ನಕ್ಷತ್ರಲೋಕದ ವಿಸ್ಮಯಗಳು ! (ಭಾಗ ೧)

ನಕ್ಷತ್ರಲೋಕದ ವಿಸ್ಮಯಗಳು ! (ಭಾಗ ೧)

ಕಪ್ಪುರಂಧ್ರದ ಸಾಂದ್ರತೆ ಅದೆಷ್ಟು ಪ್ರಬಲವಾಗಿರುತ್ತದೆ ಎಂದರೆ ಅದರಿಂದುಂಟಾಗುವ ಗುರುತ್ವದಿಂದ ಯಾವುದೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ! ಇದು ತನ್ನದೇ ಬೆಳಕನ್ನಲ್ಲದೆ ಬೇರೆ ಯಾವುದೇ ಬೆಳಕು ಹತ್ತಿರ ಸುಳಿದರೂ ತನ್ನತ್ತ ಸೆಳೆದುಕೊಂಡು ಬಿಡುತ್ತದೆ. ಅತ್ಯಂತ ಹೆಚ್ಚು ದ್ರವ್ಯವುಳ್ಳ ನಕ್ಷತ್ರಗಳು ಕುಸಿದಾಗ ಈ ಕಪ್ಪುರಂಧ್ರಗಳು ಉಂಟಾಗುತ್ತವೆ ಎಂಬ ಮಾಹಿತಿಯನ್ನು ವಿಜ್ಞಾನಿಗಳು ಕಲೆಹಾಕಿದ್ದಾರೆ. ಈ ಕಪ್ಪುರಂಧ್ರಗಳ ದ್ರವ್ಯರಾಶಿಗಳ ಮೊತ್ತಕ್ಕೆ ಸಮನಾಗಿರುತ್ತದೆ.

ಸೂರ್ಯನ ಕಿರಣಗಳು: ಸೂರ್ಯನ ವಾತಾವರಣ ಅಥವಾ ಕರೋನಾದಲ್ಲಿ ಅನಿಲಗಳು ಪ್ಲಾಸ್ಮಾ ಸ್ಥಿತಿಯಲ್ಲಿ ೨೦ ದಶಲಕ್ಷ ಡಿಗ್ರಿ ಉಷ್ಣತೆಯಲ್ಲಿ ಕುದಿಯುತ್ತಿರುತ್ತದೆ. ಇದರಿಂದಾಗಿ ಹೆಚ್ಚು ಶಕ್ತಿಯುತ ಕಣಗಳು ಸರಿಸುಮಾರು ಬೆಳಕಿನ ವೇಗದಲ್ಲಿ ಚಿಮ್ಮುತ್ತವೆ. ಇದನ್ನೇ ನಾವು ‘ಸೌರಜ್ವಾಲೆಗಳು' ಎನ್ನುತ್ತೇವೆ. ಈ ಶಕ್ತಿಯ ಕಣಗಳ ಕಟ್ಟುಗಳು ಭೂಮಿಯ ಕಾಂತೀಯ ಗೋಳದ ಬಳಿ ಸಂಚಯಗೊಂಡು, ಸಂಪರ್ಕ ಜಾಲ, ಉಪಗ್ರಹ ತಂತ್ರಜ್ಞಾನ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಮೊಬೈಲ್ ಫೋನ್ ಜಾಲಗಳನ್ನೇ ಹಾಳು ಮಾಡಿಬಿಡುತ್ತವೆ. ಅತ್ಯಂತ ದೊಡ್ಡ ಸೌರಜ್ವಾಲೆ ದಶಲಕ್ಷ ಹೈಡ್ರೋಜನ್ ಬಾಂಬುಗಳು ಬಿಡುಗಡೆ ಮಾಡುವ ಶಕ್ತಿಗೆ ಸಮವಾಗಿರುತ್ತದೆ ಅಥವಾ ಒಂದು ಲಕ್ಷ ವರ್ಷಗಳವರೆಗೆ ಅಮೇರಿಕಾಗೆ ಬೇಕಾಗುವ ಒಟ್ಟು ಶಕ್ತಿಯನ್ನು ನೀಡಬಲ್ಲದು. !

