ನಮ್ಮೂರ ಶಿಕಾರಿ ನೆನಪಿಸಿದ ಕರ್ವಾಲೊ

ನಮ್ಮೂರ ಶಿಕಾರಿ ನೆನಪಿಸಿದ ಕರ್ವಾಲೊ

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಪುಸ್ತಕವನ್ನು ಓದುತ್ತಿದ್ದೆ. ಈ ಕಾದಂಬರಿಯ ಪ್ರಮುಖ ಪಾತ್ರಧಾರಿಗಳು ಮಂದಣ್ಣ ಹಾಗೂ ಕರ್ವಾಲೋ. ಜೀವವಗತ್ತಿನ ವಿಸ್ಮಯಗಳನ್ನು ಅತಿ ಸೂಕ್ಷ್ಮವಾಗಿ ಗ್ರಹಿಸುವ  ಮಂದಣ್ಣನ ಪ್ರತಿಭೆಯನ್ನು ಗುರುತಿಸಿದವರು ಜೀವವಿಜ್ಞಾನಿ ಕರ್ವಾಲೊ. ಮಂದಣ್ಣನ ವಿವರಣೆಯಂತೆ ಹಾರುವ ಓತಿಯ ಬೆನ್ನಟ್ಟಿ ದಟ್ಟವಾದ ಕಾಡಿಗೆ ಹೋಗಿದ್ದರು. ಅಲ್ಲಿ ಅವರೆದುರಿಸಿದ ಸಮಸ್ಯೆಗಳು, ಮಂದಣ್ಣ ಹಾಗೂ ಕರಿಯಪ್ಪನ ಶಿಕಾರಿಯ ಹುಚ್ಚಿನಿಂದಾಗಿ ಆಗುತ್ತಿದ್ದ ಅವಾಂತರಗಳು ಎಲ್ಲವೂ ಓದುಗರನ್ನು ತನ್ನದೇ ಪ್ರಪಂಚಕ್ಕೆ ಕೊಂಡೊಯ್ಯುತ್ತದೆ. ದಟ್ಟವಾದ ಕಾಡಿನಲ್ಲಿ ಓತಿಯನ್ನು ಹುಡುಕಿಕೊಂಡು ಹೋಗುವ ಸಂದರ್ಭದಲ್ಲಿ ವಿಶಾಲವಾದ ಒಂದು ಈಚಲು ಬಯಲು ಎದುರಾಗುತ್ತದೆ. ಅದರ ತುದಿ ಮೊದಲು ಗುರುತಿಸುವಂತಿರಲಿಲ್ಲ. ಹೇಗಾದರೂ ಅದನ್ನು ದಾಟಿಯೇ ಆ ಕಡೆ ಹೋಗಬೇಕಾಗಿತ್ತು. ತಮ್ಮೊಂದಿಗೆ ಇದ್ದ ಎತ್ತಿನ ಗಾಡಿಯಲ್ಲಿ ತಂದಿದ್ದ ಸಾಮಾನು, ಸಲಕರಣೆಗಳನ್ನೆಲ್ಲಾ ಇಟ್ಟು ಸಾಕಾಗೋವರೆಗೆ ನಡೆಯೋಣ ಎಂದು ಗಾಡಿ ಓಡಿಸುತ್ತಿದ್ದ ಕರಿಯಪ್ಪನನ್ನು ಬಿಟ್ಟು ಉಳಿದವರೆಲ್ಲರೂ ನಡೆದುಕೊಂಡೇ ಹೋಗುತ್ತಿದ್ದರು. ಈಚಲು ಬಯಲಿನ ಅಂಚಿಗೆ ದಾರಿ ಸಂಪೂರ್ಣ ಅಳಿಸಿಹೋಗಿತ್ತು. ಎತ್ತಿನ ಕುತ್ತಿಗೆಯವರೆಗೂ ಬೆಳೆದು ನಿಂತಿದ್ದ ಈಚಲಿನ ಒಳಗೆ ಗಾಡಿ ಸರಸರ ಮುಂದುವರಿಯಿತು. ಆಗಾಗ ಚಿಕ್ಕ ಚಿಕ್ಕ ಈಚಲಿನ ಬೊಡ್ಡೆಗಳನ್ನು ಗಾಡಿ ಚಕ್ರ ಹತ್ತಿ ಹತ್ತಿ ಹಾರುತ್ತಿದ್ದರಿಂದ ಗಾಡಿ ಧಡಾರ್ ಧಡಾರ್ ಎಂದು ಕುಕ್ಕಿ ಏಳುತ್ತಿತ್ತು. ಹೀಗೆ ಸ್ವಲ್ಪ ದೂರ ಸಾಗಿದಾಗ ಗಾಡಿಯಿಂದ ನಾಲ್ಕು ಮಾರು ದೂರದಲ್ಲಿ ಕಾಡುಕುರಿಯೊಂದು ಠಣ್ಣನೆ  ಚಿಮ್ಮಿ ಪೊದೆಯಲ್ಲಿ ಮುಳುಗಿತು. ಕರಿಯಪ್ಪ ಕ್ಷಣಾರ್ಧದಲ್ಲಿ ತಾನು ಸಾರಥಿ ಎಂಬ ಅಂಶವನ್ನು ಪ್ರಜ್ಞೆಯಿಂದ ಒದ್ದೋಡಿಸಿ " ಅಯ್ಯಯ್ಯೋ ನನ್ನ ಕೋವಿ ತೆಗೀರಿ ಎಂದು ಕೋವಿ ಹತ್ತೆಯನ್ನು ಹಿಡಿದು ಗಾಡಿಯೊಳಗಿನ ಸಾಮಾನುಗಳನ್ನು ಗಿಲಿಗಿಚ್ಚಿಯಂತೆ ಅಲ್ಲಾಡಿಸತೊಡಗಿದ. ಜತೆಗೆ ಅವರೊಂದಿಗಿದ್ದ ತೇಜಸ್ವಿಯವರ ನಾಯಿ ಕಿವಿಯನ್ನು ಮಂದಣ್ಣ "ಛೂ ಛೂ ಹಿಡಿ ಹಿಡ್ಕಾ" ಎಂದು ಛೂ ಬಿಟ್ಟ. ಕಾಡುಕುರಿ ಅಲ್ಲೊಮ್ಮೆ, ಇಲ್ಲೊಮ್ಮೆ ನೆಗೆಯುತ್ತಾ ತುಂಬಾ ದೂರ ಸಾಗಿತ್ತು ಜತೆಗೆ ಕಿವಿಯೂ ಕೂಡಾ. ನಂತರ ತುಂಬಾ ಹೊತ್ತಿನ ನಂತರ ಕಿವಿ ಹೋದ ದಾರಿಯನ್ನೇ ಅರಸುತ್ತಾ ಹಿಂತಿರುಗಿ ಬಂತು. ಇದು ಕಾದಂಬರಿಯಲ್ಲಿನ ಒಂದು ಶಿಕಾರಿ ಪ್ರಸಂಗ. ಕಾದಂಬರಿಯಲ್ಲಿ ಬೇಟೆಯ ಹುಚ್ಚು ಇರುವ ಕರಿಯಪ್ಪ ಹಾಗೂ ಮಂದಣ್ಣನ ಅನೇಕ ಎಡವಟ್ಟು ಪ್ರಸಂಗಗಳು ಇನ್ನೂ ಇವೆ.
