ದೇವಿಯನ್ನು ಲಿಂಗರೂಪದಲ್ಲಿ ಪೂಜಿಸುವ ಪುಣ್ಯ ಸ್ಥಳ - ಕಮಲಶಿಲೆ

ದೇವಿಯನ್ನು ಲಿಂಗರೂಪದಲ್ಲಿ ಪೂಜಿಸುವ ಪುಣ್ಯ ಸ್ಥಳ - ಕಮಲಶಿಲೆ

ಕಮಲಶಿಲೆ ದೇವಸ್ಥಾನವು ಕುಂದಾಪುರದಿಂದ 35 ಕಿಮೀ ದೂರದಲ್ಲಿ ನೆಲೆಗೊಂಡಿರುವ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಿ ದೇವಸ್ಥಾನವಾಗಿದೆ. ಲಿಂಗ ರೂಪದಲ್ಲಿ ನಿಂತ ದುರ್ಗಾ ದೇವಿಯನ್ನು ಇಲ್ಲಿ ಪೂಜಿಸಲಾಗುತ್ತದೆ. ಕಮಲಶಿಲೆ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಿ ದೇವಾಲಯದ ಇತಿಹಾಸವೇನು ಗೊತ್ತಾ? 

ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಸ್ಥಾನ: ಕಮಲಶಿಲೆಯು ಉಡುಪಿ ಜಿಲ್ಲೆಯ ಕುಂದಾಪುರದಿಂದ ಕೇವಲ 35 ಕಿ.ಮೀ ದೂರದಲ್ಲಿದೆ. ಇದು ಎತ್ತರದ ಪರ್ವತಗಳು ಮತ್ತು ನಿತ್ಯಹರಿದ್ವರ್ಣ ಕಾಡುಗಳಿಂದ ಆವೃತವಾಗಿದೆ. ಅದರ ಬದಿಗಳಲ್ಲಿ ಹರಿಯುವ ಕುಬ್ಜಾ ನದಿಯು ಕಮಲಶಿಲೆಯ ಸುಂದರವಾದ ನೋಟವನ್ನು ಪೂರ್ಣಗೊಳಿಸುತ್ತದೆ. ಕಮಲಶಿಲೆಯ ಅತ್ಯಂತ ಪ್ರಸಿದ್ಧವಾದ ಆಕರ್ಷಣೆಯೆಂದರೆ ಪುರಾತನ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ. ಈ ದೇವಾಲಯವು ಹಳ್ಳಿಯ ಮಧ್ಯಭಾಗದಲ್ಲಿದೆ. ಸಾಮಾನ್ಯವಾಗಿ ಶಿವನನ್ನು ಲಿಂಗ ರೂಪದಲ್ಲಿ ಪೂಜಿಸಿದರೆ ಇಲ್ಲಿ ಶ್ರೀ ಬ್ರಾಹ್ಮಿ ದುರ್ಗಾ ದೇವಿಯನ್ನು ಲಿಂಗ ರೂಪದಲ್ಲಿ ಪೂಜಿಸಲಾಗುತ್ತದೆ. ಈ ಲಿಂಗವು ಮಹಾಕಾಳಿ ಮತ್ತು ಮಹಾಲಕ್ಷ್ಮಿ ದೇವಿಯ ಎರಡು ಶಾಶ್ವತ ಶಕ್ತಿಗಳ ಸಂಯೋಜನೆಯೆಂದು ಹೇಳಲಾಗುತ್ತದೆ. ಕಮಲಶಿಲೆ ದೇವಾಲಯದ ಮಹತ್ವವೇನು? ಇಲ್ಲಿನ ವಿಶೇಷತೆಯೇನು ತಿಳಿಯೋಣ.

