ನನ್ನಜ್ಜಿ ಲೆಕ್ಕ
ಅವಳಿಗೆ ಕೇವಲ ಹದಿಮೂರು ವಷ೯. ಹುಟ್ಟೂರು ಪುತ್ತೂರು, ಉಡುಪಿ ತಾಲ್ಲೂಕು. ಅವಳಿಗೆ ಮದುವೆ ಗಂಡು ಗೊತ್ತಾಯಿತು. ಅವನಿಗೆ ವಯಸ್ಸು ಮೂವತ್ತೆರಡು. ಅವನ ಊರು ಉತ್ತರ ಕನ್ನಡದ ಒಂದು ಚಿಕ್ಕ ಹಳ್ಳಿ. ಆಗ ಮದುವೆಗೆ ಹೆಣ್ಣಿನ ಬರ. ತಿರಾ ಕೊಟ್ಟು(ವಧು ದಕ್ಷಿಣೆ ) ಹೆಣ್ಣನ್ನು ಮದುವೆ ಆಗುತ್ತಿದ್ದರಂತೆ. ಇನ್ನೂ ದೊಡ್ಡವಳಾಗಿಲ್ಲ;ಆಗಲೆ ಮದುವೆ ಮಾಡಿದರು. ಮೈ ತುಂಬಾ ಒಡವೆ ಗೆಜ್ಜೆಟಿಕ್ಕಿ, ತೋಳಬಂಧಿ, ಸೊಂಟಕ್ಕೆ ಬೆಳ್ಳಿ ಡಾಬು, ಕಿವಿ ಓಲೆ ಬುಗುಡಿ, ಕೈ ತುಂಬಾ ಬಳೆಗಳು ಇನ್ನೂ ಮುಂತಾದ ಆಭರಣ ಸುಂದರಿ. ದಕ್ಷಿಣದಿಂದ ಉತ್ತರಕ್ಕೆ ಅವಳ ಪಯಣ. ಗೊತ್ತಿಲ್ಲದ ಊರು. ಶಾಸ್ತ್ರ ಸಂಪೃದಾಯದ ಮನೆ. ಒಟ್ಟು ಕುಟುಂಬ. ಗಂಡನ ಮನೆ ಸೇರಿದಳು ವಷ೯ ಹದಿನಾಲ್ಕಕ್ಕೆ ಡೊಡ್ಡವಳಾಗಿ.
ಅವಳ ಭಾಷೆ ತುಳು. ಶಿವಳ್ಳಿ ಭ್ರಾಹ್ಮಣ ಕುಟುಂಬದವಳು. ನಿಧಾನವಾಗಿ ಕನ್ನಡ ಭಾಷೆ ಕಲಿತಳು. ಹದಿನಾರರ ವಯಸ್ಸಿನಲ್ಲಿ ಗಂಡು ಮಗುವಿನ ಜನನ. ಮಗಳು ಬಾಳಂತನ ಮುಗಿಸಿಕೊಂಡು ಗಂಡನ ಮನೆ ಸೇರಿದಳು.
ಗಂಡನಿಗೆ ಆರೋಗ್ಯದಲ್ಲಿ ತೊಂದರೆ ಶುರುವಾಯಿತು. ಆಗ ನಾಟಿ ವೈದ್ಯ ಪದ್ದತಿ. ಆಗಿದ್ದು ರಕ್ತ ಹೊಟ್ಬ್ಯಾನೆ. ಚಿಕಿತ್ಸೆ ಫಲಕಾರಿಯಾಗಲಿಲ್ಲ. ಇಹ ಲೋಕ ತ್ಯಜಿಸಿದರು. ಮಗನಿಗಿನ್ನೂ ಆರು ತಿಂಗಳು. ಸುದ್ದಿ ತಿಳಿದು ಅವಳಪ್ಪ.ಓಡಿ ಬಂದರು. ಸಂಪ್ರದಾಯದದ ಶರತ್ತಿಗೆ ಬಲಿಯಾದಳು ಅವಳು. ತಲೆ ಬೋಳಿಸಿ, ಕೈ ಬಳೆ ತೆಗೆದು, ಕೆಂಪು ಸೀರೆ ಉಡಿಸಿ ಯೌವನ ವಿಕಾರ ಮಾಡಲಾಯಿತು ಅವಳಪ್ಪ ತಡೆದರೂ. “ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ” ಹೇಳಿ ಬಾಯಿ ಮುಚ್ಚಿಸಿದರು. ಅಪ್ಪ ಸ್ವಲ್ಪ ತಿಂಗಳು ಇದ್ದು ಊರಿಗೆ ಹೋದರು.
