ನನಗೆ ಕಥೆ ಬರೆಯೋಕ್ಕೆ ಬರೋಲ್ಲ !

ನನಗೆ ಕಥೆ ಬರೆಯೋಕ್ಕೆ ಬರೋಲ್ಲ !

ಸಾಮಾನ್ಯವಾಗಿ ಪ್ರತಿ ಭಾನುವಾರದ ವಾರಚರಿಯಂತೆ (ಪ್ರತಿ ದಿನ ಅಲ್ಲ ನೋಡಿ ಅದಕ್ಕೆ ದಿನಚರಿ ಅಲ್ಲ) ಸ್ನಾನಾದಿ ನಿತ್ಯಕರ್ಮಗಳ ನಂತರ ತಿಂಡಿ ತಿಂದು ಮುಗಿಸಿ, ಕಾಫಿ ಹೀರುತ್ತ ಹಜಾರದಲ್ಲಿ ಕುಳಿತಿದ್ದೆ. 

 

ರಸ್ತೆಯಲ್ಲಿ ಹಾದು ಹೋಗುತ್ತಿದ್ದ ಅನಸೂಯಾಬಾಯಿ, ನನ್ನನ್ನು ನೋಡಿದರೂ  totally neglect ಮಾಡಿದವರಂತೆ ಹಾಗೇ ಹೋಗುತ್ತಿದ್ದರು !! ನಮಗೆ ಬೇಡದೆ ಇದ್ದಾಗ, ಕಚ್ಚೇಧಾರಿಯಾದ ಅವರು ಕಚ್ಚುತ್ತ ಸಕಲ ವಿಚಾರಗಳನ್ನೂ ತಿಳಿದುಕೊಳ್ಳುವ ಈ ಬಾಯಿ, ಇಂದೇಕೆ ಬಾಯಿಗೆ ದಾರ ಹೊಲೆದುಕೊಂಡು ಹೋಗುತ್ತಿದ್ದಾರೆ? 

 

ಅವರಿಗೆ ಏನಾದರೆ ನನಗೇನಾಗಬೇಕು ಅಂತ ಅಂದುಕೊಂಡು ’ಚೆನ್ನಾಗಿದ್ದೀರಾ?’ ಅಂತ ಕೇಳಿಯೇಬಿಟ್ಟೆ ! ಅವರು ಬಾಯೇ ಬಿಡದೆ ನಕ್ಕು ಸುಮ್ಮನೆ ಹೋದರು. ಹಲವಾರು ವರ್ಷಗಳ ಹಿಂದೆ ಜಾತ್ರೆಯಲ್ಲಿ ಕಳೆದು ಹೋದ ಅನಸೂಯಾಬಾಯಿಯವರ ಅವಳಿಯೇ ಈಕೆ? (ಕಳೆದು ಹೋಗಿದ್ದರೋ ಅಥವ ಇಲ್ಲವೇ ಇಲ್ವೋ ನನಗೆ ಗೊತ್ತಿಲ್ಲ, ಸುಮ್ನೆ, ಭಾನುವಾರ ಅಲ್ವಾ, ಹಾಗೇ ರೀಲ್ ಬಿಟ್ಟೆ ಅಷ್ಟೇ!) 

 

ಒಳಗಿನಿಂದ ತಂಗಾಳಿಯಂತೆ ಬರುತ್ತಿದ್ದ ನನ್ನಾಕೆ ವಿಶಾಲೂ, ಸಡನ್ನಾಗಿ ಬಿರುಗಾಳಿಯಂತೆ ಧಾವಿಸಿ ಬಂದು  ಅನುಮಾನದಿಂದ ಕೇಳಿದಳು ’ಯಾರ್ರೀ ಅದೂ?’ 

 

ನಾನು, ಅರ್ಥಾತ್ ರಾಮಣ್ಣಿ, ಹೇಳಿದೆ ’ಅಸೂಯಾಬಾಯಿ .... ಅಲ್ಲಲ್ಲ, ಅನಸೂಯಾಬಾಯಿ ಕಣೆ’ ಅಂತ.

 

ಅದಕ್ಕೆ ಅವಳು ’ಅಯ್ಯೋ ರ್ರೀ, ಅದು ಕಮಲಾಬಾಯಿ ಕಣ್ರೀ. ಅನಸೂಯಾಬಾಯಿಯವರ ಅಕ್ಕ’. ನಾನು ಕೇಳಿದೆ ’ಅಲ್ಲಾ ಕಣೇ, ಅವರ ಮನೆಯಲ್ಲಿ ಒಂದೇ ರೀತಿ ಎಷ್ಟು ಬಾಯಿಗಳಿವೆ’. ನನ್ನಾಕೆ ನುಡಿದಳು ’ಅವರ ಮನೆಯಲ್ಲಿ ಎಷ್ಟು ಜನ ಇದ್ದರೆ ನಿಮಗೇನು. ಹೆತ್ತೋರಿಗೆ ಇಲ್ಲದ ಚಿಂತೆ ನಿಮಗ್ಯಾಕೆ? ವಿಷಯ ಏನಪ್ಪಾ ಅಂದರೆ, ಅನಸೂಯಾ ಬಾಯಿ ಮೊನ್ನೆ ಬಚ್ಚಲು ಮನೆಯಲ್ಲಿ ಬಿದ್ದು ಕಾಲು ಮುರಿದುಕೊಂಡರಂತೆ. ಅದಕ್ಕೆ ಅವರ ಅಕ್ಕ ಊರಿಂದ ಬಂದಿದ್ದಾರೆ." 

