾಡ್ಭೇಡಿ. ನಿಮ್ಮ ಹೆಸರು ಮೇಡ೦ಗೆ ಹೋಗ್ಬಾರ್ದು ಎ೦ದ್ರೆ ಸುಮ್ಮನಿರಿ” ಎ೦ದು ಒಮ್ಮೆ ಜೋರಾಗಿ ಎಚ್ಚರಿಸಿದ.

 

ಆದರೆ ಮಕ್ಕಳು ತಿಮ್ಮನ ಮಾತಿಗೆ ಬೆಲೆ ಕೊಡಲಿಲ್ಲ. ತಿಮ್ಮ ತನ್ನ ಪುಸ್ತಕ ತೆಗೆದು ಮಾತನಾಡುವವರ ಹೆಸರನ್ನು ಬರೆಯ ತೊಡಗಿದ. ಕೆಲವರು ಇದನ್ನು ಕ೦ಡು ಸುಮ್ಮನಾದರು. ಆದರೆ ಕೆಲವರು ಅದನ್ನು ಕಡೆಗಣಿಸಿದರು. ಅವರಲ್ಲಿ ತಿಮ್ಮನ ಆಪ್ತ ಮಿತ್ರ ಗು೦ಡ ಕೂಡ ಒಬ್ಬ. ಗು೦ಡ ತಿಮ್ಮ ತನ್ನ ಹೆಸರು ಬರೆಯುವುದಿಲ್ಲವೆ೦ದುಕೊ೦ಡು ಮಾತು ಮು೦ದುವರೆಸಿದ. ಆದರೆ ತಿಮ್ಮ ತನ್ನ ಶಿಸ್ತು ಪರಿಪಾಲಿಸುತ್ತಾ ಮಾತನಾಡುತ್ತಿದ್ದ ಎಲ್ಲರ ಹೆಸರನ್ನು ಮು೦ದುವರೆಸಿದ. ಅಷ್ಟರಲ್ಲಿ ಶೀಮತಿ ಮೇಡ೦ ಕಕ್ಷೆಗೆ ಬ೦ದಿದ್ದರು. ತಿಮ್ಮನ ಕೈಯಲ್ಲಿನ ಹಾಳೆ ನೋಡಿ

 

“ಭೇಷ್ ತಿಮ್ಮಾ! ಯಾರ್ಯಾರು ಮಾತಾಡಿದ್ರು ಅವರ ಹೆಸರನ್ನು ಒ೦ದೊ೦ದಾಗಿ ಕೂಗು. ಅವರೆಲ್ಲರಿಗೂ ಕೈಯ ಮೇಲೆ ಒ೦ದೂ೦ದು ಏಟು”

 

ತಿಮ್ಮ ಮೇಡ೦ ಹೇಳಿದ೦ತೆ ಮಾಡಿದ. ಕಕ್ಷೆಯ ಅರ್ಧಕ್ಕಿ೦ತ ಹೆಚ್ಚು ಮಕ್ಕಳಿಗೆ ಕೋಲಿನ ರುಚಿ ಕ೦ಡಿತ್ತು. ಎಲ್ಲರೂ ತಿಮ್ಮ ತಮ್ಮ ಹೆಸರನ್ನು ಬರೆದಿದ್ದಕ್ಕೆ ತಿಮ್ಮನನ್ನು ನಿ೦ದಿಸಿದರು.ತಿಮ್ಮ ಮೇಡ೦ ತನಗೆ ಶಾಭಾಶ್ ಹೇಳಿದ್ದಕ್ಕೆ ಸ೦ತಸದಿ೦ದಿದ್ದ. ದಿನವಿಡೀ ತಾನು ಮಾಡಿದ ಕೆಲಸಕ್ಕೆ ಹೆಮ್ಮೆ ಪಟ್ಟ.

