ನಮ್ಮದಲ್ಲದ ನ್ಯಾಯ

ನಮ್ಮದಲ್ಲದ ನ್ಯಾಯ

ಬರಹ

ಕಳೆದ ವಾರವಷ್ಟೆ ಮುಸಲ್ಮಾನರ ಪವಿತ್ರ ಬಕ್ರೀದ್ ಹಬ್ಬ ಮುಗಿದಿದೆ. ಈ ಹಬ್ಬಕ್ಕೂ ಮೊದಲು ವಾರಗಟ್ಟಲೇ ಹಬ್ಬದ ತಯಾರಿ ಕೂಡ ನಡೆದಿತ್ತು. ಪರಿಣಾಮ ಸಾವಿರಾರು ರಾಸುಗಳು, ಕುರಿಗಳು ಒಂಟೆಗಳು ಇವರ ಉದರವನ್ನು ಮಿಂದು ಮಣ್ಣಾಗಿ ಹೋಗಿವೆ. ಇವೆಲ್ಲಾ ಜಂತುಗಳು ರೂಪಾಯಿಗೆ ಎರಡಲ್ಲ ಬಿಡಿ... ಸಾವಿರಾರು ರೂಪಾಯಿಗಳು ಕಿಸೆಯಿಂದ ಕಾಲ್ಕಿತ್ತಿದೆ.

ಯಾಕೆಂದ್ರೆ.. ನಾನು ಮನೆಯಿಂದ ಕಚೇರಿಗೆ ಆಗಮಿಸೋ ದಾರಿ ಟ್ಯಾನರಿ ರೋಡ್‌ ಅಥವಾ ಬಿಎಸ್‌ಎ ರಸ್ತೆ ಮುಖಾಂತರವೇ.. ಇದು ಸಿಲಿಕಾನ್ ಸಿಟಿ ಮಟ್ಟಕ್ಕಂತು ಮಿನಿ ಪಾಕಿಸ್ತಾನ ಎಂದೇ ಚಿರಪರಿಚಿತ. ಇತ್ತ ಕಡೆ ಶಿವಾಜಿನಗರ (ಇಸ್ಲಾಮಬಾದ್‌ ಅಂತ ಸ್ನೇಹಿತರು ಕರೀತಾರೆ)ದಿಂದ ಹಿಡಿದು ೧೮ ಕಿಮಿ ದೂರದಲ್ಲಿರುವ ಬಾಗಲೂರು ತನಕ. ಬರೋಬ್ಬರಿ ಏಕಮುಖ, ಊರ್ಧ್ವಮುಖವಾಗಿರುವ ಈ ರಸ್ತೆಗೆ ಅಂಟಿಕೊಂಡಂತೆ ಹಲವಾರು ಊರುಗಳಿವೆ. ಫ್ರೇಜರ್‍ ಟೌನ್, ದೊಡ್ಡಿ, ದೇವರ ಜೀವನಹಳ್ಳಿ, ವೆಂಕಟೇಶಪುರ, ಕೆ.ಜಿ ಹಳ್ಳಿ, ನಾಗವಾರ , ಥಣಿಸಂದ್ರ, ಹೆಗಡೆನಗರ ಸೇರಿದಂತೆ ಬಾಗಲೂರು ರಜಾಕ್‌ ಪಾಳ್ಯ ತನಕ ಮುಸಲ್ಮಾನರ ಸಂಖ್ಯೆ ಹೆಚ್ಚೇ ಇದೆ.

ಬಕ್ರೀದ್ ಆರಂಭವಾಗುವುದಕ್ಕಿಂತ 2 ವಾರಗಳ ಮೊದಲಿಂದಲೂ ನಾನು ಈ ರಸ್ತೆಯನ್ನು ಉದ್ದೇಶ ಪೂರ್ವಕವಾಗಿ ಅಪಾದ ಮಸ್ತಕ ಗಮನಿಸುತ್ತಾ ಬಂದಿದ್ದೀನಿ. ಹಬ್ಬಕ್ಕೂ ಮೊದಲು ಬಹುತೇಕ ಮನೆಗಳ ಮುಂದೆ ಒಂದು ಹಸು ಇಲ್ಲ ಆಡುಗಳನ್ನು ಕಾಣಬಹುದಾಗಿತ್ತು. ಇವುಗಳ ಭಕ್ಷಕರು ಬಹುತೇಕ ಮಧ್ಯಮ ವರ್ಗ ಕುಟುಂಬಗಳು. ಇನ್ನು ಕೆಲವು ಕುಟುಂಬಗಳು ಅಂದ್ರೆ ಮೇಲ್ವರ್ಗ ಒಂಟೆಗಳು, ಮೇಕೆಗಳನ್ನು ತಂದು ಹಬ್ಬ ಆಚರಿಸಿ ಪವಿತ್ರವೆಂದು ಮಾಂಸ ದಾನ ಮಾಡಿದ್ದಾರೆ. ಉಳ್ಳವರು ಉಳ್ಳದವರಿಗೆ ಮನತುಂಬ ನೀಡಿ ಕೃತಾರ್ಥರಾಗಿದ್ದಾರೆ..

