ನಮ್ಮ ಕನ್ನಡ ಸಾಯುತ್ತಿದೆಯೆ?

ನಮ್ಮ ಕನ್ನಡ ಸಾಯುತ್ತಿದೆಯೆ?

ನಮ್ಮ ಕನ್ನಡ ಸಾಯುತ್ತಿದೆಯೆ? ಇದೇನಪ್ಪ ಹೀಗೆ ಕೇಳ್ತಾ ಇದಾನೆ ಅಂತ ಸಿಟ್ಟು ಮಾಡಿಕೊಳ್ಳಬೇಡಿ; ಸ್ವಲ್ಪ ಸಮಾಧಾನ ತಂದುಕೊಳ್ಳಿ. ನಾನು ಇಲ್ಲಿ ನನಗೆ ಕಾಣಿಸಿದ, ಗ್ರಹಿಸಿದ ನನ್ನ ಸುತ್ತಲಿನ ಸಮಾಜದ ಬಗ್ಗೆ ಬರೆಯುತ್ತಿದ್ದೇನೆ. ನಿಮ್ಮಲ್ಲಿ ಬಹಳ ಮಂದಿಗೆ ಎಫ್.ಎಂ ರೇಡಿಯೋ ಕೇಳುವ ರೂಢಿಯಿರಬಹುದು. ಅಥವಾ ಟಿ ವಿ ಚ್ಯಾನೆಲ್ ಗಳನ್ನು ನೋಡಿಯೇ ಇರುತ್ತೀರಿ. ಅಲ್ಲಿ ಮಾತಾಡುವ ಕನ್ನಡ ಎಷ್ಟು ಕನ್ನಡವಾಗಿರುತ್ತೆ ಅನ್ನೋದು ಗಮನಿಸಬೇಕಾದ ವಿಷಯ. “ಬನ್ನಿ ಇವತ್ತಿನ ಬ್ರೇಕಿಂಗ್ ನ್ಯೂಸ್ ನೋಡೋಣ”, ”ನಿಮಗಾಗಿ ಈಗ ಪ್ಲೇ ಮಾಡ್ತಿದ್ದೇನೆ ಒಂದು ಸೂಪರ್ ಹಿಟ್ ಮೂವಿಯಿಂದ ಸೆಲೆಕ್ಟ್ ಮಾಡಿದ ರೊಮ್ಯಾಂಟಿಕ್ ಸಾಂಗ್...” ಇತ್ಯಾದಿ ಮಾತುಗಳನ್ನ ನಾವು ಕೇಳಿರುತ್ತೇವೆ. ಇದರಲ್ಲಿ ಯಾವ ವಿಶೇಷವೂ ಇಲ್ಲ. ನಮ್ಮ ಸಮಾಜದಲ್ಲಿ ಈಗ ಪ್ರಸ್ತುತದಲ್ಲಿ ಚಾಲ್ತಿಯಲ್ಲಿರುವ ಭಾಷಾಪ್ರಯೋಗವನ್ನೇ ಟಿ ವಿ ಅಥವಾ ರೇಡಿಯೋದವರು ಮಾಡುತ್ತಿರುತ್ತಾರೆ. ಇದಕ್ಕಾಗಿ ನಾನವರನ್ನ ದೂಷಿಸುತ್ತಲೂ ಇಲ್ಲ. ಇಲ್ಲಿ ನಮಗೆ ದಿನವೂ ಕನ್ನಡಕ್ಕೆ ಸೇರ್ಪಡೆಯಾಗುತ್ತಿರುವ ಪದಗಳ ಬಗ್ಗೆ ಖುಷಿಯಾದರೂ ಎಲ್ಲೋ ಈ ಖುಷಿಯಲ್ಲಿ ನಮ್ಮ ಭಾಷೆಯೇ ನಮಗೆ ದೂರವಾಗುತ್ತಿದೆಯೇನೋ ಅನ್ನಿಸುತ್ತದೆ. ಇಲ್ಲಿ ನನಗೆ ಕಳವಳಕ್ಕೀಡುಮಾಡುತ್ತಿರುವುದು ಇಂಗ್ಲಿಷ್ ಅಥವಾ ಬೇರೆ ಭಾಷೆಗಳು ನಮ್ಮ ಕನ್ನಡದಲ್ಲಿ ವಿಲೀನವಾಗುತ್ತಿರುವುದಲ್ಲ; ಬದಲಿಗೆ ನಾವುಗಳು ಈ ಬದಲಾವಣೆಯ ಹರಿವಿನಲ್ಲಿ ವ್ಯಾಪಾರಿ ದೃಷ್ಟಿಕೋನದಿಂದ ನಮ್ಮ ಭಾಷೆಯನ್ನು ಮರೆಯಲಾರಂಭಿಸಿದ್ದೇವಾ ಎಂಬುದು. ಯಾಕೆ ಹೀಗೆ ಹೇಳುತ್ತೇನೆಂದರೆ, ಒಮ್ಮೆ ಒಂದು ಫಾಸ್ಟ್ ಫುಡ್ ರೆಸ್ಟಾರೆಂಟ್ಗೆ ಹೋದಾಗ ಹೊಟೆಲಿನವನಿಗೆ ಸಹಜವಾಗಿಯೇ ನನಗೆ ಬೇಕಾದ್ದನ್ನು ಕನ್ನಡದಲ್ಲಿ ಕೇಳಿ ಪಡೆದೆ. ಆತನೂ ಕನ್ನಡದವನೇ ಆಗಿದ್ದರಿಂದ ಯಾವ ತೊಂದರೆಯೂ ಇರಲಿಲ್ಲ. ನನ್ನ ಪಕ್ಕದಲ್ಲಿಯೇ ಇದ್ದ ಮತ್ತೊಬ್ಬ ಗ್ರಾಹಕನೂ ಕನ್ನಡದವನೇ ಎಂದು ಅವನು ಯಾರೊಡನೆಯೋ ಮೊಬೈಲ್ ನಲ್ಲಿ ಒಮ್ಮೆ ಇಂಗ್ಲಿಷ್ ಮತ್ತು ಒಮ್ಮೆ ಕನ್ನಡದಲ್ಲಿ ಮಾತಾಡುತ್ತಿದ್ದನ್ನು ಗಮನಿಸಿ ತಿಳಿದೆ. ಹೊಟೆಲಿನವ ನಿಮಗೇನು ಬೇಕೆಂದು ಆತನಿಗೆ ಕೇಳಿದಾಗ ಇಂಗ್ಲಿಷ್ ನಲ್ಲಿ ತನಗೆ ಬೇಕಾದ್ದನ್ನು ಕೇಳಿ ಪಡೆದ. ಇಲ್ಲಿ ಅವನಿಗೆ ಕನ್ನಡದ ಬಗ್ಗೆ ಭಾಷಾ ಪ್ರೇಮವೇ ಇಲ್ಲ ಎಂದು ಹೇಳಿದರೆ ಅದು ತಪ್ಪಾದೀತೇನೋ. ಯಾಕೆಂದರೆ, ಫಾಸ್ಟ್ ಫುಡ್ ರೆಸ್ಟಾರೆಂಟ್ ಗಳಲ್ಲಿ ಅನ್ಯ ಭಾಷಿಕರು ಇರುವುದು ಸಾಮಾನ್ಯವಾಗಿದೆ. ಅಲ್ಲಿ ಇಂಗ್ಲಿಷ್ ಅನಿವಾರ್ಯ. ಮತ್ತು ಈ ರೀತಿಯೇ ವ್ಯವಹರಿಸಿ ನಮಗೆ ರೂಢಿಯಾಗುವುದರಿಂದ ಕನ್ನಡಿಗರೇ ಸಿಕ್ಕರೂ ಅಗತ್ಯವಿಲ್ಲದಿದ್ದರೂ ಇಂಗ್ಲಿಷ್ ಬಾಷೆ ಉಪಯೋಗಿಸುತ್ತೇವೆ. ಈ ರೂಢಿಯೇ ಎಲ್ಲಿ ಖಾಯಂಆಗಿಬಿಡುವುದೋ ಅನ್ನಿಸುತ್ತದೆ. ಇದಲ್ಲದೆ ನಾನು ಕಂಡಿರುವಂತೆ ತುಂಬ ಜನ ತಂದೆ ತಾಯಂದಿರು ವಿದ್ಯಾವಂತರಾಗಿದ್ದು ಒಳ್ಳೆಯ ಕೆಲಸದಲ್ಲಿದ್ದವರಾಗಿದ್ದರೆ, ಸಾಮಾನ್ಯವಾಗಿ(ಮತ್ತೆ ಎಲ್ಲರೂ ಎಂದು ನಾ ಹೇಳುತ್ತಿಲ್ಲ) ತಮ್ಮ ಮಕ್ಕಳೊಟ್ಟಿಗೆ ಇಂಗ್ಲಿಷ್ ನಲ್ಲಿಯೆ ವ್ಯವಹರಿಸುತ್ತಾರೆ. ಇದು ಮಗುವಿನ ಮುಂದಿನ ಭವಿಷ್ಯತ್ತಿಗೆ ಅನುಕೂಲವಾದರೂ ಎಲ್ಲೋ ಇಂಥ ಮುಖ್ಯ ಕಾಲಘಟ್ಟದಲ್ಲೇ ಮಗುವಿಗೆ ನಮ್ಮ ಸಂಸ್ಕೃತಿಯ ಪರಿಚಯ ಇಲ್ಲವಾಗುತ್ತದೆ. ಸಹಜವಾಗೆ ಮಗುವಿಗೆ ಕನ್ನಡಕ್ಕಿಂತ ಇಂಗ್ಲಿಷ್ ಹತ್ತಿರದ ಭಾಷೆಯಾಗುತ್ತದೆ. ಇವತ್ತಿನ ಮಟ್ಟಿಗೆ ಕೇವಲ ಕನ್ನಡ ಮಾತ್ರ ಕಲಿತು ಒಳ್ಳೆಯ ನೌಕರಿ ಮಾಡುವುದು ಕಷ್ಟ ಸಾಧ್ಯ. ಮತ್ತು ಭಾರತದ ಮಟ್ಟಿಗೆ ರಾಜ್ಯಗಳ ನಡುವೆ ಮಾಧ್ಯಮವಾಗಿ ಪರಿಣಾಮಕಾರಿಯಾಗಿ ಕೆಲಸಮಾಡುತ್ತಿರುವುದು ಹಿಂದಿಗಿಂತ ಇಂಗ್ಲಿಷ್ ಜಾಸ್ತಿ. ಇಂಗ್ಲಿಷ್ ನಮಗೆ ಹೀಗೆ ಎರಡು ರೀತಿಯಲ್ಲಿ ಉಪಯುಕ್ತ ಎನ್ನಿಸಿದಾಗ ಸಹಜವಾಗಿ ಅದರ ಪ್ರಾಧಾನ್ಯ ಜಾಸ್ತಿಯಾಗುತ್ತಿದೆ. ಆದರೆ ಇಂಗ್ಲಿಷ್ ನಮಗಿನ್ನೂ ನಮ್ಮ ಮಾತೃಭಾಷೆಯಷ್ಟು ಆತ್ಮೀಯತೆ ತಂದುಕೊಟ್ಟಿಲ್ಲ. ಬಹುಶಃ ಮುಂದಿನ ದಶಕಗಳಲ್ಲಿ ಇಂಗ್ಲಿಷ್ ಇನ್ನೂ ಹೆಚ್ಚಾಗಿ ಆವರಿಸಕೊಳ್ಳಬಹುದೇನೋ. ಇಲ್ಲಿ ನನಗೆ ಕಾಡುತ್ತಿರುವ ಪ್ರಶ್ನೆಯೇನೆಂದರೆ, ಮೇಲೆ ನಾ ಕೊಟ್ಟ ವಿವರಣೆಯನ್ನೂ ಮತ್ತು ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಕನ್ನಡದ ಕಾರ್ಯಕ್ರಮಗಳನ್ನು ತೂಗಿ ನೋಡಿದಾಗ ನಮ್ಮ ಕನ್ನಡ ಅಳಿಯುತ್ತಿದೆಯೋ, ಬೆಳೆಯುತ್ತಿದೆಯೋ ಅರ್ಥವಾಗುತ್ತಿಲ್ಲ. ಬರಿಯ ಜನಗಣತಿಯ ಅಂಕಿಗಳಿಂದ ಇದರ ಮಾಪನ ಸಾಧ್ಯ ಎಂದು ನನಗೆ ನಂಬಲು ಕಷ್ಟವಾಗುತ್ತದೆ. ಇದನ್ನ ಅಳತೆ ಮಾಡುವುದಾದರೂ ಹೇಗೆ? (ನಾನು ಈ ವಿಷಯದಲ್ಲಿ ಯಾವುದೇ ರೀತಿಯಲ್ಲೂ ಪರಿಣಿತನಲ್ಲ ಮತ್ತು ನನ್ನ ವಿವರಣೆಗಳನ್ನು ವಾದ ಎಂದು ಪರಿಗಣಿಸುವ ಅಗತ್ಯವಿಲ್ಲ. ಇಲ್ಲಿ ನನಗನ್ನಿಸಿದ್ದನ್ನು ದಾಖಲಿಸಿದ್ದೇನಷ್ಟೇ).

Comments