ನಮಸ್ಕಾರ, ವಾರ್ತೆಗಳು… ಬರೆಯುತ್ತಿರುವವರು

ನಮಸ್ಕಾರ, ವಾರ್ತೆಗಳು… ಬರೆಯುತ್ತಿರುವವರು

ವಿವೇಕಾನಂದ ಹೆಚ್.ಕೆ… ಮುಖ್ಯಾಂಶಗಳು… ಗಗನಕ್ಕೇರುತ್ತಿರುವ ನಿರ್ಜೀವ ವಸ್ತುಗಳ ಬೆಲೆ - ಪಾತಾಳಕ್ಕೆ ಕುಸಿಯುತ್ತಿರುವ ಮನುಷ್ಯ ಜೀವಿಗಳ ನೆಲೆ. ಅಮೆಜಾನ್, ಸ್ವಿಗ್ಗಿ, ಫ್ಲಿಫ್ ಕಾರ್ಟ್, ಜೊಮಾಟೋ, ಸಾಫ್ಟ್ವೇರ್, ಮೀಡಿಯಾ ಸೇವೆಗಳ ಗುಣಮಟ್ಟದಲ್ಲಿ ಅತ್ಯುತ್ತಮ ಸುಧಾರಣೆ. ಶಿಕ್ಷಣ, ಆರೋಗ್ಯ, ಆಹಾರ, ಕಾನೂನು ಮುಂತಾದ ಮಾನವೀಯ ಸೇವೆಗಳ ಗುಣಮಟ್ಟ ಅಧೋಗತಿಯತ್ತ.....

ಸುದ್ದಿಗಳ ವಿವರ....ಜೀವ ಜೀವನದ ಆಯ್ಕೆಯಲ್ಲಿ ಸಾವು ಬದುಕಿನ ಹೋರಾಟದಲ್ಲಿ ಉಳಿದವರೇ ಅದೃಷ್ಟವಂತರು ಎಂಬ ಪರಿಸ್ಥಿತಿ ಎರಡು ವರ್ಷಗಳಿಂದ ಮನುಷ್ಯರನ್ನು ಕಾಡುತ್ತಿತ್ತು. ಕೊರೋನಾ ಎಂಬ ವೈರಸ್ ಮಾನವ ಕುಲಕ್ಕೆ ಉರುಳಾಗಿ ಪರಿಣಮಿಸಿತ್ತು. ಆದರೆ ಮನುಷ್ಯ ಇನ್ನೇನು ಅದರಿಂದ ಹೊರಬಂದು ಹೇಗೋ ಜೀವ ಉಳಿಸಿಕೊಂಡು ಈಗ ಹೊಸ ಬದುಕಿನ ನಿರೀಕ್ಷೆಯಲ್ಲಿರುವಾಗಲೇ...

ಹಾಲು, ನೀರು, ವಿದ್ಯುತ್, ಪೆಟ್ರೋಲ್, ಗ್ಯಾಸ್, ಊಟ, ಎಟಿಎಂ ವಿಥ್ ಡ್ರಾ ಹೀಗೆ ಸಾಲು ಸಾಲು ಅತ್ಯವಶ್ಯಕ ವಸ್ತುಗಳ ಬೆಲೆ ಏರಿಕೆ. ಜೊತೆಗೆ ಚಿನ್ನ, ಬೆಳ್ಳಿ, ಜಮೀನು, ಆಸ್ಪತ್ರೆ, ಶಾಲೆ ಎಲ್ಲವೂ ಮತ್ತಷ್ಟು ದುಬಾರಿ. ಮುಖ್ಯ ಪ್ರಶ್ನೆ ಈ ಬೆಲೆ ಏರಿಕೆ ಆದದ್ದು ಯಾರಿಗಾಗಿ. ಯಾವ ಉದ್ದೇಶಕ್ಕಾಗಿ? ಸರ್ಕಾರ ನಡೆಸಲು ಮತ್ತು ಆಡಳಿತಗಾರರ ಸುಖಕ್ಕಾಗಿ ಜನರ ಮೇಲೆ ಗಧಾ ಪ್ರಹಾರ.

