ನಮ್ಮ ಕಾರ್ಖಾನೆಯ ಕನ್ನಡ ಗ್ರಂಥಾಲಯ

ನಮ್ಮ ಕಾರ್ಖಾನೆಯ ಕನ್ನಡ ಗ್ರಂಥಾಲಯ

ಬರಹ

ನಮ್ಮದೊಂದು ಪುಟ್ಟ ಗ್ರಂಥಾಲಯ. ಕನ್ನಡ ಲೈಬ್ರರಿ ಎಂಬುದೇ ಅದರ ಅಗ್ಗಳಿಕೆ. ಇಡೀ ಎಚ್ಎಎಲ್ ಕಾರ್ಖಾನೆಯಲ್ಲಿ ಮನೆಮಾತಾಗಿರುವ ಈ ಕನ್ನಡ ಗ್ರಂಥಾಲಯ ಇರುವುದು ಇಂಜಿನ್ ವಿಭಾಗದ ಒಳಾವರಣದಲ್ಲಿ. ಕಾರ್ಖಾನೆಯ ಯಾಂತ್ರಿಕದ ಜೀವನದ ಜೊತೆಗೇ ಮನರಂಜನೆ ಮತ್ತು ಆತ್ಮವಿಕಾಸಕ್ಕೆ ಇಂಬಾಗುವ ಪ್ರಕ್ರಿಯೆಯಲ್ಲಿ ತೊಡಗಿರುವ ಈ ಗ್ರಂಥಾಲಯಕ್ಕೆ ಈಗ ಇಪ್ಪತ್ತೈದು ವರ್ಷ ವಯಸ್ಸು. ಇಪ್ಪತ್ತೈದು ವರ್ಷಗಳ ಹಿಂದೆ ಪುಟ್ಟದಾಗಿ ಪ್ರಾರಂಭವಾದ ಈ ಪ್ರಯತ್ನದಲ್ಲಿ ಅದು ಅಂದು ಒಂದು ಟ್ರಂಕಿನಲ್ಲಿಟ್ಟ ಕೆಲವೇ ಪುಸ್ತಕಗಳ ಸಂಗ್ರಹವಾಗಿತ್ತು. ಇಂದು ಅದು ಬೆಳೆದು ಹದಿನೈದು ಕಪಾಟುಗಳಲ್ಲಿ ತುಂಬಿರುವ ಮೌಲಿಕ ಪುಸ್ತಕಗಳ ಸಂಗ್ರಹವಾಗಿದೆ. ಅಂದು ಮುಚ್ಚುಮರೆಯಲ್ಲಿ ನಡೆಯುತ್ತಿದ್ದ ಪುಸ್ತಕದೆರವಲು ಇಂದು ಅಧಿಕೃತ ಮಾನ್ಯತೆ ಗಳಿಸಿದೆ. ಮೊದಲು ಪುಸ್ತಕಗಳೆಂದರೆ ಪತ್ತೇದಾರಿ ಮತ್ತು ಸ್ತ್ರೀಸಾಹಿತ್ಯವಷ್ಟೇ ಎನಿಸಿದ್ದ ಭಾವನೆ ಹೋಗಿ ಇಂದು ಅಧ್ಯಾತ್ಮ, ಮಕ್ಕಳಸಾಹಿತ್ಯ, ವಿಜ್ಞಾನ, ಹಾಸ್ಯ, ಕವನ, ಕತೆ, ಕಾದಂಬರಿ, ಮನೋವಿಕಾಸ, ಆರೋಗ್ಯ, ವ್ಯಕ್ತಿಚಿತ್ರ, ಸಾಹಿತ್ಯಚಿಂತನೆ, ಇತಿಹಾಸ, ನಾಟಕ ಮುಂತಾದ ಎಲ್ಲ ಪ್ರಕಾರಗಳ ಸಂಗ್ರಹ ಇಲ್ಲಿದೆ. ಕೊಡುಗೆಯಾಗಿ ನೀಡಿದ ಪುಸ್ತಕಗಳು, ಚಂದಾ ಹಣದಿಂದ ಖರೀದಿಸಿದ ಪುಸ್ತಕಗಳ ಜೊತೆಗೆ ಕಾರ್ಖಾನೆಯ ಆಡಳಿತವರ್ಗವು ಪ್ರತಿವರ್ಷವೂ ತಾನೇ ಕೊಟೇಷನ್ ಕರೆದು ಐದುಸಾವಿರ ರೂಪಾಯಿಗಳ ಮೌಲ್ಯದ ಕನ್ನಡ ಪುಸ್ತಕ ಖರೀದಿಸಿಕೊಡುವುದರಿಂದ ಇಂದು ಈ ಪುಸ್ತಕಭಂಡಾರದಲ್ಲಿರುವ ಪುಸ್ತಕಗಳ ಸಂಖ್ಯೆ ೩೫೦೦ ಮುಟ್ಟಿದೆ. ಈ ವರ್ಷ ಕನ್ನಡ ಪುಸ್ತಕ ಪ್ರಾಧಿಕಾರವು ಸುಮಾರು ೨೫೦೦೦ ರೂಪಾಯಿಗಳ ಮೌಲ್ಯದ ೧೮೦ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದೆ. ಕೆಲಸದಿಂದ ನಿವೃತ್ತಿ ಹೊಂದುವ ಸದಸ್ಯರಿಗೆ ಪುಸ್ತಕದ ಉಡುಗೊರೆ ನೀಡಲಾಗುತ್ತದೆ. ಅಂತೆಯೇ ಆ ನಿವೃತ್ತ ಸದಸ್ಯರೂ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ ನೀಡುವುದುಂಟು. ಈ ಸಾರಿಯ ಯುಗಾದಿಗೆ ಎಲ್ಲ ಸದಸ್ಯರಿಗೂ ಬೇವುಬೆಲ್ಲದ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ’ರತ್ನಕೋಶ’ವನ್ನು ಹಂಚಿದೆವು. ಈ ಕಾರ್ಯವನ್ನು ವೀಕ್ಷಿಸಲು ಬಂದಿದ್ದ ಕಸಾಪ ಕಾರ್ಯದರ್ಶಿ ಜರಗನಹಳ್ಳಿ ಶಿವಶಂಕರ ಅವರಂತೂ ತುಂಬಾ ಆನಂದಿಸಿದರು.

