ನಮಗೆ ತಿಳಿಯದ ಆಯುರ್ವೇದ ಹಾಗೂ ಆರೋಗ್ಯದ ಲೋಕ

ನಮಗೆ ತಿಳಿಯದ ಆಯುರ್ವೇದ ಹಾಗೂ ಆರೋಗ್ಯದ ಲೋಕ

ಅನಂತ ವಿಶ್ವದಲ್ಲಿ ನಮಗೆ ತಿಳಿಯದ ಅಪಾರ ಸಂಗತಿಗಳಿವೆ. ಆದರೆ, ಇದನ್ನು ಒಪ್ಪಲು ಹಲವರು ತಯಾರಿಲ್ಲ.
-ನಾವು ಕಲ್ಪಿಸಲಾಗದ ವಿಶ್ವ ಕ್ಷಣಕ್ಷಣವೂ ಹೇಗೆ ವಿಸ್ತರಿಸುತ್ತಿದೆ?
-ನಕ್ಷತ್ರಗಳ ಹುಟ್ಟು-ಸಾವಿಗೆ ಕಾರಣಗಳೇನು?
-ಸೂರ್ಯನ ಕಿರಣಗಳು ಮತ್ತು ಶಾಖ ನಮ್ಮ ಬದುಕಿನ ಮೇಲೆ ಏನೆಲ್ಲ ಪರಿಣಾಮಗಳನ್ನು ಬೀರುತ್ತಿದೆ?
-ಆಕಾಶದಲ್ಲಿ ಈ ಭೂಮಿ ಕುಸಿಯದೆ, ಸಾವಿರಾರು ವರುಷಗಳಿಂದ ಹೇಗೆ ಜೀವಸಂಕುಲವನ್ನು ರಕ್ಷಿಸುತ್ತಿದೆ?
-ಬೇರೆ ಗ್ರಹಗಳಲ್ಲಿ ಜೀವಿಗಳು ಇದ್ದಾವೆಯೇ? ಅವನ್ನು ಹೇಗೆ ಸಂಪರ್ಕಿಸಬಹುದು?

ಇಂತಹ ಸಾವಿರಾರು ಪ್ರಶ್ನೆಗಳ ಉತ್ತರಗಳು ನಮಗೆ ಗೊತ್ತಿಲ್ಲ. ಅವುಗಳಿಗೆ ಇನ್ನು ನೂರು ವರುಷಗಳೊಳಗೆ ಉತ್ತರ ಸಿಗುವ ಯಾವ ಸೂಚನೆಯೂ ಇಲ್ಲ.

ನಮ್ಮ ದಿನನಿತ್ಯದ ಜೀವನದಲ್ಲಿಯೂ ಹಲವಾರು ಸಂಗತಿಗಳು ನಮಗೆ ವಿಸ್ಮಯ ಹಾಗೂ ನಿಗೂಢ ಅನಿಸುತ್ತವೆ. ಯಾಕೆಂದರೆ ಅವುಗಳ ಬಗ್ಗೆ ಯಾಕೆ? ಏನು? ಹೇಗೆ? ಎಂಬ ಪ್ರಶ್ನೆಗಳಿಗೆ ಯಾವ ಉತ್ತರಗಳೂ ಸಿಗೋದಿಲ್ಲ. ಉದಾಹರಣೆಗೆ, ನಮ್ಮ ಆರೋಗ್ಯ. ಕೊರೋನಾ ವೈರಸ್ ಇಡೀ ಜಗತ್ತಿನಲ್ಲಿ ಮಾನವರ ಮೇಲೆ ಧಾಳಿ ಮಾಡಿ ಏನೆಲ್ಲ ಅನಾಹುತಗಳಿಗೆ ಕಾರಣವಾಯಿತು ಎಂಬುದನ್ನು ಗಮನಿಸಿ. 2020ರಿಂದೀಚೆಗೆ ಕಣ್ಣಿಗೆ ಕಾಣಿಸದ ಈ ವೈರಸ್ ಸೋಂಕು ತಗಲಿದವರ ಸಂಖ್ಯೆ 69 ಕೋಟಿ ದಾಟಿದೆ ಮತ್ತು  ಅದಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ 68.92 ಲಕ್ಷ. ಮನುಷ್ಯ ಏನೆಲ್ಲ ಕಸರತ್ತು ಮಾಡಿದರೂ ಕೊರೋನಾ ಧಾಳಿಗೆ ಬಲಿಯಾದವರ ಸಂಖ್ಯೆಯನ್ನು ಕಡಿಮೆ ಮಾಡಲು ಸಾಧ್ಯವಾಗಲಿಲ್ಲ, ಅಲ್ಲವೇ?

ಈ ಹಿನ್ನೆಲೆಯಲ್ಲಿ ಸಾವಿರಾರು ವರುಷಗಳ ಮುಂಚೆಯೇ ಮನುಷ್ಯನ ಆರೋಗ್ಯ ರಕ್ಷಣೆಗಾಗಿ ಭಾರತದ ಋಷಿಮುನಿಗಳು ಆವಿಷ್ಕರಿಸಿದ ಆಯುರ್ವೇದ ಶಾಸ್ತ್ರದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಆಯುರ್ವೇದದ ಬಗ್ಗೆ ಸುಪ್ರಸಿದ್ಧ ಚರಕ ಸಂಹಿತೆ ಮತ್ತು ಸುಶ್ರುತ ಸಂಹಿತೆ ಸಹಿತ ಸಾವಿರಾರು ಸಂಸ್ಕೃತ ಗ್ರಂಥಗಳಿವೆ. ಆದರೆ, ಅವೆಲ್ಲವೂ ಸಂಸ್ಕೃತದಲ್ಲಿ ಇರುವ ಕಾರಣ ಜನಸಾಮಾನ್ಯರಿಗೆ ಅವನ್ನು ಅಧ್ಯಯನ ಮಾಡಲು ಮತ್ತು ಅವುಗಳ ಸೂತ್ರಗಳನ್ನು ಅಳವಡಿಸಿಕೊಳ್ಳಲು ಕಷ್ಟವಾಗಿದೆ. ಅವುಗಳಲ್ಲಿ ಕೆಲವು ಗ್ರಂಥಗಳು ಇಂಗ್ಲಿಷ್, ಹಿಂದಿ ಮತ್ತು ಇತರ ಕೆಲವು ಭಾಷೆಗಳ ಟಿಪ್ಪಣಿಗಳ ಸಹಿತ ಲಭ್ಯವಿವೆ. ಅದೇನಿದ್ದರೂ, ಆ ಪುಸ್ತಕಗಳು ದುಬಾರಿ ಮತ್ತು ಅವನ್ನು ಓದಲು ಆಸಕ್ತಿಯಿರುವವರು ತೀರಾ ಕಡಿಮೆ ಜನರು.