ಆದ್ರೆ, ಕರಾವಳಿ ಹಾಸನದ ಭಾಗಗಳಲ್ಲಿ ರಾಸುಗಳನ್ನು ಲಾರಿಯಲ್ಲಿ ತುಂಬಿಕೊಂಡು ಬರುವ ವೇಳೆ ಹಿಂದೂಪರ ಸಂಘಟನೆಗಳು ತಡೆದು ಸನ್ನಿವೇಶವನ್ನು ಬಿಸಿಗೊಳಿಸಿದ ಸುದ್ದಿಗಳು ಮಾಧ್ಯಮಗಳಲ್ಲಿ ಕೇಳಿದ್ದೇವೆ.. ನೋಡಿದ್ದೇವೆ..

ಒಂದು ಪ್ರಶ್ನೆ.. ಏನಪ್ಪಾ ಅಂದ್ರೆ ಏಕೆ ದನ ಮಾಂಸ ತಿನ್ನಬಾರದು? ಇರಲಿ ಹಿಂದೂ ಧರ್ಮದಲ್ಲಿ ಸಾತ್ವಿಕ ಆಹಾರಿಗಳು ಮಾಂಸ ಭೋಜನ ಮಾಡುವುದಿಲ್ಲ. ಆದ್ರೆ ಹಿಂದೂ ದೇಶವಾದ ನಮ್ಮಲ್ಲಿ ಬಹುತೇಕ ರೈತರು ಒಂದಿಲ್ಲೊಂದು ಕೃಷಿ ಚಟುವಟಿಕೆಗಳಿಗೆ ದನಗಳನ್ನೇ ಅವಲಂಬಿಸಿದ್ದಾರೆ. ನಿಜ ತಾನೆ. ಈ ಸಂದರ್ಭದಲ್ಲಿ ಉಪಕಸುಬಾಗಿ ಸಾಕಿದ ಹಸು, ಕರು ಹಾಕುತ್ತೆ. ಹಸುವಿನ ಗಿಣ್ಣಾಲು (ಕರು ಹಾಕಿದ ಮೊದಲ 5ದಿನಗಳ ಹಾಲು) ಪೌಷ್ಠಿಕವೆಂದು ಪರಿಗಣಿಸಿ ಗಿಣ್ಣು ತಯಾರಿಸಿ ತಿನ್ನುವುದುಂಟು. ಆದ್ರೆ, ಅದೇ ಕಾಮಧೇನು ಅಥವಾ ಎಮ್ಮೆ, ಹೋರಿ ಕರುವನ್ನು ಹಾಕಿದ್ರೆ ಆ ಕರುವನ್ನು ಯಾವೊಬ್ಬ ರೈತನು ಸಾಕುವುದಿಲ್ಲ. ಬದಲಾಗಿ ಕೊಟ್ಟಷ್ಟು ಕೊಡಲಿ ಅಂಥ ಮಮ್ಮಿ ಸಾಬಿಗೆ ಮಾರುತ್ತಾನೆ. ಇದು ಎಮ್ಮೆಗಳಿಗೆ ಅಷ್ಟಾಗಿ ಅನ್ವಯಿಸುವುದಿಲ್ಲ. ಕೆಲವೊಂದು ಗೋವುಗಳ ಟ್ರಸ್ಟ್ ನಾವು ಸಾಕ್ತೀವಿ ನೀಡಿ ಅಂತಾರೆ. ರೋಗಗ್ರಸ್ತ ರಾಸುಗಳನ್ನು ಸಾಕಲಿಕೆ ಯಾರು ಮುಂದೆ ಬರೋಲ್ಲ ಎಂಬುದು ಅಷ್ಟೇ ಸತ್ಯ. ಎಳೆಯಗರುಗಳನ್ನು ಮಾತ್ರ ಸಾಕ್ತಾರೆ. ಅಥವಾ ಹಾಲು ನೀಡುವ ದನಗಳ ಸೇವೆಗೆ ಮಾತ್ರ ಸೀಮಿತರಾಗುತ್ತಾರೆ. ಇನ್ನುಳಿದಂತೆ ಹೋರಿಗಳನ್ನು ಸಾಕುವುದಿಲ್ಲ. ಅದರಿಂದ ಅವರಿಗೇನು ಲಾಭವೂ ಇಲ್ಲ..

