ನನ್ನೂರನ್ನು ರೂಪಿಸಿದ ಕಾಪಿಕಾಡು ಶಾಲೆ
ರಸ್ತೆಯ ಎರಡೂ ಬದಿಗಳಲ್ಲಿದ್ದ ಕಾಪಿಕಾಡಿನ ಕಾಲನಿಯಲ್ಲಿ ಸಾಕಷ್ಟು ಮನೆಗಳಿದ್ದು ಸಾಕಷ್ಟು ಜನಸಂಖ್ಯೆಯೂ ಇತ್ತು. ಅವರ ಆರಾಧ್ಯ ದೈವದ ದೈವಸ್ಥಾನವೂ ಇದ್ದು, ಗುಡ್ಡೆಯ ದಾರಿಯಲ್ಲಿ ಚಾಮುಂಡೇಶ್ವರಿ ದೇವಸ್ಥಾನವಿತ್ತೆಂದು ಕೇಳಿದ್ದೇನೆ. ದೈವಸ್ಥಾನದ ಕೋಲ, ಚಾಮುಂಡೇಶ್ವರಿಯ ವಾರ್ಷಿಕ ಪೂಜಾ ಸಮಯದಲ್ಲಿ ನಮ್ಮ ಮನೆಯಿಂದ ವಂತಿಗೆ ಕೊಂಡುಹೋಗಲು ಮಧ್ಯ ವಯಸ್ಸಿನ ಹಿರಿಯರೊಬ್ಬರು ಮನೆಗೆ ಬರುತ್ತಿದ್ದರು. ಅವರ ಹೆಸರು ಕಾಂತರ ಎಂದು ನೆನಪು. ಅಪ್ಪ ಅವರಿಗೆ ವಂತಿಗೆ ನೀಡುವುದರ ಜತೆಗೆ ಮನೆಗೆ ಬಂದವರಿಗೆ ಚಹಾ ತಿಂಡಿ ನೀಡುವ ಕೆಲಸ ಅಮ್ಮನಿಗೆ. ಸಾಮಾನ್ಯವಾಗಿ ಅಪ್ಪ ಶಾಲೆಗೆ ಹೊರಡುವ ಮೊದಲು ಬೆಳಗ್ಗೆ ಬರುತ್ತಿದ್ದರು. ಚಹಾ ತಿಂಡಿಯ ಲೋಟ ತಟ್ಟೆ ತೊಳೆಯಲು ನಾನೇ ಒಯ್ಯುತ್ತಿದ್ದೆ. ಕೋಲ, ಪೂಜೆ ಮುಗಿದ ಬಳಿಕ ಅದರ ಪ್ರಸಾದವೆಂದು ಹಲಸಿನ ಎಲೆಯಲ್ಲಿ ಕಪ್ಪು ಮಸಿ ತಂದು ಕೊಡುತ್ತಿದ್ದರು. ಅದೇಕೆ ಅಲ್ಲಿ ಕುಂಕುಮ, ಅರಿಶಿನ ಇಲ್ಲ ಅಥವಾ ಗಂಧ ಇಲ್ಲ ಎನ್ನುವುದು ನನ್ನ ಪ್ರಶ್ನೆಯಾಗಿತ್ತು. ಆಗ ಅಪ್ಪ ಅದು ಆಯಾಯ ದೇವರಿಗೆ ಸಲ್ಲಿಸುವ ಪೂಜೆಯ ಹಿನ್ನೆಲೆಯಲ್ಲಿ ಇರುತ್ತದೆ ಎನ್ನುತ್ತಿದ್ದರು. ಅಲ್ಲಿನ ಕೋಲಕ್ಕೆ ಪೂಜೆಗೆ ನಾವ್ಯಾರೂ ಹೋದ ನೆನಪಿಲ್ಲ. ಅಲ್ಲಿನ ಮನೆಗಳಲ್ಲಿ ಹೆಚ್ಚಾಗಿ ಕೋಳಿ ಸಾಕುತ್ತಿದ್ದರು. ಬೆಕ್ಕು ನಾಯಿಗಳೂ ಸಹಜವೇ. ಹಿರಿಯ ಗಂಡಸರು ಕೂಲಿ ಕೆಲಸಕ್ಕೆ, ಮೇಸ್ತ್ರಿಗಳಾಗಿ, ಅಂಗಡಿಗಳಲ್ಲಿ ಸಾಮಾನು ಹೊರೆ ಇಳಿಸುವ ಕೆಲಸಗಳಿಗೆ, ಸಾಮಾನು ಸಾಗಿಸುವ ಕೆಲಸಗಳಲ್ಲಿ, ಇನ್ನು ಕೆಲವರು ಮುನಿಸಿಪಾಲಿಟಿಯ ವಿವಿಧ ಭಾಗದ ಸೇವಾ ಕಾರ್ಯಗಳಲ್ಲಿ ಇದ್ದರೆ, ಹಾಗೆಯೇ ವಿದ್ಯಾವಂತರು ಕೆಲವರು ಅಂಚೆ ಕಚೇರಿಗಳಲ್ಲಿ, ಸರಕಾರಿ ಕಚೇರಿಗಳಲ್ಲಿ ಜವಾನರಾಗಿ, ಇನ್ನು ಕೆಲವರು ನೌಕರಿಯಲ್ಲಿಯೂ ಇದ್ದರು. ಮಹಿಳೆಯರೂ ಅಲ್ಪ ಸ್ವಲ್ಪ ಓದಿದವರು