ದೇಶ ಮೊದಲೋ ? ಪ್ರಜೆಗಳು ಮೊದಲೋ…?

ದೇಶ ಮೊದಲೋ ? ಪ್ರಜೆಗಳು ಮೊದಲೋ…?

ಈ ಪ್ರಶ್ನೆಗೆ ನಿಮ್ಮ ಅಂತರಾಳದ, ನಡವಳಿಕೆಯ ಮತ್ತು  ಸ್ಪಷ್ಟ ಅಭಿಪ್ರಾಯ ನೀವು ಎಡಪಂಥೀಯರೋ ಅಥವಾ ಬಲಪಂಥೀಯರೋ ಅಥವಾ ಸಮಷ್ಟಿ ಪ್ರಜ್ಞೆಯ ಜೀವಪರ ನಿಲುವಿನವರೋ ಎಂದು ಅರ್ಥಮಾಡಿಕೊಳ್ಳಲು ಸ್ವತಃ ನಿಮಗೆ ಸಹಾಯ ಮಾಡುತ್ತದೆ.

ಏನು ಹಾಗೆಂದರೆ ? ಎರಡೂ ಒಂದೇ ಅಲ್ಲವೇ ? ದೇಶವಿಲ್ಲದೆ ಜನರಿಲ್ಲ. ಜನರಿಲ್ಲದೆ ದೇಶವಿಲ್ಲ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಆದರೆ ಖಂಡಿತವಾಗಿಯೂ ಈ ಎರಡೂ ವಿಭಿನ್ನ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತದೆ. ಇದರ ಅರ್ಥ ತಿಳಿಯುವ ಮೊದಲು ಇದರ ಪ್ರಬಲ ಪ್ರತಿಪಾದಕರನ್ನು ಗಮನಿಸೋಣ. ದೇಶ ಮೊದಲು ಎನ್ನುವವರು ಬಲಪಂಥೀಯರು. ಅಂದರೆ ಭಾರತದಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ಪಕ್ಷ. ಜನರು ಮೊದಲು ಎನ್ನುವವರು ಕಮ್ಯೂನಿಸ್ಟ್ರರು, ಕಾಂಗ್ರೆಸ್ ಮತ್ತು ಜಾತ್ಯಾತೀತ ನಿಲುವಿನವರು.

ಬಲಪಂಥೀಯರು ಪ್ರತಿ ವಿಷಯದಲ್ಲೂ ದೇಶವೇ ಮುಖ್ಯ ಎನ್ನುತ್ತಾರೆ. ನನ್ನ ದೇಶ ಬಲಿಷ್ಠವಾಗಬೇಕು, ವಿಶ್ವ ಗುರುವಾಗಬೇಕು, ದೇಶ ಶಕ್ತಿಯುತವಾಗಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ, ಏಕ್ ಭಾರತ್ ಶ್ರೇಷ್ಠ್ ಭಾರತ್, ಜನರಿಗೆ ಸ್ವಲ್ಪ ತೊಂದರೆಯಾದರೂ ಪರವಾಗಿಲ್ಲ ದೇಶಕ್ಕೆ ಏನೂ ತೊಂದರೆಯಾಗಬಾರದು. ಸೈನ್ಯ, ಆಯುಧ, ದೇವರು, ಧರ್ಮ ಹೀಗೆ ಇವುಗಳ ಸುತ್ತಲೇ ಅವರ ಮಾತುಗಳು  ಸುತ್ತುತ್ತವೆ. ಈಗಿನ ಪ್ರಧಾನಿ ನರೇಂದ್ರ ಮೋದಿಯವರು, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಇತ್ಯಾದಿಗಳು ಇದಕ್ಕೆ ಅತ್ಯುತ್ತಮ ಉದಾಹರಣೆ.