ಆದ್ದರಿಂದ, ನಮ್ಮ ಬಳಗ 2018ರಲ್ಲಿ ಆರೋಗ್ಯಪೂರ್ಣ ಜೀವನ ವಿಧಾನ ಬಗ್ಗೆ ಸಂಶೋಧನೆ, ಮಾಹಿತಿ ದಾಖಲಾತಿ ಮತ್ತು ಪ್ರಸಾರ ಹಾಗೂ ಜನಜಾಗೃತಿಗಾಗಿ "ಸಾವಯವ ಜೀವನ ಪ್ರತಿಷ್ಠಾನ” (ಫೌಂಡೇಷನ್ ಫಾರ್ ಆರ್ಗಾನಿಕ್ ಲಿವಿಂಗ್) ಸ್ಥಾಪಿಸಿದೆ. ಇದರ ವೆಬ್-ಸೈಟಿನಲ್ಲಿ (https://ffol.in) ಆಯುರ್ವೇದ, ಆರೋಗ್ಯ ರಕ್ಷಣೆ ಕುರಿತಾದ ಹಲವು ಪುಸ್ತಕಗಳ ಮಾಹಿತಿ ಮತ್ತು ಈ ವಿಷಯಗಳ ಇತ್ತೀಚೆಗಿನ ಮಾಹಿತಿ ಲಭ್ಯವಿದೆ. ಇದರ ಒಂದು ಯೋಜನೆಯಾಗಿ “ಆಯುರ್ ವಿಕಿ” ಎಂಬ ಉಚಿತ ಆಪ್ ಅಭಿವೃದ್ಧಿ ಪಡಿಸಿದ್ದೇವೆ. ಇದರಲ್ಲಿ ಆಯುರ್ವೇದ ಪರಿಕಲ್ಪನೆಗಳು, ಪದ್ಧತಿಗಳು, ಯೋಗಾಸನಗಳು, ಪ್ರಾಣಾಯಾಮ ಇತ್ಯಾದಿ 12 ವಿಭಾಗಗಳಿವೆ. “ಹರ್ಬ್ಸ್" ಎಂಬ ಮೊದಲ ವಿಭಾಗದಲ್ಲಿ 2,000ಕ್ಕಿಂತ ಅಧಿಕ ಔಷಧೀಯ ಸಸ್ಯಗಳ ಫೋಟೋ ಸಹಿತ ಮಾಹಿತಿ ಲಭ್ಯವಿದೆ. (ಇದು 2020ರಲ್ಲಿ ಭಾರತ ಸರಕಾರದ ಆಯುಷ್ ಮಂತ್ರಾಲಯದಿಂದ “ಆಯುರ್ವೇದದ ಅತ್ಯುತ್ತಮ ಆಪ್” ಎಂದು ಪ್ರಶಸ್ತಿ ಗಳಿಸಿದೆ.)

ಅದಲ್ಲದೆ, 2020ರಿಂದೀಚೆಗೆ ಆಯುರ್ವೇದದ ಮಾಹಿತಿ ಮತ್ತು ಸಲಹೆ ನೀಡುವ ಕೆಲವು ಯೂ-ಟ್ಯೂಬ್ ಚಾನೆಲುಗಳು ಜನಪ್ರಿಯವಾಗಿವೆ. ಉದಾಹರಣೆಗೆ: ಉತ್ತರಕನ್ನಡ ಜಿಲ್ಲೆಯ ಡಾ. ವೆಂಕಟರಮಣ ಹೆಗ್ಡೆ ಅವರ "ನಿಸರ್ಗ ಮನೆ, ಶಿರಸಿ” ಚಾನೆಲ್ ಮತ್ತು ಡಾ. ವಿನಾಯಕ ಹೆಬ್ಬಾರ್ ಅವರ “ಅಥೆಂಟಿಕ್ ಆಯುರ್ವೇದ" ಚಾನೆಲ್. ಈ ಎರಡೂ ಚಾನೆಲ್‌ಗಳಲ್ಲಿ ಆರೋಗ್ಯ ರಕ್ಷಣೆಯ ಪಾರಂಪರಿಕ, ಆಯುರ್ವೇದ, ಪ್ರಾಕೃತಿಕ ಹಾಗೂ ನಾಟಿ ವೈದ್ಯದ ವಿಧಾನಗಳನ್ನು ವಿವರಿಸುವ ನೂರಾರು ವಿಡಿಯೋಗಳಿವೆ. ಜೊತೆಗೆ ಈ ಚಾನೆಲ್‌ಗಳ ವೀಕ್ಷಕರು ತಮ್ಮ ಪ್ರಶ್ನೆಗಳನ್ನು ಕಳುಹಿಸಿ ಉತ್ತರ ಪಡೆಯಲಿಕ್ಕೂ ಅವಕಾಶವಿದೆ.