ಕಮಲಶಿಲೆಯಲ್ಲಿ ದುರ್ಗಾದೇವಿಯ ದರ್ಶನ ಮಾಡಿದರವರು ಅಲ್ಲೇ ಸ್ವಲ್ಪ ದೂರದಲ್ಲೇ ಇರುವ ಆದಿ ಗುಹಾಲಯಕ್ಕೆ ಭೇಟಿ ನೀಡುವುದು ವಾಡಿಕೆ. ಇದು ನಾಗದೇವತೆಗಳ ಪವಿತ್ರ ಸ್ಥಳ. ಈ ಆದಿ ಗುಹಾಲಯದ ನಾಗದೇವತೆಗಳಿಗೆ ಸ್ಥಳೀಯ ಬಳೆಗಾರರು ಪ್ರತಿನಿತ್ಯ ಬಂದು ಪೂಜೆ ಮಾಡುತ್ತಾರೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗೋ ಕಿರಿದಾದ ಹಾದಿ ನೇರವಾಗಿ ಕಾಶಿಗೆ ಹೋಗುತ್ತದೆ ಎಂಬ ನಂಬಿಕೆಯಿದೆ. ಈ ನಾಗದೇವತೆಗಳ ಗುಹೆಯನ್ನು ಪ್ರವೇಶಿಸುತ್ತಿದ್ದಂತೆ ಸಾವಿರಾರು ಬಾವಲಿಗಳು ನೇತಾಡುತ್ತಿರುವುದನ್ನು ನೋಡಬಹುದು. ಆದರೆ ಈ ಬಾವಲಿಗಳು ಇಂದಿಗೂ ಕೂಡ ಇಲ್ಲಿಗೆ ಭೇಟಿ ನೀಡುವ ಭಕ್ತಾಧಿಗಳಿಗೆ ಯಾವುದೇ ಹಾನಿಯನ್ನು ಮಾಡಿಲ್ಲ.

ಕಮಲಶಿಲೆ ಗ್ರಾಮದ ಇತಿಹಾಸ: ಆಸ್ಥಾನದ ನರ್ತಕಿಯೆಂದೇ ಪ್ರಸಿದ್ಧಳಾದ ಪಿಂಗಳಾ ಎಂಬ ಸುಂದರ ಮಹಿಳೆ ಕೈಲಾಸ ಪರ್ವತದ ಮೇಲೆ ಶಿವ ಮತ್ತು ಪಾರ್ವತಿ ದೇವಿಯ ಮುಂದೆ ತನ್ನ ಅತ್ಯುತ್ತಮ ನೃತ್ಯವನ್ನು ಪ್ರದರ್ಶಿಸುತ್ತಿದ್ದಳು ಎನ್ನುವ ನಂಬಿಕೆಯಿದೆ. ಆದರೆ ಒಂದು ದಿನ ಮತ್ತೆ ಪುನಃ ನೃತ್ಯ ಮಾಡಲು ಕೇಳಿದಾಗ ಅವಳು ನಿರಾಕರಿಸಿದಳು, ಇದು ಪಾರ್ವತಿ ದೇವಿಗೆ ತುಂಬಾ ಕೋಪವನ್ನುಂಟುಮಾಡಿತು. ಕೋಪದಿಂದ ದೇವಿ ಪಾರ್ವತಿಯು ನೀನು ನಿನ್ನ ಸೌಂದರ್ಯವನ್ನೆಲ್ಲಾ ಕಳೆದುಕೊಂಡು ಕುರೂಪಿ ಮಹಿಳೆಯಾಗಬೇಕೆಂದು ಶಾಪ ನೀಡಿದಳು.

ಪಿಂಗಳಾ ಕುರೂಪಿಯಾಗಿ ಭೂಲೋಕದಲ್ಲಿ ಬದುಕಲು ಸಾಧ್ಯವಾಗದೇ, ಅವಳು ತನ್ನ ತಪ್ಪನ್ನು ಅರಿತು ಸ್ವಲ್ಪ ಕರುಣೆ ತೋರುವಂತೆ ಪಾರ್ವತಿ ದೇವಿಯನ್ನು ಬೇಡಿಕೊಂಡಳು. ದೇವಿಯು ಖಾರರಾತಾಸುರನನ್ನು ಮತ್ತು ಅವನು ಮಾಡುತ್ತಿದ್ದ ಎಲ್ಲಾ ದುಷ್ಕೃತ್ಯಗಳನ್ನು ಕೊನೆಗೊಳಿಸಲು ಭೂ ಲೋಕಕ್ಕೆ ಬರುತ್ತೇನೆ. ಆಗ ನಾನು ಸಹ್ಯಾದ್ರಿ ವನದಲ್ಲಿ ಲಿಂಗ ರೂಪದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಲಿಂಗವು ಕಮಲಶಿಲೆಯ ರೂಪದಲ್ಲಿರುವುದರಿಂದ ಅದನ್ನು ಸುಲಭವಾಗಿ ಗುರುತಿಸಬಹುದು. ಆ ಸಂದರ್ಭದಲ್ಲಿ ನಾನು ನಿನ್ನನ್ನು ಶಾಪದಿಂದ ವಿಮುಕ್ತಗೊಳಿಸತ್ತೇನೆಂದು ಹೇಳುತ್ತಾಳೆ.

