ದೇವರೊಡನೆ ಸಂದರ್ಶನ - 8

ದೇವರೊಡನೆ ಸಂದರ್ಶನ - 8

ಗಣೇಶ: ಅಪ್ಪಾ ದೇವರೇ, ಜ್ಞಾನ ದೊಡ್ಡದು ಅಂತ ಹೇಳಿದೆ, ಅದಕ್ಕಿಂತ ಮಾತು, ಮಾತಿಗಿಂತ ಮನಸ್ಸು, ಮನಸ್ಸಿಗಿಂತ ಇಚ್ಛಾಶಕ್ತಿ, ಇಚ್ಛಾಶಕ್ತಿಗಿಂತ ನೆನಪಿನ ಶಕ್ತಿ, ಅದಕ್ಕಿಂತ ದೊಡ್ಡದು ಧ್ಯಾನ, ಧ್ಯಾನಕ್ಕಿಂತ ಮನೋಬಲ, ದೈಹಿಕ ಬಲ ದೊಡ್ಡದು, ಈ ಬಲಕ್ಕಿಂತ ಬಲ ಬರಲು ಕಾರಣವಾದ ಆಹಾರ ದೊಡ್ಡದು ಅಂತ ಒಂದರ ಮೇಲೊಂದು ಇದೆ ಅಂತ ಹೇಳ್ತಾನೇ ಇದೀಯಲ್ಲಾ! ಈ ಅನ್ನಕ್ಕಿಂತ ದೊಡ್ಡದು ಯಾವುದು?

ದೇವರು: ನೀನು ನಿಂತಿರುವ ಈ ನೆಲ! ನಿನಗೆ ಆಧಾರವಾಗಿರುವ ಈ ನೆಲ! ಜೀವಜಗತ್ತಿಗೆಲ್ಲಾ ಆಧಾರವಾಗಿ, ಪೋಷಿಸುತ್ತಿರುವ ಭೂಮಿ ದೊಡ್ಡದು ಆಗಲೇಬೇಕಲ್ಲಾ! ಹೊಸ ಮನೆ ಕಟ್ಟಿ ಸಂಭ್ರಮಿಸಿ, ನನ್ನ ಮನೆ ಎಂದು ಬೀಗಲು ಅವಕಾಶ ಮಾಡಿಕೊಟ್ಟಿರುವ ಭೂಮಿಯನ್ನು ಜೀವಿಗಳು ಸ್ಮರಿಸಿಕೊಳ್ಳುತ್ತಾರೆಯೇ?

ಗಣೇಶ: ಅದೇನೋ ಸರಿ. ಈ ಭೂಮಿನೂ ನಿನ್ನ ಸೃಷ್ಟಿಯಾ? ಅದು ಹೇಗೆ ಇದನ್ನು ಸೃಷ್ಟಿ ಮಾಡಿದೆ? ಭೂಮೀನೂ ಸೇರಿದಂತೆ ಜಗತ್ತಿನ ಚರಾಚರ ಸಂಗತಿಗಳೆಲ್ಲಾ ನಿನ್ನ ಸೃಷ್ಟಿ, ನಿನ್ನ ಸಹಾಯ ಇಲ್ಲದೆ ಹುಲ್ಲುಕಡ್ಡೀನೂ ಅಲುಗಾಡಲ್ಲ ಅಂತ ಪುರಾಣಗಳಲ್ಲಿ, ಬೈಬಲ್ಲು, ಕುರಾನುಗಳಲ್ಲಿ, ನಿನ್ನನ್ನು ಕೊಂಡಾಡುವ ಯಾವ ಯಾವುದೋ ಧರ್ಮಗ್ರಂಥಗಳಲ್ಲಿ ಹೇಳುತ್ತಾರಂತೆ!