ಇದನ್ನು ಓದುತ್ತಿದ್ದಾಗ ನನಗೆ ನೆನಪಾಗಿದ್ದು ನಮ್ಮೂರಿನಲ್ಲಿ ಒಂದೆರಡು ವರ್ಷಗಳ ಹಿಂದೆ ನಡೆದ ಒಂದು ಕಾಡುಹಂದಿಯ ಬೇಟೆ ಅಥವಾ ಶಿಕಾರಿ ಪ್ರಸಂಗ. ಹಾಸ್ಟೆಲ್ ನಲ್ಲಿ ಇದ್ದುಕೊಂಡು ಓದುತ್ತಿದ್ದ ಸಂದರ್ಭ ಅದು. ಮೊದಲನೇ ಸ್ನಾತಕೋತ್ತರ ಪದವಿ ಪರೀಕ್ಷೆಯನ್ನು ಮುಗಿಸಿಕೊಂಡು ರಜೆಯಲ್ಲಿ ಮನೆಗೆ ಬಂದಿದ್ದೆ. ಹೀಗೆ ಒಂದು ದಿನ ಬೆಳಗಿನ ಕಾರ್ಯಗಳನ್ನೆಲ್ಲಾ ಮುಗಿಸಿ ಅಂಗಳದ ಹೂತೋಟದಲ್ಲಿ ಸುಮ್ಮನೆ ಆಚೀಚೆ ಓಡಾಡುತ್ತಾ, ಕೆಲವೊಂದು ಹೂಗಳ ಬಗ್ಗೆ ಅಮ್ಮನಲ್ಲಿ ಹಲವಾರು ಪ್ರಶ್ನೆಗಳನ್ನು ಹಾಕುತ್ತಾ ಕಾಲಕಳೆಯುತ್ತಿದ್ದೆ. ಅದೇ ಸಂದರ್ಭದಲ್ಲಿ ನಾಲ್ಕಾರು ಮಂದಿ ಕೈಯಲ್ಲಿ ಕೋವಿಗಳನ್ನು ಹಿಡಿದುಕೊಂಡು ನಮ್ಮ ಮನೆಯ ಮುಂದಿನ ಮಾರ್ಗದಲ್ಲಿ ಸಾಗುತ್ತಿರುವುದು ಕಂಡಿತು. ಪಕ್ಕನೆ ನೋಡಿದಾಗ ನನಗೆ ನಕ್ಸಲರ ನೆನಪಾಗಿ ನಮ್ಮಲ್ಲಿಗೂ ಬಂದು ಬಿಟ್ಟರಾ ಎಂಬ ಅನುಮಾನ ಮೂಡಿತು. ಒಂದೆರಡು ತಿಂಗಳ ಹಿಂದೆ ನಮ್ಮ ಪಕ್ಕದ ಊರಿಗೆ ನಕ್ಸಲರ ಆಗಮನದ ಸುದ್ದಿ ಇನ್ನೂ ಹಸಿರಾಗಿಯೇ ಇತ್ತು. ಹಾಗಾಗಿ ಕೈಯಲ್ಲ ಕೋವಿ ನೋಡಿದ ತಕ್ಷಣ ನೆನಪಾದದ್ದು ಅದೇ. ಆದರೆ ಆ ನಾಲ್ಕು ಜನರ ಹಿಂದೆ ಇನ್ನೆರಡು ಪರಿಚಿತ ಮುಖ ನೋಡಿ ಸಮಾಧಾನವಾಯಿತು. ನಮ್ಮ ನೆರೆ-ಕರೆಯವರೇ ಆದ ರಾಮಣ್ಣ ಹಾಗೂ ಪದ್ಮಣ್ಣ , ಹಂದಿ ಬೇಟೆಯಾಡುವುದರಲ್ಲಿ ನಿಸ್ಸೀಮರು. ಬೇಟೆಯಲ್ಲಿ ರಾಮಣ್ಣನೇ ಮುಂದಾಳು. ವರುಷಕ್ಕೊಂದಾದರೂ ಆಹಾರ ಹುಡುಕಿಕೊಂಡು ಅತ್ತ ಕಡೆ ಬರುತ್ತಿದ್ದ ಹಂದಿಗಳು ಇವರ ಕೋವಿಗೆ ಆಹಾರವಾಗುತ್ತಿದ್ದವು. ಅವರ ಮುಖ ನೋಡಿದೊಡನೆಯೇ ತಿಳಿಯುತ್ತಿತ್ತು. ಎಲ್ಲೋ ಹಂದಿ ತಿರುಗಾಡುತ್ತಿದ್ದ ವಾರ್ತೆ ಅವರಿಗೆ ಸಿಕ್ಕಿದೆ ಎಂದು. ಹೀಗಾಗಿ ನಾವೇನಾದರೂ ಕೇಳುವ ಮೊದಲೇ ಅವರೇ ದೊಡ್ಡದಾಗಿ ನಾಲ್ಕು ಮನೆಗಳಿಗೂ ಕೇಳುವಂತೆ, ಸೀತಣ್ಣನ ತೋಟದಲ್ಲಿ ಹಂದಿಗಳ ಸಂಸಾರವೇ ಬಂದುಬಿಟ್ಟಿದೆಯಂತೆ, ಎರಡು ದೊಡ್ಡ ಹಂದಿಗಳು ಇನ್ನು ಮೂರು ಸಣ್ಣ ಮರಿಗಳು ಎಂದು ಹಂದಿ ಸಿಕ್ಕ ಷ್ಟೆ  ಸಂತೋಷದಲ್ಲಿ ಹೇಳಿದ್ದರು.
