ನನ್ನೂರು ಕೊಳ್ಳೇಗಾಲ.. ಹೆದರಿಕೊಳ್ಳಬೇಡಿ! ಮಾಟ ಮಂತ್ರಕ್ಕೆ ಫೇಮಸ್ ಅಲ್ಲ.

ನನ್ನೂರು ಕೊಳ್ಳೇಗಾಲ.. ಹೆದರಿಕೊಳ್ಳಬೇಡಿ! ಮಾಟ ಮಂತ್ರಕ್ಕೆ ಫೇಮಸ್ ಅಲ್ಲ.

‘ಕೊಳ್ಳೇಗಾಲ’ ಎಂಬ ಹೆಸರು ಕಿವಿಗೆ ಬಿದ್ದರೆ ಸಾಕು, ಇಡೀ ಕರ್ನಾಟಕವೇ ಬೆಚ್ಚಿಬೀಳುತ್ತದೆ. ‘ನಾವು ಕೊಳ್ಳೇಗಾಲದವರು’ ಎಂದಾಕ್ಷಣ ಸುತ್ತಲಿನವರ ಕಣ್ಣು ಕಿವಿ ಅರಳುತ್ತದೆ. ಕೊಳ್ಳೇಗಾಲದ ಕೇವಲ ಒಂದು ರುಪಾಯಿಯ ಒಂದು ನಿಂಬೆಹಣ್ಣಿಗೆ ಬೇರೆ ಕಡೆಗಳಲ್ಲಿ ಸಾವಿರಾರು ರೂಗಳು. ಕೊಳ್ಳೇಗಾಲಕ್ಕೆ ಹೆಜ್ಜೆ ಇಡಲೂ ಕೂಡ ಎಷ್ಟೋ ಜನ ಹೆದರುತ್ತಾರೆ. ನಿಮ್ಮೆಲ್ಲರ ಪ್ರಕಾರ ಇದಕ್ಕೆಲ್ಲ ಪ್ರಮುಖ ಕಾರಣ ಕೊಳ್ಳೇಗಾಲದಲ್ಲಿ ನಡೆಯುವ ಮಾಟಮಂತ್ರ! ವಾಮಮಾರ್ಗಕ್ಕೆ ಕೊಳ್ಳೇಗಾಲ ಪ್ರಸಿದ್ಧಿ ಎಂಬುದು ಎಲ್ಲರ ಅಂಬೋಣ. ಎಷ್ಟೋ ಜನ ಇದನ್ನೇ ಬಂಡವಾಳ ಮಾಡಿಕೊಂಡಿರುವುದೂ ಸತ್ಯ. ಕರ್ನಾಟಕದ ವಿವಿಧ ಜಿಲ್ಲಾ ತಾಲ್ಲೂಕುಗಳಲ್ಲಿ ಕೊಳ್ಳೇಗಾಲದ ಹೆಸರು ಹೇಳಿಕೊಂಡು ಎಷ್ಟೋ ಜನ ಜ್ಯೋತಿಷ್ಯಾಲಯಗಳನ್ನು ತೆರೆದು ಸುಲಿಗೆ ಮಾಡುತ್ತಿರುವುದನ್ನು ನೀವೆಲ್ಲರೂ ಕಂಡಿರುತ್ತೀರಿ. ಸಿನಿಮಾ ಮತ್ತು ದೂರದರ್ಶನ ಮಾಧ್ಯಮದವರೂ  ಸಹ ಹಾಗೆಯೇ, ಮಾಟಮಂತ್ರದ ವಿಚಾರ ಬಂದಾಗ ಕೊಳ್ಳೇಗಾಲದ ಹೆಸರನ್ನು ಬಿಂಬಿಸುತ್ತಾರೆ. ‘ನೀವು ಮಾಟಂತ್ರಕ್ಕೆ ಫೇಮಸ್ ಅಲ್ವಾ?’ ಎಂದು ಸಾವಿರಾರು ಜನ ನನ್ನನ್ನು ಕೇಳುತ್ತಿರುತ್ತಾರೆ. ಮೈಸೂರಿನ ಮಾನಸಗಂಗೋತ್ರಿಯಲ್ಲಿನ ಸ್ನಾತಕೋತ್ತರ ಪದವಿಯಲ್ಲಿದ್ದಾಗ ಎಷ್ಟೋ ಜನ ಸಿಬ್ಬಂದಿ ವರ್ಗದವರು ಮಾಟ ಮಾಡಿಸಿಕೊಡುವಂತೆ ನನ್ನನ್ನು ಅನೇಕ ಬಾರಿ ಅಹವಾಲಿಸಿಕೊಂಡಿದ್ದಾರೆ. 

