ದೇಶೀಯ ಹಸುಗಳ ಸಾಕಣೆ ಅಗತ್ಯ...

ದೇಶೀಯ ಹಸುಗಳ ಸಾಕಣೆ ಅಗತ್ಯ...

ಸಾವಯವ ಬೇಸಾಯದಲ್ಲಿ ರೈತರು ಯಶಸ್ಸು ಗಳಿಸಬೇಕಾದರೆ ಮನೆಮನೆಯಲ್ಲಿ ದೇಶೀಯ ಹಸುಗಳ ಸಾಕಣೆ ಅಗತ್ಯ ರಾಜ್ಯದಲ್ಲಿ ಎಲ್ಲೆಡೆ ಸಾವಯವ ಕೃಷಿಯನ್ನು ಜನಪ್ರಿಯಗೊಳಿಸಲು ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಸಾವಯವ ಕೃಷಿ ಮಿಷನ್ ಎಂಬ ಸಂಸ್ಥೆಯನ್ನು ಈ ಹಿಂದೆಯೇ ಪ್ರಾರಂಭಿಸಿದೆ. ಬಜೆಟ್‌ನಲ್ಲೂ ಸಾವಯವ ಕೃಷಿಗೆ ಉತ್ತೇಜನ ನೀಡಲಾಗುತ್ತಿದೆ.

ಆದರೆ ಸಾವಯವ ಕೃಷಿಗೆ ಇಂದು ಬಹುಮುಖ್ಯವಾಗಿ ಬೇಕಾದ ಸಗಣಿ, ಗಂಜಲ ಇವುಗಳೆಲ್ಲಾ ಇಂದು ದೊರೆಯುತ್ತಿರುವುದು ವಿದೇಶಿ ತಳಿ ಹಸುಗಳಿಂದ.  ಇದರಲ್ಲಿ ಯಾವುದೇ ಫಲಿತಾಂಶವಿರುವುದಿಲ್ಲ. ಆದುದ್ದರಿಂದ ನಮ್ಮ ಭೂಮಿಯಲ್ಲಿ ಫಲಭರಿತ ಮತ್ತು ಸಮೃದ್ಧಿಯಾದ ಬೆಳೆ ಬೇಕಾದಲ್ಲಿ ದೇಶೀಯ ತಳಿಯ ಹಸುಗಳನ್ನು ಸಾಕಲು ಸರ್ಕಾರವು ರೈತರಿಗೆ ಪ್ರೋತ್ಸಾಹವನ್ನು ನೀಡಬೇಕು ಹಾಗೂ ರೈತರು ಈ ಹಸುಗಳನ್ನು ಸಾಕಲು ಮನಸ್ಸು ಮಾಡಬೇಕಾದ ಅನಿವಾರ್ಯತೆ ಬಂದಿದೆ.  