ಅದೇ ಸಮಯದಲ್ಲಿ ಜನರ ಜೀವಗಳಿಗೆ ಮತ್ತು ಅವರ ಬದುಕಿಗೆ ಯಾವುದೇ ಬೆಲೆ ಇಲ್ಲ. ಹಣದ ಬೆಲೆಯೇ ಮನುಷ್ಯನ ಬೆಲೆಗಿಂತ ಮಹತ್ವದ್ದಾಗಿದೆ.ಹಾಗೆಯೇ ನಿರ್ಜೀವ ವಸ್ತುಗಳ ಸೇವಾ ವಲಯ ವಿಸ್ತರಿಸುತ್ತಾ, ಗುಣಮಟ್ಟ ಕಾಪಾಡುತ್ತಾ ಮನೆಯ ಬಾಗಿಲಿಗೆ ಎಲ್ಲಾ ಸೇವೆಗಳು ದೊರೆಯುತ್ತಿವೆ. ಆದರೆ ಅದೇ ಸೇವಾ ಮನೋಭಾವ ಮನುಷ್ಯನ ಮೂಲಭೂತ ಅವಶ್ಯಕತೆಗಳಾದ ಶಿಕ್ಷಣ ಆರೋಗ್ಯ ಕಾನೂನು ಪಾಲನೆ ವಿಷಯದಲ್ಲಿ ಸಿಗುತ್ತಿಲ್ಲ. ಇಲ್ಲಿ ಹಣವೇ ಸೇವೆಯ ಬಹುಮುಖ್ಯ ಸಾಧನವಾಗಿದೆ. 

ಸೇವಾ ವಲಯ ಎಂಬ ವ್ಯವಹಾರದಲ್ಲಿ ಕಾರ್ಪೊರೇಟ್ ಸಂಸ್ಕೃತಿ ಮನೆ ಬಾಗಿಲಿಗೆ ನೀವು ಹೇಳುವ - ಕೇಳುವ ಎಲ್ಲವನ್ನೂ ಒದಗಿಸುತ್ತಿದೆ. ನಿಮಗೆ ‌ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತಿದೆ. ಅದಕ್ಕಾಗಿ ಬಿಇ, ಎಂಬಿಎ, ಎಂಎ, ಎಂಕಾಂ, ಎಎಸ್ಸಿ ಮುಂತಾದ ಉನ್ನತ ವ್ಯಾಸಂಗದ ಯುವಕರನ್ನೇ ನೇಮಿಸಿಕೊಳ್ಳುತ್ತಿದ್ದಾರೆ. ಉತ್ಪಾದನೆ, ಕ್ರಿಯಾತ್ಮಕತೆ ಮರೆತ ಈ ಯುವ ಸಮುದಾಯ ಹಣಕ್ಕಾಗಿ ಯಾವ ಕೆಲಸವನ್ನು ಬೇಕಾದರೂ ಮಾಡುವ ಹಂತಕ್ಕೆ ತಲುಪಿದೆ. ಈ ಕ್ಷಣದಲ್ಲಿ ಇದು ಸಹನೀಯ. ಆದರೆ ಭವಿಷ್ಯ.

ಇನ್ನೊಂದು ಕಡೆ ನಿಜವಾಗಿಯೂ ಅತ್ಯುತ್ತಮ ಗುಣಮಟ್ಟ ಕಾಪಾಡಬೇಕಾಗಿದ್ದ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಬೇಕಾಗಿದ್ದ ಶಿಕ್ಷಣದ ಒಟ್ಟು ಗುಣಮಟ್ಟ ಸಂಪೂರ್ಣ ಕುಸಿದಿದೆ. ಶಾಲೆಗಳ ಕಟ್ಟಡಗಳ ಭವ್ಯತೆ ಹೆಚ್ಚಾದರೆ ಶಿಕ್ಷಕರ ಸಾಮರ್ಥ್ಯ ಕಲಿಸುವ ಕ್ರಮ ಕೃತಕವಾಗಿದೆ. ಬಹುತೇಕ ಆಸ್ಪತ್ರೆಗಳು ಸಹ ಇದೇ ರೀತಿಯ ವ್ಯವಹಾರಿಕ ಕೇಂದ್ರಗಳಾಗಿ ಮಾರ್ಪಟ್ಟಿವೆ. ಮತ್ತೆ ಚಿನ್ನ ಬೆಳ್ಳಿ ಜಮೀನುಗಳ ಬೆಲೆ ನಾಗಾಲೋಟ. ಅದಕ್ಕೆ ಮಿತಿಯೇ ಇಲ್ಲವಾಗಿದೆ. ಭ್ರಷ್ಟಾಚಾರಿಗಳ ಮನೆಯ ಮೇಲೆ ದಾಳಿ ಮಾಡಿದಾಗ ಮಾತ್ರ ಕೆಜಿ ಗಟ್ಟಲೆ ಚಿನ್ನಾ ಬೆಳ್ಳಿ ಭವ್ಯ ಬಂಗಲೆ ಜಮೀನುಗಳ ಕಾಗದ ಪತ್ರ ದೊರೆಯುತ್ತದೆ. ಅಂದರೆ ಭ್ರಷ್ಟರಿಗೆ ಮಾತ್ರ ಇದನ್ನು ಗಳಿಸಲು ಸಾಧ್ಯ ಎಂದಾಯಿತು.