ಶುರುವಾಯಿತು ಅವಳ ಜೀತದ ಬದುಕು. ಗಂಡನ ದಾಯವಾದಿ ಅಣ್ಣನ ಎಜಮಾನಿಕೆ. ಆಗಿನ ಕಾಲದಲ್ಲಿ ವಿಧವೆ ಹೆಣ್ಣು ಎಲ್ಲ ಕಾಯ೯ಕ್ಕೂ ನಿಷಿದ್ದ. ಹೊರಗಡೆ ಕೆಲಸ ಮಾಡಿಕೊಂಡಿರಬೇಕು. ಕೊಟ್ಟಿಗೆ ಕೆಲಸ, ತೋಟದ ಕೆಲಸ, ಪಾತ್ರೆ ತೊಳೆಯೋದು, ಸಗಣಿ ಹಾಕಿ ಮನೆ ಸಾರಿಸೋದು, ಹಸು ಎಮ್ಮೆ ಮೇಯಿಸೋದು ಇತ್ಯಾದಿ. ಪಂಕ್ತಿಯಲ್ಲಿ ಯಾರ ಜೊತೆಗೂ ಊಟಕ್ಕೆ ಕುಳಿತು ಕೊಳ್ಳುವ ಹಾಗಿಲ್ಲ. ಯಾವ ಮಂಗಲ ಕಾಯ೯ಕ್ಕೆ ಹೋಗುವ ಹಾಗಿಲ್ಲ. ಆದಷ್ಟು ಮನೆ ಹಿತ್ತಲ ಕಡೆ ವಾಸವಾಗಿರಬೇಕು. ಎಲ್ಲಾದರು ಮನೆ ಮಂದಿ ಹೊರಟರೆ ಅಥವಾ ದಾರಿಯಲ್ಲಿ ವಿಧವೆ ಎದುರಾದರೆ ಅಪಶಕುನ ಅಂತ ಬಾವಿಸುತ್ತಿದ್ದ ಕಾಲವದು.
ಮಗನು ಶಾಲೆಗೆ ಹೋಗುವ ವಯಸ್ಸು. ಹತ್ತಿರದಲ್ಲಿರೊ ಶಾಲೆ ನಾಲ್ಕನೇ ಕ್ಲಾಸಿಗೆ ಮುಗಿಯಿತು ಅವನ ವಿದ್ಯಾಭ್ಯಾಸ. ಕಾರಣ ಮುಂದಿನ ಈಯತ್ತೆ ಇಲ್ಲ ಹಳ್ಳಿ ಶಾಲೆ. ಮನೆ ಕೆಲಸ ತೋಟದ ಕೆಲಸ ಕಲಿ ಅನ್ನುವ ಶರತ್ತು ದೊಡ್ಡಪ್ಪನದು. ಹದಿನೆಂಟರ ಹುಡುಗಿಯೊಂದಿಗೆ ಮಗ ಇಪ್ಪತ್ತೆರಡಕ್ಕೆ ಕಾಲಿಟ್ಟಾಗ ಮದುವೆ ಮಾಡಿದಳು ಆ ಸಾಧ್ವಿ. ಸೊಸೆಯ ಕಡೆ ಒಡಹುಟ್ಟಿದವರು ಮುಂದೆ ನಿಂತು ಪಿತ್ರಾಜಿ೯ತ ಆಸ್ತಿಯಲ್ಲಿ ಭಾಗ ಮಾಡಿಸಿ ಹಂಗಿನ ಮನೆಯಿಂದ ಬಿಡುಗಡೆ ಗೊಳಿಸಿದರು. ಸೊಸೆ ಮಗನ ಜೊತೆ ಸುಃಖದ ಸಂಸಾರ ಕಂಡಳು ಸುಮಾರು ಅವಳ ಮೂವತ್ತೆಂಟರ ವಯಸ್ಸಿಗೆ.