 

ಈ ಎರಡು ಬಾಯಿಗಳ ಮಧ್ಯೆ ರಮಣಮೂರ್ತಿಗಳು ಖಂಡಿತ ’ಮರಣಮೂರ್ತಿಗಳೇ ಆಗಿರ್ತಾರೆ ...

 

ಆದರೂ "ಅಯ್ಯೋ ಪಾಪ. ಅವರ ಬಚ್ಚಲ ಮನೆಯ ಕಲ್ಲು ಒಡೀಲಿಲ್ಲ ತಾನೇ?". ವಿಶಾಲೂ ಸಿಡಿದಳು "ನಾನು, ಅವರ ಕಾಲಿನ ಬಗ್ಗೆ ಹೇಳಿದರೆ ನಿಮಗೆ ಕಲ್ಲಿನ ಬಗ್ಗೆ ಚಿಂತೆ. ನೀವ್ಯಾಕ್ರೀ ಹಿಂಗೇ?" ಎಂದಳು ರಾಗವಾಗಿ.

 

ನಾನೂ ರಾಗವಾಗೇ ನುಡಿದೆ

"ಕಲ್ಲನು ಜಾರಿ ಕಾಲು ಮುರಿಯಿತು ಬಾಯಿಗೆ

ಬಾಯಲ್ಲಿನ ಹಲ್ಲುದುರಿ ಸೇರಿತ್ತು ಕೈಯ್ಯಿಗೆ"

 

ವಿಶಾಲೂ ಸಡಗರದಿಂದ ನುಡಿದಳು "ನನಗೆ ಗೊತ್ತಿತ್ತು ಕಣ್ರೀ ...  ಎಲ್ಲ ಆಗಿದ್ದು ಅವನಿಂದಲೇ"

 

ತಲೆಬುಡ ಅರ್ಥವಾಗಲಿಲ್ಲ ಕಣ್ರೀ ! "ಯಾರಿಂದ ಏನಾಯ್ತು" ಅಂದೆ.

 

ವಿಶಾಲೂ ನುಡಿದಳು "ನಿಮಗೆ ವಿಷಯ ಗೊತ್ತಿಲ್ವೇ? ಈಗ ಹೊಸದಾಗಿ ಒಂದು ರಾಶಿ ಸೇರ್ಪಡೆಯಾಗಿದೆ. 'Ophiuchus' ಅಂತ. ಅದು ಸೇರಿದ ಮೇಲೆ, ನಮ್ಮ ಜನ್ಮ ದಿನಗಳು ಆ ರಾಶಿ ಈ ರಾಶಿ ಅಂತ ಪಕ್ಷಾಂತರ ಮಾಡಿವೆ. ಪೆದ್ದು ಪೆದ್ದಾಗಿ ಇರುವವರು ರಾಶಿ ಚೇಂಜ್ ಆದ ಮೇಲೆ ಏನೇನೋ ಆಗಿದ್ದಾರಂತೆ !! ಈಗ ನೀವೇ ನೋಡಿ, ನಿಮ್ಮ ಬಾಯಲ್ಲಿ ಎಂತಹ ಅದ್ಬುತ ಕವಿತೆ ಹೊರಬಿತ್ತು?"

 

ಕವನವೇನೋ ಚೆನ್ನಾಗಿದೆ ನಿಜ. ಆದರೆ ಅದು ನಾನು ಹೇಳಿದ್ದಲ್ಲಾ !

 

ಹೋದ ವಾರ ಯಾರದೋ ಮನೆಗೆ ಊಟಕ್ಕೆ ಹೋಗಿದ್ದೆವು. ಊಟವಾದ ಮೇಲೆ ಮನೆ ಯಜಮಾನರಿಗೆ ಮಲಗಿ ರೂಢಿಯಂತೆ. ವಿಶಾಲೂ ಮತ್ತು ಆ ಮನೆಯ ಯಜಮಾನಿ ಏನೋ ಸೀರೆ-ಒಡವೆ ಅಂತ ಏನೋ ಹರಟುತ್ತಿದ್ದಳು. ಆ ಮನೆ ಯಜಮಾನ ನನಗೆ "ನಿಮ್ಮ ಮನೆಯವರು ಬಂದ ಮೇಲೆ ನೀವು ಹೊರಡಿ." ಅಂತ ಹೇಳಿ ಒಳಗೆ ಹೋಗಿ ಮಲಗೇ ಬಿಡೋದೇ?

 

ಇನ್ನು ಇವಳು ಬರೋವರೆಗೂ ಏನು ಮಾಡೋದು ಅಂತ ಅಲ್ಲೇ ಸಿಕ್ಕ ಯಾವುದೋ ಪುಸ್ತಕ ತೆರೆದಿಟ್ಟುಕೊಂಡೆ. ಅಲ್ಲಿ ಸಿಕ್ಕ ಕವನವಿದು. ಏನೋ ಈ ಸಂದರ್ಭಕ್ಕೆ ಸರಿಯಾಗಿತ್ತು ಅಂತ ಹೇಳಿದೆ, ಅಷ್ಟೇ !