 
ನಿಮ್ಮೆಲ್ಲರ ಪ್ರಶ್ನೆ, ‘ಹಾಗಾದರೆ ಕೊಳ್ಳೇಗಾಲ ಮಾಟಮಂತ್ರಕ್ಕೆ ಫೇಮಸ್ ಅಲ್ವಾ?’  ಖಂಡಿತವಾಗಿಯೂ ಇಲ್ಲ. ಕೊಳ್ಳೇಗಾಲದ ಬಸ್ ನಿಲ್ದಾಣದ ಉತ್ತರಕ್ಕೆ ದೇವಾಂಗ ಬೀದಿ ಎಂಬ ಒಂದು ಬೀದಿ ಇದೆ. ಮಾಟಮಂತ್ರಕ್ಕೆ ಆ ಬೀದಿಯವರೇ ಪ್ರಸಿದ್ಧಿ ಎಂಬ ಮಾತಿದೆ. ನಮ್ಮ ಮನೆ ಇರುವುದು ಅದೇ ಬೀದಿಯಲ್ಲಿ. ನಮ್ಮ ಅಕ್ಕಪಕ್ಕದಲ್ಲಿರುವ ಕೆಲವರು ಮಾಟಮಂತ್ರಕ್ಕೆ ಫೇಮಸ್(ನಾವಿನ್ನೂ ಫೇಮಸ್ ಆಗಿಲ್ಲ!). ಇದೇನಿದು, ಮಾಟಮಂತ್ರವೇ ಇಲ್ಲ ಎಂದಾತ ಅದರ ಬಗ್ಗೆಯೇ ಮಾತನಾಡುತ್ತಿದ್ದಾನೆ ಎಂದು ಹುಬ್ಬೇರಿಸಬೇಡಿ. ವಾಮಾಚಾರ ಸತ್ಯವೋ ಸುಳ್ಳೋ ಅದರ ಬಗ್ಗೆ ಸದ್ಯಕ್ಕೆ ಮಾತನಾಡುವುದು ಬೇಡ. ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಮಾಟಮಂತ್ರವೆಂಬದು ಶೇಕಡಾ ನೂರಕ್ಕೆ ನೂರು ಸುಳ್ಳು. ಅದೊಂದು ಮಾನಸಿಕ ಖಾಯಿಲೆ ಅಷ್ಟೆ. ದೆವ್ವವನ್ನು ನೆನಪಿಸಿಕೊಂಡು ಕುಳಿತವನ ಮುಂದೆ ಬಿಳಿ ಸೀರೆ ಹಾಕಿಕೊಂಡು ಯಾರೋ ಹೋದಂತೆ. ಮೆದುಳಿನಲ್ಲುತ್ಪತ್ತಿಯಾಗುವ ಕೆಲವು ತರಂಗಳು ಆ ಚಿತ್ರವನ್ನು ತಕ್ಷಣ ಕಲ್ಪಿಸಿಬಿಡಬಹುದು. ಅಚ್ಚಗನ್ನಡದಲ್ಲಿ ಅದನ್ನು ‘ಭ್ರಮೆ’ ಎನ್ನುತ್ತಾರೆ. ಆಂಗ್ಲದ ಫ್ಯಾಂಟಸಿ. 
 