ಕುಬ್ಜಳ ಶಾಪ ವಿಮೋಚನೆ: ಪಾರ್ವತಿ ದೇವಿಯು ಪಿಂಗಳಾಳನ್ನು ಸುಪಾರ್ಶ್ವ ಗುಹೆಯ ಬಳಿ ಇರುವಂತೆ ಮತ್ತು ತಾನು ಆಕೆಯನ್ನು ಕ್ಷಮಿಸಿ, ಅವಳಿಗೆ ಮೋಕ್ಷವನ್ನು ನೀಡುವವರೆಗೆ ಮಂತ್ರಗಳನ್ನು ಪಠಿಸುತ್ತಿರುವಂತೆ ಹೇಳುತ್ತಾಳೆ. ಅವಳು ದೇವಿಯ ಆದೇಶದಂತೆ ಮಾಡಿದಳು ಮತ್ತು ನಂತರ ದೇವಿಯು ಸಂತುಷ್ಟಳಾಗಿ ಆಕೆಯ ಮುಂದೆ ಲಿಂಗ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಪಾರ್ವತಿ ದೇವಿಯು ಲಿಂಗ ರೂಪದಲ್ಲಿ ಕಾಣಿಸಿಕೊಳ್ಳಲು ಆಯ್ಕೆ ಮಾಡಿದ ಸ್ಥಳವೇ ರೈಕ್ವಾ ಋಷಿ ಆಶ್ರಮದ ಮುಂಭಾಗದಲ್ಲಿ ಕುಬ್ಜಾ ಮತ್ತು ನಾಗ ತೀರ್ಥ ನದಿಗಳು ಸಂಧಿಸುವ ಸ್ಥಳದಲ್ಲಿ ಕಾಣಿಸಿಕೊಂಡಳು.

ದೇವಿಯು ಕುಬ್ಜಳಾಗಿ, ವಿಕಾರವಾಗಿದ್ದ ಪಿಂಗಳಾಳ ಮುಂದೆ ಲಿಂಗ ರೂಪದಲ್ಲಿ ಕಾಣಿಸಿಕೊಂಡ ನಂತರ ಆಕೆಯನ್ನು ಮಥುರಾಗೆ ಹೋಗುವಂತೆ ನಿರ್ದೇಶಿಸಿದಳು. ಶ್ರೀಕೃಷ್ಣನ ಪವಿತ್ರ ಭೂಮಿ ಮತ್ತು ಅವನ ಚಿನ್ನದ ಪಾದವನ್ನು ಸ್ವರ್ಶಿಸಿದ ನಂತರ ನೀನು ತನ್ನ ಶಾಪದಿಂದ ಮುಕ್ತಳಾಗುತ್ತೀಯ ಮತ್ತು ಮತ್ತೆ ಪುನಃ ನಿನ್ನ ಸೌಂದರ್ಯವನ್ನು ಪಡೆದುಕೊಳ್ಳುತ್ತೀಯಾ ಎಂದು ಹೇಳಿದಳು. ಹಾಗೂ ನೀನು ಈ ಸ್ಥಳದಲ್ಲಿ ಕುಬ್ಜ ನದಿಯಾಗಿ ಹರಿಯಬೇಕು. ಕುಜ್ಜಳಾಗಿದ್ದ ಪಿಂಗಳಾ ಪಾರ್ವತಿ ದೇವಿಯ ಮಾತನ್ನು ಕೇಳಿ ಸಂತಸಗೊಂಡು ನಾನು ಪ್ರತೀ ಶ್ರಾವಣದಲ್ಲಿ ನದಿಯಾಗಿ ಉಕ್ಕಿ ಹರಿದು ನಿಮ್ಮ ಪಾದಗಳನ್ನು ತೊಳೆದು ಹೋಗುತ್ತೇನೆಂದು ಹೇಳುತ್ತಾಳೆ. ಅಂದಿನಿಂದ ಇಂದಿನವರೆಗೂ ಕಮಲಶಿಲೆಯಲ್ಲಿ ಪ್ರತೀ ಶ್ರಾವಣದಂದು ಕುಬ್ಜಾ ನದಿ ಉಕ್ಕಿ ಹರಿದು ಗುಡಿ ಪ್ರವೇಶಿಸಿ ತಾಯಿ ದುರ್ಗೆಯ ಪಾದಗಳಿಗೆ ಪ್ರಣಾಮಗಳನ್ನು ಅರ್ಪಿಸಿ ಆಕೆಯ ಮುಡಿಯಲ್ಲಿರುವ ಪುಷ್ವವನ್ನು ಪ್ರಸಾದ ರೂಪದಲ್ಲಿ ತೆಗೆದುಕೊಂಡು ಹೋಗುತ್ತಾಳೆ. ಇದು ಇಲ್ಲಿ ನಡೆಯುವ ಮೈನವಿರೇಳಿಸುವ ಘಟನೆಯಾಗಿದೆ.

