ದೇಶಭಕ್ತಿಯ ಕಿಚ್ಚು ಹೊತ್ತಿಸಿದ ‘ವಂದೇ ಮಾತರಂ’ ಗೀತೆಗೆ ೧೫೦ ವರ್ಷ !

‘ವಂದೇ ಮಾತರಂ’ ಎಂಬ ಪದವನ್ನು ಕೇಳಿದೊಡನೆಯೇ ನಮ್ಮ ನರನಾಡಿಗಳು ಸೆಟೆದು ನಿಲ್ಲುತ್ತವೆ. ಮನದಲ್ಲಿ ರಾಷ್ಟ್ರ ಪ್ರೇಮದ ಚಿಂಗಾರಿಗಳು ಏಳುತ್ತವೆ. ಭಾರತ ಮಾತೆಯ ಚಿತ್ರ ಕಣ್ಣೆದುರು ಕುಣಿದಾಡುತ್ತದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶದ ಎಲ್ಲಾ ನಾಗರಿಕರನ್ನು ಒಗ್ಗೂಡಿಸಿ ಸ್ವಾತಂತ್ರ್ಯದ ಕಿಚ್ಚನ್ನು ಮನ-ಮನೆಗಳನ್ನು ಜಾಗೃತಗೊಳಿಸಿದ ಶ್ರೇಯ ಸಲ್ಲಬೇಕಾದದ್ದು ವಂದೇ ಮಾತರಂ ಗೀತೆಗೆ. ವಂದೇ ಮಾತರಂ ಗೀತೆ ರಚನೆಗೊಂಡು ೧೫೦ ವರ್ಷಗಳು ಕಳೆದಿವೆ. ಭಾರತದ ರಾಷ್ಟ್ರಗೀತೆಗೆ ಸಮಾನವಾಗಿರುವ ರಾಷ್ಟ್ರೀಯ ಹಾಡು ಎಂದೇ ಪರಿಗಣಿಸಲ್ಪಟ್ಟಿರುವ ವಂದೇ ಮಾತರಂ ಗೀತೆಯ ರಚನೆಕಾರರು, ಹಿನ್ನಲೆ, ರಾಷ್ಟ್ರ ಗೀತೆಯಾಗದ ಕಾರಣಗಳ ಬಗ್ಗೆ ಎಲ್ಲವನ್ನೂ ಒಂದೊಂದಾಗಿ ತಿಳಿದುಕೊಳ್ಳುವ ಬನ್ನಿ…
ಈ ಪ್ರೇರಣಾದಾಯಕ ಗೀತೆಯನ್ನು ರಚನೆ ಮಾಡಿದ್ದು ಬಂಗಾಳಿ ಸಾಹಿತಿ ಬಂಕಿಮಚಂದ್ರ ಚಟರ್ಜಿ (ಚಟ್ಟೋಪಾಧ್ಯಾಯ). ಇವರು ಈ ಗೀತೆಯನ್ನು ರಚಿಸಲು ಪ್ರೇರಣೆಯಾದ ಕೆಲವು ಅಂಶಗಳಿವೆ. ೧೭೭೦ರಲ್ಲಿ ಬಂಗಾಲದಲ್ಲಿ ಬ್ರಿಟೀಷರ ವಿರುದ್ಧ ಸನ್ಯಾಸಿಗಳು ಮಾಡಿದ ಹೋರಾಟ, ೧೮೫೭ರ ಸ್ವಾತಂತ್ರ್ಯ ಸಂಗ್ರಾಮ ಇವುಗಳ ಬಗ್ಗೆ ಬಂಕಿಮಚಂದ್ರರು ಬಾಲ್ಯದಲ್ಲೇ ತಿಳಿದುಕೊಂಡಿದ್ದರು. ಬ್ರಿಟೀಷರ ದಬ್ಬಾಳಿಕೆಯನ್ನು ಕಂಡು ಮನನೊಂದಿದ್ದರು. ಆ ದೌರ್ಜನ್ಯಗಳ ಕುರಿತಾಗಿ ಅವರೊಂದು ಕಾದಂಬರಿಯನ್ನು ಬರೆದರು. ಅದರ ಹೆಸರೇ ‘ಆನಂದ ಮಠ’ ಈ ಚಿತ್ರದಲ್ಲಿನ ಕೆಲವು ಘಟನೆಗಳಿಗೆ ಪೂರಕವಾಗಲೆಂದು ಅವರು ಬರೆದ ಗೀತೆಯೇ ‘ವಂದೇ ಮಾತರಂ’
೧೮೮೨ರಲ್ಲಿ ಬಂಕಿಮಚಂದ್ರ ಚಟರ್ಜಿ ಅವರ ಆನಂದ ಮಠ ಕಾದಂಬರಿ ಪ್ರಕಟವಾಯಿತು. ಕೆಲವೇ ಕೆಲವು ದಿನಗಳಲ್ಲಿ ಬಂಗಾಲದಾದ್ಯಂತ ವಂದೇ ಮಾತರಂ ಗೀತೆ ಜ್ವರ ಏರಿದಂತೆ ಏರಿ ಎಲ್ಲೆಡೆ ವ್ಯಾಪಿಸಿತು. ೧೮೯೬ರ ಕಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂ ಗೀತೆಯನ್ನು ಹಾಡಲಾಯಿತು. ಹಾಡಿದ ವ್ಯಕ್ತಿಯ ಹೆಸರು ಕೇಳಿದರೆ ನಿಮಗೆ ಅಚ್ಚರಿಯಾದೀತು. ಅವರು ಬೇರೆ ಯಾರೂ ಅಲ್ಲ, ನಮ್ಮ ಈಗಿನ ರಾಷ್ಟ್ರಗೀತೆಯಾದ ‘ಜನಗಣಮನ’ ಬರೆದ ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ ರವೀಂದ್ರನಾಥ ಠಾಗೋರ್. ಇವರು ಅಂದು ಹಾಡಿದ ವಂದೇ ಮಾತರಂ ಹಾಡು ನೂರು, ಸಾವಿರ, ಲಕ್ಷ ಜನರ ಮನೆ ಮನದೊಳಗೆ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿತು. ೧೯೦೫ರಲ್ಲಿ ನಡೆದ ವಂಗ ಭಂಗ ಚಳುವಳಿಗೆ ಈ ಗೀತೆಯೇ ಮೂಲ ಮಂತ್ರವಾಯಿತು. ಹಾಗಾದರೆ ಈ ಗೀತೆಯಲ್ಲಿ ಇರುವುದಾದರೂ ಏನು ಎಂಬುದನ್ನು ತಿಳಿದುಕೊಳ್ಳಲು ಮೊದಲು ಈ ಗೀತೆಯನ್ನು ಓದೋಣ…
ವಂದೇ ಮಾತರಂ
ಸುಜಲಾಂ ಸುಫಲಾಂ
ಮಲಯಜ ಶೀತಲಾಂ
ಸಸ್ಯ ಶಾಮಲಾಂ
ಮಾತರಂ॥
ಶುಭ್ರಜ್ಯೋತ್ಸ್ನಾ ಪುಲಕಿತಯಾಮಿನೀಂ
ಪುಲ್ಲಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿನೀಂ
ಸುಖದಾಂ ವರದಾಂ ಮಾತರಂ ॥
ಕೋಟಿ ಕೋಟಿ ಕಂಠ ಕಲಕಲ ನಿನಾದಕರಾಲೇ
ಕೋಟಿ ಕೋಟಿ ಭುಜೈರ್ಧೈತ ಖರಕರವಾಲೇ
ಕೇ ಬಲೇ ಮಾ ತುಮಿ ಅಬಲೇ ।
ಬಹುಬಲಧಾರಿಣೀಂ
ನಮಾಮಿ ತಾರಿಣೀಂ