ಇನ್ನು ಹಸುಗಳು ಇನ್ನು ನಮಗೆ ಅನುಪಯುಕ್ತ, ಇದರಿಂದ ನಮಗೆ ಲಾಭ ಎಂದಾಗಲೋ ಅಥವಾ ಆಕಸ್ಮಾತ್ ಊನವಾದಾಗ ಆ ದನವನ್ನು ಮಾರುವುದೇ ಹೆಚ್ಚು. ಅದು ರೈತನಿಗೆ ಅನಿವಾರ್ಯವೂ ಹೌದು. ಅದನ್ನು ಕೊಳ್ಳುವುವರಾರು? ಶೇ 90ಭಾಗ ಮುಸಲ್ಮಾನರು. ಇನ್ನುಳಿದ 10 ಭಾಗ ಅಸ್ಪೃಶ್ಯರು ಅನ್ನೋಣ..

ಈಗ ಹೇಳಿ.. ದನಗಳನ್ನು ಮಾರುವುದೂ ನಾವೇ. ಬಳಿಕ ಕೊಂಡವರ ವಿರುದ್ಧ ತೋಳೇರಿಸುವುದು ನಾವುಗಳೇ.. ಇದು ಸರಿಯಾ..
ಇತ್ತ ದನಗಳ ಮೂಳೆಯಿಂದ ತಯಾರಿಸುವ ಔಷಧ ಸೇರಿದಂತೆ ಹಲವಾರು ಉತ್ಪನ್ನಗಳನ್ನು ಬಳಸ್ತೀವಿ. ಅದು ಗೊತ್ತಿದ್ದೋ.. ಗೊತ್ತಿಲ್ಲದೋ.. ಕೆಲವೊಂದು ರೋಗಗಳಿಗೆ ವೈದ್ಯರು ದನಗಳ ಮಾಂಸವನ್ನೇ ಬಳಸುವಂತೆ ಸೂಚಿಸಿರುವುದು ನಮಗೆಲ್ಲಾ ತಿಳಿದಿದೆ.

ನಾನು ಎಲ್ಲಾ ಹಿಂದೂಗಳೆಲ್ಲಾ ಕಡ್ಡಾಯವಾಗಿ ದನ ಮಾಂಸ ತನ್ನಿ ಅಂತೇಳ್ತಿಲ್ಲ. ಹಾಗೆನ್ನೋಕೆ ಯಾವುದೇ ದಲಿತ ಸ್ವಾಮೀಜಿ ಅಥವಾ ಬುದ್ದಿಜೀವಿಯೋ ಅಥವಾ ಚಿಂತಕನೂ ಅಲ್ಲ. ಹಾಗೆ ತಿನ್ನಬೇಡಿ ಅನ್ನೋಕೆ ಉಡುಪಿಯಿಂದ ವಲಸೆ ಬಂದಿರುವ ಏರಿಯಲ್ ವ್ಯಕ್ತಿಯೂ ಅಲ್ಲ. ನನಗೆ ಗೊತ್ತಿರುವ ಕೆಲವು ವಾಸ್ತವ ಅಂಶಗಳನ್ನು ಪಟ್ಟಿ ಮಾಡಿದ್ದೀನಿ ಅಷ್ಟೆ. ಅವರ ಆಚಾರಗಳನ್ನು ಮೊಟಕು ಮಾಡುವುದು ಸರಿಯೇ..? ಇತ್ತ ಮುಸಲ್ಮಾನರು ಹಂದಿ ಮಾಂಸ ತಿನ್ನಲೇ ಬೇಡಿ.. ಯಾರು ಸಾಕಲೂ ಬೇಡಿ.. ಅಥವಾ ಹಂದಿ ತಿನ್ನುವರ ಮನೆಗಳ ಬಳಿ ವಾಸಿಸೊಲ್ಲ ಅಂತಾರೇನು.. ನಮ್ಮ ತಮಿಳುನಾಡಿನ ಅದೆಷ್ಟೋ ಸಮಾಜದವರು ದನ ತಿನ್ನೋದು ಬಿಟ್ಟಿಲ್ಲ. ಕನ್ನಡ ಹಿರಿಯ ಲೇಖಕ ಕುಂವೀ ಅವರ "ದೇವರ ಹೆಣ" ಎಂಬ ಕತೆ ಈ ಕ್ಷಣದಲ್ಲಿ ನನಗೆ ನೆನಪಾಗುತ್ತಿದೆ..

- ಬಾಲರಾಜ್ ಡಿ.ಕೆ.