ಮಾನವೀಯ ಮೌಲ್ಯಗಳು, ಮನುಷ್ಯ ಸಂಬಂಧಗಳು, ಪ್ರಾಕೃತಿಕ ಸಂಪನ್ಮೂಲಗಳು ಸಂಪೂರ್ಣ ವಿನಾಶದತ್ತ ಸಾಗುತ್ತಿದೆ. ಕೆಲವು ಹಂತದಲ್ಲಿ ವಿರುದ್ಧ ವಿಕೃತ ವಿನಾಶಕಾರಿ ಮೌಲ್ಯಗಳು ಈ ಸಮಾಜದಲ್ಲಿ ಮಾನ್ಯತೆ ಪಡೆಯುತ್ತಿದೆ. ಕೊರೋನಾ ನಂತರದಲ್ಲಿ ಮನುಷ್ಯ ಹೆಚ್ಚು ಮಾನವೀಯವಾಗಿ ವರ್ತಿಸಬಹುದು ಎಂಬ ನಿರೀಕ್ಷೆ ಸುಳ್ಳಾಗಿ ಮನುಷ್ಯನ ರಾಕ್ಷಸೀ ಪ್ರವೃತ್ತಿ ಹೆಚ್ಚು ಹೆಚ್ಚು ಹೊರಬರಲಾರಾಂಭಿಸಿದೆ. 

ಯಾವ ಬೆಲೆಗಳು ಇಳಿಮುಖವಾಗಬೇಕಿತ್ತೋ ಅವುಗಳ ಗಣನೀಯ ಹೆಚ್ಚಳ, ಯಾವ ಬೆಲೆ ಏರಬೇಕಾಗಿತ್ತೋ ಅವುಗಳು ಕುಸಿತ. ಇದೇ ಮನುಷ್ಯ ಜನಾಂಗದ ದುರಂತ. ಹಾಗೆಯೇ ಇನ್ನೂ ಅನೇಕ ಔಷಧೀಯ ಕಂಪನಿಗಳು ಸೇರಿ ಆದಾಯ ದ್ವಿಗುಣ ತ್ರಿಗುಣ ಆಗುತ್ತಲೇ ಇದೆ. ಆದರೆ ಜನ ಸಾಮಾನ್ಯರ ಆದಾಯ ಊಟ ಬಟ್ಟೆಗೂ ಸಾಕಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಬೆಲೆ ಏರಿಕೆ. ಜನ ಮಾತ್ರ ಮತ್ತಷ್ಟು ಮೌನಕ್ಕೆ ಜಾರುತ್ತಿದ್ದಾರೆ. ಈ ಮೌನದ ಸಮಯದಲ್ಲಿ ಧರ್ಮದ ಅಫೀಮು ತಿನ್ನಿಸಿದರೆ ಅವರು ಮೌನದಿಂದ ಮತ್ತಿಗೆ ಜಾರುತ್ತಾರೆ. ಆ ಮತ್ತಿನಲ್ಲಿ ತೇಲಾಡುತ್ತಾ ಹಿತಾನುಭವ ಅನುಭವಿಸುತ್ತಿರುವಾಗ ನಮ್ಮ ಶೀಲಾ ಲೂಟಿಯಾಗಿರುತ್ತದೆ. ಮುಂದೆ ಪಶ್ಚಾತ್ತಾಪ.

ಆದ್ದರಿಂದ ದಯವಿಟ್ಟು ಈಗಲೇ ಎಚ್ಚೆತ್ತುಕೊಳ್ಳಿ. ಕೊಳ್ಳೆ ಹೋಗುವ ಮುನ್ನ...ಇಲ್ಲಿಗೆ ವಾರ್ತಾ ಪ್ರಸಾರ ಮುಕ್ತಾಯವಾಯಿತು. ವಂದನೆಗಳು - ನಮಸ್ಕಾರ......

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