ಎಡಪಂಥೀಯ ಚಿಂತಕರದು ಇದಕ್ಕೆ ಭಿನ್ನ ಅಭಿಪ್ರಾಯ ಹೊಂದಿದ್ದಾರೆ. ಅವರ ಪ್ರತಿ ಮಾತಿನಲ್ಲೂ ಪ್ರಜೆಗಳು, ಶೋಷಣೆ, ಸಮಾನತೆ, ಮಾನವೀಯತೆ, ಜನರ ಯೋಗಕ್ಷೇಮ ಇವುಗಳ ಸುತ್ತಲೇ ಸುತ್ತುತ್ತವೆ. ದೇಶಕ್ಕೆ ಸ್ವಲ್ಪ ತೊಂದರೆ ಆದರೂ ಪರವಾಗಿಲ್ಲ, ಜನರ ಹಿತಾಸಕ್ತಿಯೇ ಮುಖ್ಯ ಎನ್ನುತ್ತಾರೆ. ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಸೀತಾರಾಂ ಯಚೂರಿ ಮುಂತಾದವರು ಇದಕ್ಕೆ ಉತ್ತಮ ಉದಾಹರಣೆ.

ಈಗ ಇದರ ಸರಳ ಅರ್ಥ ತಿಳಿಯಲು ಪ್ರಯತ್ನಿಸೋಣ. ದೇಶವನ್ನು ಬಲಿಷ್ಠ ಮಾಡಿ ಆ ಮುಖಾಂತರ ಜನರನ್ನು ಸುಖವಾಗಿಡುವುದು ಬಲಪಂಥೀಯರ ಚಿಂತನೆ, ಜನರನ್ನು ಬಲಿಷ್ಠ ಮಾಡಿ ಆ ಮುಖಾಂತರ ದೇಶವನ್ನು ಅಭಿವೃದ್ಧಿ ಮಾಡುವುದು ಎಡಪಂಥೀಯರ ಚಿಂತನೆ.

ಹಾಗೆಯೇ ಜನ ಹಾಳಾದರೂ ಪರವಾಗಿಲ್ಲ ದೇಶಕ್ಕೆ ಒಳ್ಳೆಯ ಹೆಸರು ಬರಬೇಕು ಎಂಬ ಆಲೋಚನೆ ಬಲಪಂಥೀಯರದು, ದೇಶ ಹಾಳಾದರೂ ಪರವಾಗಿಲ್ಲ ಜನರು ಸಂತೋಷದಿಂದ ಇರಬೇಕು ಎಂಬುದು ಎಡಪಂಥೀಯರ ಆಲೋಚನೆ. ಇಲ್ಲೇ ಅಡಗಿರುವುದು ಸೂಕ್ಷ್ಮತೆ. ಸಾಮಾನ್ಯವಾಗಿ, ಜಾತಿ ಹಣ ಶಿಕ್ಷಣದ ಮೇಲ್ವರ್ಗದವರು ಬಲಪಂಥದ ಕಡೆಗೂ, ಬಡವರು, ಹಿಂದುಳಿದವರು, ದಲಿತರು, ಅನಕ್ಷರಸ್ಥರು ಅಥವಾ ಕಡಿಮೆ ಓದಿರುವವರು ಎಡಪಂಥದ ಕಡೆಗೂ ವಾಲಿರುತ್ತಾರೆ. ( ಕೆಲವು ಅಪರೂಪದ ಅಪವಾದ ಹೊರತುಪಡಿಸಿ )