ಶಾಲೆಗಳಲ್ಲಿ ಜವಾನೆಯರಾಗಿದ್ದರೆ, ನನ್ನ ಶಾಲಾ ಹಿರಿಯ ಸಹಪಾಠಿಗಳು ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿ ಶಾಲಾ ಕಾಲೇಜುಗಳಲ್ಲಿ, ಆಸ್ಪತ್ರೆಗಳಲ್ಲಿ ನೌಕರಿಯಲ್ಲಿದ್ದರು. ಸರಕಾರಿ ಕಚೇರಿಯಲ್ಲಿಯೂ ನೌಕರಿ ಪಡೆದಿದ್ದರು. ನಮ್ಮ ಕಾಪಿಕಾಡು ಶಾಲೆಯಲ್ಲಿ ಬಾಗಿ ಎನ್ನುವವರು ಜವಾನೆಯಾಗಿದ್ದು ಮುಂದೆ ಬೇರೆ ಶಾಲೆಗಳಿಗೆ ವರ್ಗಾವಣೆ ಹೊಂದಿದ್ದರು. ಇವರ ಹಿರಿಯ ಮಗಳು ಶಾಲಿನಿ ನನ್ನ ತರಗತಿಯಲ್ಲಿದ್ದಳು. ಹಿರಿಯ ಗಂಡಸರಲ್ಲಿ ಇಬ್ಬರು ಅಧ್ಯಾಪಕರಿದ್ದು ನಮ್ಮ ಕಾಪಿಕಾಡು ಶಾಲೆಯಲ್ಲಿದ್ದವರು ರಂಗಮಾಸ್ತರರು. ಇನ್ನೊಬ್ಬರು ಕೃಷ್ಣ ಮಾಸ್ತರರು ಬೇರೆ ಮುನಿಸಿಪಲ್ ಶಾಲೆಯಲ್ಲಿದ್ದು ಮುಂದೆ ನಮ್ಮ ಶಾಲೆಗೆ ವರ್ಗಾವಣೆಗೊಂಡು ಬಂದಿದ್ದರು. ನನ್ನ ತರಗತಿಯಲ್ಲಿದ್ದ ಮೀರಾ ಎನ್ನುವಾಕೆ ಸರಕಾರಿ ಕಚೇರಿಯಲ್ಲಿ ನೌಕರಿಯಲ್ಲಿದ್ದಳು. ಆಕೆಯ ಸಂಬಂಧಿ ರಾಧಾ ಟೀಚರ್ ನಾನು ಏಳನೆಯ ತರಗತಿಯಲ್ಲಿರುವಾಗ ನನಗೆ ಅಧ್ಯಾಪಿಕೆಯಾಗಿ ನಮ್ಮ ಶಾಲೆಗೆ ಬಂದರು. ನನ್ನ ಜತೆಯಲ್ಲಿ ಹಿರಿಯ ಕಿರಿಯ ಹುಡುಗಿಯರು ಚೆನ್ನಾಗಿ ಕಲಿಯುತ್ತಿದ್ದರೆ ಹುಡುಗರಿಗೆ ಒಂದಿಷ್ಟು ಆಲಸ್ಯ ಗೋಚರಿಸುತ್ತಿತ್ತು. ಅವರಲ್ಲಿ ಕೆಲವರು ಶಾಲೆ ತಪ್ಪಿಸುತ್ತಿದ್ದರು. ನಾನು 5ನೆಯ ತರಗತಿಯಲ್ಲಿರುವಾಗ ಹಾಗೆ ಶಾಲೆಗೆ ತಪ್ಪಿಸುತ್ತಿದ್ದ ಹುಡುಗರನ್ನು ಕರೆತರಲು ನಮ್ಮ ಅಧ್ಯಾಪಕರಾದ ಗುರುವಪ್ಪ ಮಾಸ್ತರರು ತರಗತಿಯ ಮಕ್ಕಳೊಂದಿಗೆ ಹೋಗಿ ಹುಡುಗರನ್ನು ಹುಡುಕಿ ಕರೆತರುತ್ತಿದ್ದರು. ಹಾಗೆ ಒಮ್ಮೆ ಹೋದಾಗ ಆ ಗುಂಪಿನಲ್ಲಿ ನಾನೂ ಹೋಗಿದ್ದೆ. ಆಗ ನಮ್ಮ ಆ ಸಹಪಾಠಿ ಕೋಳಿಗೂಡಲ್ಲಿ ಅಡಗಿ ಕುಳಿತಿದ್ದ. ಮುಂದೆ ಆತನ ಹೆಸರಿನೊಂದಿಗೆ ಕೋಳಿಗೂಡು ಎಂದು ಸೇರಿಸಿ ಮಕ್ಕಳು ತಮಾಷೆ ಮಾಡುತ್ತಿದ್ದರು. ಹೀಗೆ ಅಧ್ಯಾಪಕರ ಹೆದರಿಕೆಯಿಂದ ಕಲಿತ ವಿದ್ಯಾರ್ಥಿಗಳು ಹಾಗೂ ಕೆಲವು ಬುದ್ಧಿವಂತ ವಿದ್ಯಾರ್ಥಿಗಳು ಒಳ್ಳೆಯ ನೌಕರಿ ಹಿಡಿದವರಿದ್ದಾರೆ. ಬ್ಯಾಂಕುಗಳಲ್ಲಿಯೂ ಉದ್ಯೋಗಿಗಳಾದವರೂ ಇದ್ದಾರೆ.