ಮನೆಯ ಜವಾಬ್ದಾರಿ ಹೊತ್ತು ಪ್ರತಿಯೊಂದನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಜಾಣೆ ಅವಳಾಗಿದ್ದಳು. ಸೊಸೆಗೆ ಅಡಿಗೆ ಮನೆ ಜವಾಬ್ದಾರಿ ಮಕ್ಕಳನ್ನು ನೋಡಿಕೊಳ್ಳುವುದಷ್ಟೆ. ಹಸು ಕಟ್ಟಿ ಹಾಲು ವ್ಯಾಪಾರ, ಅಡಿಕೆ ತೋಟದ ವ್ಯವಸಾಯ ಪದ್ದತಿ ನಡೆಸಿಕೊಂಡು ಹೋಗುವ ಜಾಣ್ಮೆ ಯಾರಾದರೂ ಮೆಚ್ಚಬೇಕು. ಮಗನನ್ನು ಮುಂದಿಟ್ಟುಕೊಂಡು ತನ್ನೆಲ್ಲ ಒಡವೆ ದಾರೆ ಎರೆದು ಸುಂದರವಾದ ಮನೆ ಕಟ್ಟಿಸಿದಳು. ಮೊಮ್ಮಕ್ಕಳಿಗೆ ಬದುಕು ನಡೆಸುವ ಪಾಠ ಹೇಳಿಕೊಟ್ಟಳು. ಮಗನನ್ನು ವ್ಯವಹಾರದಲ್ಲಿ ಪಳಗಿಸಿದಳು. ಊರಲ್ಲಿ ದಿಟ್ಟ ಹೆಣ್ಣಾಗಿ ಮೆರೆದಳು. ವಿದ್ಯಾಭ್ಯಾಸ ಕಲಿತವಳಲ್ಲ. ಆದರೂ ಎಲ್ಲ ಗೋಡೆಯ ಮೇಲೆ ಗೀಟಾಕಿ, ಹುಂಡು(point)ಹಾಕಿ ಎಣಿಸುವವಳು. ಉಲ್ಟಾ ಸೀದಾ ಮಗ್ಗಿ ಸರಾಗವಾಗಿ ಹೇಳುವಷ್ಟು ಬುದ್ಧಿವಂತೆ. ಯಕ್ಷಗಾನ ಪ್ರಿಯೆ. ಊರಿಂದೂರಿಗೆ ಯಕ್ಷಗಾನ ನೋಡಲು ಚಪ್ಪಲಿಯಿಲ್ಲದ ಕಾಲ್ನಡಿಗೆಯಲ್ಲಿ ಮೈಲಿಗಟ್ಟಲೆ ಹೋಗಿ ಬರುವ ಉತ್ಸಾಹ.
ಆದರೆ ಈ ಸಂತೋಷದ ದಿನಗಳು ಕೊನೆಗಾಲದಲ್ಲಿ ದೇವರು ಕಿತ್ತುಕೊಂಡ. ಪ್ರಾರಬ್ಧ ಖಮ೯ ಮನುಷ್ಯ ಅನುಭವಿಸಿಯೇ ಸಾಯಬೇಕು. ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಪೆರಾಲಿಸಸ್ ಆಗಿ ನಾಲ್ಕು ವಷ೯ ಮಲಗಿದಲ್ಲೆ. ಮಾತು ನಿಂತಿತು. ಬರಿ “ಪಾಂಡು” ಅನ್ನುವುದೊಂದೇ ಮಾತು ಬಾಯಲ್ಲಿ. ಎಷ್ಟು ಚಿಕಿತ್ಸೆ ಕೊಟ್ಟರೂ ಫಲಕಾರಿಯಾಗಲಿಲ್ಲ. ಇದೇ ಖಾಯಿಲೆಯಲ್ಲಿ ಕೊನೆಯುಸಿರೆಳೆದಳು.
