ದೇವರೆಂಬ ಆತ್ಮೀಯ ಗೆಳೆಯ...

ದೇವರೆಂಬ ಆತ್ಮೀಯ ಗೆಳೆಯ...

‘ದೇವರ ಭಯವೇ ಜ್ಞಾನದ ಆರಂಭ' ಎಂದು ನಮ್ಮ ಬಾಲ್ಯದಲ್ಲಿ ಹಿರಿಯರು ಹೇಳುತಿದ್ದ ಮಾತು. ಆದರೆ ನಮ್ಮ ಮನೆಯಲ್ಲಿ ಪರಿಸ್ಥಿತಿ ವಿಭಿನ್ನವಾಗಿತ್ತು. 'ದೇವರೆಂದರೆ ಭಯಪಡುವಂಥದ್ದೇನಿಲ್ಲ, ನಾವು ಒಳಿತಿನೆಡೆಗೆ ಹೆಜ್ಜೆಹಾಕುವಾಗ ನಮ್ಮೊಂದಿಗಿರುವ, ಸೋಲದಂತೆ ಧೈರ್ಯ ತುಂಬುವ, ಕಷ್ಟಗಳು ಎದುರಾದಾಗ ಕಾಪಾಡುವ ಶಕ್ತಿ' ಎಂಬ ಆತ್ಮೀಯ ಭಾವವನ್ನು ನನ್ನ ತಂದೆ ಕಟ್ಟಿಕೊಟ್ಟಿದ್ದರು. ಅವರು ಋಗ್ವೇದದ ಒಂದು ಅರ್ಥಪೂರ್ಣ ಮಂತ್ರ ಪಠಿಸಿ ಸರಳ ಪೂಜೆ ಮಾಡುತ್ತಿದ್ದರು. ಮನೆಯಂಗಳದ ಹೂವು - ಪತ್ರೆಗಳ ಅರ್ಚನೆಯಲ್ಲೇ ಮನೆಯ ದೇವರು ತೃಪ್ತಿಪಟ್ಟುಕೊಂಡು ನಮ್ಮನ್ನು ಹರಸುತ್ತಿದ್ದ ಭಾವವಿತ್ತು. 'ಶಂ ನೋ ಅಸ್ತುರ್ದ್ವಿಪದೇ ಶಂ ಚತುಷ್ಪದೇ' ಎಂಬ ಆ ಮಂತ್ರದ ಸಾಲುಗಳನ್ನು ಪದೇ ಪದೇ ಕೇಳುತ್ತಿದ್ದ ನಾನು ಒಂದು ದಿನ ಕುತೂಹಲ ತಾಳಲಾರದೇ ಅದರ ಅರ್ಥ ಕೇಳಿದ್ದೆ. 'ಎರಡು ಕಾಲುಗಳಲ್ಲಿ ಹಾಗೂ ನಾಲ್ಕು ಕಾಲುಗಳಲ್ಲಿ ಚಲಿಸುವ ಜೀವಿಗಳಿಗೆಲ್ಲ ಒಳಿತಾಗಲಿ' ಎಂಬುದು ಅದರ ಆಶಯ ಎಂದು ಅವರು ತಿಳಿಸಿದಾಗ ಋಗ್ವೇದ ರಚಿಸಿದ ಹಿರಿಯರ ಮನಸಿನ ವಿಶಾಲತೆಗೆ ಮನಸು ಮಣಿಯಿತು. 'ನನಗೆ ಅದನ್ನು ಕೊಡು ಇದನ್ನು ಕೊಡು' ಎಂದು ದೇವರ ಮೇಲೆ ಒತ್ತಡ ಹಾಕುವುದಕ್ಕಿಂತ ಋಗ್ವೇದಕಾರರ ಆಶಯಗಳು ಮನುಷ್ಯರಿಗೂ ಪ್ರಾಣಿ ಪಕ್ಷಿಗಳನ್ನೂ ಸೇರಿಸಿ ಎಲ್ಲರಿಗೂ ಒಳಿತನ್ನು ಕೋರುತ್ತಿದ್ದ‌ ರೀತಿ ನನಗೆ ಇಷ್ಟವಾಯಿತು. ನಮ್ಮಲ್ಲಿ ದೇವರ ಬಗೆಗೆ ಇರಬೇಕಾದುದು ಭಯವಲ್ಲ, ಭಕ್ತಿ ಮತ್ತು ನಂಬಿಕೆ.