ಆ ದಿನಗಳಲ್ಲಿ ಕಾಲನಿಯಲ್ಲಿ ಒಬ್ಬ ಹಿರಿಯ ಮಹಿಳೆ ಕಣ್ಣು ತಪಾಸಣೆ ಮಾಡಿಸಿ ಕೊಂಡು ಕನ್ನಡಕ ಧರಿಸಿಕೊಂಡಿದ್ದರು. ಶಾಲೆಗೆ ಹೋಗುವ ಕೆಲವು ತುಂಟ ಹುಡುಗರು ಆಕೆಗೆ ತಮಾಷೆ ಮಾಡುತ್ತಿದ್ದುದು ಇತ್ತು. ಆಗ ಡಾ. ಮೋದಿಯವರು ಬಹಳ ಪ್ರಸಿದ್ಧರಾದ ಕಣ್ಣಿನ ವೈದ್ಯರಾಗಿದ್ದರು. ಉಚಿತವಾಗಿ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆಯನ್ನು ಸಾರ್ವಜನಿಕ ಯಜ್ಞವೆಂಬಂತೆ ನಡೆಸುತ್ತಿದ್ದರು. ಅವರ ಈ ಸೇವಾ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತವರು ರೋಟರಿ ಸಂಸ್ಥೆಗಳವರು. ಈ ಹಿನ್ನೆಲೆಯಲ್ಲಿ ಕಣ್ಣಿನ ಆರೋಗ್ಯದ ಬಗಗೆ ಅರಿವುಮೂಡಿ ಕನ್ನಡಕ ಧರಿಸುವುದು ಪ್ರಾರಂಭವಾಗಿತ್ತಷ್ಟೇ. ಉಚಿತ ಕನ್ನಡಕ ವಿತರಣೆಯೂ ಇದ್ದು ಬಡವರಿಗೆ ಸಹಕಾರಿಯಾಗಿತ್ತು. ಆದರೆ ಈ ತುಂಟ ಹುಡುಗರಿಗೆ ಅವುಗಳ ಅರಿವು ಇಲ್ಲ. ಜತೆಗೆ ಕನ್ನಡಕ ಧರಿಸುವುದು ಓದು ಬಲ್ಲವರು ಎಂಬ ನಂಬಿಕೆ ಇದ್ದುದರಿಂದ ಅವರು ಗೇಲಿ ಮಾಡುತ್ತಿದ್ದಿರಬೇಕು. ಆದರೆ ನಾವು ಕೆಲವು ಹುಡುಗಿಯರು ಇಂತಹ ಹುಡುಗರ ಬಗ್ಗೆ ಅಧ್ಯಾಪಕರಲ್ಲಿ ದೂರು ನೀಡಿ ಅವರಿಗೆ ಬೈಗಳು ಸಿಗುವಂತಾದುದೂ ಇದೆ. ಜೊತೆಗೆ ಹಾಗೆಲ್ಲ ತಮಾಷೆ ಮಾಡಬಾರದೆಂಬ ಎಚ್ಚರಿಕೆಯ ತಿಳುವಳಿಕೆ ಮೂಡಿಸುವುದಕ್ಕೆ ಕಾರಣವಾದುದೂ ಇದೆ. ಏನಿದ್ದರೂ ನಮ್ಮ ಜಿಲ್ಲೆಯಲ್ಲಿ ಕುದ್ಮುಲ್ ರಂಗರಾಯರಂತಹವರಿಂದ ದಲಿತರಿಗೆ ಮನೆ ನಿವೇಶನಗಳು ದೊರೆತಿದ್ದರೆ, ನಮ್ಮ ಶಾಲೆಯಿಂದ ವಿದ್ಯಾಭ್ಯಾಸ ಪಡೆದವರು ವಿದ್ಯಾವಂತರಾಗಿ ಸುಭದ್ರ ಬದುಕಿನ ನೆಲೆಗಟ್ಟನ್ನು ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ ಎನ್ನುವುದು ಕೂಡ ನನ್ನೂರಿನ ಹೆಮ್ಮೆಯ ವಿಷಯವೇ. ಗಾಂಧೀಜಿಯವರು ಮಂಗಳೂರಿಗೆ ಬಂದಾಗ ಕುದ್ಮುಲ್ ರಂಗರಾಯರನ್ನು ಭೇಟಿಯಾದುದು ಅಲ್ಲದೆ ಕಾಪಿಕಾಡು ಕೊಲನಿಗೂ ಭೇಟಿಕೊಟ್ಟ ಬಗ್ಗೆ ದಾಖಲೆ ಇದೆ.