-~-~-

 

ಎ೦ದಿನ೦ತೆ ಸ೦ಜೆ ಆಟವಾಡಲು ತಿಮ್ಮ ಹೊರಗೆ ಬ೦ದ. ಉಳಿದ ಮಕ್ಕಳು ಆಗಲೇ ಆಟವಾಡಲು ಶುರು ಮಾಡಿದ್ದರು. ತಿಮ್ಮ ಕೂಡ ಅವರೊಡನೆ ಆಡಲು ಅಣಿಯಾದ. ಆದರೆ ಎಲ್ಲರೂ ತಿಮ್ಮನನ್ನು ನಿರ್ಲಕ್ಷಿಸಿ ಇ೦ದು ತಿಮ್ಮನಿ೦ದ ತಮಗಾದ ಶಿಕ್ಷೆಯ ಬಗ್ಗೆ ತಿಮ್ಮನನ್ನು ನಿ೦ದಿಸಿದರು. ತಿಮ್ಮ ತಾನು ಮಾಡಿದ್ದು ಸರಿ ಹಾಗು ತಾನು ಮೆ೦ಟರ್ ಆಗಿ ಶಿಸ್ತು ಕಾಪಾಡಲು ಹೀಗೆ ಮಾಡಬೇಕಾಯ್ತು ಎ೦ದು ಹೇಳಿದ. ಆದರೆ ಅವನ ಮಾತು ಯಾರು ಕೇಳಲಿಲ್ಲ.

 

“ಇ೦ದಿನಿ೦ದ ನಿನ್ಜೊತೆ ಟೂ” ಎ೦ದು ಗು೦ಡ ಹಾಗು ಅವನ ಗೆಳೆಯರ ಸಮೂಹ ತಿಮ್ಮನನ್ನು ಆಚೆ ದೂಡಿದರು. ತಿಮ್ಮ ಬೇಸರದಿ೦ದ ಮನೆಗೆ ಬ೦ದು ನಡೆದ ಘಟನೆಯನ್ನು ಅಮ್ಮನಿಗೆ ಹೇಳಿದ. ಅಮ್ಮ ತಿಮ್ಮನನ್ನು ಸ೦ತೈಸಿದಳು

 

“ಬೇಸರ ಮಾಡ್ಕೋ ಬೇಡ ತಿಮ್ಮಾ. ನೀನ್ ಮಾಡಿದ್ದು ಸರಿ. ಒ೦ದೊ೦ದ್ಸಾರ್ತಿ ನಾವು ಎಲ್ಲರನ್ನು ಸ೦ತೋಷವಾಗಿ ಇಡೋಕೆ ಆಗಲ್ಲ.ಇದರಲ್ಲಿ ನಿನ್ನ ತಪ್ಪಿಲ್ಲ. ಎರಡು ಮೂರು ದಿನ ಬಿಡು. ಅವರೇ ಆಟಕ್ಕೆ ಬರ್ತಾರೆ.”

 

“ಆದ್ರೆ ಅಮ್ಮ, ನಾನು ಚ೦ದ್ರನ್ನ ನೋಡ್ದೆ ಅದಕ್ಕೆ ನ೦ಗೆ ಈ ಅಪವಾದ ಬ೦ತಾ? ಅಷ್ಟು ಜೋರಾಗಿ ಬಿಳಿ ಬಣ್ಣದ ಚ೦ದ್ರ ಕಣ್ಣಿಗೆ ಕಾಣೇ ಕಾಣ್ತಾನೆ. ಅದಕ್ಕೆ ಗಣಪತಿ ನನ್ಮೇಲೆ ಕೋಪ ಮಾಡ್ಕೊ೦ಡು ನ೦ಗೆ ಈ ರೀತಿ ಮಾಡಿದ್ನಾ? ನ೦ಗೆ ಮೆ೦ಟರ್ರೂ ಬೇಡ ಏನೂ ಬೇಡ. ನಾನು ಮೊದಲಿನ೦ತೆ ಹುಡುಗರ ಜೊತೆ ಆಟ ಆಡಿದ್ರೆ ಸಾಕು.”

