ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಏಳನೆಯ ಕಂತು

ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಏಳನೆಯ ಕಂತು

ಬರಹ

ಅವನು ಸಾಕಷ್ಟು ಮುದ್ದಿನಲ್ಲಿ ಬೆಳೆದ ಹುಡುಗ. ಅವನ ಮನೆಯವರು ಬಡವರಾಗಿದ್ದರೂ ಒಬ್ಬರನ್ನೊಬ್ಬರು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು. ಅವನೆಂದೂ ಉಪವಾಸ ಇರಬೇಕಾಗಿ ಬಂದಿರಲಿಲ್ಲ. ಮನೆಯ ಹೆಂಗಸರು ಅಚ್ಚುಕಟ್ಟಾಗಿ ಒಗೆದು ಗಂಜಿ ಹಾಕಿದ ಅತ್ಯುತ್ತಮ ಮಸ್ಲಿನ್ ಬಟ್ಟೆ ಬಿಟ್ಟು ಬೇರೆ ಬಟ್ಟೆಯನ್ನು ಉಡಬೇಕಾಗಿಬಂದಿರಲಿಲ್ಲ.

ನನ್ನ ಜೊತೆ ಬಂದಿದ್ದಕ್ಕಾಗಿ ಅಹ್ಮದ್ ತೀವ್ರ ಪಶ್ಚಾತ್ತಾಪಪಟ್ಟ. ತೀರಾ ದೀನನಂತಾಗಿದ್ದ. ಇಡೀ ಹೊತ್ತು ಹೆನ್ರಿ ಇಬ್ಬಿಸುತ್ತಿದ್ದ ಜಗಳದಿಂದಾಗಿ ಅಪಾರ್ಟ್‌ಮೆಂಟ್‌ನಲ್ಲಿ ಅವನು ತೀರ ಅಸ್ವಸ್ಥನಾಗಿರುತ್ತಿದ್ದ. ಮನೆಗೆಲಸದ ರಾಮುವಿನ ನಡತೆಯಿಂದಾಗಿ ಪರಿಸ್ಥಿತಿ ಏನೂ ಸುಧಾರಿಸಲಿಲ್ಲ. ಅಹ್ಮದ್‌ನ ಚಾಕರಿ ಮಾಡುವುದನ್ನು ರಾಮು ಬಿಲ್‌ಕುಲ್ ನಿರಾಕರಿಸಿಬಿಟ್ಟ. ಅಹ್ಮದ್‌ನನ್ನು ಹೀನೈಸಲು ಸಿಕ್ಕ ಯಾವ ಅವಕಾಶವನ್ನೂ ಅವನು ಬಿಡುತ್ತಿರಲಿಲ್ಲ. ಅಹ್ಮದ್‌ನಿಗೆ ಎಲ್ಲವೂ ಹದಗೆಟ್ಟಿತು. ಕಾಗದದ ಹೂವಿನಂತೆ ಮುದುಡಿದ. ಅವನಿಗೆ ಸರೋದ್ ನುಡಿಸುವುದೂ ಬೇಕಿರಲಿಲ್ಲ. ನನ್ನೊಡನೆ ರತಿಯೂ ಬೇಡವಾಯಿತು. ತಲೆಯನ್ನೂ ಕೈಯನ್ನೂ ಜೋಲುಬಿಟ್ಟು ಎಲ್ಲಿಯಾದರೂ ಕೂತುಬಿಡುತ್ತಿದ್ದ. ಎಷ್ಟೋ ಸಾರಿ ಅವನ ಮುಖದಲ್ಲಿ ಕಣ್ಣೀರಿಳಿಯುತ್ತಿದ್ದುದನ್ನು ನೋಡಿದ್ದೆ. ಅದನ್ನು ಒರೆಸಿಕೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ ಅವನು. ತಾನೆಷ್ಟೇ ನೊಂದಿದ್ದರೂ ದೆಹಲಿಗೆ ಬಂದಾಗ ತಾನು ನೋಡಲು ಕಾತರನಾಗಿದ್ದ ಜುಮಾ ಮಸೀದಿ ಮತ್ತು ನಿಜಾಮುದ್ದೀನನ ಸಮಾಧಿಯನ್ನು ನೋಡುವುದಿರಲಿ ಅಪಾರ್ಟ್‌ಮೆಂಟ್‌ನಿಂದ ಹೊರಗೆ ತಲೆಯೇ ಹಾಕಿರಲಿಲ್ಲ. ಹೆಚ್ಚಿನ ಸಮಯ ತನ್ನ ಕುಟುಂಬದ ಬಗ್ಗೆ ಚಿಂತಿಸುತ್ತಿದ್ದ. ನಾನು ಅವನ ಪತ್ರಗಳನ್ನು ಪೋಸ್ಟ್ ಮಾಡುತ್ತಿದ್ದೆ. ಅವನಿಗೆ ಉದ್ದುದ್ದ ಮಾರೋಲೆಗಳು ಬರಲಾರಂಭಿಸಿದವು. ಅವನು ಅವುಗಳನ್ನು ಮೇಲಿಂದಮೇಲೆ ಓದಿ ಕಣ್ಣೀರಿನಲ್ಲಿ ತೋಯಿಸಿ ಮುತ್ತಿಡುತ್ತಿದ್ದ. ಒಂದು ರಾತ್ರಿ ಅವನ ಸ್ಥಿತಿ ಎಷ್ಟು ಬಿಗಡಾಯಿಸಿತೆಂದರೆ ಹಾಸಿಗೆಯಿಂದ ಜಿಗಿದು ಹೆನ್ರಿಯ ಬೆಡ್ ರೂಮಿಗೆ ನುಗ್ಗಿ ಅವನ ಹಾಸಿಗೆಯ ಬದಿ ಮಂಡಿಯೂರಿ ಕುಸಿದು ಕುಳಿತು ತನ್ನ್ನನ್ನು ಮನೆಗೆ ವಾಪಸು ಕಳಿಸಬೇಕೆಂದು ಗೋಗರೆಯತೊಡಗಿದ. ಪೈಜಾಮ ಧರಿಸಿದ ಹೆನ್ರಿ ಹಾಸಿಗೆಯಲ್ಲಿ ಕೂತು ( ನನಗನ್ನಿಸಿದಂತೆ) ರಾಜರ ಗತ್ತಿನಿಂದ ’ಹೂಂ ಆಗಲಿ’ ಅಂದ. ಮರುದಿನ ನಾನು ಅಹ್ಮದ್‌ನನ್ನು ಸ್ಟೇಷನ್‌ಗೆ ಕರೆದೊಯ್ದು ರೈಲಿನಲ್ಲಿ ಕೂರಿಸಿದೆ. ರೈಲ್ವೇ ಬೋಗಿಯ ಕಬ್ಬಿಣದ ಸರಳಿನಿಂದ ಅವನು ನನ್ನ ಕೈಗೆ ಮುತ್ತಿಟ್ಟು ಮತ್ತದೇ ಹಿಂದಿನ ಹುಮ್ಮಸ್ಸು ಮತ್ತು ಮಾರ್ದವದಿಂದ ನನ್ನ ಕಣ್ಣಲ್ಲಿ ಕಣ್ಣಿಟ್ಟ. ಕಡೆಯ ಗಳಿಗೆಯಲ್ಲಿ ನನಗೆ ಮತ್ತೆ ಅವನ ಜೊತೆ ಹೊರಟುಹೋಗಬೇಕೆನ್ನಿಸಿತು. ಆದರೆ ತೀರಾ ತಡವಾಗಿತ್ತು. ಟ್ರೈನು ಸ್ಟೇಷನ್ನಿನಿಂದ ಆಚೆ ಹೊರಟುಹೋಯಿತು. ಅಹ್ಮದ್‌ನದಾಗಿ ನನಗೆ ಉಳಿದದ್ದೆಂದರೆ ಕೇವಲ್ ಒಂದು ನೆನಪು- ಸ್ವಾದದ ಹಾಗೆ, ಸುಗಂಧದ ಹಾಗೆ, ಅಥವಾ ಅವನು ತನ್ನ ಸರೋದ್‌ನಲ್ಲಿ ನುಡಿಸಿದ ರಾಗದ ಹಾಗೆ- ತೀರಾ ಸುಂದರ ಹಾಗೂ ತೀರಾ ಮೃದುವಾದ ಒಂದು ಒಂದು ನೆನಪು ಮಾತ್ರ.