ಆಮೇಲೆ ಅಮ್ಮ ಏನನ್ನೂ ವಿಚಾರಿಸಲು ಹೋಗಿರಲಿಲ್ಲ. ನಾನೇನಾದರೂ ಅವರೊಂದಿಗೆ ತನಿಖೆ ಶುರು ಮಾಡುವೆನೆಂಬ ಭಯದಲ್ಲಿ ಒಲೆಯಲ್ಲಿ ಅನ್ನ ಬೇಯಲು ಇಟ್ಟು ಬಂದಿದ್ದೇನೆ, ಬೆಂಕಿ ಉರಿತಿದೇಯಾ ನೋಡು ಎಂದು ಅಲ್ಲಿಂದ ಸಾಗಹಾಕಲು ನೋಡಿದರು. ಯಾಕೆಂದರೆ ಬೇಟೆಗೆ ಹೊರಟ ಸಂದರ್ಭದಲ್ಲಿ ಅವರನ್ನು ಯಾರೂ, ಅದರಲ್ಲೂ ಹೆಂಗಸರು ಎಲ್ಲಿಗೆ ಯಾಕೆ ಎಂದು ಕೇಳಬಾರದೆಂದು ಮೊದಲು ಅಜ್ಜಿ ಹೇಳುತ್ತಿದ್ದನ್ನು ಕೇಳಿದ್ದೆ. ಅದನ್ನೆಲ್ಲಾ ನಂಬುತ್ತಿರಲಿಲ್ಲವಾದರೂ ಸುಮ್ಮನಿದ್ದೆ. ಅಷ್ಟೊಂದು ಹಂದಿಗಳು ಒಂದೇ ಕಡೆ ಇದ್ದದನ್ನು ಕೇಳಿ ಇನ್ನೂ ಸುಮಾರು ಜನರು ಅತ್ತ ಸಾಗುತ್ತಿದ್ದರು. ಬೇಟೆಯಾಡುವುದು ಅಲ್ಲಿನವರಿಗೆ ಖುಷಿಯ ವಿಚಾರ ಅಥವಾ ಗ್ರಾಮೀಣ ಭಾಗದಲ್ಲಿ ಹಿಂದಿನಿಂದಲೂ ಇದ್ದ ಕಲೆಯಾದರೂ ನನ್ನ ಮನಸ್ಸು ಯಾಕೋ ಆ ಹಂದಿಗಳು ಅಲ್ಲಿಂದ ತಪ್ಪಿಸಿಕೊಂಡು   ಹೋಗಲಪ್ಪಾ ದೇವರೇ ಎಂದು ಬೇಡಿಕೊಂಡಿತ್ತು.