ಅಲ್ಲಿಂದಾಚೆಗೆ ಮನೆಯಲ್ಲಿ ವಾರದಲ್ಲಿ ಒಂದೆರಡು ದಿನ ಋಗ್ವೇದ ಕಾಲದ ಸಂಸ್ಕೃತಿಯ ಬಗೆಗೆ ಅಪ್ಪನೊಂದಿಗೆ ಚರ್ಚೆ ಸಾಮಾನ್ಯವಾಯಿತು. ನಾನು ಆ ಕಾಲದಲ್ಲೇ ಹುಟ್ಟಬೇಕಿತ್ತು ಎನ್ನಿಸುವಷ್ಟು ಚಂದದ ವಿವರಣೆಗಳು ಅವರಿಂದ ದೊರೆತವು! ಪ್ರಕೃತಿಯ ಶಕ್ತಿಗಳನ್ನು ಆರಾಧಿಸುವ ಚಂದದ ಪರಂಪರೆ ನಮ್ಮದಾಗಿತ್ತು! ಉದಾಹರಣೆಗೆ: ಸೂರ್ಯ, ನದಿಗಳು, ಭೂಮಿ, ಪರ್ವತಗಳು, ಗಾಳಿ, ನೀರು, ನಕ್ಷತ್ರಗಳು ಇತ್ಯಾದಿಯಾಗಿ ಸಕಲ ಚರಾಚರ ವಸ್ತುಗಳಲ್ಲೂ ದೇವಾಂಶವಿದೆ ಎಂದು ನಂಬಿ ನಡೆದ ಪರಂಪರೆಯಲ್ಲಿ ಅವನ್ನು ಆರಾಧಿಸುವ ಅನೇಕ ಸೂಕ್ತಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಇಂದಿಗೂ ನದೀ ಸೂಕ್ತ, ನಕ್ಷತ್ರ ಸೂಕ್ತ, ಅಗ್ನಿ ಸೂಕ್ತ ಮುಂತಾದವುಗಳನ್ನು ಕೇಳಿದರೆ ಆ ಪರಂಪರೆಯ ಭಾಗವಾದ ಹೆಮ್ಮೆ ಹುಟ್ಟುತ್ತದೆ (ಎಲ್ಲವೂ YouTube ನಲ್ಲಿ ಲಭ್ಯವಿವೆ. ಮೊಬೈಲನ್ನು ಒಳ್ಳೆಯ ಕಾರ್ಯಗಳಿಗೆ ಬಳಸುವ ಮನಸು ನಾವು ಮಾಡಬೇಕಷ್ಟೇ!). ಸಂಸ್ಕೃತದ ಸೂಕ್ತಗಳ ಅರ್ಥ ಇಂಗ್ಲಿಷ್/ ನಮ್ಮ ಮಾತೃಭಾಷೆಗಳಲ್ಲಿ ತಿಳಿದು ಕಲಿತು- ಕಲಿಸುವ ತಾಳ್ಮೆ ನಾವು ರೂಢಿಸಿಕೊಂಡರೆ ಮಕ್ಕಳ ಪ್ರಶ್ನೆಗಳಿಗೆ ಅರ್ಥಪೂರ್ಣ ಉತ್ತರ ಕೊಡಬಹುದೇನೋ! 

