ದೇವಿಂದರ್ ಶರ್ಮಾ ಅವರೊಂದಿಗೆ ಒಂದಿಷ್ಟು ಹೊತ್ತು..

ದೇವಿಂದರ್ ಶರ್ಮಾ ಅವರೊಂದಿಗೆ ಒಂದಿಷ್ಟು ಹೊತ್ತು..

ಬರಹ

ಅಂದು ಶನಿವಾರ, ಸಂಜೆ ನಾಲ್ಕು ಘಂಟೆಗೆ ದೇವಿಂದರ್ ಶರ್ಮಾರ (ದೇವಿಂದರ್ ಶರ್ಮಾ- ಕೃಷಿವಿಜ್ಞಾನಿ, ಸರಕಾರಗಳ ಆಹಾರ ಮತ್ತು ವ್ಯಾಪಾರ ನೀತಿಗಳ ವಿಶ್ಲೇಷಕರು, ಉತ್ತಮ ವಾಗ್ಮಿ ಹಾಗೂ ಬರಹಗಾರ)) ಭಾಷಣವಿದೆಯೆಂದು ಇಮೇಲಲ್ಲಿ ಆಹ್ವಾನ ಬಂದಾಗ ಇದ್ದಬಿದ್ದ ಕೆಲಸಗಳನ್ನೆಲ್ಲ ಬಿಟ್ಟು ಛಂಗೆಂದು ಹೊರಟೆ. ಜಾಗತಿಕ ಬಡತನ ಮತ್ತು ಆಹಾರ ಪರಿಸ್ಥಿತಿಯನ್ನು, ಬಹುರಾಷ್ಟ್ರೀಯ ಕಂಪನಿಗಳ ಆಟಾಟೋಪಗಳನ್ನು ನಮ್ಮೆದುರು ಬಿಚ್ಚಿಡುವ ಶರ್ಮಾರ ಮಾತೆಂದರೆ ನನಗೆ ಬಹಳ ಇಷ್ಟ. ಶರ್ಮಾರದ್ದು ಅಂಕಿ-ಅಂಶಗಳನ್ನು ಪಟಪಟನೆ ಉದುರಿಸುವ ನಿರರ್ಗಳ ವೈಖರಿ. ಆಗಾಗ ಅವರ ಭಾಷಣ ಕೇಳುತ್ತಿದ್ದವರಿಗೆ ಕೆಲವಿಷಯಗಳು ಪುನರಾವರ್ತನೆಗೊಂಡಿವೆಯೆಂದು ಅನಿಸಿದರೂ ವಾಸ್ತವಾಂಶಗಳ ಮೂಲಕ ನಮ್ಮ ಭಾವನೆಗಳನ್ನು ಕೆಣಕುವ ಮಾತುಗಳು ಅವು ಎಂಬುದು ಸುಳ್ಳಲ್ಲ.

ಹಾಗೆ ನೋಡಿದರೆ ಮೆಲುನುಡಿಯ ಶರ್ಮಾರ ಮಾತು ಅಂಥಹ ಆಕರ್ಷಣೀಯವೇನಲ್ಲ, ಆದರೆ ಹುಷಾರ್! ಭಾಷಣದ ನಡುವೆ ನಿಮ್ಮ ಗಮನ ಸ್ವಲ್ಪ ಆಚೀಚೆ ಸರಿಯಿತೋ ಒಂದಿಷ್ಟು ಪ್ರಮುಖವಾದ ಮಾಹಿತಿಯನ್ನು ಕಳಕೊಂಡಂತೆಯೇ. ಹಿಂದೊಮ್ಮೆ ಸಮಾರಂಭವೊಂದರಲ್ಲಿ ದಕ್ಷಿಣಕನ್ನಡದ ಜಿಲ್ಲಾಧಿಕಾರಿ ಹಾಗೂ ಶರ್ಮಾ ಅವರಿಬ್ಬರೂ ಒಂದೇ ವೇದಿಕೆಯಲ್ಲಿದ್ದರು. ಅಂದು ಸೌಮ್ಯಮಾತಿನ ಶರ್ಮಾರಿಗಿಂತ ಗಟ್ಟಿ ಹಾಗೂ ಸ್ಟೈಲಾಗಿ ಆಂಗ್ಲ ಮಾತನ್ನುದುರಿಸುವ ಮಹೇಶ್ವರರಾವ್ ಅವರೇ ಹೆಚ್ಚು ಜನರನ್ನು ಸೆಳೆದಿದ್ದರು.