ನಾನು ಹಿಂದೆಯೇ ಹೇಳಿದಂತೆ ನನ್ನೂರಿಗೆ ಡಾಮರು ರಸ್ತೆ ಇರಲಿಲ್ಲ. ಜತೆಗೆ ವಿದ್ಯುದ್ದೀಪದ ವ್ಯವಸ್ಥೆಯೂ ಇರಲಿಲ್ಲ. ಆಗೆಲ್ಲಾ ದಾರಿಬದಿಯಲ್ಲಿ ಕಂಬಗಳ ಮೇಲೆ ದೀಪದ ಬುಡ್ಡಿಗಳು ಗಾಜಿನ ಬುರುಡೆಯೊಳಗೆ ಇದ್ದವು. ಅವುಗಳಿಗೆ ಎಣ್ಣೆ ಹಾಕಿ ದೀಪ ಉರಿಸುವ ಕೆಲಸ ಮಾಡುತ್ತಿದ್ದವರು ಕಾಲನಿಯಲ್ಲಿದ್ದ ಬಾಬಣ್ಣ ಎನ್ನುವವರು. ಅವರು ಸಂಜೆಯಾಗುತ್ತಲೇ ಒಂದು ಕೈಯಲ್ಲಿ ಏಣಿ, ಇನ್ನೊಂದು ಕೈಯಲ್ಲಿ ಸೀಮೆಎಣ್ಣೆಯ ಡಬ್ಬಿ ಹಿಡಿದುಕೊಂಡು ಬರುತ್ತಿದ್ದರು. ಏಣಿ ಹತ್ತಿ ಗಾಜಿನ ಬುರುಡೆ ತೆರೆದು ಒಳಗಿದ್ದ ಲ್ಯಾಂಪನ್ನು ಸ್ವಚ್ಛಗೊಳಿಸಿ, ಅದರ ಬುಡ್ಡಿಗೆ ಸೀಮೆಎಣ್ಣೆ ತುಂಬಿ ದೀಪ ಉರಿಸುತ್ತಿದ್ದರು. ಬೇಸಗೆಯ ಕಾಲದಲ್ಲಿ ನಮಗೆ ಹಸಿ ಗೇರುಬೀಜಗಳನ್ನು ಕೊಯ್ದು, ಸಿಪ್ಪೆ ಸುಲಿದು ತಂದು ಕೊಡುತ್ತಿದ್ದವರು ಕಾಲನಿಯ ಕೆಲವು ಮಹಿಳೆಯರು. ಯುಗಾದಿ ಹಬ್ಬದ ವೇಳೆ ನಮಗೆ ನೂರೋ ಇನ್ನೂರೋ ಬೀಜಗಳು ಬೇಕು ಎಂದು ಮೊದಲೇ ಹೇಳ ಬೇಕಾಗುತ್ತಿತ್ತು. ಇನ್ನು ಕೆಲವು ಹೆಂಗಸರು ಮಳೆಗಾಲದಲ್ಲಿ ಗದ್ದೆಯಲ್ಲಿ ಸಿಗುವ `ನರ್ತೆ' ಹಾಗೆಯೇ ಸಮುದ್ರ ತೀರದಲ್ಲಿ ಸಿಗುವ `ಮರುವಾಯಿ'ಗಳನ್ನು ಹೆಕ್ಕಿ ಮಾರಾಟ ಮಾಡುತ್ತಿದ್ದರು. ಹಿರಿಯ ವಯಸ್ಸಿನ ಮಹಿಳೆಯರು, ಗಂಡಸರೂ ಮನೆಯಲ್ಲಿದ್ದರೆ ಉಳಿದಂತೆ ಗಂಡಸರು ಹೆಂಗಸರು ಒಂದಲ್ಲ ಒಂದು ಕೆಲಸಕ್ಕೆ ಹೋಗಿ ದುಡಿದು ತಿನ್ನುವ ಸಂಸ್ಕೃತಿ ಅಲ್ಲಿ ಇತ್ತು. ದಸರಾ ಸಮಯದಲ್ಲಿ ಕಾಲನಿಯ ಕೆಲವು ಹಿರಿಯರು ಹಾಗೂ ಹುಡುಗರು ವೇಷ ಹಾಕುತ್ತಿದ್ದರು. ಹುಡುಗರ `ಚಟ್ನಿ ವೇಷ'ವನ್ನು ನೆನೆಸಿಕೊಂಡರೆ ಈಗ ನಗು ಬರುತ್ತದೆ. ಉಳಿದಂತೆ ಹಿರಿಯರು ಹಾಲು ಮಾರುವ ವೇಷ, ಬೈಹುಲ್ಲು ಮಾರುವ ವೇಷ, ಕೊರಗಜ್ಜನ ವೇಷ ಹಾಕುತ್ತಿದ್ದು ಒಂದಿಷ್ಟು ಕಾಸು ಸಂಪಾದನೆ ಮಾಡುತ್ತಿದ್ದರು. ಹುಲಿವೇಷದ ಒಂದು ತಂಡವೇ ಇತ್ತು. ಹುಲಿವೇಷ ಹಾಕುವುದರೊಂದಿಗೆ ಅದರ ಹಿಮ್ಮೇಳದಲ್ಲಿ ತಾಸೆ, ತಮಟೆಗಳ ವಾದ್ಯಗಾರಿಕೆಯೂ ಅವರದೇ ಗುಂಪಿನವ ರಾಗಿದ್ದು, ಈ ಎಲ್ಲ ವೇಷಗಳು ನಮ್ಮ ಮನೆಗೆ ತಪ್ಪದೆ ಬರುತ್ತಿದ್ದವು. ಗುಡ್ಡೆಯಲ್ಲಿದ್ದ ಮನೆಯಾದರೂ ಮಾಸ್ಟ್ರ ಮನೆ ಎಂಬ ಕಾರಣಕ್ಕೆ. ಜೊತೆಗೆ ಅವರವರ ವೇಷಕ್ಕೆ ತಕ್ಕಂತೆ ಹಣವೂ ಅವರಿಗೆ ದೊರೆಯುತ್ತಿತ್ತು. ಅಪ್ಪ, ಅಮ್ಮ ಅವರಿಗೆ ಹಣ ನೀಡುತ್ತಿದ್ದ ವೇಳೆ ಗಡಂಗಿಗೆ ಹೋಗಿ ಹಣ ಹಾಳು ಮಾಡಬೇಡಿ ಎಂಬ ಎಚ್ಚರಿಕೆಯನ್ನೂ ಕೊಡುತ್ತಿದ್ದರು. ``ಇಜ್ಜಿ ಮಾಸ್ಟ್ರೆ, ಇಜ್ಜಿ ಅಮ್ಮ'' ಎಂದು ಹೇಳುತ್ತಿದ್ದ ಅವರಲ್ಲಿ ಈ ಮಾತನ್ನು ಪಾಲಿಸುತ್ತಿದ್ದವರು ಕೆಲವರೇ. ಆದರೆ ಅವರು ಎಂದಾದರೂ ಕುಡಿದ ಸಂದರ್ಭ ಇದ್ದಾಗ ಅಪ್ಪನೆದುರು ಬರಲು ಹೆದರುತ್ತಿದ್ದುದು ಸತ್ಯ. ಕಾಲನಿಯಲ್ಲಿದ್ದ ಸಮುದಾಯವೂ ಕೂಡ ಎಲ್ಲರೊಂದಿಗೆ ಬೆರೆತು ಬದುಕಿದ ಕಾರಣದಿಂದಲೇ ಇಂದು ಕಾಪಿಕಾಡು ಕಾಲನಿ ಒಂದು ಮುಖ್ಯ ಬಡಾವಣೆಯಂತಿದೆ ಎಂದರೆ ತಪ್ಪಲ್ಲ.
ಕಾಪಿಕಾಡು ಶಾಲೆ ಮಕ್ಕಳಿಗೆ ಮಾತ್ರ ಶಾಲೆಯಾಗಿರದೆ ಸಮುದಾಯದ, ಊರಿನ ಶಾಲೆ ಎಂದರೇ ಸರಿ. ಇಲ್ಲಿ ಮುನಿಸಿಪಾಲಿಟಿಯ ವತಿಯಿಂದ ನಡೆಯುತ್ತಿದ್ದ ಒಂದು ವಾಚನಾಲಯವಿತ್ತು. ಬೆಳಗ್ಗೆ ಮತ್ತು ಸಂಜೆ ತೆರೆದಿರುತ್ತಿದ್ದ ಇದರ ಮೇಲ್ವಿಚಾರಣೆ ಶಾಲೆಯಲ್ಲಿ ಮಾಸ್ತರರಾಗಿದ್ದ ಗುರುವಪ್ಪ ಮಾಸ್ತರರದ್ದು. ಈ ವಾಚನಾಲಯ ನನ್ನೂರಿನ ಹಿರಿಯರಿಗೆ, ಕಿರಿಯರಿಗೆ ಲೋಕಜ್ಞಾನದ ಅರಿವನ್ನು ಮೂಡಿಸುವಲ್ಲಿ ಸಾರ್ಥಕತೆ ಪಡೆದಿದೆ ಎಂದರೆ ತಪ್ಪಲ್ಲ. ಜಾತಿ ಭೇದವಿಲ್ಲದೆ ಎಲ್ಲರೂ ಒಂದು ಕೊಠಡಿಯೊಳಗೆ ಕುಳಿತು ಸದ್ದಿಲ್ಲದೆ ಓದುತ್ತಿದ್ದರು. ಆ ಮೂಲಕ ಸ್ವಾತಂತ್ರ್ಯೋತ್ತರ ಭಾರತದ ಅಭಿವೃದ್ಧಿಯ ಕನಸುಗಳಲ್ಲಿ ಮಾನಸಿಕವಾಗಿ ಪಾಲ್ಗೊಂಡಿದ್ದರಿಂದಲೇ ನನ್ನೂರು ಆದರ್ಶಪ್ರಾಯವಾಗಿತ್ತು ಎಂದೇ ಭಾವಿಸುತ್ತೇನೆ. ಒಂದು ಶಾಲೆ ಊರಿನ ಶಾಲೆ, ಸಮುದಾಯದ ಶಾಲೆ ಆಗುವುದು ಎಂದರೆ ಹೀಗೆ ಎಂದು ನಂಬಿದ್ದೇನೆ. ಅಂದು ನವಭಾರತ, ರಾಷ್ಟ್ರಮತ, ರಾಷ್ಟ್ರಬಂಧು