ಋಗ್ವೇದ ಕಾಲದಲ್ಲಿ ಸಕಲ ಚರಾಚರಗಳ ರೂಪದಲ್ಲಿ ಆರಾಧಿಸಲ್ಪಡುತ್ತಿದ್ದ ದೇವರ ಪರಿಕಲ್ಪನೆಯನ್ನು ಕಾಲಕ್ರಮೇಣ ಆರಾಧನೆಯಲ್ಲಿ ಇನ್ನಷ್ಟು ಶ್ರದ್ಧೆಯನ್ನು ನೆಲೆಗೊಳಿಸುವ ಉದ್ದೇಶದಿಂದ ಮೂರ್ತ ರೂಪಕ್ಕೆ (ಮೂರ್ತಿಗಳ ರೂಪಕ್ಕೆ) ತರುವ ಪ್ರಯತ್ನ ನಡೆಯಿತು. ಅದರೊಂದಿಗೆ ಪ್ರಕೃತಿ ಆರಾಧನೆಯೂ ಮುಂದುವರಿಯಿತು. ಇಂದಿಗೂ 'ಬನ' 'ದೇವರ ಕಾಡು' ಎಂಬ ಪರಿಕಲ್ಪನೆ ಭಾರತದ ಉದ್ದಗಲಕ್ಕೂ ಕಂಡುಬರುತ್ತದೆ. ಅಶ್ವತ್ಥ ವೃಕ್ಷದ ಆರಾಧನೆಯಂತೂ ಸಿಂಧೂ- ಸರಸ್ವತಿ ನಾಗರಿಕತೆಯ ಕಾಲದ ಕಾಣಿಕೆ! ಗೋವುಗಳ ಆರಾಧನೆಯೂ ಆ ಕಾಲದ್ದೇ.. ಶಿವನ ಮೂಲರೂಪ ಪಶುಪತಿ ಎಂದರೆ 'ಪ್ರಾಣಿ ಸಂಕುಲದ ಒಡೆಯ'ನೆಂಬ ನಂಬುಗೆಯೂ ಅಲ್ಲಿಂದಲೇ ಪಡೆದಿದ್ದು. ಸರಸ್ವತಿ ನದಿಯ ಆರಾಧನೆಯ ಮಹೋನ್ನತ ಸಾಕ್ಷಿಗಳು ಋಗ್ವೇದದಲ್ಲಿವೆ. ಅಷ್ಟೇಕೆ? ನದಿಗಳ ಹೆಸರುಗಳನ್ನು ಮನೆಯ ಮಕ್ಕಳಿಗೆ ಇಡುವುದೂ ನಮ್ಮ ಸಂಸ್ಕೃತಿಯ ಭಾಗ! ಮನೆಯ ಹೆಣ್ಣುಮಕ್ಕಳಷ್ಟೇ ಜೋಪಾನವಾಗಿ ನದಿಗಳನ್ನು ನೋಡಿಕೊಳ್ಳುವ ಭಾವ ಅದೆಷ್ಟು ಉನ್ನತವಾದುದು! 

ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ಹರಿಯುತ್ತಿರುವ ಜನಪದ ಹಾಗೂ ವೇದಗಳ ಜ್ಞಾನಗಳನ್ನು ಒಂದಾಗಿಸಿ ಅರಿತರೆ ಮಾತ್ರ ಭಾರತದ ಪರಂಪರೆ ಅರ್ಥವಾಗುವುದು. ಮೂರ್ತಿಯೊಂದನ್ನು ರಚಿಸಿದ ಮೇಲೆ ಅದರೊಳಗೆ ಅಮೂರ್ತ- ಅಗೋಚರ- ಅಪೂರ್ವ ಶಕ್ತಿಯಾದ ದೇವರು ಎಂಬ ಶಕ್ತಿಯನ್ನು ಆವಾಹಿಸಿ ನೆಲೆಗೊಳಿಸುವ ಕಾರ್ಯ ನಡೆಯುತ್ತದೆ. ಆ ನಂತರವೇ ಮೂರ್ತಿಯು ಪೂಜೆಗೆ ಅರ್ಹವಾಗುತ್ತದೆ. ಎಂದು ತಂದೆ ವಿವರಿಸದಿದ್ದರೆ ನನ್ನ ವೈಚಾರಿಕ ಹಸಿವು ತಣಿಯುತ್ತಲೇ ಇರಲಿಲ್ಲವೇನೋ!  

