ದೇವರ ಕೋಲು ಮುಟ್ಟಿದ ಬಾಲಕನಿಗೆ ಏಟು ಮತ್ತು ದಂಡ...!
ಕೋಲು ನಿರ್ಜೀವ - ದೇವರು ನಿರ್ಜೀವ - ಸಂವಿಧಾನ ಅರೆ ಜೀವ -ಬಾಲಕ ಮತ್ತು ನಾವು ಮಾತ್ರ ಸಜೀವ...! ಈಗ ಇದಕ್ಕೆ ಸ್ಪಂದಿಸಬೇಕಾಗಿರುವವರು ಜೀವ ಇರುವವರು. ಬ್ರಾಹ್ಮಣ ಮಹಾಸಭಾದವರು - ರಾಜ್ಯ ಒಕ್ಕಲಿಗ ಸಂಘದವರು - ರಾಜ್ಯ ಲಿಂಗಾಯತ ಮಹಾಸಭಾದವರು - ರಾಜ್ಯ ಕುರುಬರ ಸಂಘದವರು - ವಾಲ್ಮೀಕಿ ಸಂಘಟನೆಯವರು - ಆರ್ಯ ವೈಶ್ಯ ಮಹಾಸಭಾದವರು..., ಮತ್ತು ಎಲ್ಲಾ ಜಾತಿಗಳ ಮಹಾನುಭಾವರು....
ರಾಜ್ಯದ ಎಲ್ಲಾ ರೀತಿಯ ಶಿಕ್ಷಕರು - ಎಲ್ಲಾ ವೈದ್ಯಕೀಯ ಸಿಬ್ಬಂದಿ - ಎಲ್ಲಾ ಮಠಾಧೀಶರು - ಎಲ್ಲಾ ಪತ್ರಕರ್ತರು - ಎಲ್ಲಾ ವಕೀಲರು ಮತ್ತು ಎಲ್ಲಾ ಕ್ಷೇತ್ರಗಳ ವೃತ್ತಿಪರರು. ಕಾಂಗ್ರೇಸ್ - ಬಿಜೆಪಿ - ಜೆಡಿಎಸ್ - ಬಿಎಸ್ಪಿ - ಕಮ್ಯುನಿಸ್ಟ್ - ಜನತಾ ಪಕ್ಷ - ಸಂಯುಕ್ತ ಜನತಾದಳ - ಎಎಪಿ - ಕೆ ಆರ್ ಎಸ್ - ಪ್ರಜಾಕೀಯ ಮತ್ತು ಇನ್ನಿತರ ಎಲ್ಲಾ ಪಕ್ಷಗಳು.
ಹಿಂದೂ ಪರ ಸಂಘಟನೆಗಳು - ಮುಸ್ಲಿಂ ಪರ ಸಂಘಟನೆಗಳು - ಕ್ರಿಶ್ಚಿಯನ್ ಸಂಘಟನೆಗಳು - ಬೌದ್ದ ಜೈನ ಸಂಘಟನೆಗಳು - ರೈತ ಪರ ಸಂಘಟನೆಗಳು - ಕನ್ನಡ ಪರ ಸಂಘಟನೆಗಳು ಮತ್ತು ಎಲ್ಲಾ ಸಂಘ ಸಂಸ್ಥೆಗಳು.
ಹೀಗೆ ಒಂದು ಸಾಮಾಜಿಕ ಅನಿಷ್ಟದ ವಿರುದ್ಧ ಇಡೀ ಸಮೂಹ ಧ್ವನಿ ಮೊಳಗಿಸಿದರೆ ಖಂಡಿತ ಈ ಸಮಸ್ಯೆಗಳು ನಿಧಾನವಾಗಿ ಬಗೆಹರಿಯುತ್ತವೆ. ಈಗ ಕೇವಲ ದಲಿತ ಪರ ಸಂಘಟನೆಗಳು ಮಾತ್ರ ಹೋರಾಟ ಮಾಡಿದರೆ ಅಸ್ಪೃಶ್ಯತೆ ಇನ್ನೂ ಜೀವಂತವಿದೆ ಎಂದು ಸಮಾಜ ಮತ್ತು ಸರ್ಕಾರ ಒಪ್ಪಿಕೊಂಡಂತಾಗುತ್ತದೆ. ಮೀಸಲಾತಿ ಏಕೆ ಬೇಕು ಎಂಬುದಕ್ಕೆ ಇದು ಪುಷ್ಟಿ ನೀಡುತ್ತದೆ.