 

ಅಷ್ಟರಲ್ಲಿ ವಿಶಾಲೂ ಮತ್ತೆ ನುಡಿದಳು "ಮತ್ತೊಂದು ರಾಶಿ ಹುಟ್ಟಿಕೊಂಡು, ನೀವು ಯಥಾಸ್ಥಿತಿಗೆ ಹೋಗುವ ಮುನ್ನ, ಒಂದು ಕಥೆ ಬರೀರಿ. ಕಥೆ ಹೇಗಿರಬೇಕೂ ಅಂದ್ರೆ, ಪ್ರೊಡ್ಯೂಸರ್’ಗಳು ಆ ಕಥೆಯನ್ನು ಸಿನಿಮಾ ಮಾಡಬೇಕೂ ಅಂತ ಕ್ಯೂ ನಿಲ್ಲಬೇಕು."

 

ಅಲ್ಲ, ಆಸೆಗೂ ಒಂದು ಮಿತಿ ಬೇಡವೇ? ಹೋಗ್ಲಿ ಬಿಡಿ, ಏನೋ ಬದಲಾವಣೆ ಆಗಿರಲೇಬೇಕು ಅಂತ ನನಗೂ ಅನ್ನಿಸುತ್ತಿದೆ. ಯಾಕೆ ಅಂದ್ರೆ, ಈ ಮುಂಚೆ ನನಗೆ ಓದಿದ್ದು ಒಂದೂ ನೆನಪಿನಲ್ಲಿ ಇರುತ್ತಿರಲಿಲ್ಲ. ಬೇಕಿದ್ರೆ ನನ್ನ ಸ್ಕೂಲ್ ಟೀಚರ್’ನೇ ಕೇಳಿ ...  ಅಂಥಾದ್ರಲ್ಲಿ ಈ ಕವನ ನೆನಪಿದೆ, ಅದರಲ್ಲೂ ಸಂದರ್ಭಕ್ಕೆ ತಕ್ಕಂತೆ ಅದನ್ನು ಬಳಸಿಕೊಂಡಿದ್ದೀನಿ ಅಂದ್ರೇ .... 

 

"ಆಯ್ತು ಕಣೆ, ಈಗ್ಲೇ ಶುರು ಮಾಡ್ತೀನಿ" ಅಂದು ಒಂದು ಪ್ಯಾಡ್’ಗೆ ಹತ್ತು ಬಿಳೀ ಹಾಳೆ ಸಿಕ್ಕಿಸಿಕೊಂಡೆ. "ಇಷ್ಟು ಸಾಕು ಅಂತೀಯಾ?" ... "ರ್ರೀ, ಮೊದಲು ಶುರು ಮಾಡ್ರೀ!"

 

"ನೋಡು, ಈ ಟೇಬಲ್ ಕಿಟಕಿ ಬಳಿ ಇರಲಿ. ಚೇರಿನಲ್ಲಿ ಕುಳಿತು ಬೀದಿ ನೋಡುವಾಗಲೂ ಏನಾದ್ರೂ ಐಡಿಯಾ ಬರಬಹುದು" ಎಂದು ನುಡಿಯುತ್ತ, ಟೆಬಲ್-ಕುರ್ಚಿಯನ್ನು ಸಿದ್ದ ಮಾಡಿಕೊಂಡೆ. ನಂತರ ಒರೆಸಿದೆ. "ಪೆನ್ ಬದಲು ಪೆನ್ಸಿಲ್ ವಾಸಿ. ಅಳಿಸುವುದು ಸುಲಭ" ಎಂದು ನುಡಿದು, ನಾಲ್ಕು ಪೆನ್ಸಿಲ್’ಅನ್ನು ಸಿದ್ದ ಮಾಡಿಕೊಂಡೆ. ಪೂರ್ಣವಾಗಿದ್ದ ಪೆನ್ಸಿಲ್’ಗಳು ಅರ್ಧವಾಗಿತ್ತು !!

 

ಹಾಳೆಯ ಮೇಲ್ಭಾಗದ ಮಧ್ಯಕ್ಕೆ ಶ್ರೀ’ಕಾರ ಹಾಕಿ ಮೂಲೆಗೆ ದಿನಾಂಕ್ ಹಾಕಿ ಸುಮ್ಮನಾದೆ. ವಿಶಾಲೂ ಹೇಳಿದಳು "ಬರೀರಿ"

 

"ಹಾಗೆಲ್ಲ ಸುಮ್ಮನೆ ಬರೆಯೋಕ್ಕೆ ಆಗಲ್ಲ ಕಣೇ. ಐಡಿಯಾ ಬರಬೇಕು" ... "ಅದ್ಯಾವಾಗ ಬರುತ್ತೋ ಏನೋ. ಅನ್ನಕ್ಕೆ ಇಟ್ಟು ಬರ್ತೀನಿ" ಅಂದ ಎದ್ದಳು. ನಾನು "ಬಂತೂ" ಎಂದೆ. "ವಿಷಯ ಏನು" .... "ಅಯ್ಯೋ ವಿಷಯ ಅಲ್ವೇ. ನನಗೆ ಬಂತು. ಬಚ್ಚಲಿಗೆ ಹೋಗಬೇಕೂ. ನೀನು ಅನ್ನಕ್ಕೆ ಇಡು. ಈಗ್ಲೇ ಬರ್ತೀನಿ" ಅಂತ ಎದ್ದು ಹೋದೆ ....

