ನನ್ನ ದೇಶದ ಸಂಸ್ಕೃತಿ ನನ್ನ ಹೆಮ್ಮೆ - ಸ್ವಾಮಿ ಶಿವಾನಂದ
ಮೊನ್ನೆ ಮೊನ್ನೆಯಷ್ಟೇ ಶ್ವೇತ ವಸ್ತ್ರ ಧರಿಸಿದ ವಯಸ್ಸಾದ ವ್ಯಕ್ತಿಯೋರ್ವರು ರಾಷ್ಟ್ರಪತಿ ಭವನದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳಾದ ರಾಮ ನಾಥ ಕೋವಿಂದ್ ಇವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ್ದನ್ನು ನೀವು ಗಮನಿಸಿದ್ದಿರಬಹುದು. ಆ ವ್ಯಕ್ತಿಯ ನಡೆಯಲ್ಲಿನ ಲವಲವಿಕೆ, ಪ್ರಧಾನಿ, ರಾಷ್ಟ್ರಪತಿ ಹಾಗೂ ಇತರ ಗಣ್ಯರಿಗೆ ಮೊಣಕಾಲೂರಿ, ತಲೆಬಾಗಿ ನಮಸ್ಕರಿಸಿದ ಪರಿ ಇವೆಲ್ಲವೂ ಸಾಮಾಜಿಕ ಜಾಲತಾಣದಲ್ಲಿ ಈಗಲೂ ಹರಿದಾಡುತ್ತಿದೆ. ಆ ವ್ಯಕ್ತಿ ಬೇರೆ ಯಾರೂ ಅಲ್ಲ ೧೨೫ ವರ್ಷ ವಯಸ್ಸಿನ ‘ಬಾಲಕ' ಯೋಗ ಗುರು ಸ್ವಾಮಿ ಶಿವಾನಂದರು.
ನಿಮಗೆ ಗೊತ್ತಿರಲಿ, ರಾಷ್ಟ್ರಪತಿ ಭವನದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮವೂ ಅತ್ಯಂತ ಕಠಿಣ, ಉಸಿರುಗಟ್ಟಿಸುವ ಶಿಷ್ಟಾಚಾರದ ಕ್ರಮಗಳಿಂದ ನಡೆಯುತ್ತದೆ. ಅಲ್ಲಿ ಪ್ರತಿಯೊಂದು ನಿಮಿಷ, ಪ್ರತಿಯೊಂದು ನಡೆ, ಪ್ರತಿಯೊಂದು ವ್ಯಕ್ತಿಯ ನಡವಳಿಕೆ ಹೀಗೇ ಇರಬೇಕು, ಬರಬೇಕು, ವರ್ತಿಸಬೇಕು ಎಂಬ ನಿಯಮಾವಳಿಗಳಿರುತ್ತವೆ ಮತ್ತು ಹಾಗೇ ನಡೆಯುತ್ತವೆ. ಅದರೆ ತಮ್ಮ ಜೀವಮಾನವಿಡೀ ತಾವು ನಂಬಿದ ಒಂದೇ ಒಂದು ಸಿದ್ಧಾಂತಕ್ಕಾಗಿ ಸಿಗಬಹುದಾಗಿದ್ದ ಎಲ್ಲಾ ಐಷಾರಾಮಿ ಜೀವನವನ್ನು ತ್ಯಜಿಸಿ ಬದುಕಿದವರಿಗೆ ಶಿಷ್ಟಾಚಾರದ ಹಂಗು ಏಕೆ? ಸ್ವಾಮಿ ಶಿವಾನಂದರಿಗೂ ಮುಂಚೆ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ನಮ್ಮವರೇ ಆದ 'ಸಾಲುಮರದ ತಿಮ್ಮಕ್ಕ' ನವರು ತಮ್ಮ ಅಮಾಯಕ ನಡೆಯಿಂದ ರಾಷ್ಟ್ರಪತಿಯವರನ್ನೂ ಮಂತ್ರಮುಗ್ಧರನ್ನಾಗಿಸಿದ್ದರು. ಅಂದು ತಿಮ್ಮಕ್ಕನವರು ರಾಷ್ಟ್ರಪತಿಯವರಾದ ಕೋವಿಂದ್ ಅವರ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದ್ದರು. ಶಿಷ್ಟಾಚಾರದ ಪ್ರಕಾರ ರಾಷ್ಟ್ರಪತಿಯವರನ್ನು ಮುಟ್ಟುವಂತಿಲ್ಲ. ಆದರೆ ಕಾಡು ಹಕ್ಕಿಗೆ ಯಾವ ಬೇಲಿಯ ನಿರ್ಬಂಧವಿದೆ? ಅಲ್ಲವೇ…