ಡಾ. ವಿನಾಯಕ ಹೆಬ್ಬಾರ್ ತಮ್ಮ ಒಂದು ವಿಡಿಯೋದ ಕೊನೆಯಲ್ಲಿ ತಮ್ಮದೇ ಜೀವನದ ಘಟನೆಯೊಂದನ್ನು ವಿವರಿಸುತ್ತಾ ನೀಡುವ ಮಾಹಿತಿ ಬಹಳ ಕುತೂಹಲಕಾರಿಯಾಗಿದೆ. ಒಂದು ದಿನ ಇವರು ಕ್ಲಿನಿಕ್‌ನಲ್ಲಿದ್ದಾಗ, ಅವರ ಎರಡು ವರುಷ ವಯಸ್ಸಿನ ಮಗಳಿಗೆ ಜ್ವರ ಏರುತ್ತಿದೆಯೆಂದು ಇವರ ಪತ್ನಿ ತಿಳಿಸುತ್ತಾರೆ. ಇವರು ತಕ್ಷಣವೇ ಮನೆಗೆ ಹೋಗಿ ಔಷಧಿ ನೀಡಲು ಸಾಧ್ಯವಿರಲಿಲ್ಲ. ಆದ್ದರಿಂದ ಕೈಬೆರಳುಗಳಿಂದ "ಮುಕುಲ ಮುದ್ರೆ”ಯನ್ನು ಮಾಡಿ, ಮಗಳ ಪಕ್ಕದಲ್ಲಿ ಕುಳಿತುಕೊಳ್ಳಬೇಕೆಂದು ಪತ್ನಿಗೆ ಸಲಹೆ ನೀಡುತ್ತಾರೆ. ಕೆಲವೇ ನಿಮಿಷಗಳಲ್ಲಿ ಮಗಳ ಜ್ವರ ಕಡಿಮೆಯಾಯಿತು. (ಮುಕುಲ ಎಂದರೆ ಕಮಲದ ಮೊಗ್ಗು. ಹೆಬ್ಬೆರಳಿನ ತುದಿಯ ಸುತ್ತಲೂ ಉಳಿದ ನಾಲ್ಕು ಬೆರಳುಗಳ ತುದಿಗಳು ಇರುವಂತೆ ಜೋಡಿಸಿಕೊಂಡರೆ ಅದುವೇ ಮುಕುಲ ಮುದ್ರೆ.)

ಮಧ್ಯಾಹ್ನದ ಹೊತ್ತಿಗೆ ಔಷಧಿ ತಗೊಂಡು ಡಾ. ವಿನಾಯಕ ಹೆಬ್ಬಾರ್ ತಮ್ಮ ಮನೆಗೆ ಬರುತ್ತಾರೆ. ಆಗ ಪುನಃ ಮಗಳಿಗೆ ಜ್ವರ ಏರಿತ್ತು. ಪುಟ್ಟ ಮಗಳಿಗೆ ಔಷಧಿ ಕೊಡುವ ಮುನ್ನ “ಇನ್ನೊಮ್ಮೆ ಮುಕುಲ ಮುದ್ರೆ ಮಾಡಿ ಯಾಕೆ ಪರೀಕ್ಷಿಸಬಾರದು” ಎಂದು ಅವರಿಗೆ ಅನಿಸಿತು. ಹಾಗೆಯೇ ಮಾಡಿದರು. 2 - 3 ನಿಮಿಷಗಳಲ್ಲಿ ಪುನಃ ಜ್ವರ ಇಳಿಯಿತು. ಅನಂತರ ಮಗಳಿಗೆ ಜ್ವರ ಏರಿದಾಗೆಲ್ಲ ಮುಕುಲ ಮುದ್ರೆ ಮಾಡಿ, ಜ್ವರ ಇಳಿಸಿದರು. ಯಾವುದೇ ಔಷಧಿ ಕೊಡದೆ ಅವಳ ಜ್ವರ ಗುಣ ಪಡಿಸಲು ಸಾಧ್ಯವಾಯಿತು ಎಂದವರು ತಿಳಿಸುತ್ತಾರೆ. ಆದರೆ, ಎಲ್ಲರೂ ಈ ವಿಧಾನ ಅನುಸರಿಸಬೇಕೆಂಬುದು ತನ್ನ ಶಿಫಾರಸ್ ಅಲ್ಲ; ಯಾಕೆಂದರೆ, ಮಕ್ಕಳಿಗೆ ಜ್ವರ ನೆತ್ತಿಗೇರಿದರೆ ಅನಾಹುತ ಆದೀತೆಂದು ಎಚ್ಚರಿಸುತ್ತಾರೆ.