 

ಅವಳು ಕಥೆ ಬರಿ ಎಂದು ಹೇಳಿ ಎರಡು ತಾಸು ಕಳೆದರೂ ಒಂದೂ ಸಾಲು ಬರೆದಿರಲಿಲ್ಲ. ಏನು ಬರೀಬೇಕು, ಹೇಗೆ ಬರೀಬೇಕು ಅಂತ ಗೊತ್ತಾಗ್ತಾನೇ ಇಲ್ಲ. ಅದಕ್ಕಿಂತ ಮುಖ್ಯವಾದ ಪ್ರಶ್ನೆ ಎಂದರೆ ’ಯಾಕೆ ಬರೀಬೇಕು’ ಅಂತ. ಸದ್ಯದ ಸೂಚನೆ ನೋಡಿದರೆ ’ಮಧ್ಯಾನ್ನದ ನಿದ್ದೆ ಬಂದಿದೆ ಖೋತ’ ...

 

ಅಡುಗೆ ಸಿದ್ದವಾಯ್ತು. ಊಟವಾದ ಮೇಲೆ ಬರೆಯೋಣ ಎಂದುಕೊಂಡು ಊಟಕ್ಕೂ ಸಿದ್ದವಾದೆ. ಊಟವೂ ಆಯ್ತು. ಪೆನ್ನು ಹಿಡಿದು ಕುರ್ಚಿಯ ಮೇಲೆ ಕೂತೆ. ಹಾಗೇ ಕಣ್ಣುಗಳು ಎಳೆಯ ತೊಡಗಿತು. ಏನೋ ಶಬ್ದವಾದಂತಾಗಿ ಫಕ್ಕನೆ ಕಣ್ಣೂ ಬಿಟ್ಟರೇ, ಕಾಗದವೆಲ್ಲ ರಕ್ತ !!! 

 

ಮೊದಲ ಕಥೆಯನ್ನೇ ರಕ್ತದಲ್ಲಿ ಬರೆಯುತ್ತಿದ್ದೇನೆ ಎನಿಸಿತು. ವಿಶಾಲೂ (ಸಿ)ನುಡಿದಳು "ಎನ್ರೀ ಇದು ... ಎಲೆ-ಅಡಿಕೆ ಹಾಕಿಕೊಂಡು ಅದರ ಕೆಂಪನ್ನೆಲ್ಲ ಹಾಳೆ ಮೇಲೆ ಒಸರಿಕೊಂಡಿದ್ದೀರಾ?" ಥತ್!

 

ಮೊದಲ ಹಾಳೆ ಕ.ಬು ಸೇರುತ್ತಿದ್ದಂತೇ, ಏನೋ ಬಂದಂತೆ ಆಯಿತು ... ಅದು ಐಡಿಯಾ ... ಬರೆದೆ ... 

 

"ಒಂದಾನೊಂದು ಊರಿನಲ್ಲಿ ಹೊಸ ದಂಪತಿಗಳಿಗೆ ಹೊಸ ಮಗುವಾಯ್ತು" ಅಂತ. ವಿಶಾಲೂ ಅದನ್ನು ಓದಿ ಬಿದ್ದೂ ಬಿದ್ದೂ ನಕ್ಕಳು. ನಾನು ಸೀರಿಯಸ್ ಕಥೆ ಬರೆಯಲು ಹೊರಟೆ ಇವಳು ಅದನ್ನು ಕಾಮಿಡಿ ಮಾಡಿಬಿಟ್ಟಳಲ್ಲಾ? "ಏನಾಯ್ತು" ಎಂದೆ. "ಅಲ್ರೀ, ಯಾರಾದರೂ ಹಳೇ ಮಗು ಹೆರುತ್ತಾರಾ?" ... 

 

ಹೌದಲ್ವೇ? ಆ ಸಾಲನ್ನು ಹೊಡೆದು ಹಾಕಿದೆ. ಹೊಸ ಹಾಳೆಯ ಬದಲು ಅದೇ ಹಾಳೆಯ ಮೇಲೆ ಬರುಯುತ್ತೇನೆ ಎಂದು ನಿರ್ಧರಿಸಿದೆ ... ವಿಶಾಲೂ ಹೇಳಿದ ಮೇಲೆ !!!

 

"ಮುಂಜಾವಿನ ಸೂರ್ಯ ಮುಳುಗುತ್ತಿರಲು, ಹಸಿರು ನಾಡಿನ ಹಸಿರು ಕಾಡಿನಲ್ಲಿ ಹಸಿರು ಗಿಣಿಯೊಂದು ಹಚ್ಚನೆಯ ಹಸಿರು ದನಿಯಲ್ಲಿ ಹಾಡತೊಡಗಿತ್ತು" ಅದನ್ನು ಓದಿದ ವಿಶಾಲೂ ಮೆಚ್ಚುಗೆಯ ದೃಷ್ಟಿಯಿಂದ ನೋಡುತ್ತ "ಸಕತ್ ಕಾಮಿಡಿ ಬರೀತೀರ" ಎಂದು ನಗಲು ಶುರು ಮಾಡಿದವಳು ಕಣ್ಣಲ್ಲಿ ನೀರು ಬರೋ ತನಕ ನಕ್ಕಳು.

