ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ- ರಘೋತ್ತಮ್ ಕೊಪ್ಪರ

ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ- ರಘೋತ್ತಮ್ ಕೊಪ್ಪರ

ಬರಹ

ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ- ರಘೋತ್ತಮ್ ಕೊಪ್ಪರ

ಬೆಂಗಳೂರು ವಿಶ್ವವಿದ್ಯಾಲಯದಿಂದ ಪತ್ರವೊಂದು ಬಂದಿದೆ ಎಂದು ನನ್ನ ತಂದೆ ಫೋನ್ ಮಾಡಿದರು. ಪತ್ರ ಬಂದಿದೆಯಾ ಎಂದು ಕೊಂಚ ವಿಚಲಿತನಾದೆ. ಎಸ್.ಎಂ.ಎಸ್. ಮತ್ತು ಇ-ಮೇಲ್ ಕಾಲ ನೋಡಿ ಬರಿ ಮೇಲ್ ಅಂದ್ರೆ ಅಂಚೆ ಪತ್ರವನ್ನು ಎಷ್ಟೋ ಜನ ಮರೆತೆ ಹೋಗಿದ್ದಾರೆ ಅಲ್ವಾ. ಆ ವಿಷಯ ಇರಲಿ ಬಿಡಿ. ಆ ಪತ್ರದಲ್ಲಿ ಹಳೆ ವಿದ್ಯಾರ್ಥಿಗಳ ಕೂಟವನ್ನು ಮಾಡುತ್ತಿದ್ದೇವೆ ಎಂಬ ಆಮಂತ್ರಣವಿತ್ತು. ನಮ್ಮ ಕಚೇರಿಯಲ್ಲಿ ಹೇಗೊ ಕೇಳಿಕೊಂಡು ೧೧.೩೦ ಕ್ಕೆ ನಮ್ಮ ಕಾಲೇಜಿನತ್ತ ಧಾವಿಸಿದೆ. ಎಲ್ಲವೂ ಬದಲಾಗಿದೆ. ನಮ್ಮ ಸ್ಟುಡಿಯೋದ ಆವರಣ ಈಗ ಹಸಿರಿನ ಹೊದಿಕೆಯನ್ನು ಹೊತ್ತು ನಿಂತಿದೆ. ಶ್ರೀಪತಿ ಗುರುಗಳು ನನ್ನನ್ನು ಸ್ವಾಗತಿಸಿ, ನನ್ನಕ್ಕಿಂತಲೂ ದಪ್ಪ ಆಗಿದ್ದಿಯಲ್ಲಪಾ ಎಂದು ನಗೆ ಚಟಾಕಿ ಹಾರಿಸಿದರು. ನಿಜ ಬಿಡಿ ದಪ್ಪ ಆಗಿದ್ದೇನೆ ಅಂತ ನಾನು ನಕ್ಕು ಸ್ಟುಡಿಯೋ ಒಳಗಡೆ ಹೋದೆ. ಎರಡು ವರ್ಷಗಳ ನಂತರ ಬದಲಾವಣೆ ಗಳೇನು ಎಂದು ನೋಡುವ ಕುತೂಹಲ. ಈಗ ಬಹಳ ಬದಲಾಗಿದೆ. ಎಲ್ಲವನ್ನು ನೋಡುತ್ತ, ಹಳೆಯ ಸ್ನೇಹಿತರೊಟ್ಟಿಗೆ ಹರಟುತ್ತ ಕಾಲ ಕಳೆದೆವು. ಅಶೋಕ್ ಕುಮಾರ್ ಸರ್ ಕೂಡ ಬಂದರು. ಅಶೋಕ್ ಕುಮಾರ್ ಸರ್ ಗೊತ್ತಲ್ವಾ, ಹಾಂ ಅವರೇ ವಿಜಯ ಕರ್ನಾಟಕದಲ್ಲಿ ಟಿ.ವಿ. ಲೋಕ ಅಂಕಣ ಬರೆಯುತ್ತಿದ್ದರಲ್ಲಾ. ನಮಗೆಲ್ಲಾ ಅಲ್ಪೋಪಹಾರವನ್ನು ಸ್ವೀಕರಿಸಲು ಕರೆದರು. ಆಗ ಕಾರ್ಯಕ್ರಮ ಶುರುವಾಯಿತು. ಎಲ್ಲರೂ ತಾವೆಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ ಮೇಲೆ ಅಶೋಕ್ ಸರ್ ನೀವೆಲ್ಲ ನಿಮ್ಮ ಜೂನಿಯರ್ಸ್ ಗೆ ಕೆಲಸ ಕೊಡಿಸುವಲ್ಲಿ ಸಹಾಯ ಮಾಡಬೇಕು ಹೀಗೆ ಬೇರೆ ಬೇರೆ ಹೊಸ ಯೋಜನೆಗಳನ್ನೆಲ್ಲಾ ಹೇಳಿದರು. ನಮ್ಮ ಜೂನಿಯರ್ ಆದ ನಿಧಿ ಅದರ ಅಧ್ಯಕ್ಷೆ ಯಾಗಿ ಆಯ್ಕೆಗೊಂಡಳು. ರೇಡಿಯೋ ನಿರೂಪಕಿ ಮತ್ತು ನಮ್ಮ ಸಹಪಾಠಿಯಾದ ಪವಿತ್ರಾ ಮಾತನಾಡಿ ಎಲ್ಲರಿಗೂ ವಂದಿಸಿದರು. ಎಲ್ಲರೂ ಮೇಲ್ ನಲ್ಲಾಗಲಿ ಅಥವಾ ಇ-ಮೇಲ್ ನಲ್ಲಾಗಲಿ ಸಂಪರ್ಕದಲ್ಲಿರೋಣ ಎಂಬ ಘೋಷವಾಕ್ಯದೊಂದಿಗೆ ಎಲ್ಲರಿಗೂ ಟಾ ಟಾ ಹೇಳಿ ಬಂದೆವು. ನಾವು ಕೆಲಸ ಹುಡುಕುವಾಗ ಪಟ್ಟ ಕಷ್ಟವನ್ನು ನಮ್ಮ ಜೂನಿಯರ್ಸ್ ಪಡಬಾರದು. ನಾವೆಲ್ಲ ಸೀನಿಯರ್ಸ್ ಎಲ್ಲೆಲ್ಲಿ ಕೆಲಸಗಳು ಖಾಲಿ ಇವೆ ಅಂತ ಗೊತ್ತಿರುವವರು ಅವರಿಗೆಲ್ಲ ತಿಳಿಸಿದರೆ ಅನುಕೂಲವಾಗುತ್ತದೆ. ಹೀಗೆ ಬೇರೆ ಬೇರೆ ಕೋರ್ಸ್ ನಲ್ಲಿರುವ ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳ ಕೂಟವನ್ನು ಮಾಡಿ, ಎಲ್ಲರೊಂದಿಗೆ ಸಂಪರ್ಕವಿಟ್ಟುಕೊಂಡು ಜೂನಿಯರ್ಸ್ ಗೆ ಸಹಾಯ ಮಾಡಿ ಎಂದು ನನ್ನ ವಿನಂತಿ. ನನ್ನ ಗಣಕಯಂತ್ರಕ್ಕೆ ಬೇಸರವಾಗಿದೆ ಅಂತೆ ಅನ್ನಿಸುತ್ತೆ. ಅದಕ್ಕೆ ಸ್ವಲ್ಪ ವಿಶ್ರಾಂತಿ ನೀಡುತ್ತೇನೆ. ಧನ್ಯವಾದಗಳು.