ಕಮಲಶಿಲೆ ದೇವಾಲಯದ ಪ್ರಾಮುಖ್ಯತೆ: ಈ ದೇವಾಲಯವನ್ನು ದುರ್ಗಾ ಪರಮೇಶ್ವರಿ ದೇವಿಯ ಹೆಸರಿನಲ್ಲಿ ಸ್ಥಾಪಿಸಲಾಗಿದೆ. ಇದನ್ನು ಮುಸ್ಲಿಂ ವಾಸ್ತುಶಿಲ್ಪಿ ಬಪ್ಪ ನಿರ್ಮಿಸಿದ, ಆದ್ದರಿಂದ ಬಪ್ಪನಾಡು ಎಂಬ ಹೆಸರು ಕೂಡ ಈ ಸ್ಥಳಕ್ಕಿದೆ. ಪ್ರಮುಖ ಶಕ್ತಿ ಆರಾಧನಾ ಕೇಂದ್ರಗಳಲ್ಲಿ ಒಂದಾಗಿರುವ ಈ ದೇವಾಲಯಕ್ಕೆ ಪ್ರತಿ ವರ್ಷ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಸಾಂಕೇತಿಕ ಪ್ರತಿಮೆಯು ಲಿಂಗದ ರೂಪದಲ್ಲಿದೆ. ಇಲ್ಲಿ ನಾವು ಕೇಲವ ಹಿಂದೂ ಭಕ್ತರನ್ನು ಮಾತ್ರವಲ್ಲ, ಮುಸ್ಲಿಂ ಧರ್ಮದ ಭಕ್ತರನ್ನು ಕೂಡ ನೋಡಬಹುದು. ಮುಸ್ಲಿಮರು ಮತ್ತು ಹಿಂದೂಗಳು ಒಟ್ಟಿಗೆ ಪ್ರಾರ್ಥನೆ ಮತ್ತು ದೇವಾಲಯದ ಉತ್ಸವಗಳಲ್ಲಿ ಭಾಗವಹಿಸುತ್ತಾರೆ.

ವಿಶೇಷ ಸಲಾಂ ಪೂಜೆ: ನೀವು ಭೇಟಿ ನೀಡಲೇಬೇಕಾದ ಅತ್ಯುತ್ತಮ ದೇವಾಲಯಗಳಲ್ಲಿ ಇದು ಒಂದು. ದೇವಾಲಯದಲ್ಲಿ ಅನೇಕ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ ಮತ್ತು ಈ ಪೂಜೆಗಳಲ್ಲಿ ಭಾಗವಹಿಸುವ ಮೂಲಕ ನೀವು ಮೋಕ್ಷವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಪ್ರತಿದಿನ ಸಂಜೆ, ಭಕ್ತರು 'ಸಲಾಂ ಪೂಜೆ' ಎಂದು ಕರೆಯಲ್ಪಡುವ ವಿಶೇಷ ಪೂಜೆಯನ್ನು ಮಾಡುತ್ತಾರೆ. ಈ ಪೂಜೆಯು ಮುಖ್ಯವಾಗಿ ಹೈದರ್ ಅಲಿ ಮತ್ತು ಅವನ ಮಗ ಟಿಪ್ಪು ಸುಲ್ತಾನ್‌ರ ಗೌರವಾರ್ಥವಾಗಿ ಮಾಡಲಾಗುತ್ತದೆ.