ದೇವರು: ಶೂನ್ಯದಿಂದ ಭೂಮಿಯನ್ನು ಸೃಷ್ಟಿ ಮಾಡಿದೆನೆಂದು ಹೇಳುವುದು ಸರಿಯಲ್ಲ. ನಾನು ಮೊದಲ ದಿನವೇ ನಿನಗೆ ಹೇಳಿದ್ದೆ. ನೀವುಗಳು ಅಂದರೆ ಜೀವಾತ್ಮರು ಹಿಂದೆಯೂ ಇದ್ದಿರಿ, ಈಗಲೂ ಇದ್ದೀರಿ ಮತ್ತು ಮುಂದೆಯೂ ಇರುತ್ತೀರಿ. ಈ ಭೂಮಿ, ಪ್ರಕೃತಿ ಎಂದಿಟ್ಟುಕೊಳ್ಳಿ, ಇದೂ ಸಹ ಹಿಂದೆಯೂ ಇತ್ತು, ಈಗಲೂ ಇದೆ ಮತ್ತು ಮುಂದೆಯೂ ಇರುತ್ತದೆ. ಅಂದರೆ ಇದು ಅವಿನಾಶಿ. ರೂಪಾಂತರವಾಗಬಹುದು ಅಷ್ಟೆ.  ಶೂನ್ಯದಿಂದ ಏನನ್ನೂ ಸೃಷ್ಟಿಸಲಾಗದು ಎಂಬುದು ಸತ್ಯ. ಶೂನ್ಯದಿಂದ ಸೃಷ್ಟಿ ಮಾಡಿದೆ ಎಂದು ಮಾತಿಗೆ ಹೇಳೆದೆನೆಂದು ಇಟ್ಟುಕೋ. ಆಗ ಶೂನ್ಯದಿಂದ ಏನನ್ನಾದರೂ ಸೃಷ್ಟಿಸಬಲ್ಲೆಯಾದರೆ ನಿನ್ನಂತಹ ಇನ್ನೊಬ್ಬ ದೇವರನ್ನು, ನಿನಗಿಂತ ಬಲಶಾಲಿ ದೇವರನ್ನು ಸೃಷ್ಟಿಸಬಲ್ಲೆಯಾ ಎಂದು ಯಾರಾದರೂ ಕೇಳಬಹುದಲ್ಲವಾ? ಅಂತಹ ಸೃಷ್ಟಿ ಅಸಾಧ್ಯ. ಶೂನ್ಯದಿಂದ ಸೃಷ್ಟಿಸಿದೆ ಎಂದು ಹೇಳುವುದು ನನ್ನ ಮಹಿಮೆಯನ್ನು ಕೊಂಡಾಡುವ ಭಕ್ತರ ಭಕಿಯ ಪರಾಕಾಷ್ಠೆ ಅಷ್ಟೇ.

ಗಣೇಶ: ಅರ್ಥವಾಗುವ ರೀತಿಯಲ್ಲಿ ಹೇಳು ಮಹರಾಯ.

ದೇವರು: ಒಂದು ಕಟ್ಟಡವನ್ನು ಯಾವುದೇ ವಸ್ತುಗಳ ಸಹಾಯವಿಲ್ಲದೆ ನಿರ್ಮಿಸಲು ಸಾಧ್ಯವಿದೆಯೇ? ಅದಕ್ಕೆ ಇಟ್ಟಿಗೆ, ಕಲ್ಲು, ಸಿಮೆಂಟು, ಮರಳು, ಕಬ್ಬಿಣ, ಮುಂತಾದವು ಇರಲೇಬೇಕು. ಕಟ್ಟಡದಲ್ಲಿರುವ ವಸ್ತುಗಳು ಮೊದಲೂ ಇದ್ದವು, ಈಗಲೂ ಇದ್ದಾವೆ, ಆದರೆ ಬೇರೆ ಬೇರೆ ರೂಪಗಳಲ್ಲಿ! ಕಟ್ಟಡ ಬಿದ್ದು ಹೋದರೂ, ನಾಶವಾದರೂ, ಅದರಲ್ಲಿ ಬಳಕೆಯಾದ ವಸ್ತುಗಳು ಮುಂದೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಯಾವಾಗಲೂ ಇರುತ್ತವೆ. ಈ ಭೂಮಿ ಸಹಾ ಹೀಗೇನೇ!

ಗಣೇಶ: ಪ್ರಳಯ ಆದರೂ, ಸಂಪೂರ್ಣ ವಿನಾಶವಾದರೂ ಈ ಭೂಮಿ ಇರುತ್ತಾ? ಜೀವಿಗಳ ಗತಿ ಏನು? 