ಸ್ವಲ್ಪ ಸಮಯದಲ್ಲೇ ಎರಡು ಮೂರು ಗುಂಡಿನ ಶಬ್ದಗಳು ಕೇಳಿ ಬಂದಿತು. ಅಂತೂ ತಮ್ಮ ಗುರಿ ಸಾಧಿಸಿಯೇ ಬಿಟ್ಟರು ಅಂದುಕೊಂಡೆ. ನಾನು ಐದನೇ ತರಗತಿಯಲ್ಲಿರಬೇಕಾದರೆ, ಅಜ್ಜಿಮನೆಯಲ್ಲಿ ಸಂಪ್ರದಾಯದಂತೆ ತುಳುವಿನಲ್ಲಿ ದೈವಗಳಿಗೆ ತಂಬಿಲ ಕೊಡುವುದು ಎನ್ನುವ ಆಚರಣೆಯ ಸಂದರ್ಭದಲ್ಲಿ ನೂರಾರು ಕೋಳಿಗಳನ್ನು ದೈವದ ಮೂರ್ತಿಯ ಮುಂದೆ ಕತ್ತು ಕುಯ್ದು ರಾಶಿ ಹಾಕಿದ್ದನ್ನು ನೋಡಿ ಪಾಪ ಎಣಿಸಿ ಅಂದಿನಿಂದ ಮಾಂಸಾಹಾರವನ್ನೇ ತ್ಯಜಿಸಿದ್ದೆ. ಮನೆಯಲ್ಲಿ ಮಾಂಸಾಹಾರಿಗಳಾಗಿದ್ದರೂ ನಾನು ಮಾತ್ರ ಇಂದಿಗೂ ತರಕಾರಿಯನ್ನೇ ಅವಲಂಬಿಸಿದ್ದೇನೆ. ಅಲ್ಲದೆ ಪ್ರಾಣಿಗಳೆಂದರೆ ಚಿಕ್ಕಂದಿನಿಂದಲೂ ತುಂಬಾ ಪ್ರಿಯವಾದವುಗಳು. ಮನೆಯಲ್ಲಿದ್ದ ಪುಟ್ಟ ನಾಯಿಮರಿ ಜಾಕಿ, ಅಂಗಳದಲ್ಲಿ ಹರಡಿಕೊಂಡಿರುತ್ತಿದ್ದ ಸಣ್ಣ ಸಣ್ಣ ಕೋಳಿಮರಿಗಳು, ಹೀಗೆ ಎಲ್ಲವೂ ಅಚ್ಚುಮೆಚ್ಚು. ಅಷ್ಟು ಪ್ರೀತಿಯಿಂದ ಸಾಕಿ ಮುಂದೆ ಅವುಗಳನ್ನೇ ಕೊಂದು ತಿನ್ನುವುದು ಅಸಹನೀಯವಾಗಿ ಕಂಡಿತ್ತು. ಹೀಗಾಗಿ ಸ್ವಚ್ಛಂದವಾಗಿ ತನ್ನ ಸಂಸಾರದೊಂದಿಗೆ ತೋಟದಲ್ಲಿ ಆಹಾರ ಅರಸುತ್ತಾ ತಿರುಗಾಡುತ್ತಿದ್ದ ಹಂದಿಯನ್ನು ನೆನೆಸಿ, ಒಡನೆಯೇ ಆ ಗುಂಡಿನ ಶಬ್ದವನ್ನೂ ಕೇಳಿ, ಏನೂ ತೋಚದಂತೆ ಒಂದು ಕ್ಷಣ ಸುಮ್ಮನೆ ಕೂತಿದ್ದೆ. ಸ್ವಲ್ಪ ಹೊತ್ತಿನ ನಂತರ ಅಮ್ಮನ ಬಳಿ ಬಂದು ಇನ್ನೊಂದು ಹತ್ತು ವರ್ಷ ಕಳೆದರೆ ಈ ಮನುಷ್ಯರು ಮನುಷ್ಯರನ್ನೇ ಕಡಿದು ತಿನ್ನುವ ಸಂದರ್ಭಗಳು ಬಂದರೂ ಬರಬಹುದು ಎಂದೆ. ಅಮ್ಮ ಸುಮ್ಮನೆ ನಕ್ಕರು.

