ನಮ್ಮ ಕರಕುಶಲ ವಸ್ತುಗಳು

ನಮ್ಮ ಕರಕುಶಲ ವಸ್ತುಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಎಂ.ವಿ. ನಾರಾಯಣ ರಾವ್
ಪ್ರಕಾಶಕರು
ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಪುಸ್ತಕದ ಬೆಲೆ
ರೂ.10/-

ಕರಕುಶಲ ಕಲೆಗಳು ಅಥವಾ ಗುಡಿಗಾರಿಕೆ ನಮ್ಮ ಸಂಪನ್ನ ಪರಂಪರೆಯ ಭಾಗ. ಭಾರತದ ಪ್ರತಿಯೊಂದು ರಾಜ್ಯವೂ ಅಲ್ಲಿನ ವಿಶೇಷ ಕರಕುಶಲ ಕಲೆಗೆ ಜಗತ್ಪ್ರಸಿದ್ಧ. ಕರಕುಶಲಗಾರರು ರಚಿಸುವ ಕರಕುಶಲ ವಸ್ತುಗಳು ನೋಡಲು ಚಂದ ಮಾತ್ರವಲ್ಲ ಬಳಕೆಗೂ ಅನುಕೂಲವಾದವುಗಳು. ಅವು ಬದುಕಿಗೂ ಒಂದು ಅರ್ಥ ಕೊಡುತ್ತವೆ ಎಂಬುದೇ ಅವುಗಳ ವಿಶೇಷತೆ.

ಈ ಪುಟ್ಟ ಪುಸ್ತಕದಲ್ಲಿ ನಮ್ಮ ದೇಶದ ವಿವಿಧ ರಾಜ್ಯಗಳ ಕರಕುಶಲ ಕಲೆ ಹಾಗೂ ಆ ಕುಶಲಕರ್ಮಿಗಳು ನಿರ್ಮಿಸುವ ವಸ್ತುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ. ರಾಮಾಯಣ ಕಾಲದಿಂದಲೂ ಇವರಿಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ. ಇವರ ಮೂಲಪುರುಷ ವಿಶ್ವಕರ್ಮ ಎಂಬ ನಂಬಿಕೆ. ಹಾಗಾಗಿ ಹಳೆಯ ಕಾಲದ ಕುಶಲಕರ್ಮಿಗಳು ತಾವು ಮಾಡಿದ್ದೆಲ್ಲಾ ತಮ್ಮ ಮೂಲಪುರುಷ ವಿಶ್ವಕರ್ಮನಿಗೇ ಅರ್ಪಿತ ಎಂಬ ಅರ್ಪಣಾಭಾವದಿಂದ ಮಾಡುತ್ತಿದ್ದರು.

ಮಣ್ಣಿನ ಮಡಕೆ ಇತ್ಯಾದಿ ರಚಿಸುವ ಕುಂಬಾರ, ಕಂಚಿನ ಎರಕಗಳಿಂದ ಮೂರ್ತಿಗಳನ್ನು ನಿರ್ಮಿಸುವ ಕಂಚುಗಾರ (ಲೋಹಶಿಲ್ಪಿ), ಆಭರಣಗಳನ್ನು ತಯಾರುಸಿವ ಅಕ್ಕಸಾಲಿಗ, ರಥಗಳನ್ನೂ ಮರದ ಉಪಕರಣಗಳನ್ನೂ ನಿರ್ಮಿಸುವ ಬಡಗಿ, ಅಂದಚಂದದ ಜರತಾರಿ ಬಟ್ಟೆಗಳನ್ನು ನೇಯುವ ನೇಕಾರ - ಇವರೆಲ್ಲರೂ ಹಸ್ತಶಿಲ್ಪಿಗಳು. ಯಾಕೆಂದರೆ, ತಾವು ರಚಿಸುವುದನ್ನೆಲ್ಲ ತಮ್ಮ ಕಲ್ಪನೆ ಹಾಗೂ ರಚನಾತ್ಮಕತೆ ಧಾರೆಯೆರೆದು ತಮ್ಮ ಕೈಗಳಿಂದಲೇ ರಚಿಸುತ್ತಿದ್ದರು.