ಇಂದು ಕೃಷಿ ತಜ್ಞರು, ಅಧಿಕಾರಿಗಳು, ಕೃಷಿಪಂಡಿತರು, ಸಾವಯವ ಮಿಷನ್ ಹೇಳುವುದೇ ಸಾವಯವ ಬೇಸಾಯಕ್ಕೆ ನಾಡ ಹಸುಗಳ ಗಂಜಲ, ಸಗಣಿಯಿಂದ ಜೀವಾಮೃತ, ಪಂಚಗವ್ಯವನ್ನು ಉಪಯೋಗಿಸಿ ಎಂಬ ಸಂದೇಶ ನೀಡುತ್ತಿದ್ದಾರೆ.  ಈಗ ರಾಜ್ಯದ ಹಳ್ಳಿಹಳ್ಳಿಗಳಲ್ಲಿ ಇರುವ ಪಶುಚಿಕಿತ್ಸಾಲಯಗಳಲ್ಲಿ ವಿದೇಶಿ ತಳಿಗಳಾದ ಹೆಚ್.ಎಫ್. ಜರ್ಸಿ ತಳಿಗಳ ವೀರ್ಯ ನಳಿಕೆ ಬಿಟ್ಟರೆ ದೇಶೀಯ ತಳಿಯ ವೀರ್ಯ ಸಿಗುತ್ತಿಲ್ಲ. ರೈತರು ಪಶು ಆಸ್ಪತ್ರೆಗೆ ಕೃತಕ ಗರ್ಭಧಾರಣೆಗೆ ದೇಶೀಯ ತಳಿ ಹಸುವಿನ ವೀರ್ಯ ಕೊಡಿ ಎಂದರೆ ವೈದ್ಯರು ಅವರ ಮನಃಪರಿವರ್ತನೆ ಮಾಡಿ ವಿದೇಶಿ ತಳಿಗಳ ಹಸುಗಳ ವೀರ್ಯದಾನ ಮಾಡಿಸುತ್ತಿದ್ದಾರೆ. ಹೀಗಾದರೆ ಸಾವಯವ ಬೇಸಾಯ ಹೇಗೆ ಎಂಬುದು ಎಲ್ಲರ ಚಿಂತೆ. ಈ ದಿನ ರೈತರಿಗೆ ಹಾಲಿನ ಡೈರಿ ಇದ್ದ ಕಡೆ ವಿದೇಶೀ ತಳಿಗಳ ವೀರ್ಯವನ್ನು ಮಾಡಿಸಲಿ.  ಆದರೆ ಹಳ್ಳಿಹಳ್ಳಿಗಳಲ್ಲಿ ಕೃಷಿ ರೈತರಿಗೆ ಹಾಲು ಮತ್ತು ಸಗಣಿ ಎರಡರಲ್ಲೂ ಲಾಭ ಬರುವಂತೆ ಚಿಂತಿಸಬೇಕಾಗಿದೆ. ಈಗಾಗಲೇ ಶಿವಮೊಗ್ಗ, ಮಂಗಳೂರು, ಉಡುಪಿ ಜಿಲ್ಲೆಯ ಭಾಗಗಳಲ್ಲಿ ದೇಶಿಯ ಹಸುಗಳಾದ ರೆಡ್‌ಸಿಂಧಿ, ಗೀರ್, ದೇವಾಣಿ ಎಂಬ ಉತ್ತಮ ತಳಿಗಳ ವೀರ್ಯವನ್ನು ಪಶುಪಾಲನೆ ಇಲಾಖೆಯ ವೈದ್ಯರು ನೀಡುತ್ತಿರುವುದರಿಂದ ಆ ಭಾಗದ ರೈತರ ಮುಖದಲ್ಲಿ ಸಂತೋಷವನ್ನು ಕಾಣುವಂತಾಗಿದೆ. ಅಲ್ಲದೇ ಈ ದೇಶೀಯ ತಳಿಗಳು ದಿನಕ್ಕೆ ೧೦-೧೫ ಲೀಟರ್ ಹಾಲು ನೀಡುತ್ತಿದ್ದು, ಒಂದೇ ಬಾರಿಗೆ ೫ ಲೀಟರ್ ಗೋಮೂತ್ರ ನೀಡುತ್ತವೆ ಎನ್ನುತ್ತಾರೆ. ಈಗ ಹಾಲಿನಿಂದಲೂ ಲಾಭ ಮತ್ತು ಸಗಣಿ-ಗಂಜಲದಿಂದಲೂ ಲಾಭ ಅಲ್ಲವೇ? ಈ ರೀತಿಯ ಸೌಲಭ್ಯ ರಾಜ್ಯದ ಎಲ್ಲೆಡೆ ಇರುವ ಪಶುಪಾಲನ ಇಲಾಖೆಯಿಂದ ದೇಶೀ ತಳಿಗಳ ವೀರ್ಯನಳಿಕೆ ಹಳ್ಳಿಹಳ್ಳಿಗಳಲ್ಲೂ ಸಿಗುವಂತಾಗಬೇಕು. ಆಗ ಮಾತ್ರ ರೈತರ ಆರ್ಥಿಕ ಮಟ್ಟ ಸುಧಾರಿಸುತ್ತದೆ.

ಆದ್ದರಿಂದ ಸರ್ಕಾರವು ಈ ವಿಚಾರವಾಗಿ ಗಂಭೀರವಾಗಿ ಚಿಂತನೆ ಮಾಡಬೇಕು. ಇಲ್ಲದಿದ್ದರೆ ಸಾವಯವ ಬೇಸಾಯ ರೈತರ ಸಾಯುವ ಬೇಸಾಯವಾಗುತ್ತದೆ. ಹೀಗಾಗಬಾರದು ಎಂಬ ಕಳಕಳಿ ವಿಚಾರವನ್ನು ಸರ್ಕಾರದ ಗಮನಕ್ಕೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಸಾವಯವ ಕೃಷಿಕರು, ಸಾವಯವ ಕೃಷಿ ಮಿಷನ್ ಸದಸ್ಯರು, ಪ್ರತಿಯೊಬ್ಬರು ಈ ಹೋರಾಟದಲ್ಲಿ ಭಾಗಿಗಳಾಗಬೇಕು.

-ಅರವಿಂದ್ ಭೂತನಕಾಡು, ಚಿಕ್ಕಮಗಳೂರು

ಚಿತ್ರ : ಇಂಟರ್ನೆಟ್ ತಾಣ