ಹೌದು, ಕೊಳ್ಳೇಗಾಲದಲ್ಲಿ ಸರಿಸುಮಾರು 30 ವರ್ಷಗಳ ಹಿಂದೆ ವಾಮಾಚಾರ ಎಂಬ ಪೊಳ್ಳು ಪ್ರಕ್ರಿಯೆ ಅವ್ಯಾಹತವಾಗಿ ನಡೆಯುತ್ತಿತ್ತು. ನಿಮ್ಮ ಶತ್ರುಗಳ ಪತನಕ್ಕೆ ಸೂತ್ರ ರೂಪಿಸಿಕೊಡುತ್ತಿದ್ದರಂತೆ. ವಿರೋಧಿಗಳ ಮನೆ ತುಂಬಾ ಹಾವು ಚೇಳು ಓಡಾಡುವಂತೆ, ಮಲಗಿದವರ ಮೇಲೆ ಯಾರೋ ಬಂದು ಎಗರಿದಂತೆ, ತಿನ್ನುವ ಅನ್ನ ಹುಳುವಾಗುವಂತೆ, ಮನೆಯ ಸುತ್ತ ಯಾವುದೋ ಆತ್ಮ ಓಡಾಡುವಂತೆ ಮಾಡುತ್ತಿದ್ದರಂತೆ. ಇದರ ಜೊತೆಗೆ ಇನ್ನಿತರೆ ಕೆಲವು ಮಾಟಗಳಿವೆ
ಕಣ್ಣು ಕಟ್ಟಿನ ಮಾಟ – ಅಂದರೆ ಕಣ್ಣು ಕಾಣದಂತೆ ಮಾಡುವುದು
ಬಾಯಿ ಕಟ್ಟಿನ ಮಾಟ – ಮಾತನಾಡಲು ತೊಡರಿಸುವಂತೆ ಮಾಡುವುದು. ಈ ಮಾಟವನ್ನು ತಮ್ಮ ಶತ್ರುಗಳು ಕೋರ್ಟು ಕಛೇರಿ, ಪಂಚಾಯಿತಿಗಳಲ್ಲಿ ಮಾತನಾಡಲಾಗದೆ ತಡವರಿಸಲಿ ಎಂದು ಮಾಡಿಸುತ್ತಿದ್ದರಂತೆ. ಕೈಕಾಲು ಕಟ್ಟಿನ ಮಾಟ – ಕೈ ಕಾಲು ಸೇದುಹೋಗುವಂತೆ ಮಾಡುವುದು
ಸ್ತ್ರೀವಶೀಕರಣ - ಹುಡುಗಿಯ ಕೂದಲು ಅಥವಾ ತೊಟ್ಟು ರಕ್ತ ತಂದುಕೊಟ್ಟರೆ ಸಾಕು ಅವಳು ನಮ್ಮ ಹಿಂದೆಯೇ ಬರುವಂತೆ ಮಾಡುವುದು
 
ಹೀಗೆ ಅನೇಕ ವಿಧಗಳಿವೆ. ಇಂತಹ ತುಚ್ಛ ಕೆಲಸವನ್ನು ಮಾಡುತ್ತಿದ್ದವರು ಬೆರಳೆಣಿಕೆಯಷ್ಟು ಜನ ಮಾತ್ರ. ಅವರ ಬಳಿ ಅಂದಿನ ರಾಜಕಾರಣಿಗಳು, ಸಿನಿಮಾ ತಾರೆಯರೆಲ್ಲ ಬರುತ್ತಿದ್ದರಂತೆ. ಭೀಮನ ಅಮಾವಾಸ್ಯೆಯಂದು ಸ್ಮಶಾಣಕ್ಕೆ ಹೋಗಿ ಆಗಷ್ಟೆ ಹೂತಿರುವ ಹೆಣಗಳನ್ನು ಕಿತ್ತು, ಅದರ ಕೈ ಕಾಲುಗಳನ್ನು ಕತ್ತರಿಸಿಕೊಂಡು ಬಂದು, ಅದೆಂತದೋ ಪೂಜೆ ಮಾಡಿ ಆ ಆತ್ಮವನ್ನು ಮಂತ್ರ ಕುಂಡಲಿನಿಯಲ್ಲಿ ಅಥವಾ ಮನೆಯ ಸೂರಿನಲ್ಲಿ ಕೂರಿಸಿಕೊಳ್ಳುತ್ತಿದ್ದರಂತೆ. ಇವೆಲ್ಲಾ ಅಂತೆ ಕಂತೆಗಳ ಬೊಂತೆ. ಹೆಣದ ತಲೆ ಕಾಲು ಕತ್ತರಿಸಿಕೊಂಡು ಬರುವುದು ಸತ್ಯವೇ ಆದರು ಸೂರಿನಲ್ಲಿ ಕುಳಿತಾತ್ಮವನ್ನು ಯಾರೂ ಮಾತನಾಡಿಸಿಲ್ಲ. ಅಂತಹ ಎಷ್ಟೋ ಕುಂಡಲಿನಿಗಳನ್ನು ನಾನೇ ತುಳಿದು ಬಂದಿದ್ದೇನೆ. ನನ್ನ ಕಾಲನ್ನು ಯಾವ ಆತ್ಮವೂ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರಲಿಲ್ಲ. ಆದರೂ ಭೀಮನ ಅಮಾವಾಸ್ಯೆಯಂದು ಕೊಳ್ಳೇಗಾಲದಲ್ಲಿ ಹೆಣ ಕಾಯುವ ವಾಡಿಕೆ ಇದೆ. ಎಲ್ಲೋ ಒಂದು ಕಡೆ ಮಾಟಮಂತ್ರದ ಪೊಳ್ಳುತನವನ್ನು ಬಯಲಿಗೆಳೆಯುವ ಬಗ್ಗೆ ಆಧುನಿಕ ವಿಜ್ಞಾನವೂ ಅಷ್ಟು ತಲೆ ಕೆಡಿಸಿಕೊಂಡಿಲ್ಲವೆಂದೆನಿಸುತ್ತದೆ. ಆಗಲೇ ನಾನು ಹೇಳಿದಂತೆ ಅದನ್ನು ನಂಬಿ ಹೆದರುವವರಿಗೆ ಮಾನಸಿಕ ಏರುಪೇರಿನಂದ ಕೆಡುಕಾಗಬಹುದು. ಕೈ ಕಾಲು ನಡುಗಿ ಸ್ಕೂಟರಿನಿಂದ ಜಾರಿ ಬಿದ್ದಂತೆ. 
 
