ಧರ್ಮರಾಜ ಮೊದಲು ಸೋತಿದ್ದು 'ತನ್ನನ್ನೋ' ಅಥವಾ 'ನನ್ನನ್ನೋ'?

ಧರ್ಮರಾಜ ಮೊದಲು ಸೋತಿದ್ದು 'ತನ್ನನ್ನೋ' ಅಥವಾ 'ನನ್ನನ್ನೋ'?

ಬರಹ

ನಿಮಗೆಲ್ಲಾ ಈ ವಾಕ್ಯ ಎಲ್ಲಿಯದು ಎಂಬುದನ್ನು ತಿಳಿಸುವ ಅಗತ್ಯ ಇಲ್ಲವೆಂದುಕೊಂಡಿದ್ದೇನೆ......
ನಾನು ತುಂಬಾ ಚಿಕ್ಕವಳಿದ್ದಾಗ 'ಮಹಾಭಾರತ' ಸಾಪ್ತಾಹಿಕ ಧಾರಾವಾಹಿಯನ್ನು ನೋಡಿದ್ದು. ಹಿಂದಿಯ ಗಂಧಗಾಳಿ ಇಲ್ಲದಿದ್ದರೂ ಏನೋ ಒಂದು ಅರ್ಥವಾಯ್ತು ಎಂದುಕೊಂಡುಬಿಟ್ಟಿದ್ದೆ. ಮಹಾಭಾರತವನ್ನು ಮತ್ತೊಮ್ಮೆ ನೋಡುವ ಕುತೂಹಲ ಮೂಡಿ ನೋಡತೊಡಗಿದವಳಿಗೆ ಮೊನ್ನೆ ನೋಡಿದ 48ನೇ ಕಂತಿನಲ್ಲಿ ದ್ಯೂತದಲ್ಲಿ ಧರ್ಮರಾಜ ಸೋತ ನಂತರ ದುಶ್ಯಾಸನ ದ್ರೌಪದಿಯ ಕೂದಲಿಡಿದು ಸಭೆಯ ಮಧ್ಯಕ್ಕೆ ಎಳೆತಂದಾಗ ದ್ರೌಪದಿ ಭೀಷ್ಮರನ್ನು ಕೇಳುತ್ತಾಳೆ, 'ಧರ್ಮರಾಜ ದ್ಯೂತದಲ್ಲಿ ಮೊದಲು ತನ್ನನ್ನು ಸೋತನೋ ಅಥವಾ ನನ್ನನ್ನೋ' - ಭೀಷ್ಮರು ನೀನು ಇದನ್ನು ನಿನ್ನ ಗಂಡನನ್ನೇ ಕೇಳಿದರೆ ಒಳ್ಳೆಯದು ನಾನು ಗೊಂದಲದಲ್ಲಿದ್ದೇನೆ ಎನ್ನುತ್ತಾರೆ.ದ್ರೌಪದಿ,ಧರ್ಮರಾಜನಾದಿಯಾಗಿ ಅಲ್ಲಿ ಕುಳಿತಿದ್ದ ಹಿರಿಯರೆನಿಸಿದ್ದವರೆಲ್ಲರನ್ನೂ ಕೇಳುತ್ತಾಳೆ-'ಧರ್ಮರಾಜ ಮೊದಲು ಸೋತದ್ದು ತನ್ನನ್ನೋ ಅಥವಾ ನನ್ನನ್ನೋ' ಎಂದು........ಉಹೂಂ ಯಾರಿಂದಲೂ ಉತ್ತರವಿಲ್ಲ. ತಲೆಕೆಳಗೆ ಮಾಡಿ ಹಿರಿಯರೆಲ್ಲರೂ ಕುಳಿತುಬಿಡುತ್ತಾರೆ. ಕೊನೆಗೆ ದುಶ್ಯಾಸನ ಅವಳ ಸೀರೆಯನ್ನು ಸೆಳೆಯುತ್ತಾನೆ. ಆಗಲೂ ಹಿರಿಯರೂ,ಧರ್ಮಬೀರುಗಳೆನಿಸಿಕೊಂಡವರು ತಲೆಯೆತ್ತುವ ಅಥವಾ ಬಾಯಿಬಿಡುವ ಸಾಹಸವನ್ನೇ ಮಾಡುವುದಿಲ್ಲ. ಆಗ ಧರ್ಮರಾಜನ ನಾಲ್ವರು ತಮ್ಮಂದಿರು,ದ್ರೌಪದಿಯ ಗಂಡಂದಿರೆನಿಸಿಕೊಂಡವರು ಕೋಪದಿಂದ ಏಳುತ್ತಾರೆ. ಆಗ ಧರ್ಮರಾಯ ತನ್ನ ಎರಡೂ ಕೈಗಳಿಂದ ತಮ್ಮಂದಿರನ್ನು ತಡೆಯುತ್ತಾನೆ. ತನ್ನ ಧರ್ಮವನ್ನು ಕಾಪಾಡುವ ಸಲುವಾಗಿ.