 

ಪೆಚ್ಚು ಮೋರೆ ಹಾಕಿ ಕುಳಿತ ನಾನು "ಈಗೇನಾಯ್ತು ?" ಎಂದೆ

 

"ಅಲ್ರೀ, ಬೆಳಿಗ್ಗೆ ಸೂರ್ಯ ಮುಳುಗುತ್ತಾನಾ?" "ಅಲ್ವೇ ನಾನು ಹೇಳುತ್ತಿರೋದು, ಇಲ್ಲಿ ಅಂದರೇ ಭಾರತದ ಮುಂಜಾವಿನಲ್ಲಿ ಅಮೇರಿಕದಂತಹ ದೇಶದಲ್ಲಿ ಸೂರ್ಯ ಮುಳುಗುತ್ತಿರಲು ಅಂತ" ಎಂದೆ ... "ಅದ್ಯಾಕೆ ಅಷ್ಟೊಂದು complicated  ಆಗಿ ಬರೀಬೇಕು?"

 

ಕಥೆಗಾರರ ದೃಷ್ಟಿಯಲ್ಲಿ ಓದಬೇಕು ಕಣೇ ಎಂದುಕೊಂಡೆ, ಆದರೆ ಹೇಳಲಿಲ್ಲ.

 

"ಆಮೇಲೆ, ಅದೇನು ಹಸಿರು ಗಿಣಿಗೆ ಹಸಿರು ದನಿ ?" ಅಂದಳು .. ನಾನೆಂದೆ "ಅಲ್ವೇ, ನಾನು ಹೇಳ್ತಿರೋದು, ಉದಯಿಸುತ್ತಿರುವ ಸೂರ್ಯನ ಹಾಗೆ ಹೊಸದಾಗಿ ದನಿ ಮೂಡಿಸಿಕೊಳ್ಳುತ್ತಿರುವ ಗಿಣಿಯ ದನಿ ಅಂತ. ಹಸಿರು ಎಂದರೆ ಹೊಸತು ಅನ್ನೋ ಅರ್ಥದಲ್ಲೂ ಹೇಳಬಹುದು ಕಣೆ"

 

ವಿಶಾಲೂ "ರ್ರೀ, ಅದೆಲ್ಲ ಬೇಡ. ಸಿಂಪಲ್ಲಾಗಿ ಬರೀರಿ. ತಲೆ ತುಂಬ ಕೂದಲು ಇರೋವ್ರು ನಿಮ್ಮ ಕಥೆ ಓದಿ ಮುಗಿಸೋ ಮುನ್ನ ತಲೆ ಬೋಳಾಗೋ ಹಾಗೆ ಮಾಡಬೇಡಿ"

 

ಹೊಸ ಅಲೆಯ ಕಥೆ ಬರೆದರೆ ಹೇಗೆ ಅನ್ನಿಸಿತು. ಶುರು ಮಾಡಿದೆ ... 

 

"ರುದ್ರತಾಂಡವ ನಟರಾಜನಂತೆ ಸುರುಳಿ ಸುರುಳಿ ಕೂದಲುಳ್ಳವನಾದ ರುದ್ರಪ್ಪನು ಕೆಂಗಣ್ಣು ಉಳ್ಳವನಾಗಿ, ಮುಖದಲ್ಲಿ ಕ್ರೋಧದ ಬೆಂಕಿಯನ್ನೇ ಹೊತ್ತು, ತ್ರಿಶೂಲವನ್ನು ಕೈಯಲ್ಲಿ ಪಿಡಿದವನಂತೆ ಫೋರ್ಕನ್ನು ಹಿಡಿದು ಝಳಪಿಸುತ್ತ, ಮತ್ತೇರಿದ ಮದಗಜದಂತೆ ದಾಪುಗಾಲು ಹಾಕುತ್ತ, ಕೈಯಲ್ಲಿ ತಟ್ಟೆಯನ್ನು ಪಿಡಿದವನೇ, ಫೋರ್ಕನ್ನು ಬನ್ನಿಗೆ ಚುಚ್ಚಿ ಎತ್ತಿ ಹಿಡಿದು, ಒಮ್ಮೆ ಹಿಂದಿರುಗಿ ನೋಡಿ, ಕಚಕ್ಕೆಂದು ತಿಂದಿರಲೂ, ಸಾಲಿನಲ್ಲಿ ನಿಂತಿದ್ದವರು ತಮ್ಮ ತಟ್ಟೆಗಳನ್ನು ತಮಗೇ ಅರಿವಿಲ್ಲದಂತೆ ನೆಲಕ್ಕೆ ಹಾಕಿದರು"

 