ಅದಿರಲಿ, ಕರ್ನಾಟಕಕ್ಕೇ ಪ್ರಸಿದ್ಧವಾಗಿದ್ದ ಈ ‘ಕೇವಲ ಕೆಲವರು’ ಏನಾದರು?  ಅವರ ಕಥೆ ಹೇಳಿದರೆ ಅವರ ಶತ್ರುಗಳಿಗೂ ಕನಿಕರ ಹುಟ್ಟದಿರದು. ಸಾವಿರಾರು ಸಂಸಾರಗಳನ್ನು ಹಾಳು ಮಾಡಿದ ಇವರ ಸಂಸಾರಗಳು ದಿಕ್ಕೆಟ್ಟುಹೋದವು. ಇವರಲ್ಲಿ ಅನೇಕರಿಗೆ ಪಾಶ್ರ್ವವಾಯು ಬಡಿಯಿತು. ಅನೇಕರ ಮಕ್ಕಳೆಲ್ಲಾ ಇದ್ದಕ್ಕಿದ್ದಂತೆ ಅಕಾಲ ಮರಣಕ್ಕೀಡಾದರು. ಹೆಂಡತಿಯರು ಕೆಟ್ಟ ಕೆಲಸಗಳಿಗೆ ಒಗ್ಗಿಕೊಂಡರು. ಕೊನೆ ಕೊನೆಗೆ ಅನಾಥ ಹೆಣವಾಗಿ ಸಿಕ್ಕರು. ಈಗ ಇವರೆಲ್ಲರೂ ಸತ್ತು ಸ್ಮಶಾಣ ಸೇರಿದ್ದಾರೆ. ಸಾಯುವ ಸಮಯದಲ್ಲಿ ಅವರ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ಜನಗಳು ತೂ! ಚಿ! ಎಂದುಗಿಯುತ್ತಿದ್ದರು. ಮೈ ಕೊಳೆತು ಹುಳುಗಳು ತುಂಬಿಕೊಂಡಿದ್ದವು. ಸ್ನಾನ ಮಾಡಿಸುವವರಿಲ್ಲ, ಅವರನ್ನು ಮುಟ್ಟಿ ಶೌಚಕ್ಕೆ ಕರೆದುಕೊಂಡು ಹೋಗುವವರಿರಲಿಲ್ಲ. ಎಲ್ಲಾ ಕುಳಿತಲ್ಲಿಯೇ. ಮಲದ ಮೇಲೆ ನಿದ್ದೆ, ಯಾರಾದರೂ ಕನಿಕರಗೊಂಡು ನೀಡಿದರೆ ತುತ್ತು ಊಟ. ಸಿದ್ಧಪ್ಪ ಎಂಬ ಒಬ್ಬ ಭಯಂಕರ ಮಾಟಗಾರನ ಹೀನಾಯ ದುಸ್ಥಿತಿಯನ್ನು ನಮ್ಮ ತಂದೆಯ ಬಳಿ ಕೇಳಿ ಒಮ್ಮೆ ತಿಳಿದುಕೊಂಡಿದ್ದೆ. ಆತ ಒಮ್ಮೆ ಸಾಯಲಿಲ್ಲ, ಇಂಚಿಂಚು ಸತ್ತ. ನಾವು ಮಾಟ ಮಾಡಿದರೆ ಅಥವಾ ಮಾಡಿಸಿದರೆ ನಿಧಾನವಾಗಿ ಅದು ನಮ್ಮೆಡೆಗೆ ತಿರುಗಿಬಿಡುತ್ತದೆ, ಆ ಕೆಡುಕೆಲ್ಲಾ ನಮಗೆ ಸೇರಿಬಿಡುತ್ತದೆ ಎಂಬ ಒಂದು ಗಾಢವಾದ ನಂಬಿಕೆ ಕೊಳ್ಳೇಗಾಲದಲ್ಲಿದೆ. ಈ ಘಟನೆಗಳಿಂದ ಮರಿ ಮಾಟಗಾರರು ಗಾಬರಿಯಾಗಿಬಿಟ್ಟರು. ಕಡೆಗಳಿಗೆ ಈ ರೀತಿಯಾಗುವುದಾದರೆ ಯಾರಿಗಾಗಿ ದುಡಿದುಣ್ಣಬೇಕು ಎಂದು ಎಚ್ಚೆತ್ತುಕೊಂಡರು. ಆದುದರಿಂದ ಈಗ ಕೊಳ್ಳೇಗಾಲದಲ್ಲಿ ಮಾಟ ಮಂತ್ರ ಏನೂ ನಡೆಯುವುದಿಲ್ಲ. ಆ ವಿಚಾರದಲ್ಲಿ ಇಲ್ಲಿನ ಸಮಾಜ ಈಗ ಪ್ರಬುದ್ಧವಾಗಿದೆ. ಆದರೂ ಕೆಲ ದೇವತೆಗಳ ಚಿತ್ರ ಬಿಡಿಸಿ, ಏನೇನೋ ರಂಗೋಲಿ ಬಿಡಿಸಿರುವ ಬೋರ್ಡ್ ಹಾಕಿಕೊಂಡಿರುವ ಕೆಲವು ಅಂಗಡಿಗಳನ್ನು ಗುರುತಿಸಬಲ್ಲಿರಿ. ನನಗೆ ತಿಳಿದಂತೆ ಅಲ್ಲೂ ಕೂಡ ಮಾಟಮಂತ್ರ ನಡೆಯುವುದಿಲ್ಲ. ಹೊಟ್ಟೆಪಾಡಿನ ನೆಪದಲ್ಲಿ ಮಂತ್ರ, ಯಂತ್ರ, ಆಯುರ್ವೇದ ಎಂದುಕೊಂಡು ಕುಳಿತಿದ್ದಾರಷ್ಟೆ. ಅಂದರೆ ನಿಮ್ಮ ಮನೆಯ ಸಮಸ್ಯೆಗಳು (ಉದಾಹರಣೆಗೆ ಗಂಡ ಹೆಂಡತಿ ಜಗಳ, ಮನೆಯಲ್ಲಿ ಏನೋ ಇರುಸು ಮುರುಸು, ದೆವ್ವದ ಕಾಟ ಇತ್ಯಾದಿ) ಪರಿಹರಿಸಿಕೊಡುತ್ತೇವೆ ಎನ್ನುತ್ತಾರೆ. ಆದುದರಿಂದ ನೀವೆಲ್ಲರೂ ಧೈರ್ಯವಾಗಿ ಕೊಳ್ಳೇಗಾಲಕ್ಕೆ ಬರಬಹುದು. ಎಲ್ಲಾ ಊರಿನಂತೆ ಅದೂ ಕೂಡ ಕಲ್ಲು, ಮಣ್ಣು, ಕಟ್ಟಡ, ಬಸ್ಸು ಲಾರಿ ಇರುವ ಜಾಗ. ಕೊಳ್ಳೇಗಾಲದವರೂ ಮನುಷ್ಯರೇ...!