ಗ್ರಂಥಾಲಯಕ್ಕೆ ಹೊಸಪುಸ್ತಕ ಬಂದ ಕೂಡಲೇ ಅದಕ್ಕೊಂದು ದಪ್ಪರಟ್ಟಿನ ಹೊದಿಕೆ ಹಾಕಿ ನಂಬರು ಬರೆದು ಠಸ್ಸೆ ಒತ್ತಿ ಪಟ್ಟೀಕರಣಗೊಳಿಸಿ ಇಡಲಾಗುತ್ತದೆ. ಪುಸ್ತಕ ವಿತರಣೆಗೆಂದೇ ಕನ್ನಡದಲ್ಲಿ ಒಂದು ವಿಶಿಷ್ಟ ತಂತ್ರಾಂಶ ರೂಪಿಸಲಾಗಿದೆ. ಈ ಅಚ್ಚಗನ್ನಡ ಮಾಹಿತಿ ಇರುವ ತಂತ್ರಾಂಶದ ಸಹಾಯದಿಂದ ಪುಸ್ತಕದ ವಿತರಣೆ ಅತ್ಯಂತ ಸುಲಭಸಾಧ್ಯವಾಗಿದೆ. ಏಕೆಂದರೆ ಈ ಗ್ರಂಥಾಲಯ ಕಾರ್ಯನಿರತವಾಗುವುದು ಪ್ರತಿದಿನ ಊಟದ ವೇಳೆಯಲ್ಲಿ ಮಾತ್ರ. ಪುಸ್ತಕ ಹಿಡಿದು ಬರುವವರ ದೊಡ್ಡ ದಂಡು ಇರುವ ಅಲ್ಪ ಸಮಯದಲ್ಲಿ ತನ್ನ ಅಭೀಷ್ಟೆ ಪೂರೈಸಿಕೊಳ್ಳಲು ಈ ತಂತ್ರಾಂಶ ಗರಿಷ್ಠ ಸಹಾಯ ನೀಡುತ್ತದೆ. ಪುಸ್ತಕದ ಶೀರ್ಷಿಕೆ ಗೊತ್ತಿಲ್ಲ ಮಗುವಿಗೆ ಸಂಬಂಧಿಸಿದ್ದು ಎಂದರೆ ಸಾಕು. ಬೆರಳ ತುದಿಗಳಲ್ಲೇ ನಿಮ್ಮ ಮಗು, ತಾಯಿ ಮಗು, ಮಗುವಿಗೊಂದು ಹೆಸರು ಈ ರೀತಿಯಾಗಿ ಮಗು ಇರುವ ಎಲ್ಲ ಶೀರ್ಷಿಕೆಗಳನ್ನೂ ತೋರಿಸುತ್ತದೆ. ಪುಸ್ತಕದ ಹೆಸರಿನೊಂದಿಗೆ ಲೇಖಕರು ಅನುವಾದಕರು ಪ್ರಕಾಶಕರು ಬೆಲೆ ಲಭ್ಯವಿದೆ/ಲಭ್ಯವಿಲ್ಲ ಇತ್ಯಾದಿ ಮಾಹಿತಿಗಳು ಕಾಣುತ್ತವೆ. ಪುಸ್ತಕಗಳನ್ನು ಪ್ರಕಾರಾದಿ, ಲೇಖಕರಾದಿ, ಶೀರ್ಷಿಕೆಯಾದಿ ಹುಡುಕಬಹುದು. ಮೊದಲೇ ಓದಿದ್ದ ಪುಸ್ತಕವೊಂದನ್ನು ಆಯ್ಕೆ ಮಾಡಿಕೊಂಡಾಗ ಈಗಾಗಲೇ ಅದನ್ನು ಓದಿದ್ದೀರಿ ಮತ್ತೊಮ್ಮೆ ಬೇಕೇ ಎಂಬಂತಹ ಪ್ರಶ್ನೆಗಳೂ ಕಾಣಬರುತ್ತವೆ. ಅವಧಿ ಮೀರಿ ಹಿಂದಿರುಗಿಸಿದಾಗ ಇಂತಿಷ್ಟು ದಂಡ ಪಾವತಿಸಿ ಎಂಬ ಸಂದೇಶವೂ ಕಾಣುತ್ತದೆ. (ಈ ತಂತ್ರಾಂಶವನ್ನು ರೂಪಿಸಿದ ಕರ್ತವ್ಯ ಐ ಟಿ ಸಲ್ಯೂಷನ್ಸಿನ ಸಿದ್ಧಾರೂಢ ಅವರನ್ನು ಸದಾ ಸ್ಮರಿಸುತ್ತೇವೆ.)