ನಿಗೂಢ ಸ್ಫೋಟಗಳು: ನಕ್ಷತ್ರಗಳಿಂದ ಈ ನಿಗೂಢ ಸ್ಫೋಟಗಳಿಂದ ಹೊರಹೊಮ್ಮುವ ಆಘಾತಕಾರಿ ಅಲೆಗಳು ಗಂಟೆಗೆ ೩೫ ದಶಲಕ್ಷ ಕಿ.ಮೀ ಗಳ ವೇಗದಲ್ಲಿ ಹೊರಹೊಮ್ಮುತ್ತವೆ. ಕೆಲವು ನಕ್ಷತ್ರಗಳ ಕೊನೆ ಅತ್ಯಂತ ರೋಚಕ ಘಟನೆಯಾಗಿದೆ. ನಕ್ಷತ್ರದ ಈ ಹಂತವನ್ನು ಸೂಪರ್ ನೋವಾ ಸ್ಫೋಟ ಎನ್ನುತ್ತಾರೆ. ಸೂರ್ಯನಿಗಿಂತ ೮-೧೦ ಪಟ್ಟು ದೊಡ್ಡದಿರುವ ನಕ್ಷತ್ರಗಳು ಈ ಹಂತವನ್ನು ತಲುಪಿದಾಗ ಅದರ ಗುರುತ್ವವನ್ನು ಮೀರಿ ಒಮ್ಮೆಗೇ ನಕ್ಷತ್ರದ ದ್ರವ್ಯ ಹೊರಚಿಮ್ಮಿ ಬಿಡುತ್ತದೆ. ಈ ಸೂಪರ್ ನೋವಾ ಸ್ಫೋಟದಿಂದ ಅಪಾರ ದ್ರವ್ಯ ಹಾಗೂ ಬೆಳಕು ಬಾಹ್ಯಾಕಾಶಕ್ಕೆ ಚಿಮ್ಮುತ್ತದೆ.

ಒಂಟಿ ನಕ್ಷತ್ರಗಳ ಜೊತೆ: ನೀವು ಊಹಿಸಿದಂತೆ ನಕ್ಷತ್ರಗಳು ಕೇವಲ ಒಂಟಿಯಾಗಿಯೇ ಇರುವುದಿಲ್ಲ. ನಮ್ಮ ಆಕಾಶಗಂಗೆ ಗ್ಯಾಲಕ್ಷಿಯಲ್ಲಿ ಶೇ ೮೫ ರಷ್ಟು ನಕ್ಷತ್ರಗಳು ಸಹಬಾಳ್ವೆ ನಡೆಸುತ್ತಿವೆ. ಅರ್ಧಕ್ಕಿಂತಲೂ ಹೆಚ್ಚು ಜೋಡಿ ನಕ್ಷತ್ರಗಳು ಕಂಡು ಬರುತ್ತವೆ. ಅಂದರೆ ಎರಡು ನಕ್ಷತ್ರಗಳು ತಮ್ಮದೇ ಆದ ಗುರುತ್ವದ ಸೆಳೆತದಿಂದ ತಮ್ಮ ಸುತ್ತ ಗಿರಕಿ ಹೊಡೆಯುತ್ತವೆ. ಮೂರು ಮತ್ತು ಅದಕ್ಕಿಂತಲೂ ಹೆಚ್ಚು ನಕ್ಷತ್ರಗಳು ಒಂದು ಗುಂಪಾಗಿ ಬಾಳುವ ವ್ಯವಸ್ಥೆಯನ್ನು ಬಹು ನಕ್ಷತ್ರೀಯ ವ್ಯವಸ್ಥೆ ಎಂದು ಕರೆಯುತ್ತಾರೆ. 

(ಇನ್ನೂ ಇದೆ)

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