Comments

Submitted by partha1059 Sat, 10/06/2012 - 21:34

ನನ್ನೂರು ಕೊಳ್ಳೆಗಾಲ... ಮಾಟ ಮಂತ್ರವನ್ನು ಮೂಡನಂಭಿಕೆ ಅಂದೊಕೊಳ್ಳುವ ಸರಿಯೆ ಆದರೆ ಅದನ್ನು ಮಾಡಿದ್ದರಿಂದ ಮಾಟಗಾರನ್ನು ಕಡೆಯಲ್ಲಿ ಇಂಚಿಂಚು ಸಾಯುತ್ತಾನೆ ಅನ್ನುವದನ್ನು ನಂಬುವುದು ಮೂಡನಂಭಿಕೆ ಯಲ್ಲವೆ. ಒಮ್ಮೆ ಮಾಟಮಂತ್ರ ಮಾಡುವುದು ಅರ್ಥಹೀನ ಕ್ರಿಯೆ ಎಂದು ಭಾವಿಸಿದಲ್ಲಿ ಅದನ್ನು ಮಾಡಿದಾತ,ಮಾಡಿಸಿದಾತ ಕಷ್ಟ ಪಡುತ್ತಾನೆ, ಸಾಯುತ್ತಾನೆ ಅನ್ನುವುದು ಸಹ ಅರ್ಥಹೀನವೆ ಅಲ್ಲವೆ. ಸುಮ್ಮನೆ ಒಂದು ಗೊಂದಲದ ಪ್ರಶ್ನೆ , ಆದರೆ ನಿಮ್ಮ ಲೇಖವಂತು ಚೆನ್ನಾಗಿದೆ
Submitted by adarsh Sat, 10/06/2012 - 23:59

In reply to by partha1059

ನಾನು ಕೂಡ‌ ಕೊಳ್ಳೇಗಾಲದವನು ಎಂದಾಗ‌ ನನಗೂ ಮಾಟ‌ ಮಂತ್ರ , ಜೋತಿಷ್ಯ ಅಂತ‌ ಹೇಳುವುದು ಇಂದಿಗೂ ನಡೆದಿದೆ ಈ ವಿಷಯಗಳನ್ನು ಅರಿಸಿಕೊಂಡು ಹೊರಗಡೆಯಿಂದ‌ ಜನ‌ ಬರುತ್ತಾರೆ/ತಿದ್ದಾರೆ ಮೊಢ ನಂಬಿಕೆ ಹೆಚ್ಚಾಗುತ್ತಿದೆಯೆ ವಿನಃ ಕಡಿಮೆ ಯಾಗಿಲ್ಲ ಸ್ವರೂಪ‌ ಬದಲಾಗಿದೆ ಅಷ್ಟೇ.
Submitted by Mohan V Kollegal Sun, 10/07/2012 - 09:25