ರಿಪುದಲವಾರಿಣೀಂ
ಮಾತರಂ ॥
ತುಮಿ ವಿದ್ಯಾ ತುಮಿ ಧರ್ಮ
ತುಮಿ ಹೃದಿ ತುಮಿ ಮರ್ಮ
ತ್ವಂ ಹಿ ಪ್ರಾಣಾಃಶರೀರೇ ।
ಬಾಹುತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ
ತೋಮಾರ ಇ ಪ್ರತಿಮಾ ಗಡಿ
ಮಂದಿರೇ ಮಂದಿರೇ ॥
ತ್ವಂಹಿ ದುರ್ಗಾ ದಶಪ್ರಹಣಧಾರಿಣೀ
ಕಮಲಾ ಕಮಲದಲವಿಹಾರಿಣೀ
ವಾಣೀ ವಿದ್ಯಾದಾಯಿನೀ
ನಮಾಮಿ ತ್ವಾಂ ।
ನಮಾಮಿ ಕಮಲಾಂ
ಅಮಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ
ವಂದೇ ಮಾತರಂ॥
ಶಾಮಲಾಂ ಸರಲಾಂ
ಸುಸ್ಮಿತಾಂ ಭೂಷಿತಾಂ
ಧರಣೀಂ ಭರಣೀಂ
ಇದು ‘ವಂದೇ ಮಾತರಂ’ ಗೀತೆಯ ಪೂರ್ಣ ಪಾಠ. ಇದು ಬಂಗಾಲಿ ಮತ್ತು ಸಂಸ್ಕೃತ ಭಾಷೆಗಳ ಮಿಲನದಿಂದ ಹುಟ್ಟಿಕೊಂಡ ಗೀತೆ. ತಾಯಿಗೆ ವಂದಿಸುತ್ತಾ ದೇಶದ ವರ್ಣನೆ ಮಾಡುವ ಸೊಗಸಾದ ಗೀತೆ ಇದು. ತಾಯಿಗೆ ವಂದಿಸುವೆ ಎಂಬರ್ಥವೇ ಈ ಹಾಡಿನ ಪಲ್ಲವಿ. ೬ ಚರಣಗಳ ಈ ಗೀತೆಯಲ್ಲಿ ಮೊದಲೆರಡು ಚರಣಗಳು ಭಾರತದ ನದಿ, ಗಿರಿ, ಪುಷ್ಪಲತೆ ಪ್ರಕೃತಿಯ ಸೊಬಗು ಹೀಗೆ ಬಾಹ್ಯ ಸೌಂದರ್ಯವನ್ನು ವರ್ಣಿಸಿದರೆ, ನಂತರದ ನಾಲ್ಕು ಚರಣಗಳಲ್ಲಿ ಭಾರತ ಮಾತೆಯನ್ನು ದುರ್ಗೆ, ಲಕ್ಷ್ಮಿ, ಸರಸ್ವತಿಯ ಸ್ವರೂಪವೆಂದು ಬಣ್ಣಿಸಲಾಗಿದೆ. ಕೊನೆಯ ಚರಣ ಭಾರತ ಮಾತೆಯನ್ನು ಪ್ರಾಂಜಲೆ, ಸರ್ವ ಸಂಪನ್ಮೂಲೆ ಎಂದು ಹೋಲಿಕೆ ಮಾಡಲಾಗಿದೆ.
(ಮುಂದಿನ ಸಂಚಿಕೆಯಲ್ಲಿ ದೇಶಾದ್ಯಂತ ವಂದೇ ಮಾತರಂ ಹಚ್ಚಿದ ಕಿಚ್ಚು, ವಂದೇ ಮಾತರಂ ಭಾರತದ ರಾಷ್ಟ್ರ ಗೀತೆ ಆಗದ ಹಿನ್ನಲೆ, ವಂದೇ ಮಾತರಂ ಗೀತೆಯ ವಿವಾದಗಳು ಮೊದಲಾದ ವಿಷಯ)
(ಆಧಾರ ಮಾಹಿತಿ)
ಚಿತ್ರ ಕೃಪೆ: ಅಂತರ್ಜಾಲ ತಾಣ