ಕಾರ್ಖಾನೆಯ ಮೊದಲ ಮನುಷ್ಯನಿಂದ ಹಿಡಿದು ಅತ್ಯಂತ ಕೆಳಮನುಷ್ಯನವರೆಗೂ ಎಲ್ಲರೂ ಸದಸ್ಯರಾಗಿರುವ ಈ ಗ್ರಂಥಾಲಯದ ಗುರುತಿನ ಚೀಟಿಯು ಅತ್ಯಂತ ವಿಶಿಷ್ಟವಾಗಿದೆ. ಅದರಲ್ಲಿ ಸದಸ್ಯನ ಹೆಸರು ಸಂಖ್ಯೆ ವಿಭಾಗ ಮತ್ತು ದೂರವಾಣಿಗಳು ಕನ್ನಡದಲ್ಲಿ ಮುದ್ರಿತವಾಗಿವೆ. ಜ್ಞಾನಪೀಠ ಪುರಸ್ಕೃತ ಕನ್ನಡಿಗರ ವರ್ಣಚಿತ್ರದ ಕೊಲಾಜ್ ಇದೆ. ಹಿಂಬದಿಯಲ್ಲಿ ನಿಬಂಧನೆಗಳ ಜೊತೆಗೆ ಕನ್ನಡದ ಅಂಕಿಗಳ ಪರಿಚಯವಿದೆ. ಕನ್ನಡೇತರರೂ ಈ ಗುರುತಿನ ಚೀಟಿಯನ್ನು ತಮ್ಮ ಕಿಸೆಯಲ್ಲಿಟ್ಟುಕೊಳ್ಳುವುದಕ್ಕೆ ತುಂಬಾ ಹೆಮ್ಮೆ ಪಡುತ್ತಾರೆ.

ಕಾರ್ಮಿಕರು ಸ್ವಯಂಪ್ರೇರಣೆಯಿಂದ ಇಲ್ಲಿಗೆ ಬಂದು ಮುಕ್ತ ಸಾಹಿತ್ಯಿಕ ಚರ್ಚೆ ನಡೆಸುತ್ತಾರೆ, ಕಪಾಟುಗಳ ಧೂಳು ಒರೆಸುತ್ತಾರೆ, ಹರಿದ ಪುಸ್ತಕಗಳಿಗೆ ಗೋಂದು ಹಚ್ಚುತ್ತಾರೆ, ಪುಸ್ತಕ ವಿತರಣೆಯಲ್ಲಿ ನನಗೆ ನೆರವಾಗುತ್ತಾರೆ. ಅವರೊಂದಿಗೆ ಬರುವ ಅನ್ಯಭಾಷಿಕರು ಗ್ರಂಥಾಲಯವನ್ನು ನೋಡಿ ನಿಜಕ್ಕೂ ಇದೊಂದು ವಿಸ್ಮಯ ಎಂದು ಹೊಗಳುತ್ತಾರೆ. ಕಾರ್ಖಾನೆಗೆ ಭೇಟಿ ನೀಡುವ ಅನ್ಯವಿಭಾಗದವರಂತೂ ನಮ್ಮ ಗ್ರಂಥಾಲಯವನ್ನು ನೋಡಲೇಬೇಕಾದ ಸ್ಥಳ ಎಂಬಂತೆ ಬಂದು ವೀಕ್ಷಿಸಿ ಹೋಗುತ್ತಾರೆಂದರೆ ಅದಕ್ಕಿಂತ ಹೆಮ್ಮೆಯ ವಿಷಯ ನಮಗಿನ್ನೇನಿದೆ?