ದೇವರು: ಪ್ರಾರಂಭವಿಲ್ಲದ ಮತ್ತು ಕೊನೆಯಿಲ್ಲದ ಪ್ರಕೃತಿ ಮತ್ತು ಜೀವಾತ್ಮರು ನಂತರವೂ ಹೊಸ ರೂಪದಲ್ಲಿ ಇದ್ದೇ ಇರುತ್ತಾರೆ. ಈ ಬ್ರಹ್ಮಾಂಡದಲ್ಲಿ ಒಂದು ಸೂರ್ಯಮಂಡಲ ಮಾತ್ರ ಇಲ್ಲ, ಅದೆಷ್ಟು ಸೂರ್ಯಮಂಡಲಗಳು, ಭೂಮಿಗಳು ಇವೆಯೋ ಅನ್ನುವುದು ನಿಮ್ಮ ಎಣಿಕೆಗೆ ಮೀರಿದ್ದಾಗಿದೆ. ಆದರೆ, ನಿಮ್ಮ ಕರ್ತವ್ಯ ಮರೆತರೆ ನೀವು ಇರುವ ಭೂಮಿಯ ವಿನಾಶಕ್ಕೆ ನೀವೇ ಕಾರಣರಾಗುತ್ತೀರಿ. ನಿಮ್ಮ ಸ್ವಾರ್ಥಕ್ಕಾಗಿ ಅದೆಷ್ಟು ಗಿಡಮರಗಳನ್ನು ಕಡಿಯುತ್ತೀರಿ, ಅಂತರ್ಜಲ ಹೀರುತ್ತೀರಿ, ಕೆರೆಕಟ್ಟೆಗಳನ್ನು ಮುಚ್ಚುತ್ತೀರಿ, ಕಾಡುಗಳನ್ನು ನಾಶ ಮಾಡಿ ಸಹಜೀವಿಗಳ ಜೀವನಕ್ಕೆ ನೆಲೆಯಿಲ್ಲದಂತೆ ಮಾಡುತ್ತೀರಿ, ಗುಡ್ಡ-ಬೆಟ್ಟಗಳನ್ನು ನೆಲಸಮ ಮಾಡುತ್ತೀರಿ, ಗಗನಚುಂಬಿ ಕಟ್ಟಡಗಳನ್ನು ಕಟ್ಟುತ್ತೀರಿ. ಭೂಮಿತಾಯಿ ಎಂದು ಬಾಯಿತುಂಬಾ ಹೇಳುತ್ತೀರಿ, ಅದರ ಮೇಲೆ ಮಾಡಬಾರದ ಅತ್ಯಾಚಾರ ಮಾಡುತ್ತೀರಿ. ನಿಮ್ಮ ಮಕ್ಕಳ ಕಾಲಕ್ಕಾದರೂ ಭೂಮಿ ಈಗ ಇರುವಂತೆ  ನೀವುಗಳು ನೋಡಿಕೊಳ್ಳಬಾರದೇ? 

ಗಣೇಶ; ನಾನೊಬ್ಬ ಏನು ಮಾಡಿಯೇನು? ದೇವರಾಗಿ ನೀನು ಎಲ್ಲರಿಗೂ ಒಳ್ಳೆಯ ಬುದ್ಧಿ ಕೊಡಬೇಕಾದುದು ನಿನ್ನ ಕೆಲಸ ಅಲ್ಲವಾ?

ದೇವರು: ನನ್ನ ಕೆಲಸ ನಾನು ಮಾಡಿ ಆಗಿಬಿಟ್ಟಿದೆ. ನಿಮಗೆ ವಿವೇಚನೆ ಮಾಡುವ ಶಕ್ತಿ ಕೊಟ್ಟಿದ್ದೇನೆ. ಅದನ್ನು ಬಳಸಿಕೊಳ್ಳಬೇಕಾದುದು ನಿಮ್ಮ ಹೊಣೆ. ನಿಮ್ಮ ಕರ್ಮಗಳಿಗೆ ತಕ್ಕಂತೆ ನೀವು ಫಲ ಅನುಭವಿಸುತ್ತೀರಿ. ಮಾಡಿದ್ದುಣ್ಣೋ ಮಹರಾಯ ಅನ್ನುವ ಹಾಗೆ!

ಗಣೇಶ: ಕಿಲಾಡಿಗಳ ಕಿಲಾಡಿ ನೀನು. ನಮ್ಮನ್ನೆಲ್ಲಾ ಏನು ಬೇಕಾದರೂ ಮಾಡಿಕೊಳ್ಳಿ, ಹಾಳಾಗಿ ಹೋಗಿ ಎಂದು ಹೇಳಿದರೆ ಅದು ಸರಿಯಲ್ಲ. ಸರಿಯಾದ ದಾರಿ ತೋರಿಸಬೇಕಪ್ಪಾ. ಇಲ್ಲದೇ ಹೋದರೆ ದೇವರು ಅನ್ನುವುದಕ್ಕಾದರೂ ಬೆಲೆ ಎಲ್ಲಿರುತ್ತೆ?