ನಾನು ತೀರಾ ಖಿನ್ನಳಾದೆ. ನನಗೆ ಮತ್ತೆ ಪ್ರವಾಸ ಹೋಗಬೇಕೆನಿಸಲಿಲ್ಲ. ಮನೆಯಲ್ಲೇ ಉಳಿದೆ. ರಾಜಕೀಯ ಮುತ್ಸದ್ದಿಗಳೊಡನೆ ಹೆನ್ರಿ ಏರ್ಪಡಿಸುತ್ತಿದ್ದ ಮತ್ತು ಇತರ ಪಾರ್ಟಿಗಳಿಗೆ ಹೋಗತೊಡಗಿದೆ. ನಾನು ಮತ್ತೆ ಅವನ ಬಳಿ ಬಂದುದು ಅವನಿಗೆ ಸಂತೋಷ ತಂದಿತ್ತು. ಪಾರ್ಟಿಯಿಂದ ಮನೆಗೆ ವಾಪಸಾಗುವಾಗ ಅವನ ಕಾರಿನಲ್ಲಿ ಯಾರಾದರೊಬ್ಬರು ಮಾತಾಡಲು ಜೊತೆಗಿರಬೇಕೆನ್ನುವುದು ಅವನಿಷ್ಟ. ಪಾರ್ಟಿಯಲ್ಲಿ ಇದ್ದ್ವವರ ಬಗ್ಗೆಯೆಲ್ಲ ಹೋಲಿಸಿ ಮಾತಾಡಬೇಕಲ್ಲ! ನನಗೂ ಮಾಡಲು ಏನೂ ಕೆಲಸವಿಲ್ಲದ್ದರಿಂದ ಅವನ ಜೊತೆ ಹೋಗಲು ನನ್ನ ಅಭ್ಯಂತರವೇನಿರಲಿಲ್ಲ. ನಾನು ಯಾವುದರಲ್ಲೋ ಸೋತಿದ್ದೇನೆಂದು ನನಗನ್ನಿಸತೊಡಗಿತು. ಬರಿ ಅಹ್ಮದ್‌ನ ವಿಷಯದಲ್ಲಲ್ಲ. ವಾಸ್ತವವಾಗಿ ಅವನ ಅಗಲಿಕೆ ನನ್ನನ್ನು ಅಂಥದ್ದೇನೂ ವಿಶೇಷವಾಗಿ ಬಾಧಿಸುತ್ತಿರಲಿಲ್ಲ. ಆ ಸಂಗೀತಮಯವಾದ ಓಣಿಯಲ್ಲಿ ಅವನು ತನ್ನವರೊಡನೆ ಸುಖವಾಗಿರುವ ಭಾವನೆ ನನಗೆ ಸಂತೋಷ ನೀಡುತ್ತಿತ್ತು. ಮುಂದೆ ಯಾವುದೋ ಅನುಭವ ನನಗಾಗಿ ಕಾದಿದೆ ಅನ್ನಿಸಿದರೂ ಅದಕ್ಕಾಗಿ ನಾನೇನು ಮಾಡಬೇಕೆಂದು ನನಗೆ ತೋಚಲಿಲ್ಲ. ನಮ್ಮ ಅಪಾರ್ಟ್‌ಮೆಂಟ್‌ನ ಮೇಲೆ ಹೋದರೆ ತೆರೆದ ಛಾವಣಿ ಇತ್ತು. ಅಲ್ಲಿಂದ ಕಾಣುವ ಅದ್ಭುತ ದೃಶ್ಯ ನೋಡಲು ನಾನು ಆಗಾಗ್ಗೆ ಹೋಗುತ್ತಿದ್ದೆ. ನಾವು ವಾಸಿಸುತ್ತಿದ್ದ ಕಟ್ಟಡವಲ್ಲದೆ ಸುತ್ತಮುತ್ತಲ ಇತರ ಮನೆಗಳೂ, ಬಿಳಿ ಹಾಗೂ ಪಿಂಕ್ ಬಣ್ಣ್ದದವಾಗಿದ್ದು ಅತ್ಯಾಧುನಿಕವಾಗಿದ್ದವು. ಎಲ್ಲ ಮನೆಗಳಿಗೂ ಇಡಿಯ ಗಾಜಿನ ದೊಡ್ದ ಕಿಟಕಿಗಳಿದ್ದು ಎದುರಿಗೆ ಪುಟ್ಟ ಹುಲ್ಲುಹಾಸು ಇತ್ತು. ಆದರೆ ಮೇಲಿನ ತಾರಸಿಯಿಂದ ಸುತ್ತಲಿನ ದೃಶ್ಯದಿಂದಾಚೆಯ ಬೃಹತ್ ನಗರ, ದೊಡ್ಡ ಮಸೀದಿ, ಕೋಟೆ ಎಲ್ಲವನ್ನೂ ನೋಡಬಹುದಿತ್ತು.