ಪತ್ರಿಕೆಗಳು ಬರುತ್ತಿದ್ದುವು ಎಂದು ನನ್ನ ನೆನಪು. ನನ್ನ ಮನೆಗೆ ಈ ಎಲ್ಲ ಪತ್ರಿಕೆಗಳು ಬರುತ್ತಿದ್ದುದರಿಂದ ನಾನಾಗಲಿ, ನನ್ನ ಮನೆಯವರಾಗಲೀ ವಾಚನಾಲಯಕ್ಕೆ ಹೋಗುತ್ತಿರಲಿಲ್ಲವಾದರೂ ಗುರುವಪ್ಪ ಮಾಸ್ತರರನ್ನು ಭೇಟಿಯಾಗಬೇಕಾದರೆ ನನ್ನ ಅಪ್ಪ ಅಥವಾ ಚಿಕ್ಕಪ್ಪ ಸಂಜೆ ಮನೆಯಿಂದ ಹೊರಟರೆ ಅವರ ಬಾಲ ನಾನು. ಇಲ್ಲವಾದರೆ ಒಮ್ಮೊಮ್ಮೆ ಗುರುವಪ್ಪ ಮಾಸ್ತರರಿಗೆ ಸಂಜೆಯ ವೇಳೆ ಅಗತ್ಯದ ಬೇರೆ ಕೆಲಸಗಳಿದ್ದರೆ ಅವರ ಜವಾಬ್ದಾರಿಯನ್ನು ನನ್ನ ಚಿಕ್ಕಪ್ಪ ವಹಿಸಿಕೊಳ್ಳುತ್ತಿದ್ದರು. ಆಗಲೂ ನಾನು ಅವರ ಜೊತೆ ಹೋಗುತ್ತಿದ್ದೆ. ನನ್ನ ಶಾಲೆಯಲ್ಲಿ ವಾರಕ್ಕೆ ಒಮ್ಮೆಯಾದರೂ ಸಂಜೆಯ ಕತ್ತಲಲ್ಲಿ ಒಂದು ಸಿನೆಮಾ ತೋರಿಸುತ್ತಿದ್ದರು. ಸಿನೆಮಾ ಎಂದರೆ ಮನೋರಂಜನೆಯ ಸಿನೆಮಾ ಅಲ್ಲ. ಕ್ಷೇತ್ರ ಪ್ರಚಾರ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಮತ್ತು ವಯಸ್ಕರ ಶಿಕ್ಷಣ ಇಲಾಖೆಯ ವತಿಯಿಂದ ಆರೋಗ್ಯದ ಬಗೆಗಿನ ಮಾಹಿತಿಗಳು. ಶಿಕ್ಷಣದ ಮಹತ್ವ ಸಾರುವ ಚಿತ್ರಗಳು. ಸರಕಾರದ ಯೋಜನೆಗಳ ಬಗೆಗಿನ ತಿಳುವಳಿಕೆ, ಸಾಂಕ್ರಾಮಿಕ ರೋಗಗಳ ಬಗೆಗಿನ ಎಚ್ಚರ. ಹೀಗೆ ಲೋಕ ಶಿಕ್ಷಣದ ಪರಿಕಲ್ಪನೆಯಲ್ಲಿ ಊರಿಗೆ ಪಾಠವೇ ಆಗುತ್ತಿತ್ತು. ಅಂದಿನ ದಿನಗಳಲ್ಲಿ ಪತ್ರಿಕೆ ಓದಲು ಬಾರದವರಿಗೆ ಇದು ನಿಜವಾಗಲೂ ವರದಾನವೇ ಆಗಿತ್ತು. ಆದರೆ ಇಂದು ಅಕ್ಷರ ತಿಳಿದರೂ ಓದಲು ಗೊತ್ತಿದ್ದರೂ ಪತ್ರಿಕೆ ಓದದ, ಪುಸ್ತಕಗಳನ್ನೇ ಓದದ ಜನ ಸಾಕ್ಷರರಾಗಿ ಏನು ಪ್ರಯೋಜನ? ಈ ರೀತಿಯ ಸಿನೆಮಾಗಳನ್ನು, ಸಾಕ್ಷ್ಯಚಿತ್ರಗಳನ್ನು ನೋಡಲು ಜನ ಜಾತ್ರೆಯಂತೆಯೇ ಸೇರುತ್ತಿದ್ದರು. ಅಂದು ಹೆಚ್ಚಿನ ಹಿರಿಯರಿಗೆ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಆದರೆ ಇವುಗಳನ್ನು ನೋಡಿ ಕೇಳಿಯೇ ಕನ್ನಡ ಭಾಷೆ ಅರ್ಥೈಸಿಕೊಳ್ಳುತ್ತಿದ್ದರು. ಇಂತಹ ಕಾರ್ಯಕ್ರಮಗಳಿಗೆ ನನ್ನ ಜೊತೆಗೆ ಹೊರಡುತ್ತಿದ್ದವರು