ಇದನ್ನು ಒಂದು ಘಟನೆ ಮಾತ್ರ ಎಂದು ಪರಿಗಣಿಸಲಾಗದು ಇದೊಂದು ಮನಸ್ಥಿತಿ. ಹೇಗೆ ಇಸ್ಲಾಂ ಧರ್ಮದ ಮೂಲಭೂತವಾದ ಹಿಜಾಬ್ - ಹಲಾಲ್ - ಬುರ್ಖಾ ಮುಂತಾದ ನಂಬಿಕೆಗಳು ಒಂದು ಮನಸ್ಥಿತಿಯೋ ಹಾಗೆ ಜಾತಿ ಪದ್ದತಿಯು ಸಹ ಹಿಂದೂ ಮೂಲಭೂತವಾದದ ಮನಸ್ಥಿತಿ. ಒಂದು ಕಡೆ ಎನ್ಐಎ ಒಂದಷ್ಟು ಸಂಘಟನೆಗಳ ಮೇಲೆ ದಾಳಿ ಮಾಡಿ ಭಯೋತ್ಪಾದಕ ಕೃತ್ಯಗಳ ಅನುಮಾನದ ಮೇಲೆ ಕೆಲವರನ್ನು ಬಂಧಿಸುತ್ತಿದೆ. ಇನ್ನೊಂದು ಕಡೆ ಜಾತಿ ವ್ಯವಸ್ಥೆ ತನ್ನ ಕಬಂಧ ಬಾಹುಗಳನ್ನು ಎಲ್ಲಾ ರೀತಿಯಲ್ಲಿ ಚಾಚುತ್ತಿದೆ.
ಅಂದರೆ ಧಾರ್ಮಿಕ ನಂಬಿಕೆಗಳು ನಾಗರಿಕ ಸಮಾಜಕ್ಕೆ ದುಃಸ್ವಪ್ನವಾಗಿ ಕಾಡುತ್ತಿದೆ. ಮನುಷ್ಯರ ನಡುವೆ ಕಂದಕ ಸೃಷ್ಟಿಸಿ ಅಪನಂಬಿಕೆ ಮೇಲುಗೈ ಪಡೆದಿದೆ. ಇದರ ಸಂಪೂರ್ಣ ಲಾಭ ರಾಜಕೀಯ ಪಕ್ಷಗಳಿಗೆ ದೊರೆಯುತ್ತಿದೆ. ರಾಜ್ಯದ ರಾಜಧಾನಿಗೆ ಸಮೀಪದಲ್ಲೇ ಒಂದು ಅಸ್ಪೃಶ್ಯತೆಯ ಆಚರಣೆ ನಡೆದಿರುವಾಗ ಇಡೀ ಸಮೂಹದ ಸ್ಪಂದನೆ ಮತ್ತು ಪ್ರತಿಕ್ರಿಯೆ ನಿರ್ಜೀವವಾಗಿರುವುದು ಮಾತ್ರ ಆಶ್ಚರ್ಯ. ಕೇವಲ ನೆಪಕ್ಕೆ ಅದಕ್ಕೆ ಸಂಬಂಧಿಸಿದವರ ಒಂದಷ್ಟು ಕ್ರಮಗಳನ್ನು ಹೊರತುಪಡಿಸಿ ಅಮೂಲಾಗ್ರ ಬದಲಾವಣೆಗೆ ವ್ಯವಸ್ಥೆ ಪ್ರಯತ್ನಿಸದಿರುವುದು ಅನಾಗರಿಕ ಸಮಾಜದ ಲಕ್ಷಣವೇ ಸರಿ.
ಇಲ್ಲಿ ಚರ್ಚೆಗಳು ಅನಾವಶ್ಯಕ. ಆದಷ್ಟು ಬೇಗ ಜಾತಿ ಪದ್ದತಿಯ ನಿರ್ಮೂಲನೆಗೆ ಏನಾದರೂ ಪರಿಹಾರವನ್ನು ಕಂಡುಹಿಡಿಯಲೇ ಬೇಕಿದೆ. ಈ ಸಮಾಜಕ್ಕೆ ಅಂಟಿದ ಶಾಪದಿಂದ ಮುಕ್ತವಾಗಬೇಕಿದೆ. ಆ ನಿಟ್ಟಿನಲ್ಲಿ ಸಾಮಾನ್ಯ ಜನರಾದ ನಾವುಗಳು ನಮ್ಮ ನಮ್ಮ ನೆಲೆಯಲ್ಲಿ ಮಾಡಬಹುದಾದ ಪ್ರಯತ್ನಗಳ ಪಟ್ಟಿಯನ್ನು ತಯಾರು ಮಾಡೋಣ. ಶೀಘ್ರದಲ್ಲೇ ಆ ಬಗ್ಗೆ ಇನ್ನಷ್ಟು ಚರ್ಚೆಗಳ ನಿರೀಕ್ಷೆಯಲ್ಲಿ....
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