ಇಷ್ಟು ಹೊತ್ತು ಓದಿರೋದು ಕಥೆಯಲ್ಲ.
ಇವಳು ನನ್ನಜ್ಜಿ. ನಿಜವಾಗಿ ನಡೆದಿರೋದು. ಯಾವ ರೀತಿ ಬದುಕು;ನಿಜಕ್ಕೂ ಊಹಿಸಲೂ ಸಾಧ್ಯವಾಗುವುದಿಲ್ಲ. ಅವಳು ಕಾಲವಾಗಿ ಇಪ್ಪತ್ತಾರು ವಷ೯ಗಳಾಯಿತು. ಈಗ ಬದುಕಿದ್ದರೆ ನೂರರ ಗಡಿ ದಾಟುತ್ತಿದ್ದಳು. ಮಗನಿಗೆ ಈಗ ಎಂಬತ್ತೇಳು ವಷ೯. ಸೊಸೆ ಅವಳ ಕಣ್ಣೆದುರೆ ಅವಳ ಐವತ್ತೆರಡು ವಷ೯ಕ್ಕೆ ಕಾಲವಾದಳು. ಊಹಿಸಿ ಅವಳ, ತಾಳ್ಮೆ, ಜಾಣ್ಮೆ ಬದುಕಿದ ರೀತಿ.
ನನ್ನಜ್ಜಿ ಕಾಲದ
ಬಾಯ್ ಲೆಕ್ಕ
ಗೋಡೆಗೆ ಗೀಟಾಕಿದರೆ ಒಂದು ಲೆಕ್ಕ
ಹುಂಡಾಕಿದರೆ ಇನ್ನೊಂದು ಲೆಕ್ಕ
ಸುಣ್ಣದುಂಡೇಲಿ
ಬರೀತಿದ್ದ ಲೆಕ್ಕ
ಇಲ್ಲಿ ಈಗ ಬರಿ
ಕಂಪ್ಯೂಟರ್ ಲೆಕ್ಕ.
ಹುಂಡಿಟ್ಟರೆ ಹಾಲ್ಲೆಕ್ಕ
ಗೀಟಾಕಿದರೆ ಬಾಳೆಕಾಯಿ ಲೆಕ್ಕ
ನಂಗೂ ಅಥ೯ ಆಗ್ತಿರಲಿಲ್ಲ
ಆ ಪಾಟಿ ಗಣಿತದ ಲೆಕ್ಕ
ಉಟ್ಟುಂಡು ಎಲೆ ಅಡಿಕೆ
ಮೆದ್ದ ಕೆಂಪನೆ ಬಾಯಲ್ಲಿ
ಬರಿ ಬಾಯಲೆಕ್ಕ ಹೇಳತಿದ್ರು
ಮಗ್ಗಿ ಗಿಗ್ಗಿ ಸೀದಾ ಉಲ್ಟಾ
ಹೇಗೆ ಬೇಕಾದರು ಉದುರುತ್ತಿತ್ತು
ಓದು ಬರಹ ಕಲಿತಿಲ್ಲ
ಪೆನ್ನು ಪುಸ್ತಕ ಕಂಡಿಲ್ಲ.
ನೆನಪಿಗೆ ಹಾಕುತ್ತಿದ್ದರು
ಸೆರಗಿಗೆ ಗಂಟು
ಒಂದಾಕಿದರೆ ಕೊಡೊ ಲೆಕ್ಕ
ಎರಡಾಕಿದರೆ ಇಸ್ಕೋಳ್ಳೊ ಲೆಕ್ಕ
ಬಡ್ಡಿ ಗಿಡ್ಡಿ ಏನಿಲ್ಲ ರೊಕ್ಕಕ್ಕೆ
ಕಷ್ಟಕ್ಕಾಗದ ರೊಕ್ಕ ಇಟ್ಕಂಡೇನು ಪ್ರಯೋಜನ
ಊಟಕ್ಕಿಲ್ಲದ ಉಪ್ಪಿನ ಕಾಯಿ..…ಸಮ
ಹೇಳಿ ಬಾಯಿ ಮುಚ್ಚಿಸುವ ತಾಕತ್ತಿತ್ತು
ಈಗೆಲ್ಲಿ ಕಾಣಲಿ ನನ್ನಜ್ಜಿ ನಿಯತ್ತು
ಬಹುಶಃ ಹಳ್ಳೀಲೂ
ಮಾಯವಾಗಿರಬೇಕು ಈ ಜಾಣೆಯ ಲೆಕ್ಕ.