ಅಂದಿನ ಭಾಷಣ 'Economic recession and food security' ಎಂದಿತ್ತು. ಎಂದಿನಂತೆ ಮೆತ್ತಗೆ ಮಾತುಗಳನ್ನು ಪ್ರಾರಂಭಿಸಿದ ಶರ್ಮಾ ಅವರು ಈ ಎರಡೂ ಸಂಗತಿಗಳು ಹೇಗೆ ಒಂದಕ್ಕೊಂದು ಥಳುಕು ಹಾಕಿಕೊಂಡಿವೆಯೆಂದು ವಿವರಿಸತೊಡಗಿದರು. ಆರ್ಥಿಕ ಕುಸಿತಕ್ಕೊಳಗಾದ ಕಂಪನಿಗಳಿಗೆ ಸರಕಾರಗಳು ಹಣ ನೀಡಿ ಮೇಲೆತ್ತುತ್ತಿವೆ. ಅದೇ ತಮ್ಮ ನೆಲದ ಬಡಜನರ ಹೊಟ್ಟೆಯ ಹಸಿವನ್ನು ನಿವಾರಿಸಲು ಸಾಧ್ಯವಿಲ್ಲವೆ? ಇತ್ತೀಚೆಗೆ ಅಮೆರಿಕದಲ್ಲಿ ಇಂಥ ಕೆಲವು ಕಂಪನಿಗಳ ಉದ್ಧಾರಕ್ಕೆಂದು ಸರಕಾರ ಸುಮಾರು ನೂರು ದಶಕೋಟಿ ಡಾಲರ್ ಹಣವನ್ನು ವ್ಯಯ ಮಾಡಿತು. ಯೋಚಿಸಿ, ಇದೇ ಹಣದಲ್ಲಿ ಇಡೀ ಭೂಮಂಡಲದ ಹಸಿದ ಹೊಟ್ಟೆಗಳನ್ನು ತುಂಬಿಸಬಹುದಿತ್ತಲ್ಲವೆ? ಬಡತನ ಎಂಬ ಕ್ರೂರ ಪರಿಸ್ಥಿತಿಯನ್ನು ಹೊಡೆದು ಹಾಕಬಹುದಿತ್ತಲ್ಲವೆ?

ಆದರೆ ಬೃಹತ್ ಕಂಪನಿಗಳನ್ನು ಓಲೈಸುವ ಸರಕಾರದ ಪಾಲಿಸಿಗಳಿಂದಲೇ ಈ ಎಲ್ಲ ಏರುಪೇರು ಬಂದಿದೆ. ಅದಕ್ಕೇ ಈಗಿನ ಆರ್ಥಿಕ ನಮೂನೆ ಅಥವಾ ಮಾದರಿಯೇ ಸರಿ ಇಲ್ಲ ಎಂದು ಎಲ್ಲೆಡೆ ಕೂಗು ಕೇಳಿ ಬರ್ತಾ ಇದೆ. ಜಗತ್ತಿನ ೫ ಬೃಹತ್ ಕಂಪನಿಗಳು ಬಳಸುವಷ್ಟು ನೀರು ಇಡೀ ಮಾನವ ಸಮುದಾಯಕ್ಕೆ ಬಳಸಲು ಸಾಕು. ಅಂದರೆ ಜಗತ್ತಿನ ಸಂಪತ್ತಿನ ಅಧಿಕಾಂಶ ಕೆಲವೇ ಮಂದಿಯ ಕೈಲಿದೆ. ಭಾರತದಲ್ಲಂತೂ ಜಿಡಿಪಿಯ ಶೇಕಡಾ ಒಂಭತ್ತರಷ್ಟು ಪಾಲು ಬರ್ತಿರೋದು ಬರೀ ೩೬ ಮಂದಿ ಕೈಗಾರಿಕೋದ್ಯಮಿಗಳಿಂದಾಗಿ. ಅವರಲ್ಲಿ ಒಬ್ಬರು ಭಾರತ ಬಿಟ್ಟು ವಿದೇಶಕ್ಕೆ ಹಾರಿದರೂ ಜಿಡಿಪಿ ಸೊಂಯ್ ಎಂದು ಇಳಿಯುತ್ತದೆ.