ಬಲಪಂಥದವರು ಪ್ರತಿಭೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟರೆ, ಎಡಪಂಥೀಯರು ಶ್ರಮಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಅಂದರೆ, ದೇಶ ಕೇಂದ್ರೀಕೃತ ಅಭಿವೃದ್ಧಿ ದೇಶ ಮೊದಲು ಎನ್ನುವವರ ಅಭಿಪ್ರಾಯ ಮತ್ತು ಪ್ರಜೆಗಳ ಕೇಂದ್ರೀಕೃತ ಅಭಿವೃದ್ಧಿ ಜನ ಮೊದಲು ಎನ್ನುವವರ ಅಭಿಪ್ರಾಯ. ಒಂದು ದೇಶದ ಸಮಗ್ರ ಅಭಿವೃದ್ಧಿಗೆ ಎರಡೂ ಮುಖ್ಯ. ಇವುಗಳ ನಡುವೆ ಸಮನ್ವಯ ಸಾಧಿಸಬೇಕಿದೆ. ಆದರೆ ಸದ್ಯದ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಇದು ತುಂಬಾ ಕಷ್ಟವಾಗಿದೆ. ಬಹುಮತದ ಚುನಾವಣಾ ವ್ಯವಸ್ಥೆಯಲ್ಲಿ ನಾವಿರುವುದರಿಂದ ಎಡಕ್ಕೋ ಬಲಕ್ಕೋ ನೀವು ಚಲಿಸಲೇ ಬೇಕಾದ ಅನಿವಾರ್ಯ ಪರಿಸ್ಥಿತಿಗೆ ಸಿಲುಕಿದ್ದೇವೆ. ನೀವು ಸತ್ಯವನ್ನೇ ಹೇಳಿದರೂ ರಾಜಕೀಯ ಕಾರಣಗಳಿಗಾಗಿ ಅದರಲ್ಲಿ ಎಡ ಬಲಗಳ ಹುಡುಕಾಟ ನಡೆಯುತ್ತದೆ. ಹೊಂದಾಣಿಕೆ, ಸಹಕಾರ, ಸಮನ್ವಯ, ವಾಸ್ತವ ಮರೆಯಾಗಿದೆ. ಈ ಗೊಂದಲದಲ್ಲಿ ದೇಶವೂ ನರಳುತ್ತಿದೆ, ಜನರೂ ನರಳುತ್ತಿದ್ದಾರೆ.

ಅಮೆರಿಕ ಚೀನಾ ಯೂರೋಪಿಯನ್ ಮುಂತಾದ ದೇಶಗಳಲ್ಲಿ ಜನರನ್ನು ಬಲಿಷ್ಠರನ್ನಾಗಿ ಮಾಡಿ ಆ ಮೂಲಕ ಪ್ರಬಲ ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಉತ್ತರ ಕೊರಿಯಾ, ಇರಾನ್, ಯುಎಇ, ಕೆಲವು ಅರಬ್ ದೇಶಗಳಲ್ಲಿ ರಾಷ್ಟ್ರವನ್ನು ಮೊದಲು ಬಲಿಷ್ಠಗೊಳಿಸಿ ಆ ಮುಖಾಂತರ ಜನರನ್ನು ಅಭಿವೃದ್ಧಿಪಡಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಕೆಲವು ಗೊಂದಲಗಳಿವೆ. ಅಮೆರಿಕ ಮತ್ತು ಚೀನಾ ದೇಶವನ್ನು ಈ ವಿಷಯದಲ್ಲಿ ಒಂದೇ ತಕ್ಕಡಿಯಲ್ಲಿ ಇಟ್ಟಿರುವುದು ಕೆಲವರಿಗೆ ತಪ್ಪು ಎನಿಸಬಹುದು. ಚೀನಾ ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ. ಆದರೆ ಅನೇಕ ವಿಷಯಗಳಲ್ಲಿ ಜನ ಮೊದಲು ಎಂಬ ಮೂಲ ಆಶಯ ಹೊಂದಿದೆ. ಉತ್ತರ ಕೊರಿಯಾ ಕಮ್ಯುನಿಸ್ಟ್ ದೇಶವಾದರೂ ದೇಶ ಮೊದಲು ಎನ್ನುವ ಧೋರಣೆ ಹೊಂದಿದೆ. ಬಹುಶಃ ಅಲ್ಲಿನ ಸರ್ವಾಧಿಕಾರಿಯ ಕಾರಣಕ್ಕಾಗಿ ಇರಬಹುದು.

