ಧರ್ಮ ಹಾಗೂ ಅಧ್ಯಾತ್ಮ
ಸಂಪದ ಹಾಗೂ ಬೇರೆಡೆ ಈ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿದೆ. ಮತಾಂತರ, ಧರ್ಮ ಹಾಗೂ ಅದರ ಪರಿಣಾಮಗಳ ಬಗ್ಗೆ.
ಈ ಚರ್ಚೆಗಳಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ ಹಾಗೂ ಜನರ ನಡುವಿನ ನೋವು ದ್ವೇಷ ದೂರವಾಗುತ್ತದೆ ಎಂದು ಆಶಿಸುತ್ತಾ ನಾನು ಕೆಲವು ವಿಷಯಗಳನ್ನು ಹೇಳಲು ಇಷ್ಟ ಪಡುತ್ತೇನೆ.
ಮತಾಂತರದ ಮೂಲದ ಬಗ್ಗೆ ಚಿಂತಿಸಿದರೆ ನಮಗೆ ಹೊಳೆಯುವ ಸಂಗತಿಗಳು ಧರ್ಮ(relegion) ಹಾಗೂ ಅಧ್ಯಾತ್ಮ (spirituality).
ಮನುಷ್ಯ ಹುಟ್ಟಿದಾಗಿನಿಂದ ಬಹಳಷ್ಟು ಸಲ ನೋವು ಅನುಭವಿಸಿರುತ್ತಾನೆ. ಅವನ ಮನಸ್ಸು ಈ ನೋವು ದುಃಖಗಳಿಂದ ಶಾಶ್ವತವಾಗಿ ದೂರ ಹೋಗಲು ತುಡಿಯುವುದು ಸಹಜ. ಈ ತುಡಿತವೇ ಧರ್ಮ ಹಾಗೂ ಆಧ್ಯಾತ್ಮದ ಮೂಲ.
ಈ ನೋವನ್ನು ತಾತ್ಕಾಲಿಕವಾಗಿ ದೂರ ಮಾಡುವ ವಸ್ತುವೇ ಜಾತಿ, ಮತ ಹಾಗೂ ಧರ್ಮಗಳು. ಶಾಶ್ವತವಾಗಿ ದುಃಖ ದೂರ ಮಾಡುವುದೇ ಅಧ್ಯಾತ್ಮ.
ವಿಜ್ನಾನ ಹೇಗೆ ಪ್ರತಿಯೊಂದನ್ನೂ ಅತ್ಯಂತ ತಾರ್ಕಿಕವಾಗಿ ನಮ್ಮ ಮುಂದೆ ಇಡುತ್ತದೆಯೊ, ಅದೇ ರೀತಿ ನಮ್ಮ ಅಧ್ಯಾತ್ಮವೂ ಸಹ ಲೋಕದ ಅನುಭವಗಳಿಂದ ಹಾಗೂ ಪೂರ್ವಾಗ್ರಹ ಪೀಡಿತವಲ್ಲದ ಶುಧ್ಧ ಯೋಚನೆಗಳಿಂದ ಬೆಳೆಯಬೇಕು. ನಿಜವಾದ ವಿಜ್ನಾನಿಗೂ , ಅಧ್ಯಾತ್ಮ ಸಾಧಕನಿಗೂ ವ್ಯತ್ಯಾಸವಿಲ್ಲ.ಇಬ್ಬರ ಗುರಿಯೂ ಒಂದೇ, ಜಗತ್ತಿನ ಹಿಂದಿರುವ ರಹಸ್ಯ ಅರಿಯುವುದು.
