ದ ಆಲ್ ಕೆಮಿಸ್ಟ್

ದ ಆಲ್ ಕೆಮಿಸ್ಟ್

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ : ಪಾಲೋ ಕೊಯೆಲ್ಹೋ ಕನ್ನಡಕ್ಕೆ: ಕಿರಣ್ ಕುಮಾರ್ ಟಿ.ಪಿ.
ಪ್ರಕಾಶಕರು
ಅನುಭವ ಪ್ರಕಾಶನ, ಅಲಿ ಅಸ್ಕರ್ ರಸ್ತೆ, ಬೆಂಗಳೂರು- ೫೬೦೦೫೨
ಪುಸ್ತಕದ ಬೆಲೆ
ರೂ. ೫೦.೦೦, ಮುದ್ರಣ : ೨೦೦೩

ಆಂಗ್ಲ ಬರಹಗಾರ ಪಾಲ್ ಕೊಯೆಲ್ಹೋ ಬರೆದ ದಿ ಆಲ್ ಕೆಮಿಸ್ಟ್ ಎಂಬ ಇಂಗ್ಲೀಷ್ ಪುಸ್ತಕದ ಮಾಹಿತಿಯನ್ನು ‘ಸಂಪದ’ದಲ್ಲಿ ಬಹಳ ಹಿಂದೆ ನೀವು ಗಮನಿಸಿರಬಹುದು. ಈ ಪುಸ್ತಕ ಅದರದ್ದೇ ಕನ್ನಡ ಅನುವಾದ. ಕನ್ನಡ ಮಾತ್ರ ಬಲ್ಲವರಿಗೆ ಅರ್ಥವಾಗುವಂತೆ ಸರಳವಾಗಿ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ ಕಿರಣ್ ಕುಮಾರ್ ಅವರು.

ಈ ಪುಸ್ತಕದ ಬೆನ್ನುಡಿಯಲ್ಲಿ ಲೇಖಕರು ಬರೆಯುತ್ತಾರೆ. ‘ಓದುಗರ ಜೀವನವನ್ನು ಶಾಶ್ವತವಾಗಿ ಬದಲಾಯಿಸುವಂತಹ ಪುಸ್ತಕಗಳು ದಶಕಗಳಲ್ಲಿ ಒಮ್ಮೆ ಪ್ರಕಟಗೊಳ್ಳುತ್ತವೆ. ಪಾಲೋ ಕೊಯೆಲ್ಹೋರವರ ‘ದ ಆಲ್ಕಮಿಸ್ಟ್' ಅಂತಹ ಒಂದು ಪುಸ್ತಕ. ವಿಶ್ವದಾದ್ಯಂತ ವಿವಿಧ ಭಾಷೆಗಳಲ್ಲಿ ೨೦ ದಶಲಕ್ಷಗಳಿಗಿಂತಲೂ ಅಧಿಕ ಪ್ರತಿಗಳು ಮಾರಾಟವಾಗಿರುವ ‘ದ ಆಲ್ಕಮಿಸ್ಟ್' ಸಾರ್ವಕಾಲಿಕ ಉತ್ಕೃಷ್ಟ ಸಾಹಿತ್ಯ ಕೃತಿಯಾಗಿದೆ.

ಪ್ರಪಂಚವನ್ನೆಲ್ಲಾ ಸುತ್ತಾಡಿ, ಕನಸಿನಲ್ಲಿ ಕಂಡ ಗುಪ್ತ ನಿಧಿಯೊಂದನ್ನು ಅನ್ವೇಷಿಸ ಬಯಸುವ ಆಂಡಲೂಸಿಯಾದ ಕುರಬ ಯುವಕ ‘ಸ್ಯಾಂಟಿಯಾಗೋ’ನ ವಿಸ್ಮಯಕಾರಿ ಕಥೆ ಇದು. ತನ್ನ ಊರಾದ ಸ್ಟಯಿನ್ ನಿಂದ ಹೊರಟು ಈತ ಟ್ಯಾಂಜಿಯರ್ ನ ಮಾರುಕಟ್ಟೆಗಳ ಮೂಲಕ ಪಯಣಿಸಿ, ಈಜಿಪ್ಟ್ ನ ಮರುಭೂಮಿಯನ್ನು ದಾಟುತ್ತಿರುವಾಗ ವಿಧಿ ನಿಯೋಜಿಸಿದಂತೆ ಈತನ ಭೇಟಿ ಆಲ್ಕಮಿಸ್ಟ್ (ರಸಜ್ಞ) ನೊಂದಿಗೆ ಆಗುತ್ತದೆ.

ನಮ್ಮ ಹೃದಯದ ಪಿಸುನುಡಿಗಳನ್ನು ಆಲಿಸುವ ಮೂಲಭೂತ ವಿವೇಕವನ್ನು, ಜೀವನ ಪಥದಲ್ಲಿ ಹರಡಿರುವ ಶಕುನಗಳನ್ನು ಗುರುತಿಸುವ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವುದನ್ನು ‘ದ ಅಲ್ಕೆಮಿಸ್ಟ್' ಕಲಿಸುತ್ತದೆ. ರಸವಿದ್ಯೆಯ ಪಥದಲ್ಲಿ ವ್ಯಕ್ತಿ ವಿಕಾಸ ಸೂತ್ರಗಳನ್ನು ನಿರೂಪಿಸುವ ಪುಸ್ತಕ ಇದು.’

ಆಕರ್ಷಕ ಮುಖಪುಟವನ್ನು ಹೊಂದಿರುವ ಈ ಪುಸ್ತಕವು ಸುಮಾರು ೧೭೦ ಪುಟಗಳನ್ನು ಹೊಂದಿದೆ.