ಇವರನ್ನೆಲ್ಲಾ ವೇದಗಳೂ ಪುರಾಣಗಳೂ ಉಲ್ಲೇಖಿಸಿವೆ. ಕಾಲ ಬದಲಾದಂತೆ, ಪರಂಪರೆಗಳೂ, ವಿನ್ಯಾಸಗಳೂ, ಶಿಲ್ಪಮಾಧ್ಯಮಗಳು ಬದಲಾದವು. ಕೈಯಿಂದ ಉಪಯೋಗಿಸುವ ಸರಳ ಉಪಕರಣಗಳ ಜೊತೆಗೆ ವಿದ್ಯುತ್ತಿನಿಂದ ಕೆಲಸ ಮಾಡುವ ಸಣ್ಣ ಯಂತ್ರಗಳನ್ನೂ ಈಗ ಕುಶಲಕರ್ಮಿಗಳು ಬಳಸುತ್ತಿದ್ದಾರೆ. ಇದರಿಂದಾಗಿ ಅವರು ಕಡಿಮೆ ಸಮಯದಲ್ಲಿ ಹೆಚ್ಚು ಸಂಖ್ಯೆಯ ವಸ್ತುಗಳನ್ನು ಸಿದ್ಧಪಡಿಸಲು ಅನುಕೂಲವಾಗಿದೆ.

ಪ್ರಾಚೀನ ಕಾಲದಲ್ಲಿ ಕುಶಲಕರ್ಮಿಗಳು ಚಂದದ ವಸ್ತುಗಳನ್ನು ಮಾರಾಟ ಮಾಡಿ ಲಾಭ ಗಳಿಸಲಿಕ್ಕಾಗಿ ರಚಿಸುತ್ತಿರಲಿಲ್ಲ. ಯಾಕೆಂದರೆ ಅವರಿಗೆ ಜೀವನೋಪಾಯಕ್ಕೆ ರಾಜಾಶ್ರಯ ಅಥವಾ ಶ್ರೀಮಂತರ ಬೆಂಬಲವಿರುತ್ತಿತ್ತು. ಆದರೆ ಕಾಲ ಬದಲಾಯಿತು. ಈಗ ಕುಶಲಕರ್ಮಿಗಳು ಜೀವನೋಪಾಯಕ್ಕಾಗಿ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ.

ಸುಮಾರು ಇನ್ನೂರು ವರುಷಗಳ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಭಾರತದ ಹಸ್ತಶಿಲ್ಪ ಕ್ಷೇತ್ರಕ್ಕೆ ಭಾರೀ ಆರ್ಥಿಕ ಹೊಡೆತ ಬಿತ್ತು. ಬ್ರಿಟಿಷರಿಗೆ ಇದೆಲ್ಲ ಬೇಡವಾಗಿತ್ತು. ಭಾರತದ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುವುದು, ಇಲ್ಲಿನ ಜನರಿಂದ ಗರಿಷ್ಠ ತೆರಿಗೆ ಸುಲಿಯುವುದು, ಇಲ್ಲಿ ಉದ್ಯಮಗಳನ್ನು ಸ್ಥಾಪಿಸಿ ಹೆಚ್ಚೆಚ್ಚು ಲಾಭ ಮಾಡಿಕೊಳ್ಳುವುದು - ಇದುವೇ ಅವರ ಉದ್ದೇಶವಾಗಿತ್ತು. ಹಾಗಾಗಿ, ನಮ್ಮ ದೇಶದ ಎಲ್ಲ ಕುಶಲಕಲೆಗಳು ಆರ್ಥಿಕ ಬೆಂಬಲವಿಲ್ಲದೆ ಅವನತಿಯ ಹಾದಿ ಹಿಡಿದವು.

ಭಾರತ 1947ರ ಆಗಸ್ಟ್ 15ರಂದು ಸ್ವತಂತ್ರವಾದ ನಂತರ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕರಕುಶಲ ಕಲೆಗಳ ಪುನರುತ್ಥಾನಕ್ಕೆ ಬೆಂಬಲ ನೀಡಿದವು. ಇದರಿಂದಾಗಿ ಲಕ್ಷಗಟ್ಟಲೆ ಕುಶಲಕರ್ಮಿಗಳ ಬದುಕಿಗೆ ಭರವಸೆ ಲಭಿಸಿತು.