ಪೂಜೆ ಮತ್ತು ಸೇವೆ:

ಶ್ರೀ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಿಗೆ ಇಲ್ಲಿ ವಿಜಯಾಗಮಕ್ಕೆ ಅನುಗುಣವಾಗಿ ಪೂಜೆ ಮಾಡಲಾಗುತ್ತದೆ. ಈ ವಿಧಾನದಲ್ಲಿ, ಪೂಜೆಯನ್ನು ದಿನಕ್ಕೆ 5 ಬಾರಿ ಮಾಡಲಾಗುತ್ತದೆ.

ಉಷಾ ಕಾಲ (ಬೆಳಿಗ್ಗೆ) - 6 ಗಂಟೆಗೆ

ಪ್ರಾತಃ ಕಾಲ (ಬೆಳಿಗ್ಗೆ) - 8.30 ಕ್ಕೆ

ಮಧ್ಯಾಹ್ನ ಕಲಾ (ಮಧ್ಯಾಹ್ನ) - ಮಧ್ಯಾಹ್ನ 12.30 ಕ್ಕೆ

ಸಂದ್ಯಾ ಕಲಾ (ಸಂಜೆ) - ಸಂಜೆ 5.30 ಕ್ಕೆ

ರಾತ್ರಿ ಕಾಲ (ರಾತ್ರಿ) - 8 ಗಂಟೆಗೆ

ಇವುಗಳೊಂದಿಗೆ ಇಲ್ಲಿ ತ್ರಿಕಾಲ ಬಲಿಯನ್ನು ಕೂಡ ನೆರವೇರಿಸಲಾಗುತ್ತದೆ. ತ್ರಿಕಾಲ ಬಲಿಯೆಂದರೆ ಪ್ರಾಣಿಬಲಿ ಅಲ್ಲ, ಬದಲಾಗಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿಯಲ್ಲಿ ಒಳಗಿನ ಚತುರ್ಭುಜದ ಸುತ್ತಲೂ ಇರುವ ದೇವಿಯ ಅಷ್ಟ-ದಿಕ್ಪಾಲಕರಿಗೆ ಅನ್ನವನ್ನು ಅರ್ಪಿಸುವ ವಿಧಾನವಾಗಿದೆ.

ಕಮಲಶಿಲೆಯನ್ನು ತಲುಪುವ ಮಾರ್ಗ: ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ತಲುಪಲು ಸೂಕ್ತವಾದ ಮಾರ್ಗವನ್ನು ಈ ಕೆಳಗೆ ಉಲ್ಲೇಖಿಸಲಾಗಿದೆ ಇದು ಹತ್ತಿರದ ವಿಮಾನ ನಿಲ್ದಾಣ ಮತ್ತು ಹತ್ತಿರದ ರೈಲು ನಿಲ್ದಾಣವನ್ನು ಒಳಗೊಂಡಿದೆ.

ಹತ್ತಿರದ ವಿಮಾನ ನಿಲ್ದಾಣ: ಮಂಗಳೂರಿನಿಂದ 125 ಕಿಮೀ.

ಹತ್ತಿರದ ರೈಲು ನಿಲ್ದಾಣಗಳು: ಕುಂದಾಪುರದಿಂದ 35 ಕಿಮೀ.

ಮಂಗಳೂರು ರೈಲು ನಿಲ್ದಾಣದಿಂದ: 125 ಕಿಮೀ.

ಶಿವಮೊಗ್ಗ ರೈಲು ನಿಲ್ದಾಣದಿಂದ: 120 ಕಿ.ಮೀ

ವಿಮಾನ ಮಾರ್ಗ ಮತ್ತು ರೈಲು ಮಾರ್ಗವನ್ನು ಹೊರತುಪಡಿಸಿ ನೀವು ರಸ್ತೆ ಮಾರ್ಗದ ಮೂಲಕ ಕೂಡ ಕಮಲಶಿಲೆಯನ್ನು ತಲುಪಬಹುದು. ಕಮಲಶಿಲೆಗೆ ರಸ್ತೆ ಮಾರ್ಗವು ಕೂಡ ಉತ್ತಮವಾಗಿದೆ.

ಮಾಹಿತಿ ಸಂಗ್ರಹ -ಸತೀಶ್ ಶೆಟ್ಟಿ ಚೇರ್ಕಾಡಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