ಅದೇ ಈ ಸಲ ಸ್ವಾಮಿ ಶಿವಾನಂದ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ಬಂದಾಗ ಮೊದಲು ತಮಗಿಂತ ಕಿರಿಯರಾದ (ಬಹುಷ: ಭಾರತದಲ್ಲೇ ಇವರಿಗಿಂತ ವಯಸ್ಸಿನಲ್ಲಿ ಹಿರಿಯ ವ್ಯಕ್ತಿಗಳು ಬೇರೆ ಯಾರೂ ಇರಲಾರರು) ಪ್ರಧಾನ ಮಂತ್ರಿಗಳಿಗೆ ಶಿರಬಾಗಿ ನಮನ ಸಲ್ಲಿಸಿದರು. ನಂತರ ರಾಷ್ಟ್ರಪತಿಗಳಿಗೂ ನಮನ ಸಲ್ಲಿಸಿದರು. ಇವರ ವಿಧೇಯತೆ ಮತ್ತು ವಿನಮ್ರತೆಯನ್ನು ಗಮನಿಸಿದ ರಾಷ್ಟ್ರಪತಿಗಳೇ ಖುದ್ದು ಇವರನ್ನು ಎಬ್ಬಿಸಿ, ಗೌರವಿಸಿದರು. ಬರಿಗಾಲಿನಲ್ಲೇ ಪ್ರಶಸ್ತಿ ಪಡೆದುಕೊಂಡ ಇವರಿಗೆ ಬರೋಬ್ಬರಿ ೧೨೫ ವರ್ಷ. ಆದರೂ ಇವರ ನಡವಳಿಕೆಯಲ್ಲಿರುವ ವಿಧೇಯತೆಯು ದೇಶದ ಉನ್ನತ ಸ್ಥಾನದಲ್ಲಿರುವವರಿಗೆ ನಾವು ನೀಡಬೇಕಾದ ಗೌರವವನ್ನು ಸೂಚಿಸುತ್ತದೆ. ಆ ಸ್ಥಾನದಲ್ಲಿರುವವರು ನಮಗಿಂತ ಸಣ್ಣ ವಯಸ್ಸಿನವರೇ ಇರಬಹುದು. ಆದರೆ ಆ ಪದವಿಗೆ ನಾವು ಶಿರಬಾಗಿ ಗೌರವ ಸೂಚಿಸಬೇಕು ಎನ್ನುವುದೇ ಸ್ವಾಮಿ ಶಿವಾನಂದ ಅವರ ಮನದ ಮಾತು.
ಸ್ವಾಮಿ ಶಿವಾನಂದ ಬಳಿ ಇರುವ ಅಧಿಕೃತ ದಾಖಲೆಯಾದ ಪಾಸ್ ಪೋರ್ಟ್ ಪ್ರಕಾರ ಅವರ ಹುಟ್ಟಿದ ದಿನಾಂಕ ಆಗಸ್ಟ್ ೮, ೧೮೯೬. ಮೂರು ಶತಮಾನಗಳನ್ನು ಕಂಡ ಅಪರೂಪದ ವ್ಯಕ್ತಿ ಶಿವಾನಂದ ಇವರು. ಇವರು ಹುಟ್ಟಿದ್ದು ಅವಿಭಜಿತ ಭಾರತದ ಸಿಲೆಟ್ ಜಿಲ್ಲೆಯಲ್ಲಿ (ಪ್ರಸ್ತುತ ಬಾಂಗ್ಲಾದೇಶದಲ್ಲಿದೆ). ಕಡು ಬಡತನದಲ್ಲಿ ಬೆಳೆದ ಶಿವಾನಂದರು ತಮ್ಮ ಆರನೇ ವಯಸ್ಸಿನಲ್ಲಿಯೇ ತಂದೆ ಹಾಗೂ ತಾಯಿಯವರನ್ನು ಕಳೆದುಕೊಂಡರು. ಒಂದು ಹೊತ್ತಿನ ಗಂಜಿ ಸಿಗುವುದೇ ಕಷ್ಟಕರವಾಗಿದ್ದ ಅವರಿಗೆ ಬಾಲ್ಯದಲ್ಲಿ ಯಾವುದೇ ರೀತಿಯ ಸಾಮಾನ್ಯ ಸೌಕರ್ಯಗಳು ಸಹಾ ಇರಲಿಲ್ಲ. ಆದರೆ ಅವರ ಮನೋಬಲ ಬಹಳ ಗಟ್ಟಿಯಾಗಿತ್ತು. ತಮ್ಮ ಹೆತ್ತವರ ನಿಧನದ ನಂತರ ‘ಜಗತ್ತೇ ನನ್ನ ಮನೆ, ಜನರೇ ನನ್ನ ಬಂಧು-ಬಳಗ, ಅವರನ್ನು ಪ್ರೀತಿಸಿ ಅವರ ಸೇವೆ ಮಾಡುವುದೇ ನನ್ನ ಪರಮ ಧರ್ಮ' ಎಂದು ನಂಬಿ, ಅದರಂತೆಯೇ ನಡೆದುಕೊಂಡರು.