'ಮೆಕಾಲೆ ಸಿಂಡ್ರೋಮ್' ಬಗ್ಗೆ ಗೊತ್ತೆ ನಿಮಗೆ? ಬ್ರಿಟಿಷರ ಕಾಲದಲ್ಲಿ ಭಾರತವನ್ನು ಆಳಲೆಂದು ಬಂದ ಲಾರ್ಡ್ ಮೆಕಾಲೆ ಅನ್ನುವವ ಇಡೀ ಭಾರತವನ್ನು ಅಡ್ಡಾಡಿ ಇಲ್ಲಿ ಯಾವುದಕ್ಕೂ ಕೊರತೆಯಿಲ್ಲ, ಆರ್ಥಿಕ, ಸಾಮಾಜಿಕ ಎಲ್ಲಾ ರೀತಿಯಲ್ಲೂ ಈ ದೇಶ ಸಂಪದ್ಭರಿತವಾಗಿದೆ, ಆದ್ದರಿಂದ ಈ ದೇಶವನ್ನು ಒಡೆದು ಹೋಳಾಗಿಸಬೇಕೆಂದರೆ ಇಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಬದಲಿಸಬೇಕು ಎಂದು ಅಭಿಪ್ರಾಯ ಪಟ್ನಂತೆ. ಸರಿ, ಆವಾಗಿನಿಂದ ಜಾರಿಗೆ ಬಂದಿದ್ದು ನಮ್ಮೀ ಶಿಕ್ಷಣ ಪದ್ಧತಿ. ಎಲ್ಲಕ್ಕೂ ಪಶ್ಚಿಮದ ಕಡೆ ಮುಖ ನಮ್ಮದೀಗ. ಅಮೆರಿಕ, ಯುರೋಪುಗಳನ್ನೇ ಅನುಸರಿಸಬೇಕು, ಅಲ್ಲಿಯದೇ ಎಲ್ಲವೂ ಚೆನ್ನ ಇತ್ಯಾದಿ. ಇದು ಯಾವ ಹಂತಕ್ಕೆ ಮುಟ್ಟಿದೆಯೆಂದ್ರೆ ನಮ್ಮ ದೇಶದ ಸಿರಿವಂತ ವರ್ಗದ ಇತ್ತೀಚಿನ ಸೊಸೆಯಂದಿರಲ್ಲಿ ಹೆಚ್ಚಿನವರೆಲ್ಲ ಅಮೆರಿಕ, ಬ್ರಿಟನ್ನಿನವರೆಂದು ವರದಿಯೊಂದು ಹೇಳಿದೆ. ಈಗಿನ ಪೀಳಿಗೆಯವರಾದ ನಾವೂ ಇದೇ ಶಿಕ್ಷಣ ಪದ್ಧತಿಯ ಹುಟ್ಟುವಳಿಗಳೇ. ನಾವೂ ಈ ವ್ಯವಸ್ಥೆಯ ಒಂದು ಭಾಗವೆಂದು ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದೇವೆ. ಏಕೆ?

