ನಂಬಿಕೆಯಿದೆ!

ನಂಬಿಕೆಯಿದೆ!

ಕವನ
ಕೊನೆಯಲ್ಲಿ ಅವರಿಬ್ಬರೂ ಸುಖವಾಗಿದ್ದರು ಎನ್ನುವ ಕತೆಗಳಲ್ಲಿ ನನಗೆ ನಂಬಿಕೆ ಯಾವತ್ತೂ ಹುಟ್ಟುವದಿಲ್ಲ. - ಖಂಡವಿದಿಕೋ,ಮಾಂಸವಿದಿಕೋ ಗುಂಡಿಗೆಯ ಬಿಸಿರಕ್ತವಿದಿಕೋ ಎನ್ನುವ ಹುಡುಗಿಗೆ, ಪುಣ್ಯಕೋಟಿಯ ಹಾಡು ಕೇಳುತ್ತಿರುವ ಹುಡುಗ ಎಂದೂ ಅರ್ಥವಾಗುವದಿಲ್ಲ. ಅಡಚಣೆಗಾಗಿ ದಯವಿಟ್ಟು ಕ್ಷಮಿಸಿ: ಉತ್ತರಾಯಣದವರೆಗೂ ಸ್ಥಾನಪಲ್ಲಟವಿಲ್ಲ. ಧರಣಿಮಂಡಲ ಮಧ್ಯದೊಳಗೆ ಸದ್ಯಕ್ಕೆ ಉತ್ಖನನವಿಲ್ಲ! - ಕಲ್ಲು ಕರಗುವ ಸಮಯದಲ್ಲಿ ಈಗ ಅವಳು ಶುಭನುಡಿಯುವ ಶಕುನದ ಹಕ್ಕಿ! ಏನೇ ಬಂಗಾರದ ಪಂಜರ ಕಟ್ಟಿದರೂ, ಎಷ್ಟೇ ಬೆಳ್ಳಿಬಟ್ಟಲಲ್ಲಿ ಹಾಲಿಟ್ಟರೂ ಅಷ್ಟೇ; ಹಕ್ಕಿ ತತ್ತರಿಸಿ ತತ್ತಿಯಿಡುತ್ತದೆ. ನಿಜವಿರದ ಮಜವಿರದ ಸಂಭ್ರಮ ಕೂಡ ವಜನಾದ ಸಜೆಯಾಗುತ್ತದೆ. - ಯಾರೋ ಹೇಳಿದರು- ಅನುಭವ ಮಾನವ ಕಲ್ಪಿತ; ಅನುಭಾವ ದೇವ ನಿರ್ಮಿತ. ಹೀಗಾಗಿ- ಕೊನೆಗೊಮ್ಮೆ ಅವರಿಬ್ಬರೂ ಸುಖವಾಗಿದ್ದರು ಎಂದು ನಂಬುವದರಲ್ಲೇ ನಮಗೆ ನಂಬಿಕೆಯಿದೆ. ಹಾಳಾದ್ದು, ನಂಬಿಕೆ ಎನ್ನುವದು ಯಾವತ್ತೂ ಸಾಯುವದೇ ಇಲ್ಲ! -

Comments