ವಿಶಾಲೂ’ಗೆ ಇನ್ನು ತಡೆಯಲಾಗಲಿಲ್ಲ. ಹೊಟ್ಟೆ ಗಟ್ಟಿಯಾಗಿ ಹಿಡಿದುಕೊಂಡು ನಗಲಾರಂಭಿಸಿದಳು. "ಅಲ್ರೀ ಜೈಲಿನಲ್ಲಿ ಊಟಕ್ಕೆ ಕ್ಯೂ ನಿಂತ ಖೈದಿ ಬಗ್ಗೆ ಬರೀತಿರೋ ಹಾಗಿದೆ. ಸಕತ್ ಕಾಮಿಡಿಯಾಗಿದೆ. ಮುಂದುವರೆಸಿ. ಓದುವವರು ಕೋಮಲ್’ನನ್ನು ಮನಸ್ಸಿಗೆ ತಂದುಕೊಂಡು ಓದಿದರಂತೂ ಒಳ್ಳೇ ಮಜ ಕೊಡುತ್ತೆ"

 

ಇದೊಳ್ಳೇ ಕೇಸ್ ಆಯ್ತಲ್ಲ .... ಅತೀ ಸೀರಿಯಸ್ಸಾಗಿ ಬರೆದರೂ ಇವಳು ನಗುತ್ತಾ ಇದ್ದಾಳಲ್ಲಾ?

 

ತಲೆಯೆಲ್ಲ ಬಿಸಿ ಆಗಿತ್ತು. ಬಿಸಿ ಬಿಸಿ ಕಾಫಿ ಕುಡಿದು ಹೊಸಾ ಆಲೋಚನೆ ಮಾಡೋಣ ಎಂದುಕೊಂಡೆ. ವಿಶಾಲೂ ಕಣ್ಣೀರು ಒರೆಸಿಕೊಂಡೆ ಕಾಫಿ ಮಾಡಲು ಹೋದಳು. 

 

ಹಾಗೇ ಕಿಟಕಿಯ ಕಡೆ ನೋಡುತ್ತ ಕುಳಿತೆ. ವಕ್ರಮೂತಿ ಸುಂದರೇಶ ಬರುತ್ತಿದ್ದ. ಸದ್ಯ ’ಬ್ರೇಕ್’ ಸಿಕ್ತು ಅಂತ ಎದ್ದು ಹೋದೆ ಸ್ವಾಗತಿಸಲು.

 

"ಬಾಪ್ಪಾ ಸುಂದ್ರೂ. ಹೇಗಿದ್ದೀಯಾ?" ಎಂದೆ. ಅವನಿಗೆ ಏನು ಮಾಡಬೇಕೂ ಅಂತ ತೊಚದೆ ನಿಂತಿದ್ದ. ಅವನ ಜೀವನದಲ್ಲಿ ನಾನು ಈ ರೀತಿ ಸ್ವಾಗತಿಸುತ್ತಿರುವುದು ಇದೇ ಮೊದಲು. ಸುಧಾರಿಸಿಕೊಂಡೇ ಏನು ಗ್ರಹಚಾರಾನೋ ಏನೋ ಎಂದುಕೊಂಡು ಒಳಗೆ ಬಂದ.

 

ವಿಶಲೂ ಅವನಿಗೂ ಕಾಫಿ ಬಸಿದು ಕೊಡುತ್ತ ನಾನು ಕಥೆಗಾರನಾಗಿರುವ ಕಥೆಯನ್ನು ತಿಳಿಸಿದಳು. ಅಷ್ಟೇ ಸಾಲದು ಎಂಬಂತೆ ನನ್ನ ಕಥೆಗಳನ್ನು ಅವನಿಗೆ ಓದಲು ಕೊಟ್ಟಳು.

 

ಇನ್ನೇನು, ಅವನೂ ನಗಲು ಶುರು ಮಾಡುತ್ತಾನೆ ಎಂದುಕೊಂಡೆ. ಹಾಗಾಗಿದ್ದರೆ ಹಾಸ್ಯ ಬರಹ ಶುರು ಮಾಡಬಹುದಿತ್ತು. ಆದರೆ ಸುಂದರೇಶನ ಕಣ್ಣಲ್ಲಿ ಒಂದೇ ಸಮನೆ ನೀರು.

 

ನನಗೆ ಗಾಭರಿಯಾಯ್ತು. ನನ್ನ ಕಥೆ ಓದಿದ ಈ ಎರಡನೇ ಪ್ರಾಣಿಗೂ ಏನೇನೋ ಆಗುತ್ತಿದೆ. "ಯಾಕೋ ನಿನಗೇನಾಯ್ತೋ?"

 

ನಡುಗುವ ದನಿಯಲ್ಲೇ ಹೇಳಿದ "ಏನು ಕಥೆಗಳೋ ಇವು?" ... ನನಗೀಗ ತಲೆ ಕೆಡುವುದೊಂದೇ ಬಾಕಿ ... ಹೀಗೆ ಹೇಳಿದರೆ ಏನೂ ಅಂತ ಅರ್ಥ ಮಾಡಿಕೊಳ್ತೀರಾ?

 

ಸುಂದರೇಶ ನುಡಿದ "ಮೊದಲ ಕಥೆಯಲ್ಲಿ ನವ ದಂಪತಿಗಳ ಜೀವನದಲ್ಲಿ ಹೊಸ ಹರ್ಷ ಮೂಡಿತು ಅಂತ ಎಷ್ಟು ಚೆನ್ನಾಗಿ ಹೇಳಿದ್ದೀಯ ಕಣೋ". ಸಕತ್ ! ಹಾಗೆ ಹೇಳಿದ್ದೀನಿ ಅಂತ ನನಗೇ ಗೊತ್ತಿರಲಿಲ್ಲ !!!