ಮಲೆನಾಡಿನ ಮಡಿಲಿನಲ್ಲಿ ನಮ್ಮೂರಿಗೆ ತಾಲೂಕು ಕೇಂದ್ರವಾಗಿದ್ದ ಶೃಂಗೇರಿಗೆ ಆಗಾಗ ಹೋದಾಗಲೂ ನನ್ನನ್ನು ಸೆಳೆಯುತ್ತಿದ್ದುದು ವಿದ್ಯಾಶಂಕರ ದೇವಾಲಯ. ಪ್ರತಿ ಸಂಕ್ರಮಣದಿಂದ ತೊಡಗಿ ಮುಂದಿನ ಸಂಕ್ರಮಣದ ವರೆಗೆ ಹನ್ನೆರಡು ರಾಶಿಗಳಲ್ಲಿ ಆ ಸಂಕ್ರಮಣಕ್ಕೆ ಅನುಗುಣವಾಗಿ ರಾಶಿ ಚಕ್ರದ ಕಂಬದ ಮೇಲೆ ಸೂರ್ಯೋದಯದ ಮೊದಲ ಕಿರಣಗಳು ಸ್ಪರ್ಶಿಸುವ ಅನನ್ಯ ವಾಸ್ತುಶಿಲ್ಪ ವೈಶಿಷ್ಟ್ಯ ಈ ದೇಗುಲದ ಹಿರಿಮೆ. ಆ ದೇವಾಲಯದ ಒಳಗಿನ ದೇವರನ್ನು ಸ್ತುತಿಸಿ ಹೊರಗಿನ ಸುತ್ತಿನಲ್ಲಿರುವ ಪ್ರದಕ್ಷಿಣಾ ಪಥದಲ್ಲಿ ನಿಧಾನವಾಗಿ ಹೆಜ್ಜೆಯಿಟ್ಟು ಪ್ರದಕ್ಷಿಣೆ ಹಾಕುವ ಅಭ್ಯಾಸವಾಗಿತ್ತು ನನಗೆ. ಕಾರಣ- ಅದ್ಭುತವೆನ್ನಿಸುವ ಕಲಾ ಚಾತುರ್ಯದ ಹಲವು ಶಿಲ್ಪಗಳನ್ನು ನೋಡುತ್ತಾ ಮನಸು ಮುಂದಿನ ಹೆಜ್ಜೆಯನ್ನು ತಡೆಯುತ್ತಿತ್ತು! ಅಲ್ಲೇ ಒಂದು ಮೂಲೆಯಲ್ಲಿ ಸಣ್ಣ ಗಣಪತಿಯ ವಿಗ್ರಹವೊಂದಿತ್ತು. ಅದಕ್ಕೆ ಯಾರಾದರೂ ಹೂವು- ಗರಿಕೆ ಇಟ್ಟು ಹಣೆಗೊಂದು ಕುಂಕುಮ ಹಚ್ಚಿರುತ್ತಿದ್ದರು. ಕೆಲವೊಮ್ಮೆ ಆ ಅಲಂಕಾರಗಳೂ ಇರುತ್ತಿರಲಿಲ್ಲ. ಆದರೂ ನನಗೆ ಆ ಪುಟ್ಟ ಗಣಪನ ಬಗೆಗೆ ಅಪಾರ ಪ್ರೀತಿ ಬೆಳೆದುಬಿಟ್ಟಿತು. ದೇವಸ್ಥಾನಕ್ಕೆ ಹೋಗುವುದೇ ಆ ಗಣಪನ ಬಳಿ ಮನ ತಣಿಯುವಷ್ಟು ಹೊತ್ತು ಕುಳಿತುಕೊಳ್ಳಲು ಎನ್ನುವಂತಾಗಿತ್ತು‌. ಆತ್ಮೀಯ ಗೆಳೆಯರ ಬಳಿ ಕುಳಿತಷ್ಟು ಸಮಾಧಾನ, ಶಾಂತಿ, ಸಂತೃಪ್ತಿಗಳನ್ನು ನೀಡಿದ ಅವನನ್ನು ನೆನೆದಾಗಲೆಲ್ಲ ಮನಸು ಮಗುವಿನಂತೆ ಮುಗ್ಧ ಸಂತಸದೊಳಗೆ ಮಿಂದೇಳುತ್ತದೆ. ದೇವರನ್ನು ಕಂಡರೆ ಭಯ- ಭಕ್ತಿಗಳನ್ನ ಮೀರಿದ ಆತ್ಮೀಯ ಅಭಿಮಾನವನ್ನು ಕಟ್ಟಿಕೊಟ್ಟ ಅಪ್ಪನ ಅರ್ಥಪೂರ್ಣ ಚರ್ಚೆಗಳಿಗೆ ನಾನು ಸದಾ ಋಣಿ. ದೇವರು ನಮ್ಮ ಸಾಧನೆಗಳಿಗೆ ಪ್ರೇರಣೆಯಾಗಿ ನಮ್ಮೊಂದಿಗೆ ಇರುವ ಭಾವವೇ ಸಾಕು ಒಳಿತಿನ ದಾರಿಯಿಂದ ನಮ್ಮ ಹೆಜ್ಜೆ ತಪ್ಪದಿರಲು. 