ನಮ್ಮ ದೇಶದ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದಾದರೂ ಸ್ಥಾನವಿದೆಯೇ? ಇದ್ದಿದ್ದರೆ ಲಕ್ಷಗಟ್ಟಲೆ ರೈತರು ಆತ್ಮಹತ್ಯೆಗೊಳಗಾಗುವ ಪ್ರಸಂಗ ಬರುತ್ತಲೇ ಇರಲಿಲ್ಲ. ಹಳ್ಳಿ ಚೆನ್ನ, ಅಲ್ಲಿಯ ಗಾಳಿ ಚೆನ್ನ, ನೀರು ಚೆನ್ನ, ಆಹಾರ ಚೆನ್ನ ಎಂದೆಲ್ಲ ಹೇಳುವ ನಾವ್ಯಾರೂ ಹಳ್ಳಿಗಳಲ್ಲಿ ವಾಸಿಸಲು ತಯಾರಿಲ್ಲ ಯಾಕೆ? ಅಪಾರ ಸಬ್ಸಿಡಿ ಪಡೆದು ಕೃಷಿ ನಡೆಸುತ್ತಿರುವ ಬ್ರಿಟನ್ನಿನ ರೈತರು ಆ ಕ್ಷೇತ್ರವನ್ನು ತೊರೆಯುತ್ತಿದ್ದಾರೆ ಏಕೆ? ಏಕೆಂದರೆ ಕೃಷಿ ಲಾಭದಾಯಕವಲ್ಲ, ಮೇಲ್ನೋಟಕ್ಕೆ ಸಬ್ಸಿಡಿ ನೀಡುವಂತೆ ಕಂಡರೂ ಸವಲತ್ತುಗಳ ಅಧಿಕಾಂಶ ದೊರೆಯುತ್ತಿರೋದು ಕೈಗಾರಿಕೆಗಳಿಗೆ. ವಿಶೇಷ ಆರ್ಥಿಕ ವಲಯಗಳು ಈಗಿನ ಆರ್ಥಿಕ ಪದ್ಧತಿಯ ಇನ್ನೊಂದು ಅತಿರೇಕ. ರೈತರನ್ನು ನಿರ್ದಾಕ್ಷಿಣ್ಯವಾಗಿ ಹೊಸಕಿ ಹಾಕಿ ಕೈಗಾರಿಕೆಗಳಿಗೆ ಮಣೆ ಹಾಕುವ ಇಂಥ ಯೋಜನೆಗಳಿಂದ ಆಹಾರದ ಕೊರತೆ, ಬೆಲೆ ಏರಿಕೆಯಾಗುವುದು ಸಹಜವಲ್ಲವೆ? ಇನ್ನೊಂದು ಉದಾಹರಣೆ ಎಂದರೆ ಇತ್ತೀಚೆಗೆ ನಮ್ಮ ನಗರ, ಪಟ್ಟಣ, ಪೇಟೆಗಳಲ್ಲೆಲ್ಲ ನಾಯಿಕೊಡೆಯಂತೆ ತಲೆ ಎತ್ತುತ್ತಿರುವ ತರಕಾರಿ ಸೂಪರ್ ಮಾರ್ಕೆಟ್ಟುಗಳು. ಮೊದಮೊದಲು ಗ್ರಾಹಕರನ್ನು ಸೆಳೆಯಲೆಂದು (ಹಾಗೂ ಸುತ್ತಮುತ್ತಲ ಚಿಲ್ಲರೆ ಮಾರಾಟಗಾರರನ್ನು ಹೊಸಕಿ ಹಾಕುವ ಉಪಾಯವಾಗಿ) ತರಕಾರಿಗಳ ಬೆಲೆಯನ್ನು ಅಗ್ಗವಾಗಿಸುತ್ತವೆ. ಒಮ್ಮೆ ಜನರು ಈ ಅಂಗಡಿಗಳನ್ನೇ ಅವಲಂಬಿಸಿದರೆಂದರೆ ಅವು ಬೆಲೆ ಏರಿಸಲು ಆರಂಭಿಸುತ್ತವೆ. ಆಗ ಅವರೊಂದಿಗೆ ಪೈಪೋಟಿ ನಡೆಸಲು ತರಕಾರಿ ಮಾರುವ ಹೆಂಗಸರೊಬ್ಬರೂ ಉಳಿದಿರುವುದಿಲ್ಲ.

ಅಂದಿನ ಶರ್ಮಾರ ಭಾಷಣದಲ್ಲಿ ಇಂದಿನ ಆರ್ಥಿಕ ವ್ಯವಸ್ಥೆಯ ಭಾಗವಾಗಿರುವ ನಾವೆಲ್ಲ ಬದಲಾವಣೆಯ ಹೊಸ ಗಾಳಿಯನ್ನು ತರಲು ಪ್ರಯತ್ನಿಸಬೇಕೆಂಬ ಕಳಕಳಿ ಇತ್ತು. ಈ ಜಾಗತಿಕ ಹಳ್ಳಿಯ ಆಗುಹೋಗುಗಳಿಗೆ ಸ್ಪಂದಿಸೋಣ, ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳೋಣ ಎಂಬರ್ಥದ ಕರೆಯಿತ್ತು.

******************************************************