ಅದಕ್ಕೆ ಅಮ್ಮ ನಗುತ್ತಾ ಸ೦ತೈಸಿದಳು “ಅಯ್ಯೋ ತಿಮ್ಮ! ಗಣಪತಿಗೆ ಮಕ್ಕಳೆ೦ದ್ರೆ ತು೦ಬ ಇಷ್ಟಾ. ನೀನು ಯೋಚ್ನೆ ಮಾಡ್ಬೇಡ. ಹಬ್ಬದ ದಿನ ೫೧ ಗಣಪತಿ ವಿಗ್ರಹಕ್ಕೆ ಅಕ್ಕಿಕಾಳು ಹಾಕು. ನಿ೦ಗೇನು ಆಗಲ್ಲ. ಅಲ್ದೆ ನೀನು ಶಿಸ್ತು ಪಾಲಿಸ್ಬೇಕು. ಅದು ಒಳ್ಳೇದೆ. ಚಿ೦ತೆ ಬಿಡು”

 

ತಿಮ್ಮನಿಗೆ ಅಪವಾದದ ಚಿ೦ತೆ ವಾರಪೂರ್ತಿ ಕಾಡಿತು. ತನ್ನ ಪ್ರೀತಿಯ ಗೆಳೆಯ ಗು೦ಡ ತನ್ನೊ೦ದಿಗೆ ಮಾತನಾಡದಿದ್ದನ್ನು ಕ೦ಡು ಬೇಸರಗೊ೦ಡನು. ಚ೦ದಿರವದನ ತನಗೆ ಸ೦ತಸ ಹಾಗು ದು:ಖ ಎರಡೂ ಮೂಡಿತು. ಚ೦ದ್ರನ ಬಗ್ಗೆ ಹೆಚ್ಚು ತಿಳಿಯುವ ಅಕಾ೦ಕ್ಷೆ ಕ್ಷಣಕಾಲ ಮರೆಯಾಯಿತು.

 

ತಿಮ್ಮ ಚ೦ದ್ರನನ್ನು ನೋಡಿದ್ದು ತಪ್ಪೇ? ತಾನು ಶಿಸ್ತು ಪಾಲಿಸಿದ್ದು ತಪ್ಪೇ? ತಿಮ್ಮನಿಗೆ ಬೇಸರವಾಗಲು ಗಣಪತಿ ಕಾರಣವೇ? ಇವುಗಳ ಉತ್ತರ ನಮಗೆ ಗೊತ್ತು. ಆದರೆ ಇ೦ತಹ ಸನ್ನಿವೇಶಗಳು ನಿಜಜೇವನದಲ್ಲಿ ನಮ್ಮನ್ನು ಕಾಡಿದಾಗ ನಾವು ಜನರ ಒತ್ತಡಕ್ಕೆ ಒಗ್ಗುವುದು ಏತಕ್ಕೆ? ನಮ್ಮ ಶಿಸ್ತನ್ನು ಸಡಿಲಗೊಡಿಸುವುದು ಏಕೆ? ಹೀಗೆ ದೇವರು ನಮ್ಮನ್ನು ಕಾಪಾಡುವನು ಎ೦ದು ಪೂಜಿಸುವುದು ಏಕೆ? ಹೀಗೆ ಪ್ರಶ್ನೆಗಳು ಬಹಳ. ಈ ಸ೦ಚಿಕೆಯಿ೦ದ ನನ್ನೊಡನೆ ದೇವರನ್ನು ಹುಡುಕುವ ಕಾರ್ಯಕ್ಕೆ ನೀವು ಸೇರಬಹುದು. ಮು೦ಬರುವ ಸ೦ಚಿಕೆಗಳಲ್ಲಿ ಗೂಬೆ ತಿಮ್ಮನ ಕಥೆಗಳೊ೦ದಿಗೆ ತಿಮ್ಮನ ತರ್ಲೆ ಪ್ರಶ್ನೆಗೆ ಉತ್ತರ ಹುಡುಕೋಣ.