ನನ್ನ ಅಜ್ಜಿ ಮಾತ್ರ. ಅಪ್ಪ, ಚಿಕ್ಕಪ್ಪನಿಗೆ ಈ ಎಲ್ಲ ವಿಷಯಗಳು ಅಧ್ಯಾಪಕರಾದುದರಿಂದ ತಿಳಿದೇ ಇರಬೇಕಾಗಿತ್ತು. ಅಲ್ಲದೆ ಇಂದಿನ ಅಧ್ಯಾಪಕರಂತೆ ಪುಸ್ತಕದ ಬದನೇ ಕಾಯಿಯ ಪಾಠ ಮಾಡುತ್ತಿದ್ದವರಲ್ಲ. ಊರಿನ ಜನರಿಗೆ ಎಲ್ಲ ಅರ್ಥದಲ್ಲಿ ಮಾಸ್ತರರು ಆಗಿದ್ದವರು. ಈ ಕಾರಣದಿಂದಲೇ ಅಮ್ಮನಿಗೂ ಇವುಗಳ ತಿಳುವಳಿಕೆ ದೊರೆಯುತ್ತಿತ್ತು. ಆದರೂ ಅಪ್ಪ, ಚಿಕ್ಕಪ್ಪ, ಅಮ್ಮ ಅಪರೂಪಕ್ಕೊಮ್ಮೆ ಈ ಸಿನೆಮಾ ಕಾರ್ಯಕ್ರಮಗಳಿಗೆ ಬರುತ್ತಿದ್ದರು. ಈ ಸಿನೆಮಾ ತೋರಿಸುವ ಜೀಪ್‍ಗಳು ಹಗಲಲ್ಲಿ ನಮ್ಮ ರಸ್ತೆಯಲ್ಲಿ ಓಡಾಡುತ್ತಿದ್ದರೆ ನಮಗೆ ಖುಷಿಯೋ ಖುಷಿ. ನಮಗೆ ಸಿನೆಮಾ ತೋರಿಸುವ ವಾಹನ ಎಂಬ ಅಕ್ಕರೆ.
ಹಾಗೆಯೇ ಶಾಲೆಯಲ್ಲಿ ಮಕ್ಕಳಿಗೆ ಮಾತ್ರವಲ್ಲದೆ ಊರಿನ ಜನರಿಗೂ ಆರೋಗ್ಯ ಇಲಾಖೆ ಆಗಾಗ ಸಾಂಕ್ರಾಮಿಕ ರೋಗ ಗಳಿಗೆ ಸಂಬಂಧಿಸಿದಂತೆ ಔಷಧಗಳನ್ನು ನೀಡುತ್ತಿತ್ತು. ಆಗೆಲ್ಲಾ ಮಂಗಳೂರಿನಲ್ಲಿ ಪೈಲೇರಿಯ (ಆನೆಕಾಲು ರೋಗ) ಸಾಂಕ್ರಾಮಿಕವಾಗಿತ್ತು. ನನ್ನೂರಿನಲ್ಲೂ ಹಿರಿಯರಿಗೆ ಕೆಲವರಿಗೆ ಈ ಕಾಯಿಲೆ ಇತ್ತು. ಒಮ್ಮೆ ಆ ಕಾಯಿಲೆ ಬಂದರೆ ಅದು ಗುಣಮುಖವಾಗದೆ ಜೀವನವಿಡೀ ಔಷಧ ತೆಗೆದುಕೊಳ್ಳಲು ಉದಾಸೀನ ಮಾಡಿದವರು ಆ ತಪ್ಪಿಗೆ ಮಣಭಾರದ ಕಾಲನ್ನು ಹೊರಲಾರದೆ ಹೊರುತ್ತಿದ್ದ ಕಷ್ಟವನ್ನು ನೋಡುವುದಕ್ಕೇ ಕಷ್ಟವಾಗುತ್ತಿತ್ತು. ನಮ್ಮ ಪೀಳಿಗೆಗೆ ರಕ್ತ ಪರೀಕ್ಷೆ, ಔಷಧಗಳೆಲ್ಲ ಪ್ರಾರಂಭದಲ್ಲೇ ಸಿಕ್ಕರೂ ನನ್ನೊಬ್ಬ ಸಹಪಾಠಿಗೆ ಪೈಲೇರಿಯಾ ಹೇಗೆ ಬಂತೆಂಬುದೇ ಆಶ್ಚರ್ಯ. ಬಹುಶಃ ಆತ ಔಷಧವನ್ನು ತೆಗೆದುಕೊಳ್ಳದೆ ಇದ್ದಿರಬಹುದು. ಇದಕ್ಕೆ ಅವನೇ ಕಾರಣನಾಗಿರದೆ ಹೆತ್ತವರು ಕಾರಣರಾಗಿರ ಬಹುದು. ಏಕೆಂದರೆ ಕೆಲವು ಹಿರಿಯರಿಗೆ ಈ ರೀತಿಯ ಚಿಕಿತ್ಸೆಯ ಬಗೆಗೆ ನಂಬಿಕೆ ಇರಲಿಲ್ಲ ಎನ್ನುವುದೂ ಸತ್ಯ. ಆದರೂ ಮಂಗಳೂರಿನ ಬೇರೆ ಊರುಗಳಲ್ಲಿ ಪೈಲೇರಿಯಾ ಪೀಡಿತರು ಕಂಡುಬಂದಷ್ಟು ಬಿಜೈ ಎಂಬ ನನ್ನೂರಲ್ಲಿ ಇರಲಿಲ್ಲ ಎನ್ನುವುದು ಕೂಡ ಹೆಮ್ಮೆಯೇ. ಈ ಪೈಲೇರಿಯದ ಕಾರಣದಿಂದಲೇ ಮಂಗಳೂರಿನಲ್ಲಿದ್ದ ತೆರೆದ ಸಾರ್ವಜನಿಕ ಬಾವಿಗಳು ಮಾತ್ರವಲ್ಲದೆ ಮನೆ ಮನೆಯ ಬಾವಿಗಳನ್ನು ಮುಚ್ಚಿಸುವ ಕಾರ್ಯ ಮುನಿಸಿಪಾಲಿಟಿಯಿಂದ ಕಡ್ಡಾಯವಾಗಿ ಆಯಿತು. ಎಲ್ಲರಿಗೂ ಶುದ್ಧವಾದ ಕುಡಿಯುವ ನೀರಿನ ಹೊಣೆಯನ್ನು ಹೊತ್ತುಕೊಂಡಿತು. ಇಂದು ಈ ಜವಾಬ್ದಾರಿ ಮುನಿಸಿಪಾಲಿಟಿದ್ದೇ ಎಂದು ಜನರು ನಂಬಿ ಪರಾವಲಂಬಿಯಾಗಿದ್ದಾರೆ. ಆದ್ದರಿಂದಲೇ ನೀರಿನ ಮಹತ್ವ, ಅದರ ಶುಚಿತ್ವ, ಅದರ ಜಾಗ್ರತೆಗಳ ಬಗೆಗಿನ ಸಾಮಾನ್ಯ ಜ್ಞಾನವೂ ವಿದ್ಯಾವಂತರಿಗೂ ಇಲ್ಲವಾಗಿದೆ. ಇಂದು ಮಳೆ ಕಡಿಮೆಯಾಗಿದೆ. ನೀರಿಗೆ ಬರ ಬಂದಿದೆ. ಆದರೆ ಕಳೆದ ವರ್ಷ (1916) ಜಿಲ್ಲೆಯ ಬರಗಾಲ ಕೆಲವರಲ್ಲಿ ಜ್ಞಾನೋದಯ ಮೂಡಿಸಿದೆ. ತೆರೆದ ಬಾವಿಗಳು ಕೆಲವೆಡೆಯಾದರೂ ನಿರ್ಮಾಣವಾಗಿವೆ. ಇದ್ದ ಬಾವಿಗಳನ್ನು ಶುದ್ಧೀಕರಿಸ ಲಾಗಿದೆ. ಬಾವಿಯ ಶುಚಿತ್ವ ಕಾಪಾಡುವುದು ಹೇಗೆ ಎಂದು ತಿಳಿದುಕೊಂಡರೆ ತೆರೆದ ಬಾವಿ ನೀರಿನ ಸುಲಭದ ಮೂಲವಲ್ಲವೇ? ಮಳೆ ನೀರನ್ನು ಕಾಯ್ದುಕೊಳ್ಳುವುದೇ ಪೇಟೆಯೊಳಗೆ ಇರುವ ಸ್ವಾವಲಂಬಿ ಸೂತ್ರ. ಮುನಿಸಿಪಾಲಿಟಿಯೋ ಅಥವಾ ಖಾಸಗಿ ಟ್ಯಾಂಕರ್‍ನವರೋ ತಂದು ಕೊಡುವ ನೀರಿನ ಮೂಲ ತಿಳಿಯದೆ, ತಿಳಿದರೂ ತಲೆ ಕೆಡಿಸಿಕೊಳ್ಳದೆ ಆರೋಗ್ಯ ಹಾಳು ಮಾಡಿಕೊಳ್ಳುವ ಇಂದಿನ ಪೇಟೆಯ ಜನರನ್ನು ವಿವೇಕಿಗಳೆಂದು ಹೇಗೆ ಭಾವಿಸೋಣ? ಅಂತರ್ಜಲದ ರಕ್ಷಣೆಗೆ ಕೊಳವೆ ಬಾವಿಗಳಿಗಿಂತ ತೆರೆದ ಬಾವಿಗಳು, ಸುತ್ತಲೂ ಮರಗಿಡಗಳನ್ನು ಬೆಳೆಸಬೇಕೆನ್ನುವ ಪರಿಸರವಾದಿಗಳ ಕಿವಿಮಾತು ಕಾಂಕ್ರೀಟ್ ಕಾಡು ನಿರ್ಮಿಸುವ ಜನರ ನಡುವೆ ಯಾರ ಕಿವಿಗೂ ಕೇಳಿಸುವುದಿಲ್ಲ. ನಮ್ಮ ತಪ್ಪಿಗೆ ನಾವೇ ಶಿಕ್ಷೆ ಅನುಭವಿಸಬೇಕಲ್ಲವೇ? ಹತ್ತು ಜನ ಮೂರ್ಖರ ನಡುವೆ ಇರುವ ಒಬ್ಬ ವಿವೇಕಿಗೆ ನರಳುವ ಸ್ಥಿತಿ ಬಿಟ್ಟರೆ ಬೇರೆ ದಾರಿಯಿಲ್ಲ. ಯಾಕೆಂದರೆ ಎಲ್ಲರೂ ಜಾಣರು. ಆದರೆ ಸಾಮಾನ್ಯ ಜ್ಞಾನವಿಲ್ಲದವರು.