ಕಾಲ ಕೆಟ್ಟಿಲ್ಲ ಕಾಲ ನಾವೇ ಕೆಡಿಸಿದ್ದು
ಲೋಕಾರೂಢಿ ಮಾತಾಡ್ತಿದ್ದ ನನ್ನಜ್ಜಿ
ಬೆಂಗಳೂರು ಗಲ್ಲಿ ಗಲ್ಲಿ ತಿರುಗಬೇಕು
ಅನ್ನೊ ಆಸೆ ಅವರಿಗೆ ಇರಲಿಲ್ಲ
ಕುದುರೆ ರೇಸು ನೋಡದೆ ಬಿಡಲಿಲ್ಲ
ಚಪ್ಪಲಿ ಮೆಟ್ಟದ ಕಾಲಲ್ಲಿ
ಊರಿಂದ ಊರಿಗೆ ಹೋಗತಿದ್ರು
ಯಕ್ಷಗಾನ, ಪ್ರಸಂಗದ ಗೀಳಿಟ್ಟಕಂಡು
ಅವರ ಉಮೇದಿಗೆ ಹೊಡಿಬೇಕ್ರಿ ಒಂದು ಸಲಾಮ್.
ಹದಿಮೂರಕ್ಕೆ ಮೂವತ್ತೆರಡವನ ವರಿಸಿ
ರಕ್ತ ಹೊಟ್ಬ್ಯಾನೆ ಬಂದು
ಹದಿನಾರಕ್ಕೆ ಗಂಡ ಸತ್ತು
ಬೋಳಿಸಿಬಿಟ್ಟರು ತಲೆ
ಬಳೆ ತೊಟ್ಟ ಕೈ
ರೂಪ ವಿಕಾರಗೊಳಿಸಿ
ಕೆಂಪು ಸೀರೆ ಸೆರಗು
ತಲೆ ಮೇಲಿಂದ ಮುಚ್ಕಂಡು
ಕಂಕಳಲ್ಲಿ ನನ್ನಪ್ಪನೆಂಬ ಕೂಸಿಟ್ಕಂಡು
ಯೌವನವನ್ನೇ ಮರೆತು.
ದಾಯಾದಿ ಅಡಿಯಾಳಾಗಿ
ಬಿಸಿಲಿಲ್ಲ ಬೆಂಕಿಯಿಲ್ಲ
ಜೀತಗೈದ ಅವರ ಬಾಳು
ಮಟ ಮಟ ಮಧ್ಯಾಹ್ನ
ಉರಿಬಿಸಿಲು ಲೆಕ್ಕಕ್ಕಿಲ್ಲ
ಕೊಟ್ಟಿಗೆ ಹಸು ಎಮ್ಮೆ ಮೇಯಿಸಿ
ಮೈ ತಡವಿ ಕಣ್ಣೀರಿಟ್ಟು
ತಮ್ಮ ನೋವ ಮರೀತಿದ್ರು .
ಕೊನೆವರೆಗೂ ನಮಗೆಲ್ಲ ಹರಸ್ತಿದ್ರು
ಹಂಗಿನರಮನೆಗಿಂತ ಇಂಗಡದ ಗುಡಿ ಲೇಸು
ಬದುಕುವುದಕ್ಕೂ ಹೇಳಿಕೊಟ್ಟರು
ತಮ್ಮನುಭವದ ಲೆಕ್ಕ.
ಅಜ್ಜಿಗೊಂದು ಸಾಷ್ಟಾಂಗ ನಮಸ್ಕಾರ ನಾ ಬರೆದ ಕವನದೊಂದಿಗೆ!