ಹೆಂಡತಿಯನ್ನು ಒಂದು ವಸ್ತುವಿನಂತೆ,ಅವಳ ಅನುಮತಿಯೂ ಇಲ್ಲದೇ ಅವಳಿಗೆ ತಿಳಿಯಪಡಿಸುವ ಗೋಜಿಗೂ ಹೋಗದೇ ಅವಳನ್ನು ಪಣಕ್ಕಿಟ್ಟ ಮಹಾ ಧರ್ಮಿಷ್ಠನಾದ ಧರ್ಮರಾಯನದು ಯಾವ ಧರ್ಮ? ಕೊನೆಗೆ ಅವಳ ಮಾನ ಹೋಗುವಾಗ ತನ್ನ ಧರ್ಮಪಾಲನೆಗೆ ತೊಡಗುವ ಹೆಂಡತಿಯನ್ನು ಕಾಪಾಡಲಾಗದ ಅವನದು ಯಾವ ಧರ್ಮ?

ನಿನ್ನೆಯ ದಿನಪತ್ರಿಕೆಗಳನ್ನು ನೋಡತೊಡಗಿದಾಗ ಈ ಪ್ರಶ್ನೆ ಮತ್ತೆ ಕಾಡತೊಡಗಿತು...... ಏಕೆಂದರೆ ಅದರಲ್ಲಿ ಒಂದು ಸುದ್ದಿಯನ್ನು ನೋಡಿದೆ...ತುಂಬಾ ಬೇಸರವಾಯ್ತು.
ನಮ್ಮ ಘನತೆವೆತ್ತ ನ್ಯಾಯಾಲಯ 'ಉಗ್ರ ಕಸಬ್ ಮೇಲೆ ಸುಮಾರು ಕೇಸುಗಳನ್ನು ಹಾಕಿ ಇದಕ್ಕೆ ನೀನೇನು ಹೇಳುತ್ತೀಯ ಎಂದರೆ ಅವನು ಹೇಳುತ್ತಾನೆ, ಇದೆಲ್ಲಾ ಸುಳ್ಳು ನನ್ನ ಮೇಲೆ ಸುಳ್ಳು ಅಪರಾಧಗಳನ್ನು ಹೊರಿಸಲಾಗಿದೆಯೆಂದು.......ನಿನ್ನೆ ಪ್ರತ್ಯಕ್ಷದರ್ಶಿಗಳಾದ ಎ.ಎಸ್.ಐ ತುಕಾರಾಮ್ ಎಂಬುವರು ನಾವು ಇಸ್ಮಾಯಿಲ್ ಎಂಬುವವನಿಗೆ ಗುಂಡು ಹಾರಿಸಿದಾಗ ಕಸಬ್ ಕೂಡ ಬಿದ್ದವನಂತೆ ನಟಿಸಿದ, ಢೋಳೆಯವರು ಅವನ ಬಳಿಯಿದ್ದ ಎ.ಕೆ.47 ತೆಗೆದುಕೊಳ್ಳಲು ಹೋದರು. ಆಗ ಕಸಬ್ ಅವರ ಮೇಲೆ ಗುಂಡಿನ ಧಾಳಿ ಮಾಡಿದ. ನಂತರ ನಾವು ಅವನ ಮೇಲೆ ಧಾಳಿ ಮಾಡಿ ಅವನಿಂದ ಎ.ಕೆ.47 ಕಿತ್ತುಕೊಂಡೆವು ಎಂದು ಹೇಳಿಕೆ ನೀಡಿದ್ದಾರೆ. ಕಸಬ್ ಎಂತಹ ನಟ ಅಲ್ಲವೇ?ಧಾಳಿ ನಡೆದ ದಿನ ಪತ್ರಿಕೆಗಳು ಅವನ ಫೋಟೋವನ್ನು ಮುಖಪುಟದಲ್ಲಿ ಹಾಕಿ ತೋರಿಸಿದ್ದವು. ಅವನು ಧಾಳಿ ನಡೆಸುತ್ತಿರುವಾಗಲೇ ಸಿಕ್ಕಿಬಿದ್ದ. ಇವೆಲ್ಲಾ ಸಾಕ್ಷಿಗಳೂ ಸಾಲದೇ? ಧಾಳಿ ನಡೆದು ತಿಂಗಳುಗಳೇ ಕಳೆದ ನಂತರ ವಿಚಾರ ಮಾಡಿ, ಕಲಸುಮೇಲೋಗರವಾಗಿ ಅಂತೂ ಒಬ್ಬ ವಕೀಲನ ನೇಮಕ. ಈಗ ವಿಚಾರಣೆ ಆರಂಭ.
