ನಂದಾದೀಪ

ನಂದಾದೀಪ

ಬರಹ

ಮಹಿಳಾದಿನದ ಅಂಗವಾಗಿ ನಿನ್ನೆ ಬರೆದದ್ದು - ಇಂದು ಏರಿಸುತಿರುವುದು

ನನ್ನ ಪತ್ನಿ ಎಲ್ಲರಿಗಿಂತ ಸಿರಿವಂತೆ
ಮನೆಗೆ ಬರುವವರೆಲ್ಲರಿಗೂ ಔತಣವಂತೆ
ನನ್ನೆಲ್ಲ ಬೇಕು ಬೇಡಗಳ ಪರಿವೆ ಅವಳಿಗಿದೆ
ಮಕ್ಕಳ ಎಲ್ಲ ಕೆಲಸಗಳಿಗೂ ಅವಳ ಬಲವಿದೆ
ಇವಳಿಲ್ಲದಿರೆ ನಾವು ಬಡವರವಂತೆ
ಇವಳಲ್ಲವೇ ಮನೆಗೆ ಸಿರಿವಂತೆ

ನನ್ನವಳು ಗುಣವಂತೆ
ನನ್ನಮ್ಮನಿಗೂ ಇವಳು ಬೇಕಂತೆ
ಬೆಳಗಿನ ಪೂಜೆಗೆ ಅಣಿ ಮಾಡುವವಳು
ಮಡಿಯಲಿ ಅಡುಗೆ ಮಾಡಿ ಬಡಿಸುವಳು
ಗಲಾಟೆ ಮಕ್ಕಳ ಅಜ್ಜಿಯ ಹತ್ತಿರ ಬಿಡದವಳು
ಇವಳಲ್ಲವೇ ಮನೆಯಲಿ ಗುಣವಂತೆ

ನನ್ನ ಅರ್ಧಾಂಗಿ ಸಹಧರ್ಮಿಣಿ
ನನ್ನ ಹುಚ್ಚಾಟವೆಲ್ಲ ತೂಗಿಸುವವಳು
ಊಟಕ್ಕೆಬ್ಬಿಸಿದವರೆಲ್ಲರಿಗೂ ಅನ್ನ ನೀಡುವ ಅನ್ನಪೂರ್ಣೆ
ನನ್ನ ಒಳಿತಿಗಾಗಿ ಸೋಮವಾರ ಶಿವನಿಗೆ
ಗುರುವಾರ ರಾಯರಿಗೆ, ಶನಿವಾರ ಶ್ರೀನಿವಾಸಗೆ
ತಾ ಒಪ್ಪತ್ತು ಮಾಡಿ, ನನಗೆ ಮಾತ್ರ ಉಣ ಬಡಿಸುವಳು
ಇವಳಲ್ಲವೇ ಮಾತಾ ಅನ್ನಪೂರ್ಣೆ

ಮಕ್ಕಳ ತುಂಟಾಟ ರಂಪಾಟವೆಲ್ಲ ಸಾವರಿಸುವಳು
ಹೋಂವರ್ಕುಗಳ ಮಾಡಿಕೊಡುವವಳು
ಪರರೆದುರಿಗೆ ಮಕ್ಕಳಿಗೆ ಹುಲಿಯಾಗುವಳು
ಅಮ್ಮನೆದುರಿಗೆ ಹೆದರಿ ಇಲಿಯಾಗುವಳು
ಮನೆಯಾಚೆಗೆ ನನ್ನ ನೋಡಿ ನಾಚಿ ನೀರಾಗುವಳು
ಮನೆಯೊಳಗೆ ಮಣಿಸಿ ನೀರ ಕುಡಿಸುವವಳು
ಇವಳಲ್ಲವೇ ದುರ್ಗೆ ಕಾಳಿ ಮಹಾಮಾಯಿ

ತನ್ನೆಲ್ಲ ಕನಸುಗಳನು ಮರೆತಿಹಳು
ನನ್ನೆಲ್ಲ ಕನಸುಗಲನ್ನು ನನಸಾಗಿಹಳು
ಮಕ್ಕಳಿಗೆ ಹೊಂಗನಸ ಪರಿಚಯಿಸುತಿಹಳು
ನಂದನವನದಿ ನಂದಾದೀಪವಾಗಿ ಪ್ರಜ್ವಸುತಿಹಳು
ಇವಳಲ್ಲವೇ ನನ್ನ ಮನೆಯ ಉದ್ಧರಿಸುತಿರುವಳು
ಇವಳ ಮರೆತರೆ ನಾನಾಗುವೆ ಚಿಕ್ಕ ಹುಳು

ಇವಳಲ್ಲವೇ ಕುಟುಂಬದ ತಕ್ಕಡಿಗೆ ತಕ್ಕ ತೂಕದ ಬಟ್ಟು
ಎಂದೂ ಇರದಿರುವೆವು ನಾವು ಒಬ್ಬರನೊಬ್ಬರು ಬಿಟ್ಟು