ಹೆತ್ತವರ ನಿಧನದ ಬಳಿಕ ಯಾರೋ ಅವರನ್ನು ಗುರು ಓಂಕಾರಾನಂದ ಗೋಸ್ವಾಮಿಯವರ ಆಶ್ರಮಕ್ಕೆ ಸೇರಿಸಿದರು. ಪಶ್ಚಿಮ ಬಂಗಾಳದ ನಬದ್ವೀಪದಲ್ಲಿರುವ ಈ ಆಶ್ರಮವನ್ನು ಸೇರಿಕೊಂಡ ಶಿವಾನಂದರು ಶಾಲಾ ಶಿಕ್ಷಣದಿಂದ ವಂಚಿತರಾದರೂ, ಯೋಗ ಶಿಕ್ಷಣವನ್ನು ಪಡೆದುಕೊಂಡರು. ಯೋಗದಲ್ಲಿನ ಎಲ್ಲಾ ಪಟ್ಟುಗಳನ್ನು ಕರಗತ ಮಾಡಿಕೊಂಡ ಶಿವಾನಂದರು ಆಧ್ಯಾತ್ಮಿಕ ಜೀವನದತ್ತ ಒಲವು ತೋರಿದರು. ತಮ್ಮ ಶಿಸ್ತುಬದ್ಧ ಜೀವನ, ಸರಳ ಆಹಾರ, ಅಜನ್ಮ ಬ್ರಹ್ಮಚರ್ಯವೇ ತಾವು ೧೨೫ ವರ್ಷ ಬದುಕಲು ಕಾರಣ ಎನ್ನುತ್ತಾರೆ ಶಿವಾನಂದರು. ಎಣ್ಣೆ ರಹಿತ ಬೇಯಿಸಿದ ಆಹಾರವನ್ನು ಸೇವಿಸುವ ಇವರು ಈಗಲೂ ಒಂದು ಗಂಟೆಯಷ್ಟು ಕಾಲ ಯೋಗ ಮಾಡಬಲ್ಲರು ಎನ್ನುತ್ತಾರೆ ಇವರ ಆತ್ಮೀಯರು. ಅವಿರತ ಯೋಗದ ಕಾರಣದಿಂದ ಇವರು ಆರೋಗ್ಯಕರವಾದ ಜೀವನವನ್ನು ನಡೆಸುತ್ತಿದ್ದು, ಅದರ ಮೂಲಕ ತಮ್ಮ ಇಂದ್ರಿಯಗಳು, ಮನಸ್ಸು ಮತ್ತು ಚಿತ್ತವನ್ನು ನಿಯಂತ್ರಿಸುವುದರ ಮೂಲಕ ಪರಮಾತ್ಮನನ್ನು ಆತ್ಮದ ಮೂಲಕ ಸಂಧಿಸಬಹುದು ಎನ್ನುತ್ತಾರೆ ಸ್ವಾಮಿ ಶಿವಾನಂದ ಇವರು.