ಭಾರತ ಸರಕಾರ 1952ರಲ್ಲಿ “ಅಖಿಲ ಭಾರತ ಹಸ್ತಶಿಲ್ಪ ಮಂಡಲಿ”ಯನ್ನು ಸ್ಥಾಪಿಸಿ, ಹೆಸರಾಂತ ಸಮಾಜ ಸೇವಾಕರ್ತೆ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯರನ್ನು ಅದರ ಮುಖ್ಯಸ್ಥರಾಗಿ ನೇಮಿಸಿತು. ಕುಶಲಕಲೆಗಳ ಹಾಗೂ ಕುಶಲಕರ್ಮಿಗಳ ಪುನರೋದ್ಧಾರ ಇದರ ಪ್ರಧಾನ ಉದ್ದೇಶ. ಕ್ರಮೇಣ ಹಲವು ರಾಜ್ಯಗಳಲ್ಲಿಯೂ ಇಂತಹ ಮಂಡಲಿಗಳನ್ನು ಸ್ಥಾಪಿಸಲಾಗಿದೆ.
1975ರಲ್ಲಿ ಕೇಂದ್ರ ಸರಕಾರವು ಆ ಮಂಡಲಿಯನ್ನು ವಾಣಿಜ್ಯ ಮಂತ್ರಾಲಯದ ಒಂದು ಅಧೀನ ಅಂಗವಾಗಿ ಪರಿವರ್ತಿಸಿ, ಅದರ ವ್ಯಾಪ್ತಿ ಮತ್ತು ಜವಾಬ್ದಾರಿ ವಿಸ್ತರಿಸಿತು. ಅದನ್ನು ಹಸ್ತಶಿಲ್ಪ ವಿಕಾಸ ಆಯುಕ್ತರ ಕಾರ್ಯಾಲಯವೆಂದು ಘೋಷಿಸಿತು. ಹಸ್ತಶಿಲ್ಪ ಕ್ಷೇತ್ರಕ್ಕೆ ಅಮೋಘ ಕೊಡುಗೆ ಸಲ್ಲಿಸಿದವರಿಗೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ನೀಡುವ ಪರಿಪಾಠ ಶುರುವಾಯಿತು.
ಕುಶಲಕಲೆಗಾರರಿಗೆ ಬೇಕಾದ ಹೊಸಹೊಸ ವಿನ್ಯಾಸಗಳನ್ನು ಒದಗಿಸಲು ದೇಶದ ವಿವಿಧ ಭಾಗಗಳಲ್ಲಿ ವಿನ್ಯಾಸ ಕೇಂದ್ರಗಳನ್ನೂ, ಮಾರುಕಟ್ಟೆಯ ಸೌಲಭ್ಯ ಒದಗಿಸಲಿಕ್ಕಾಗಿ ರಾಜ್ಯ ಮಟ್ಟದಲ್ಲಿ ಹಲವಾರು ಮಾರಾಟ ಮಳಿಗೆಗಳನ್ನೂ ಸ್ಥಾಪಿಸಲಾಗಿದೆ. ಅದಲ್ಲದೆ, ನಮ್ಮ ದೇಶದ ಕರಕುಶಲ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡಿ, ಹಸ್ತಶಿಲ್ಪಿಗಳಿಗೆ ಹೆಚ್ಚಿನ ಲಾಭಾಂಶ ಸಿಗುವಂತೆ ಮಾಡಲಿಕ್ಕಾಗಿ ಪ್ರತ್ಯೇಕ ಇಲಾಖೆಗಳೂ ವಿಭಾಗಗಳೂ ಕೆಲಸ ಮಾಡುತ್ತಿವೆ. “ಕರಕುಶಲ ಕಲೆಯ ವಿಕಾಸದಲ್ಲಿ ಸರ್ಕಾರದ ಪಾತ್ರ" ಎಂಬ ಕೊನೆಯ ಅಧ್ಯಾಯದಲ್ಲಿ ಇವೆಲ್ಲದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ.

ನಮ್ಮ ದೇಶದಲ್ಲಿರುವ ಕುಶಲಕರ್ಮಿಗಳ ಸಂಖ್ಯೆ ಒಂದು ಕೋಟಿಗಿಂತ ಅಧಿಕ. ಅವರು ತಮ್ಮ ಪರಂಪರೆ ಹಾಗೂ ಕಲಾಸಂಪನ್ನತೆ ಉಳಿಸಿ, ಮುಂದುವರಿಸುವುದು ಅತ್ಯಗತ್ಯ. ಯಾಕೆಂದರೆ ಇದು ನಮ್ಮ ದೇಶದ ಬೆಲೆಕಟ್ಟಲಾಗದ ಸಂಪತ್ತು.  ಈ ನಿಟ್ಟಿನಲ್ಲಿ ಎಲ್ಲ ಕಲಾಸಂಸ್ಥೆಗಳೂ, ಸಮಾಜಬಾಂಧವರು ಕೈಜೋಡಿಸಬೇಕಾಗಿದೆ. ಹಸ್ತಶಿಲ್ಪಿಗಳ ಜೀವನಮಟ್ಟ ಸುಧಾರಿಸಬೇಕಾಗಿದೆ ಮತ್ತು ಅವರಿಗೆ ಸಮಾಜದಲ್ಲಿ ಯಾವತ್ತೂ ಗೌರವದ ಸ್ಥಾನ ಸಿಗಬೇಕಾಗಿದೆ ಎಂಬುದು ಈ ಪುಸ್ತಕದ ಆಶಯ.