ಮಣ್ಣಿನಿಂದ ಜೀವತಳೆದು ಮತ್ತೆ ಮಣ್ಣಾಗುವುದು ಸಹಜ.. ಅದರ ನಡುವೆ ನಮ್ಮ ಜೀವನದಲ್ಲಿ ನಾವು ಮಾಡುವ ಸಾಧನೆ ಜಗದ ಜನರ ನೆನಪಿನಲ್ಲಿ ಉಳಿಯುವಂತಿರಬೇಕು ಎಂಬಂತೆ ನಮ್ಮ ಬದುಕಿಗೆ ಮಹೋನ್ನತ ಸಂದೇಶ ಸಾರುವ ಮಣ್ಣಿನ ಗಣಪನ ಆರಾಧನೆಯು ನಮ್ಮೊಳಗೆ ಇರುವಷ್ಟು ದಿನ ಕಲಿಯುವ, ತಿಳಿಯುವ, ಬೆಳೆದು ಸಾಧಿಸುವ ಬಲ ತುಂಬಲಿ. ನನ್ನೊಳಗಿನ ಆಪ್ತ ಸ್ನೇಹಿತನ ಸ್ಥಾನ ತುಂಬಿದ ಗಣಪತಿಯ ಆರಾಧನೆಗೆ ಭಕ್ತಿಯ ಪುಷ್ಪಗಳು ಅನವರತ ಸಮರ್ಪಿತ.

ನನ್ನ ತಂದೆ ಶ್ರೀಕೃಷ್ಣ ಆಹಿತಾನಲಃ ( ಐತಾಳ್) B.Sc. ಪದವೀಧರರಾಗಿ BSNL ಸಂಸ್ಥೆಯಲ್ಲಿ ಉದ್ಯೋಗದ ನಿಮಿತ್ತ ಮನೆಯಿಂದ ದೂರವಿದ್ದರೂ ಮನೆಗೆ ಬಂದಾಗ ಪುಸ್ತಕಗಳ ಜೊತೆಗಿರುತ್ತಿದ್ದವರು. ಪ್ರವೃತ್ತಿಯಿಂದ ಗಮಕಿ, ಸಾಹಿತಿ ಹಾಗೂ ಸ್ನೇಹಪರ ವ್ಯಕ್ತಿತ್ವದ ವಾಗ್ಮಿ. ನೂರಾರು ವರ್ಷಗಳಿಂದ ಹಿರಿಯರು ಸಂಗ್ರಹಿಸಿದ ಸಾವಿರಾರು ಪುಸ್ತಕಗಳ ಗ್ರಂಥಾಲಯದಂತಿರುವ ಮನೆಯಲ್ಲಿ ಜನಿಸಿದ ಭಾಗ್ಯ ನನ್ನದೆಂಬ ಸಂತಸ. ಅಂತಹಾ ಸಂತಸ ಉಳಿಸಿಕೊಟ್ಟ ತಂದೆಗೆ ನಾನು ಸದಾ ಋಣಿ.

ಚಿತ್ರ- ಬರಹ -ಚಿತ್ರಾಶ್ರೀ ಕೆ.ಎಸ್. ಬಡಗ ಎಕ್ಕಾರು, ಮಂಗಳೂರು