ಸ್ವಾತಂತ್ರ್ಯ ನಂತರ ಜವಾಹರಲಾಲ್ ನೆಹರು ಅವರು ಇದನ್ನು ಗಮನಿಸಿಯೇ  ದೇಶ ಮತ್ತು ಜನರ ಸಹಬಾಗಿತ್ವದ ಆಡಳಿತ ನಡೆಸಿದರು. ಪ್ರಾರಂಭದಲ್ಲಿ ಯಶಸ್ವಿಯಾದ ಇದು ನಂತರದಲ್ಲಿ ಶಿಥಿಲವಾಯಿತು. ನರಸಿಂಹರಾವ್ ಕಾಲದಲ್ಲಿ ಜಾಗತೀಕರಣದ ಪ್ರಭಾವದಿಂದಾಗಿ ಖಾಸಗೀಕರಣ ಮಹತ್ವ ಹೆಚ್ಚಾಗಿ ನಂತರ ಆಡಳಿತ ನಡೆಸಿದವರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ದೇಶ ಮೊದಲು ಎಂಬ ಧೋರಣೆ ಹೊಂದಿದ್ದರು. ಮನಮೋಹನ್ ಸಿಂಗ್ ಅವರು ಮಾನವೀಯ ಮುಖದ ಅಭಿವೃದ್ಧಿ ಎಂದು ಹೇಳಿದರಾದರೂ ಅದು ಆಡಳಿತಾತ್ಮಕವಾಗಿ ಯಶಸ್ವಿಯಾಗಲಿಲ್ಲ.

ಈ ಕಾಲಘಟ್ಟದಲ್ಲಿ ದೇಶ ಮೊದಲು ಎಂಬುದು ಭವಿಷ್ಯದ ಭಾರತಕ್ಕೆ ಅಪಾಯಕಾರಿ, ಹಾಗೆಯೇ ಜನ ಮೊದಲು ಎಂದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶ ಅಭಿವೃದ್ಧಿ ಹೊಂದಲು  ಕಷ್ಟವಾಗುತ್ತದೆ. ಈ ಎರಡರ ಸಮನ್ವಯ ಬಹುಮುಖ್ಯ.

ಹೃದಯವಂತ ನಾಯಕನೊಬ್ಬ ಈ ಮಣ್ಣಿನ ಗುಣವನ್ನು ಸರಿಯಾಗಿ ಅರ್ಥಮಾಡಿಕೊಂಡಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ. ಭಾರತದ ನಿಜವಾದ ಶಕ್ತಿ ಸಾಮರ್ಥ್ಯ ಅರ್ಥವಾಗಬೇಕಾದರೆ ಇಲ್ಲಿನ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಬೇಕು. ಮೇಲ್ನೋಟದ ಪರದೆ ಸರಿಸಿದಾಗ ಸಿಗುವ ಒಳನೋಟ ವಾಸ್ತವ ಗ್ರಹಿಸಬೇಕು. ಆಗ ಮಾತ್ರ ಸಂಪೂರ್ಣ ಚಿತ್ರಣ ಸಿಗುತ್ತದೆ. ಒಣ ಭಾಷಣಕಾರರು, ಅಂಕಣಕಾರರು ನೋಡಿರುವುದು ಮೇಲ್ನೋಟದ ಭಾರತ ಮಾತ್ರ. ಅಲ್ಲಿಯವರೆಗೂ ಕೆಲವು ವರ್ಗಗಳ ಅತೃಪ್ತಿ, ಅಸಹನೆ, ಕೋಪ, ಆಕ್ರೋಶ ನಿರಂತರವಾಗಿರುತ್ತದೆ. ಇದೊಂದು ‌ಸರಳ ಸಾಮಾನ್ಯ ನಿರೂಪಣೆ. ಆಳದಲ್ಲಿ ಇನ್ನೂ ಸಾಕಷ್ಟು ಅಡಗಿದೆ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