ದೇವರು: ಗಣೇಶಾ, ಸರಿಯಾದ ವಿಚಾರ ತಿಳಿದವರು, ತಿಳಿಸಿ ಹೇಳಬಲ್ಲವರು ನಿಮ್ಮಲ್ಲಿ ಬಹಳ ಜನರಿದ್ದಾರೆ. ಅವರುಗಳು ಹೇಳುತ್ತಲೂ ಇರುತ್ತಾರೆ. ಅದನ್ನು ಕೇಳದಿರುವವರು, ಗೊತ್ತಾದರೂ ಗಮನಿಸದವರೇ ಹೆಚ್ಚಿರುವಾಗ ನಿಮ್ಮ ಹಣೆಯಬರಹವನ್ನು ನಾನು ಬದಲಾಯಿಸಲಾರೆ. ಹಣೆಬರಹಕ್ಕೆ ಹೊಣೆಗಾರರು ನೀವೇನೇ!

ಗಣೇಶ: ನೀನು ಹೀಗೆಯೇ ಹೇಳುತ್ತೀ ಎಂದು ಊಹಿಸಿದ್ದೆ. ಇರಲಿ, ನನಗೂ ಸಮಯವಾಯಿತು. ಇನ್ನೊಮ್ಮೆ ವಿಚಾರಿಸುತ್ತೇನೆ. ಹೋಗಿಬರುತ್ತೇನೆ, ನಮಸ್ತೆ.

ದೇವರು: ಶುಭವಾಗಲಿ.

     ಮನೆಗೆ ವಾಪಸು ಹೋಗುತ್ತಾ ಗಣೇಶರು, ಮನೆಯ ಮುಂದೆ ಒಂದೆರಡು ಮರ ಬೆಳೆಸಬೇಕು, ಮಳೆ ನೀರು ಸಂಗ್ರಹಿಸಿ ಉಪಯೋಗಿಸಿಕೊಳ್ಳಬೇಕು, ಸೋಲಾರ್ ಶಕ್ತಿ ಬಳಸಬೇಕು, ಇತ್ಯಾದಿಯಾಗಿ ಮನದಲ್ಲೇ ಲೆಕ್ಕ ಹಾಕುತ್ತಿದ್ದರು.

-ಕ.ವೆಂ.ನಾಗರಾಜ್.  

Comments

Submitted by Nagaraj Bhadra Fri, 09/18/2015 - 23:58

ನಮಸ್ಕಾರಗಳು ಸರ್.ಎಲ್ಲದಿಕ್ಕಿಂತ ಭೂಮಿ ಮೇಲೆ.ಪ್ರಕೃತಿ ಮತ್ತು ಜೀವಾತ್ಮಗಳ ಪಯಣಕ್ಕೆ ಕೊನೆಯೆ ಇಲ್ಲ ಸರ್.ಎಲ್ಲವನ್ನೂ ಹೊತ್ತುಕೊಂಡಿರುವ ಭೂಮಿಯೆ ಮೇಲೆ.

Submitted by nageshamysore Sat, 09/19/2015 - 05:26

ಕವಿಗಳೆ ನಮಸ್ಕಾರ. ಸಾರದಲ್ಲಿ ಹೇಳುವುದಾದರೆ:

ಅನ್ನ ದೊಡ್ಡದೆನ್ನುವುದು ನಿಜವೇ
ಅದ ಬೆಳೆವ ಭೂಮೀ ಮಿಗಿಲಿಹುದು
ಶೂನ್ಯವಲ್ಲ ರೂಪಾಂತರ ಸ್ಥಿತ್ಯಂತರ
ಅಳಿವುಳಿವು ಬಳಸುವಾತನ ಕೈಲಿ ||

Submitted by swara kamath Mon, 10/05/2015 - 19:36

ಮಿತ್ರ ನಾಗರಾಜರೆ ಎಂದಿನ‍ಂತೆ ತಮ್ಮಿಂದ ಈ "ದೇವರೊಡನೆ ಸಂದರ್ಶನ" ಲೇಖನ ಮಾಲೆ ಪ್ರಬಂಧ ರೂಪದಲ್ಲಿ ಸುಂದರ ವಾಗಿ ಮೂಡಿಬರುತ್ತಿದೆ.ಚಿಕ್ಕ ಮಕ್ಕಳು ಸಹ ಅರ್ಥೈಸಿ ಕೊಂಡು ಕಥಾರೂಪದಲ್ಲಿ ಓದಬಹುದಾದ ನೀತಿಯುಕ್ತ ಲೇಖನ ಮಾಲೆ.
ವಂದನೆಗಳು........ ರಮೇಶ ಕಾಮತ್.