ಆದರೆ ಧರ್ಮದ ಹಾಗೂ ಜಾತಿಗಳ ವಿಷಯವೇ ಬೇರೆ. ಇದು ಮನುಷ್ಯನ ಸಾಮಾಜಿಕ ಬೆಳವಣಿಗೆಗೆ ಸಂಬಂಧಿಸಿದ್ದು. ಅಧ್ಯಾತ್ಮ ಅತ್ಯಂತ ಮುಕ್ತವಾದರೆ, ಧರ್ಮಕ್ಕೆ ತನ್ನದೇ ಆದ ಗಡಿ ಇದೆ. ಧರ್ಮಕ್ಕೆ ತನ್ನ ಗ್ರಂಥ , ನಂಬಿಕೆ ಹಾಗೂ ಆಚರಣೆಗಳ ಬಂಧವಿದೆ.ಅಧ್ಯಾತ್ಮಕ್ಕೆ ಈ ಕಟ್ಟಿಲ್ಲ , ಅದು ಆಕಾಶದಂತೆ ಮುಕ್ತ. ಎರಡು ಧರ್ಮಗಳು ಒಂದಕ್ಕೊಂದು ವಿರುದ್ಧವಾಗಬಹುದು ಆದರೆ ಇಬ್ಬರು ನಿಜವಾದ ಜ್ನಾನಿಗಳು ಎಂದೂ ಜಗಳವಾಡುವುದಿಲ್ಲ, ಏಕೆಂದರೆ ಇಬ್ಬರಿಗೂ ಗೊತ್ತು ಅವರ ಮಾರ್ಗ ಒಂದೇ .
ಕೇವಲ ಒಂದು ಧರ್ಮ, ಜಾತಿಯ ವ್ಯಕ್ತಿಯಾದರೆ ಮಾತ್ರ ಗುರಿ ತಲುಪುವುದು ಸಾಧ್ಯ ಎನ್ನುವುದು ದೂರದ ಮಾತು. ಧರ್ಮ ಕೇವಲ ಅಧ್ಯಾತ್ಮದ ಬಾಗಿಲವರೆಗೆ ತಂದು ನಿಲ್ಲಿಸುತ್ತದೆ ಅಲ್ಲಿಂದ ಮುಂದೆ ಕೇವಲ ನಾವು ಮಾತ್ರ.
ಇಷ್ಟೆಲ್ಲಾ ಇರಬೇಕಾದರೆ ಇನ್ನೊಬ್ಬನ ಜಾತಿ ಹಾಗೂ ಧರ್ಮವನ್ನು ಬದಲಿಸುವ ಅವಶ್ಯಕತೆ ಇದೆಯೇ? ಕೇವಲ ಸಾಮಾಜಿಕ,ಆರ್ಥಿಕ ಹಾಗೂ ರಾಜಕೀಯ ಉದ್ದೇಶಕ್ಕಾಗಿ ಧರ್ಮ ಬದಲಿಸುವ ಔಚಿತ್ಯ ಎಷ್ಟು ? ಗಾಢವಾದ ನಂಬಿಕೆಯೇ ಮೂಲವಾದ ಧರ್ಮಗ್ರಂಥಗಳಲ್ಲಿ ಬರುವ ದೇವರ ಹಾಗೂ ಧಾರ್ಮಿಕ ವ್ಯಕ್ತಿಗಳ ಖಂಡನೆ ಇನ್ನೊಂದು ಧರ್ಮದವರಿಗೆ ನಿಜವಾಗಿಯೂ ಶೋಭೆ ತರುತ್ತದೆಯೇ? ನನ್ನ ನಂಬಿಕೆ ನಿನ್ನ ನಂಬಿಕೆಗಿಂತ ದೊಡ್ಡದು ಎಂದು ಉಧ್ಧ್ದಟತನವಲ್ಲವೇ? ಧರ್ಮ ಪರಿವರ್ತನೆ ಎಂದರೆ ಧರ್ಮದ ಮೂಲ ಆಶಯವಾದ ಆಧ್ಯಾತ್ಮದ ವಿರೋಧವಲ್ಲವೇ?
ನಿಜವಾಗಿಯೂ ಇದರ ಬಗ್ಗೆ ಜನರು ಶುಧ್ಧ ಮನಸ್ಸಿನಿಂದ ಚಿಂತಿಸಿ ಕಾರ್ಯೋನ್ಮುಖರಾದರೆ ಪರಿಹಾರ ಅತ್ಯಂತ ಸುಲಭ. ಪೂರ್ವಗ್ರಹ ಪೀಡಿತ ಮನಸ್ಸಿನಿಂದ ಒಂದೇ ವಿಚಾರಕ್ಕೆ ಹಟ ಹಿಡಿದು ಕಟ್ಟುಬಿದ್ದರೆ ಪರಿಹಾರ ಅಸಾದ್ಯ.