ನಾನು ಕಾನೂನು ಓದಿಲ್ಲ. ಸಾಮಾನ್ಯರಲ್ಲಿ-ಸಾಮಾನ್ಯಳಾಗಿ ಕೇಳುತ್ತೇನೆ,ವಿಚಾರಣೆಯ ಉದ್ದೇಶವೇನೂ? ಕಣ್ಣಾರೆ ಕಂಡ ಸಂಗತಿಗೆ ಮತ್ತೂ ವಿಚಾರಣೆಯ ಅಗತ್ಯವಿದೆಯೇ? ಈಗ ಆಗಬೇಕಾಗಿರುವುದು ಶಿಕ್ಷೆಯ ಪ್ರಮಾಣ ಮಾತ್ರವಲ್ಲವೇ? ಆದರೂ ಹೀಗೇಕೆ ನಮ್ಮ ಕಾನೂನು? ಇನ್ನು ವರ್ಷಗಳವರೆಗೆ ವಾದ-ವಿವಾದಗಳು- ಅಂತೂ ಕೊನೆಗೆ ಸತ್ತ ಜನರ ಮನೆಯವರ ನಿಟ್ಟುಸಿರು.ಸತ್ತ ವಿದೇಶೀಯರ ಸಂಬಂಧಿಗಳಂತೂ ಈ ದೇಶದಲ್ಲಿ ನ್ಯಾಯಕ್ಕಾಗಿ ಕಾಯುವ ಅಗತ್ಯವೇ ಇಲ್ಲ ಎಂದು ಕೈ ತೊಳೆದುಕೊಳ್ಳಬಹುದು. ಈಗ ಹೇಳಿ ಇಂತಹ ಸಂದರ್ಭಗಳಲ್ಲಿಯೂ ದೀರ್ಘ ವಿಚಾರಣೆಯ ಅಗತ್ಯತೆ ಇದೆಯೇ? ಕಾನೂನು ಮಾಡಿದವರು ಮನುಷ್ಯರೇ ಅಲ್ಲವೇ, ಮತ್ತೇಕೆ ಅದನ್ನು ಸಕಾರಾತ್ಮಕವಾಗಿ ಬದಲಿಸಿಕೊಳ್ಳುವ ಪ್ರಯತ್ನವನ್ನು ನಮ್ಮ ನ್ಯಾಯಾಂಗ ಮಾಡುತ್ತಿಲ್ಲ. ಅಜ್ಜ ಹಾಕಿದ ಆಲದಮರಕ್ಕೆ ನೇಣುಹಾಕಿಕೊಳ್ಳುವ ದಡ್ಡತನವೇತಕ್ಕೆ? ನಮ್ಮ ನ್ಯಾಯಾಲಯ ತೀರ್ಪು ನೀಡುವ ಹೊತ್ತಿಗೆ ನಾವೆಲ್ಲಾ ಈ ಘಟನೆಯನ್ನೇ ಮರೆತುಬಿಡುತ್ತೇವೆ. ಪ್ರಾಣ ತೆತ್ತವರ ಮನೆಯವರು ಅತ್ತ ನ್ಯಾಯವೂ ಸಿಗದೇ ಇತ್ತ ಪರಿಹಾರವೂ ಇಲ್ಲದೇ ಇಡೀ ಭಾರತ ದೇಶಕ್ಕೆ ಹಿಡಿಶಾಪ ಹಾಕುತ್ತಾ ಕಣ್ಣೀರು ಸುರಿಸುತ್ತಿರುತ್ತಾರೆ. ಅಷ್ಟರೊಳಗೆ ಇಂತಹ ಎಷ್ಟು ಧಾಳಿಗಳು ಭಾರತದ ಮೇಲೆ ನಡೆದುಹೋಗುತ್ತದೆಯೋ-ಏಕೆಂದರೆ ಎಲ್ಲರಿಗೂ ಗೊತ್ತು, ಭಾರತ ಒಂದು ಬೃಹತ್ ರಾಷ್ಟ್ರ ಇಲ್ಲಿ ಜನಸಂಖ್ಯೆಯೂ ಜಾಸ್ತಿ, ಅದರಿಂದ ಜನರ ಪ್ರಾಣಕ್ಕೆ ಬೆಲೆಯಿಲ್ಲ. ಇಲ್ಲಿ ಕಾನೂನಿನ ಪುಸ್ತಕ ಕೂಡ ಬೃಹತ್ತಾದದ್ದು, ಅದನ್ನು ಬದಲಿಸುವ ಗೋಜಿಗೆ ಯಾರೂ ಹೋಗುವುದಿಲ್ಲ ಎಂದು. ಇಲ್ಲಿ ಭೀಷ್ಮ ದ್ರೋಣ,ವಿದುರರಂತಹ ಹಿರಿಯರಿದ್ದಾಗ್ಯೂ ಯಾರೂ ಯಾರ ರಕ್ಷಣೆಯನ್ನು ಮಾಡಲು ಸಾಧ್ಯವಿಲ್ಲವೆಂದು ಎಲ್ಲರಿಗೂ ತಿಳಿದುಹೋಗಿದೆ. ಅದಕ್ಕೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ.........