ನಡುವೆ ಪಾಳು ಭೂಮಿ ಇದ್ದು ಅಲ್ಲಲ್ಲಿ ಕುಸಿದುಬೀಳುತ್ತಿದ್ದ ಹಳೆಯ ಗೋರಿಗಳನ್ನು ಬಿಟ್ಟರೆ ಬಂಜರಾಗಿ ಖಾಲಿ ಬಿದ್ದಿತ್ತು. ನನ್ನ ಮೇಲೆ ಯಾವಾಗಲೂ ಅತಿ ಹೆಚ್ಚು ಪರಿಣಾಮ ಬೀರುದ್ದೆಂದರೆ ಆಕಾಶ- ಅಷ್ಟು ಬೃಹತ್ತಾಗಿ ತನ್ನ ಬಣ್ಣವನ್ನು ಸ್ವಲ್ಪವೂ ಬದಲಿಸದೆ, ತನ್ನ ಕೆಳಗಿನ ಕಟ್ಟಡ, ದೊಡ್ಡ ಕೋಟೆ, ಇಡಿಯ ನಗರ, ಮತ್ತು ಅದರಲ್ಲಿನ ಎಲ್ಲ ಜನ ಎಲ್ಲವನ್ನೂ ಕ್ಶುಲ್ಲಕವಾಗಿ ಕ್ಷಣಿಕವಾಗಿ ತೋರುವಂತೆ ಮಾಡುವ ಆಕಾಶ. ನಾನದನ್ನು ವರ್ಣಿಸಲಾರೆ. ಏಕೆಂದರೆ ಅದು ಇರುವುದೇ ಹಾಗೆ- ಅನಿರ್ವಚನೀಯವಾಗಿ, ಮತ್ತು ಆ ಬಗೆಯದ್ದೇನೋ ಒಂದು ಇದೆ ಎನ್ನುವ ಯೋಚನೆಯಲ್ಲದೆ ಅದರಲ್ಲಿ ನನ್ನ ಪಾತ್ರವೂ ಇದೆ; ನಾನೂ ಸಹ ಬೃಹತ್ತಾಗಿ, ಅನಂತವಾಗಿರುವುದರ ಭಾಗ ಎಂದು ತೋರುವಂತೆ ಮಾಡಿತು. ಇದೆಲ್ಲ ಎಷ್ಟು ಅನಿಶ್ಚಿತವಾಗಿತ್ತೆಂದರೆ, ನನಗೆ ಯಾರಿಗೂ ಏನನ್ನೂ ಹೇಳಿಕೊಳ್ಳಲಾಗಲಿಲ್ಲ. ಇವೆಲ್ಲದರಿಂದ "ಬಹುಶ: ಇಲ್ಲಿ ನನಗೆ ಇವೆಲ್ಲಕ್ಕಿಂತ ಹೆಚ್ಚಿನದೇನೋ ಕಾದಿದೆ" ಎಂದು ನಾನು ಅಂದುಕೊಂಡೆ. ನನಗೆ ಅದೊಂದು ದೊಡ್ದ ನೆಮ್ಮದೆ. ಕಾರಣ ಇಷ್ಟೆ! ಇದರ ಅರ್ಥವೇನೆಂದರೆ ನಾನೂ ಬದಲಾಯಿಸದೆ ಯಾವ ಅನುಭವವನ್ನು ಗಳಿಸದೆ, ಸ್ವದೇಶಕ್ಕೆ ಹೋಗಿ ಮೊದಲಿದ್ದಂತೆ ಇರಬೇಕಾದ ಸಂಭವವಿಲ್ಲ. ನಾನು ಇಲ್ಲಿಗೆ ಬಂದಾಗ ಮತ್ತು ಅದಕ್ಕೂ ಮುನ್ನ, ಹೀಗೆ ಉದ್ದಕ್ಕೂ " ಈ ದೇಶದಲ್ಲಿ ನಾನು ಗಳಿಸಬೇಕಾದ್ದೇನೋ ಇದೆ, ತಾತ್ಕಾಲಿಕವಾಗಿ ನಾನು ಅದರಲ್ಲಿ ಸೋತಿದ್ದರೂ ಇನ್ನೂ ಪ್ರಯತ್ನ ಮಾಡಿದರೆ ಯಶಸ್ವಿಯಾಗಬಹುದು" ಎಂಬ ಭಾವ ಇದ್ದೇ ಇತ್ತು.