ಇದಾದ ಒಂದು ಎರಡು ಘಂಟೆಯ ನಂತರ ಗೇಟಿನ ಬಳಿ ಎರಡು ಮೂರು ಜನ ಮನೆಯತ್ತ ಬರುತ್ತಿರುವುದು ಕಾಣಿಸಿತು. ಆ ಪ್ರಾಣೀನ ಕೊಂದಿರೋರಾದರೆ ಮನೆಗೆ ಬರುವುದೇ ಬೇಡ ಎಂದು ಅಮ್ಮನಲ್ಲಿ ಹೇಳಿ ಒಳಗಡೆ ಹೋದೆ. ಆದರೆ ಅವರು ಮಾತನಾಡುವ ಧಾಟಿಯಲ್ಲಿ ಅಂತಹ ಖುಷಿಯನ್ನೇನೂ ನಾನು ಗಮನಿಸಲಿಲ್ಲ. ಇಂತಹ ಬೇಟೆಗಳ ಸಂದರ್ಭದಲ್ಲಿ ಪ್ರಾಣಿಗಳು ತಮಗೆ ಸಿಕ್ಕವೆಂದರೇ ಇಡೀ ಊರಿಗೇ ಕೇಳಿಸುವಂತೆ ಅವರ ನಗು, ಮಾತು, ಬೇಟೆಯಾಡಿದ ಸಂದರ್ಭದ ಸ್ವಾರಸ್ಯ ಎಲ್ಲವೂ ಕೇಳಿ ಬರುತ್ತಿದ್ದವು. ಆದರೆ ಅಂದಿನ ಬೇಟೆ ಮಾತ್ರ ನಿರಾಶಾದಾಯಕವಾಗಿತ್ತು ಎಂಬುದು ಅವರ ಮಾತಿನಿಂದ ಖಚಿತವಾಗಿತ್ತು. ಒಟ್ಟು ಐದು ಹಂದಿಗಳಿದ್ದುದಾರೂ ಅವುಗಳಲ್ಲಿ ಒಂದನ್ನೂ ದಕ್ಕಿಸಿಕೊಳ್ಳಲಾಗಲಿಲ್ಲವೆಂಬ ಬೇಸರ ಅವರಲ್ಲಿತ್ತು. ಇದನ್ನು ಕೇಳಿದ ನನಗಂತೂ ಖುಷಿಯೋ ಖುಷಿ. ಮೆಲ್ಲನೆ ಹೊರಬಂದವಳು ಅಣ್ಣಾ ಎಲ್ಲಿ ಹಂದಿ? ಎಂದೆ. ಅದಕ್ಕವರು ಹಂದಿಗಳಿಗಿಂತ ಅಲ್ಲಿ ಜನವೇ ಜಾಸ್ತಿಯಾಗಿದ್ದರು, ಗುಂಡು ಹಾರಿಸಲೂ ಭಯವಾಗುತ್ತಿತ್ತು. ಜನರನ್ನು ನೋಡಿದ ಕೂಡಲೇ ಅವು ದಿಕ್ಕಾಪಾಲಾಗಿ ಓಡಿದವು. ಒಂದೇ ಆಗಿದ್ದರೆ ಹಿಡಿಯಬಹುದಿತ್ತು.ಆದರೆ ದಿಕ್ಕಾಪಾಲಾಗಿ ಓಡಿದಾಗ ಯಾವುದನ್ನೂ ಬೆನ್ನಟ್ಟುವುದೆಂದು ತಿಳಿಯಲಿಲ್ಲ. ಮೂರು ಕಿಲೋ ಮೀಟರಿನಷ್ಟು ಓಡಿಸಿದ್ದವು..ಕೊನೆಗೆ ಕೆರ್ನಡ್ಕದ ಕಾಡಿನೊಳಗೆ ನುಗ್ಗಿದ್ದಾವೆ ಎಂದರು. ಬಂದ ದಾರಿಗೆ ಸುಂಕ ಇಲ್ಲ ಎಂದುಕೊಂಡು ಸಾಗಿದರು. ಬದುಕಿದೆಯಾ ಬಡಜೀವವೇ ಎಂದು ಓಡಿ ಈ ಪ್ರಾಣಿಗಳ ಕೈಗೆ ಸಿಕ್ಕಲಿಲ್ಲವಲ್ಲಾ,ಅದೂ ಬೇರೆ ಮರಿ ಹಂದಿಗಳೂ ಎಲ್ಲಿ ತಾಯಿಯಿಂದ ದೂರಾದವೋ ಎಂದೆನಿಸಿದರೂ, ಸದ್ಯ ಪ್ರಾಣವನ್ನಾದರೂ ಉಳಿಸಿಕೊಂಡವಲ್ಲಾ ಎಂದು ಖುಷಿಯಾಗಿ ಮನದಲ್ಲೇ ದೇವರಿಗೆ ಒಂದು ಪುಟ್ಟ ಥ್ಯಾಂಕ್ಸ್ ಅರ್ಪಿಸಿದೆ.

