ದೊಡ್ಡ ಜನ ನಾವು

ದೊಡ್ಡ ಜನ ನಾವು

ಬರಹ

ದೊಡ್ಡವರು ನಾವು
ದಡ್ಡ ಜನರಲ್ಲ

ಚುನಾವಣೆಯು ಮತ್ತೆ ಬಂದಾಗ
ಮಾಡುವೆವು ಯಾತ್ರಗಳನು
ಮತಗಳ ಪಡೆಯಲು, ನಾವು
ನೀಡುವೆವು ಸುಳ್ಳು ಮಾತುಗಳನು.

ನೀರಿಲ್ಲವೇ? ಎನಾಯ್ತು?
ಸಾರಾಯಿ ಹರಿಸುವೆವು
ಮಳೆ ಇಲ್ಲವೆ? ಎನಾಯ್ತು?
ನೆಡುತೋಪು ನೆಡಿಸುವೆವು.

ಜಾಡಿಲ್ಲದೂರುಗಳಿಗೆ
ಗಾಡಿಗಳ ಬಿಡಿಸುವೆವು
ಕಂಬಿ ಇಲ್ಲದಿದ್ದರೇನಂತೆ
ಉಗಿ ಬಂಡಿ ಓಡಿಸುವೆವು

ಹೊಳೆ ಹರಿಯದೂರಿನಲಿ
ಕಟ್ಟೆಯನು ಕಟ್ಟುವೆವು
ಬರ ಬಿದ್ದ ಊರನ್ನು
ತಿರುಗಿ ನೋಡೆವು ನಾವು

ಒಂದಿದ್ದ ಊರನ್ನು
ಎರಡು ಮಾಡುವೆವು
ಜನ-ಜನಗಳ ನಡುವೆ
ಹಡೆದಾಟವನು ಹೂಡುವೆವು

ಪರನಾಡಿಗೋಗಿ ಸಾಲವನು ತಂದು
ತಂದುದರಲರ್ಧ ನಾವೇ ತಿಂದು
ಏಳ್ಗೆಯ ನೆವದಲ್ಲಿ, ಸಾಲದಲಿ ಮುಳುಗಿಸುವೆವು
ನಾವ್ ತೋಯ್ದೆ ಮಿಂದು

ಇರುವ ಕಾಡನು ಕಡಿಸಿ
ನಗರಗಳ ಬೆಳೆಸಿ
ಮೆರೆಯುವೆವು ನಾವು
ನಮ್ಮತನು ಅಳಿಸಿ

ದೊಡ್ಡವರು ನಾವು
ದಡ್ಡ ಜನರಲ್ಲ

-ಜಯಪ್ರಕಾಶ ನೇವಾರ ಶಿವಕವಿ.