 

"ಇನ್ನು ಎರಡನೇ ಕಥೆ. ಬೆಳಿಗ್ಗೆಯೇ ಸೂರ್ಯ ಮುಳುಗುವ ಪ್ರಳಯ ಕಾಲದಂತಹ ಪರಿಸ್ಥಿತಿ ಬಂದರೂ ಹಾಡುವ ಗಿಣಿ ತನ್ನ ಕರ್ತವ್ಯ ಮರೆಯುವುದಿಲ್ಲ ಅನ್ನೋ ಸಾರಾಂಶ ಅದ್ಬುತ ಕಣೋ". 

 

ಕಥೆ ಕೆಟ್ಟದಾಗಿದ್ದರೂ ವಿಮರ್ಶಕ ಚೆನ್ನಾಗಿದ್ದರೆ ಆ ಕಥೆ ಗೆಲ್ಲುತ್ತೆ ಅನ್ನೋದು ಈಗ ಅರ್ಥವಾಯ್ತು !!

 

"ಇನ್ನು ನಿನ್ನ ಮೂರನೆ ಕಥೆ. ತ್ರಿಶೂಲಕ್ಕೂ ಫೋರ್ಕ್’ಗೂ ಇರುವ ಸಾಮ್ಯತೆಯ ಸೊಗಸು. ಅಲ್ಲದೇ, ಆ ಪಾತ್ರಕ್ಕೆ ನೀ ಕೊಟ್ಟಿರುವ ರುದ್ರ ರೂಪ. ಅಲ್ಲಾ, ಬನ್ನನ್ನು ಚುಚ್ಚುವುದರಲ್ಲೇ ತೋರುವ ಆ ಅಕ್ರೋಶ ಇನ್ನು ವೈರಿಯ ಬೆನ್ನು ಕಂಡರೆ ಏನಾಗಬಹುದು? ಬೊಂಬಾಟ್ ಕಣೋ."

 

ನಾನು ಕುರ್ಚಿಯೇ ಮೇಲೇ ಕುಳಿತಿರಲಿಲ್ಲ !! ಎಲ್ಲೋ ಮೋಡಗಳ ಮಧ್ಯೆ ಇದ್ದೆ !!! Cloud 9 ಅಂತಾರಲ್ಲ ಹಾಗೆ ...

 

ಭಾನುವಾರ ಆಯ್ತು ... ಸೋಮವಾರ ಕೆಲಸಕ್ಕೆ ಹೋಗುವ ಹೊತ್ತಿಗೆ ಸುಂದರೇಶ ಆಗಲೇ ವಕ್ಕರಿಸಿ ಒಂದಿಬ್ಬರಿಗೆ ನನ್ನ ಕಥಾಶಕ್ತಿಯನ್ನು ಯಥಾಶಕ್ತಿ ವಿವರಿಸಿದ್ದ.

 

ಕೊನೆಗೆ ಅದು ಅಪ್ಪಿ-ತಪ್ಪಿ ಬಾಸ್ ಕೈಲಿ ಬಿತ್ತು. ಅವರು ಅದನ್ನು ಓದಿ ’ಈ ರೀತಿ ಕೆಟ್ಟ ಕೆಟ್ಟ ಕಥೆ ಬರೆಯೋದು ಬಿಟ್ಟು, ಮನೆಗೆ ಒಂದಿಷ್ಟು ಫೈಲ್ಸ್ ತೆಗೆದುಕೊಂಡೂ ಹೋಗಿ ಮುಗಿಸಿ’ ಅನ್ನೋದೆ

 

ಜೊತೆಗೆ "ಏನು ಸಡನ್ನಾಗಿ ಈ ಅವತಾರಾ?" ಎಂದರು. ನಾನು 'Ophiuchus' ಬಗ್ಗೆ ಹೇಳಿದೆ. ಹೊಸ ಸೇರ್ಪಡೆ ಬಾಸ್ ವಿಷಯದಲ್ಲಿ ಏನೂ ಪ್ರಭಾವ ಬೀರಿದಂತೆ ಇಲ್ಲ ...

 

ಅವರು ಅದಕ್ಕೆ ಹೇಳಿದರು "ಮೊದಲನೆಯದಾಗಿ ಈ ಹೊಸ ರಾಶಿ effect ಮುಂದೆ ಹುಟ್ಟುವವರಿಗೆ ನಿಮಗಲ್ಲ. ನಿಮ್ಮನ್ನು ಬದಲಿಸಲು ರಾಶಿಗೇನು ಬ್ರಹ್ಮನಿಗೂ ಆಗೋಲ್ಲ. ಎರಡನೆಯದಾಗಿ, ಈ ಹೊಸ ರಾಶಿ ಬರೀ 'Solar calendar' ಅಂದರೆ ಸೌರಮಾನ ಪದ್ದತಿ ಅನುಸರಿಸುವವರಿಗೆ ಮಾತ್ರ ಒಪ್ಪುತ್ತೆ. ನಾವು 'Lunar calendar' ಅಂದ್ರೇ ಚಾಂದ್ರಮಾನ ಅನುಸರಿಸುವವರು .. ಅರ್ಥವಾಯಿತೇ?"

