ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ-ಹನ್ನೆರಡನೆಯ ಕಂತು
ನಾನೀಗ ಪೂರ್ತಿ ಗೋಡೆಗೆ ಒತ್ತಿಕೊಂಡಿದ್ದೆ. ಅವನು ಮುಂದೆ ಬಂದು ನನ್ನನ್ನು ಗೋಡೆಗೆ ಅಡಕಿದ್ದ. ಅವನ ಒಂದು ದೊಡ್ಡ ಕೈ ನನ್ನ ಹೊಟ್ಟೆಯ ಮೇಲಿನಿಂದ ಕೆಳಗೆ ಓಡಾಡುತ್ತಿತ್ತು. ಆ ಕೈಯ ಚಟುವಟಿಕೆ ಅವನ ದೇಹದ ಉಳಿದೆಲ್ಲ ಭಾಗಗಳಿಗಿಂತ ಮತ್ತು ಅವನ ಮಾತಿಗಿಂತ ಬೇರೆಯದೇ ಆಗಿ ತೋರುತ್ತಿತ್ತು. ಅವನ ಧ್ವನಿ ತಗ್ಗುತ್ತ ತಗ್ಗುತ್ತ ತೀವ್ರವಾಗತೊಡಗಿತು. "ನಿನಗೆ ವಿಧೇಯತೆ ಕಲಿಸುತ್ತೇನೆ, ಸಂಪೂರ್ಣ ಶರಣಾಗುವುದನ್ನು ಕಲಿಸುತ್ತೇನೆ. ಅದು ತೀರ ಅಗತ್ಯವಾದ ಮೊದಲ ಹಂತ. ನೀವು ಪಶ್ಚಿಮದಿಂದ ಬಂದವರೆಲ್ಲ ಹೇಗೆ ಅಂತ ನನಗೆ ಗೊತ್ತು. ನೀವೆಲ್ಲ ಸ್ವಂತ ಇಷ್ಟದಂತೆ ನಡೆಯುವವರು. ಹಠಮಾರಿಗಳು, ಸ್ವಚ್ಛಂದವರ್ತಿಗಳು. ಕಡೆಯ ಆ ಪದ ಹೇಳುವಾಗ ಭಾವಾವೇಗಕ್ಕೆ ಅವನ ಧ್ವನಿ ಒಡೆಯಿತು. ಅವನ ಕೈ ಇನ್ನೂ ಆಚೆಗೆ, ಆಳಕ್ಕಿಳಿಯತೊಡಗಿತು. ಸ್ವಚ್ಛಂದವರ್ತಿಗಳು ಎನ್ನುವ ಪದವನ್ನು ಮತ್ತೆ ಮತ್ತೆ ಹೇಳುತ್ತ ನನಗೆ ಒತ್ತಾಗಿ ಮಲಗುವಂತೆ ಹಾಸಿಗೆಯಲ್ಲಿ ಹೊರಳಿದ. ನನ್ನನ್ನು ಕೇಳಿದ "ಎಷ್ಟು ಗಂಡಸರ ಜೊತೆ ಮಲಗಿದ್ದೀ?" ನನ್ನ ಕೈಯನ್ನು ತೆಗೆದುಕೊಂಡು ಅದು ತನ್ನನ್ನು ಹಿಡಿದುಕೊಳ್ಳುವಂತೆ ಮಾಡಿದ. ಅವನು ಎಷ್ಟು ಧಡೂತಿಯಾಗಿದ್ದ, ಎಷ್ಟು ಕುದಿಯುತ್ತಿದ್ದ !! ನನಗೆ ಗಟ್ಟಿಯಾಗಿ ಒತ್ತಿಕೊಂಡು ಹೆದರಿಕೆ ಹುಟ್ಟುವಂತೆ ತುರ್ತಿನಿಂದ ಅಪ್ಪಣೆ ಮಾಡಿ ಕೇಳಿದ. "ಹೇಳು, ನಿಜ ಹೇಳು, ಎಷ್ಟು ಜನ ಗಂಡಸರೊಂದಿಗೆ?" ಆದರೆ ನನಗೆ ಹೆದರಿಕೆಯೇನಿರಲಿಲ್ಲ. ಅವನು ನನಗೀಗ ಅಪರಿಚಿತನಾಗಿರಲಿಲ್ಲ. ಸನ್ನಿವೇಶವೂ ಹೊಸದಾಗಿರಲಿಲ್ಲ. ನನ್ನ ಮೇಲೆ ಹೇರಿಕೊಳ್ಳುತ್ತ ಅರಚಿದ " ಹಾದರಗಿತ್ತಿ, ಹೇಳು, ನಿಜ ಹೇಳು, ಎಷ್ಟು ಜನ?" ನಾನು ನಿರಾಳವಾಗಿ ನಕ್ಕೆ.
(ಮುಂದುವರೆಯುವುದು)