ಚಿತ್ರ ಕೃಪೆ:
http://www.gympietimes.com.au/news/gympie-forum-address-regions-feral-animal-problem/1630986/

http://latimesblogs.latimes.com/outposts/2009/08/fish-and-game-qa-2.html

Comments

Submitted by venkatb83 Fri, 02/01/2013 - 16:37

ಮಮತಾ ಅವರೇ ಬಹುತೇಕ ಹಳ್ಳಿಗಳಲ್ಲಿ -ಕಾಡು ಪ್ರದೇಶ ಇರುವ ಪ್ರದೇಶಗಳಲ್ಲಿ ಈ ಶಿಖಾರಿ -ಭೇಟೆ -ಮಾಮೂಲಿ ವಿಷ್ಯ- ಅದು ವಾರದ ಕೊನೆಯಲ್ಲಿ -ಹಬ್ಬ (ನಮ್ಮ ಕಡೆ ಬಣ್ಣದ ಹಬ್ಬ-ಹೋಳಿ ದಿನ)ಗಳ ಸಂದರ್ಭದಲ್ಲಿ ಸಾಮಾನ್ಯ.ನಿಮ್ಮ ಬರಹ ನನಗೆ ನಾ ಚಿಕಂದಿನಲಿ ನೋಡಿದ ಕೇಳಿದ ಈ ತರಹದ ಸನ್ನಿವೇಶಗಳನ್ನು ನೆನಪಿಸಿದೆ-ಅದಕ್ಕೆ ಒಂದು ಬರಹವನ್ನು ಬರೆದಿರುವೆ-ಇಲ್ಲಿ ಸೇರಿಸಿರುವೆ .. ನೀವು ಈ ಶಿಖಾರಿ ಬಗ್ಗೆ ಬರೆದದ್ದು- ಬೆಳ್ಳಾಲ ಗೋಪಿನಾಥ ರಾಯರು ಅವರ ಊರಿನ ಹಸಿರು-ಅಂದಿನ ದಿನಗಳ ಬಗ್ಗೆ ಬರೆದ ಬರಹಗಳನ್ನು ಓದಿ ಅವುಗಳಿಗೆ ಪ್ರತಿಕ್ರಿಯಿಸಿಯೂ ನನಗೆ ಸಮಾಧಾನ ಆಗಲಿಲ್ಲ..!! ಅದಕ್ಕೆ ನನ್ನೂರಿನ ನೆನಪುಗಳನ್ನು ಹಂಚಿಕೊಳ್ಳಲು ಒಂದು ಬರಹ ಬರೆಯಬೇಕು ಅನ್ನಿಸಿ ನನ್ನೂರಿನ ಆ ದಿನಗಳ ಬಗ್ಗೆ ಒಂದು ಬರಹ ಬರೆದು ಸೇರಿಸಿರುವೆ..ಓದಿ. ಶುಭವಾಗಲಿ.. \।
Submitted by ಮಮತಾ ಕಾಪು Sat, 02/02/2013 - 11:44

In reply to by venkatb83

ಧನ್ಯವಾದಗಳು ವೆಂಕಟೇಶ್ ಅವರೆ. ಹಳ್ಳಿಗಳಲ್ಲಿ ಶಿಕಾರಿ, ಬೇಟೆ ಮಾಮೂಲಿ ಆದರೂ ಇಂದು ಎಲ್ಲರೂ ಪಟ್ಟಣದತ್ತ ಆಕರ್ಷಿತರಾಗುವುದರಿಂದ ಈ ಬೇಟೆಗಳು ಅಪರೂಪ. ಹಾಗೆಯೇ ಹಳ್ಳಿಗಳೂ ಅಭಿವೃದ್ಧಿ ಹೊಂದುತ್ತಿರುವುದರಿಂದ ಕಾಡುಗಳೂ ನಾಶವಾಗುತ್ತಾ ಇವೆ ಅಲ್ವಾ? ಇನ್ನೆಲ್ಲಿಂದ ಕಾಡುಪ್ರಾಣಿಗಳು ಕಾಣ ಸಿಗೋದು. ಮುಂದಿನ ಪೀಳಿಗೆಗೆ ಕಾಣಸಿಗುವುದು ಕೇವಲ ಅವುಗಳ ಚಿತ್ರಗಳು ಮಾತ್ರ ಎಂಬ ಅನಿಸಿಕೆ ನನ್ನದು.