ಅದೇನಿದ್ದರೂ, ಈ ಘಟನೆಯಿಂದ ನಾವು ಈ ಕೆಳಗಿನ ವಿಷಯಗಳನ್ನು ತಿಳಿಯಬಹುದೆಂದು ಡಾ. ವಿನಾಯಕ ಹೆಬ್ಬಾರ್ ಹೇಳುತ್ತಾರೆ. (1)ಈ ಜಗತ್ತಿನಲ್ಲಿ ನಮಗೆ ಅರ್ಥವಾಗದ ಮತ್ತು ಆಧುನಿಕ ವಿಜ್ನಾನ ವಿವರಿಸಲಾಗದ ಹಲವಾರು ಸಂಗತಿಗಳಿವೆ.
(2)ನಮ್ಮ ಮನಸ್ಸಿಗೆ ಅಗಾಧವಾದ ಶಕ್ತಿಯಿದೆ; ಅದನ್ನು ಒಳ್ಳೆಯ ಉದ್ದೇಶಗಳಿಗೆ ಬಳಸಬೇಕು.
(3)ಈ ಜಗತ್ತಿನಲ್ಲಿ ಎಲ್ಲರೂ “ಇಂಟರ್ ಕನೆಕ್ಟೆಡ್”. ಈ ಪರಸ್ಪರ ಸಂಬಂಧ ಬಳಸಿ, ನಾವು ಇನ್ನೊಬ್ಬರಿಗೆ ಸಹಾಯ ಮಾಡಲು ಸಾಧ್ಯ. (ಅವರು ತಮ್ಮ ಪುಟ್ಟ ಮಗಳ ಜ್ವರ ಇಳಿಯಲು ಮುಕುಲ ಮುದ್ರೆಯ ಮೂಲಕ ಸಹಾಯ ಮಾಡಿದಂತೆ.)
(4)ನಮ್ಮಲ್ಲಿ ಎಲ್ಲರಲ್ಲಿಯೂ ವೈಬ್ರೇಷನ್ಸ್ ಇವೆ. ಆದರೆ ನಾವು (ನಮ್ಮ ಪೂರ್ವಜರಂತೆ) ಪ್ರಾಕೃತಿಕವಾಗಿ ಬದುಕುವುದನ್ನು ತೊರೆದು, (ಕೃತಕ ಜೀವನ ವಿಧಾನಗಳನ್ನು ಅನುಸರಿಸುತ್ತಿರುವ ಕಾರಣ) ನಮಗೆ ಆ ವೈಬ್ರೇಷನ್‌ಗಳು ಗೊತ್ತಾಗುತ್ತಿಲ್ಲ.

ಆರೋಗ್ಯಪೂರ್ಣ ಜೀವನಕ್ಕೆ ಅತ್ಯವಶ್ಯವಾದ ಸಂಗತಿಗಳ ಬಗ್ಗೆ ಕುತೂಹಲ ಬೆಳೆಸಿಕೊಂಡು, ಅದರ ಭಾಗವಾದ ನಮ್ಮ ಪ್ರಾಚೀನ ಆಯುರ್ವೇದ ಶಾಸ್ತ್ರದ ಬಗ್ಗೆ ತಿಳಿದುಕೊಂಡು ಸೂಕ್ತವಾದದ್ದನ್ನು ಅಳವಡಿಸಿಕೊಳ್ಳಲು ನಮಗೆ ಈ ಘಟನೆ ಪ್ರೇರಣೆಯಾಗಲಿ.