 

ಏನರ್ಥವಾಯಿತೋ ಏನಿಲ್ಲವೋ ’ಯಸ್ ಬಾಸ್’ ಅಂದೆ ...

 

ನನಗೆ ಅರ್ಥವಾಗಿದ್ದು ಇಷ್ಟೇ ... ನಮ್ಮ ಅಫೀಸಿನಲ್ಲಿ ನನ್ನೊಂದಿಗೆ ಸುಂದರೇಶ ಮತ್ತೈದಾರು ಜನರಿಗೆ ಹೊಸ ರಾಶಿ ಎಫೆಕ್ಟ್ ಇಲ್ಲ. ಆದರೆ ನನ್ನ ಜೂನಿಯರ್’ಗಳಾದ ರೇಣು ಕುಟ್ಟಿ, ವಾಸನ್, ಮಹದೇವನ್ ಇವರುಗಳು ಇದ್ದಕ್ಕಿದ್ದಂತೆ ಬುದ್ದಿವಂತರಾಗಿ ನನಗೆ ಸೀನಿಯರ್’ಗಳಾದರೆ ಏನು ಗತಿ? ಯಾಕಂದರೆ ತಮಿಳರು ಮತ್ತು ಮಲಯಾಳಿ ಭಾಷಿಗರು ಸೌರಮಾನ ಪದ್ದತಿಯಂತೆ ಅನುಸರಿಸೋದು !!!

 

ಇಷ್ಟೂ ದಿನವೂ ಇದ್ದ ಈ ರಾಶಿ ಈಗ ಧುತ್ತನೆ ಎಲ್ಲಿಂದ ಬಂತು? ರಾಶಿಯಲ್ಲಿ ಗ್ರಹಕ್ಕೇನು ಗೊತ್ತು ಇವನು ನೆನ್ನೆ ಹುಟ್ಟಿದವನು ಅವಳು ಇಂದು ಹುಟ್ಟಿದವಳು ಎಂದೆಲ್ಲ? ಒಂದು ಗ್ರಹ ಒಬ್ಬೊಬ್ಬರಿಗೆ ಒಂದೊಂದು ರೀತಿ ಪರಿಣಾಮ ತೋರಲಿಕ್ಕೆ ಎನಾದ್ರೂ cut off line ಅಂತೇನಾದರೂ ಇದೆಯೇ?

 

ತಲೆ ಕೆಟ್ಟೂ ಕೆರ ಹಿಡಿದು ಹೋಯ್ತು !  ಅದೆಲ್ಲ ಬಿಡಿ, ಈಗ ನನ್ನ ಕಥ್ಯ ವಿಷಯಕ್ಕೆ ಬನ್ನಿ.

 

ನಾನು ಚಿಂತೆಯಲ್ಲಿ ಬರೆದಿದ್ದು ಸುಂದರೇಶನಿಗೆ ಚಿಂತನೆಯಲ್ಲಿ ಬರೆದಂತೆ ಕಂಡಿತು !! ನಾನು ಗಂಭೀರವಾಗಿ ಬರೆದೆ ಅಂದುಕೊಂಡರೇ ವಿಶಾಲೂ’ಗೆ ಹಾಸ್ಯವಾಗಿತ್ತು !!! ನಾನು ಕಥೆ ಅಂತ ಬರೆದರೆ ಬಾಸ್ ಕಣ್ಣಲ್ಲಿ ಅದು ಟೈಮ್ ವೇಸ್ಟು !!!!

 

ಒಟ್ಟಿನಲ್ಲಿ ನನಗೆ ಕಥೆ ಬರೆಯೋಕ್ಕೆ ಬರೋಲ್ಲ ಅನ್ನೋದು ಸ್ಪಷ್ಟವಾಯಿತು ...

 

ಇದನ್ನು ನೀವೂ ಒಪ್ಪುತ್ತೀರಾ?

 

----------

( ವಿ.ಸೂ: ಹೊಸದಾಗಿ ಸೇರ್ಪಡೆಯಾದ ರಾಶಿಯ ಮಾಹಿತಿ ಹೀಗಿದೆ. ಇದರ ಪ್ರಭಾವ ಎಷ್ಟರ ಮಟ್ಟಿಗೆ, ಯಾರ ಮೇಲೆ ಹೇಗೆ ಎಂಬೆಲ್ಲ ಮಾಹಿತಿಗಳು ಇನ್ನೂ ವಿಚಾರಣೆಯಲ್ಲಿದೆಯಂತೆ. ಸಂಪದಿಗರಲ್ಲಿ ಯಾರಿಗಾದರೂ ಹೆಚ್ಚಿಗೆ ಮಾಹಿತಿ ಗೊತ್ತಿದ್ದಲ್ಲಿ ಹಂಚಿಕೊಳ್ಳಿ ) 

 

 

 

Capricorn : January 20- to February 16

Aquarius : February 16 to March 11

Pisces : March 11 to April 18

Aries : April 18 to May 13

Taurus : May 13 to June 21

Gemini : June 21 to July 20

Cancer : July 20 to August 10

Leo : August 10 to September 16

Virgo : September 16 to October 30

Libra : October 30 to November 23

Scorpio : November 23 to November 29

Ophiuchus : November 29 to December 17

Sagittarius : December 17 to January 20 

 

 

Comments