ಧನ್ಯವಾದಗಳು... ಪಾರ್ಥಣ್ಣ... ನಿಮ್ಮ ಪ್ರತಿಕ್ರಿಯೆಯಲ್ಲಿರುವ ಸಲಹೆ ಮತ್ತು ಪ್ರಶ್ನೆ ಅರ್ಥವಾಯಿತು. ಮೂಢನಂಬಿಕೆಯಿಂದಲೇ ಅವರಿಗೆ ಆ ರೀತಿಯಾಯಿತು ಎಂಬ ಮನಸ್ಥಿತಿ ನನ್ನದಲ್ಲ. ಅದು ಕಾಕತಾಳೀಯವಾಗಿರಬಹುದು... ಆದರೆ ಈ ಲೇಖನದಲ್ಲಿ ಅದು ಸ್ಪಷ್ಟವಾಗಿಲ್ಲ... ಚೂರು ಬದಲಿಸುತ್ತೇನೆ... :)
Submitted by venkatb83 Sun, 10/07/2012 - 17:15

In reply to by Mohan V Kollegal

"ಎಲ್ಲಾ ಊರಿನಂತೆ ಅದೂ ಕೂಡ ಕಲ್ಲು, ಮಣ್ಣು, ಕಟ್ಟಡ, ಬಸ್ಸು ಲಾರಿ ಇರುವ ಜಾಗ. ಕೊಳ್ಳೇಗಾಲದವರೂ ಮನುಷ್ಯರೇ...!" ಕೊಳ್ಳೇಗಾಲಕ್ಕೊಗ್ ಮಾಟ ಮಾಡ್ಸ್ಕಂಡು ಬರ್ತೀನಿ ಎಂದು ಮೊನ್ನೆ ಮೊನ್ನೆ ಶಿವಣ್ಣ (ಶಿವರಾಜ್ ಕುಮಾರ್) ಶಿವ ಚಿತ್ರದಲ್ಲಿ ಹಾಡುತ್ತ ನಾಯಕಿಗೆ ಧಮಕಿ ಹಾಕುವರೋ? ಪ್ರೀತಿಯಿಂದ ಹೇಳುವರೋ? ಗೊಂದಲವಿದೆ..!! ಯಾವದೇ ಊರಿನವರಿಗೆ ತಮ್ಮ ಊರಿನ ಬಗ್ಗೆ ಬೇರೆಯವರಿಗೆ ಇರಬಹುದಾದ ತಪ್ಪು ಕಲ್ಪನೆಗಳು ನಿವಾರಿಸುವ ಮನಸ್ಸು ಆಗೋದು ಸಹಜ.. ನೀವ್ ಅದನ್ನೇ ಅಚ್ಚುಕಟ್ಟಾಗಿ ಮಾಡಿರುವಿರಿ.. ಬರಹ ಚಿಕ್ಕದಾದರೂ ಮಾಟ ಮಂತ್ರ ತಂತ್ರ ದ ತವರಿನ ಇತಿಹಾಸದತ್ತ ಕೊಂಚ ಬೆಳಕು ಚೆಲ್ಲಿತು.. ನಾ ಅಂತೂ ನಿಮ್ಮೂರಿಗೆ ಬೀಡುಬೀಸಾಗಿ ಧೈರ್ಯವಾಗಿ ಬರುವೆ... ಮಾಟ ಮಂತ್ರ ತಂತ್ರ ದಲ್ಲಿ ಎನಗೆ ನಂಬಿಕೆ ಇಲ್ಲ... ಧೈರ್ಯವೇ ಜೀವನ ಭಯವೇ ಮರಣ(ಮೃತ್ಯು) ಅಂತ ಹಿರೀರು ಹೇಳಿಲ್ಲವೇ? ಶುಭವಾಗಲಿ.. ನನ್ನಿ \|