ಕೇವಲ ಯೋಗ ಮಾತ್ರವಲ್ಲ, ಸ್ವಾಮಿ ಶಿವಾನಂದರವರು ತಮ್ಮ ಸಮಾಜ ಸೇವೆಯ ಮೂಲಕವೂ ಜನಜನಿತರಾಗಿದ್ದಾರೆ. ಕಳೆದ ಐವತ್ತು ವರ್ಷಗಳಿಂದ ಒರಿಸ್ಸಾದ ಪುರಿಯಲ್ಲಿ ಕುಷ್ಟರೋಗ ಪೀಡಿತರ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ನಿರಂತರವಾಗಿ ಕುಷ್ಟ ರೋಗ ಪೀಡಿತ ಭಿಕ್ಷುಕರು, ಅನಾಥರಿರುವ ಊರುಗಳಿಗೆ, ಅವರು ವಾಸಿಸುವ ಗುಡಿಸಲುಗಳಿಗೆ ವೈಯಕ್ತಿಕವಾಗಿ ತೆರಳಿ ಅವರಿಗೆ ಸೇವೆಯನ್ನು ಸಲ್ಲಿಸಿದ್ದಾರೆ. ಹೀಗೆ ಸುಮಾರು ೫೦೦-೬೦೦ ಮನೆಗಳಿಗೆ ಅವರು ತೆರಳಿ ಸೇವೆ ಮಾಡಿದ್ದಾರೆ. ಈ ಮೂಲಕ ಕುಷ್ಟರೋಗ ಪೀಡಿತರನ್ನು ಸಮಾಜದಿಂದ ಬಹಿಷ್ಕಾರ ಮಾಡದೇ ಅವರಿಗೆ ಸೂಕ್ತ ಚಿಕಿತ್ಸೆಯನ್ನು ಕಲ್ಪಿಸುವುದರ ಮೂಲಕ ಗುಣಪಡಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಹಲವಾರು ಸ್ವಯಂ ಸೇವಕರನ್ನು ತಮ್ಮ ಗರಡಿಯಲ್ಲಿ ಪಳಗಿಸಿ ತಯಾರು ಮಾಡಿದ್ದಾರೆ.
ಸ್ವಾಮಿ ಶಿವಾನಂದರ ಯೋಗ ಹಾಗೂ ಸಮಾಜಮುಖಿ ಸೇವಾ ಕಾರ್ಯಗಳನ್ನು ಗಮನಿಸಿ ೨೦೧೯ರಲ್ಲಿ ಬೆಂಗಳೂರಿನಲ್ಲಿ ‘ಯೋಗ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ರೆಸ್ಪೆಕ್ಟ್ ಏಜ್ ಇಂಟರ್ ನ್ಯಾಶನಲ್ ವತಿಯಿಂದ ‘ಬಸುಂದರ ರತನ್' ಎಂಬ ಪ್ರಶಸ್ತಿಯನ್ನು ನವೆಂಬರ್ ೩೦, ೨೦೧೯ರಂದು ನೀಡಲಾಗಿದೆ. ಇವರ ಸೇವೆಯನ್ನು ಕಂಡ ಜನರು ಇವರನ್ನು ನಡೆದಾಡುವ ಭಗವಂತ ಎಂದೇ ಗೌರವಿಸುತ್ತಾರೆ. ಪ್ರಸ್ತುತ ವಾರಣಾಸಿ (ಕಾಶಿ)ಯ ವಾಸಿಯಾಗಿರುವ ಇವರನ್ನು ೨೦೨೧ರ ಸಾಲಿನ ಪದ್ಮಶ್ರೀ ಪ್ರಶಸ್ತಿಯು ಹುಡುಕಿಕೊಂಡು ಬಂದಿರುವುದರಲ್ಲಿ ಯಾವುದೇ ಅಚ್ಚರಿ ಇಲ್ಲ.
ಭಾರತದ ಉನ್ನತ ಸಂಸ್ಕೃತಿ, ಆಚಾರ-ವಿಚಾರ, ಮಹಾನ್ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿರುವ ಯೋಗ ಗುರು ಸ್ವಾಮಿ ಶಿವಾನಂದ ಇವರು ಇನ್ನಷ್ಟು ವರ್ಷ ನಮ್ಮ ಜೊತೆ ಇರಲಿ ಎಂದು ಹಾರೈಸುವ. ಇವರನ್ನು ಅನುಸರಿಸುವ ಮೂಲಕವಾದರೂ ನಾವು ಇನ್ನಷ್ಟು ಉತ್ತಮ ಮಾನವರಾಗೋಣ.
ಚಿತ್ರ ಕೃಪೆ: ಅಂತರ್ಜಾಲ ತಾಣ