ನಮ್ಮ ಚಿತ್ತ, ಕ್ಷಯ ರೋಗ ನಿರ್ಮೂಲನೆಯತ್ತ…

ನಮ್ಮ ಚಿತ್ತ, ಕ್ಷಯ ರೋಗ ನಿರ್ಮೂಲನೆಯತ್ತ…

ಕ್ಷಯ ರೋಗ ಅಥವಾ ಟಿಬಿ ಬಹಳ ಹಳೆಯ ಕಾಯಿಲೆ. ಹಲವು ಶತಮಾನಗಳಷ್ಟು ಹಳೆಯ ಈ ಕಾಯಿಲೆಯ ತೀಕ್ಷ್ಣತೆ ಈಗ ಕಮ್ಮಿ ಆಗಿದ್ದರೂ ಸಂಪೂರ್ಣ ನಿರ್ಮೂಲನೆ ಮಾಡಲು ನಮಗಿನ್ನೂ ಸಾಧ್ಯವಾಗಿಲ್ಲ. ಮೊದಲಾದರೆ ಈ ರೋಗಕ್ಕೆ ಮದ್ದು ಇರಲಿಲ್ಲ. ಟಿಬಿ ಬಂತೆಂದರೆ ಅವನಿಗೆ ಸಾವು ಶತಃಸಿದ್ಧವಾಗಿರುತ್ತಿತ್ತು. ಶತಮಾನಗಳ ಹಿಂದೆ ಹಲವಾರು ಮಂದಿ ಪ್ರತಿಭಾವಂತರು ಕ್ಷಯರೋಗಕ್ಕೆ ತುತ್ತಾಗಿ ಅಕಾಲದಲ್ಲಿ ಮರಣವನ್ನಪ್ಪಿದ್ದಾರೆ. ನಮ್ಮಲ್ಲಿ ಈಗಲೂ ಕ್ಷಯ ರೋಗದ ಬಗ್ಗೆ ಹಲವಾರು ಅಂಧ ಶೃದ್ಧೆಗಳು, ತಪ್ಪು ಕಲ್ಪನೆಗಳು ಬೇರೂರಿವೆ. ಇವುಗಳನ್ನು ಬೇರು ಸಮೇತ ಕಿತ್ತೊಗೆಯುವ ಕೆಲಸ ಜವಾಬ್ದಾರಿಯಿಂದ ಮಾಡ ಬೇಕಾಗಿದೆ. ನಮ್ಮ ದೇಶದಲ್ಲಿ ಇನ್ನೂ ಅಪೌಷ್ಟಿಕತೆ, ಕೊಳಚೆ ಪ್ರದೇಶಗಳು ಉಳಿದಿವೆ. ಈ ಎಲ್ಲಾ ಕಾರಣಗಳಿಂದ ಈ ರೋಗಕ್ಕೆ ಸೂಕ್ತ ಮದ್ದು ಇದ್ದರೂ ಸಂಪೂರ್ಣ ನಿರ್ಮೂಲನೆ ಸಾಧ್ಯವಾಗಿಲ್ಲ.

೨೦೨೫ರ ಸಮಯಕ್ಕೆ ಸಂಪೂರ್ಣ ಕ್ಷಯ ಮುಕ್ತ ದೇಶವನ್ನಾಗಿಸುವ ಗುರಿ ಸರಕಾರಕ್ಕೆ ಇದೆ. ಆದರೆ ಸಾಗ ಬೇಕಾದ ಹಾದಿ ಬಹಳ ದೂರವಿದೆ. ಈ ನಡುವೆ ನಮ್ಮನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ, ಆರೋಗ್ಯದ ಜೊತೆಗೆ ಆರ್ಥಿಕತೆಗೂ ಪೆಟ್ಟುಕೊಡುತ್ತಿರುವ ಕೊರೋನಾ ರೋಗದ ನಿರ್ಮೂಲನವೂ ಅಗತ್ಯವಾಗಿದೆ. ಕ್ಷಯ ರೋಗ ಪೀಡಿತರನ್ನು ಅತೀ ಸುಲಭದಲ್ಲಿ ಕೊರೋನಾ ತನ್ನ ಕಪಿ ಮುಷ್ಟಿಗೆ ಸಿಲುಕಿಸಿಬಿಡುತ್ತದೆ. ಏಕೆಂದರೆ ಕ್ಷಯ ರೋಗಿಯಲ್ಲಿ ನಿರೋಧಕ ಶಕ್ತಿ ಕಮ್ಮಿ ಇರುತ್ತದೆ. ಈ ರೋಗಿ ಕೊರೋನಾ ಕಾಯಿಲೆಗೆ ಸುಲಭದ ತುತ್ತಾಗುತ್ತಾನೆ. 

ಕ್ಷಯ ರೋಗ ಅಥವಾ ಟ್ಯುಬರ್ ಕ್ಯುಲೋಸಿಸ್ (ಟಿಬಿ) ರೋಗದ ಮೂಲವನ್ನು ೧೮೮೨ರ ಮಾರ್ಚ್ ೨೪ರಂದು ಜರ್ಮನಿಯ ವಿಜ್ಞಾನಿ ಡಾ. ರಾಬರ್ಟ್ ಕಾಕ್ ಎಂಬವರು ತಮ್ಮ ನಿರಂತರ ಸಂಶೋಧನೆಯಿಂದ ಪತ್ತೆ ಹಚ್ಚಿದರು. ಮೈಕೋಬ್ಯಾಕ್ಟೀರಿಯಮ್ ಟ್ಯುಬರ್ ಕ್ಯುಲೋಸಿಸ್ ಎಂಬ ರೋಗಾಣುವಿನಿಂದ ಹರಡುತ್ತದೆ ಎಂದು ತಿಳಿಸಿದರು. ಈ ಕಾರಣದಿಂದಲೇ ಪ್ರತೀ ವರ್ಷ ಮಾರ್ಚ್ ೨೪ರಂದು ವಿಶ್ವ ಕ್ಷಯ ರೋಗ ದಿನವನ್ನಾಗಿ ಆಚರಿಸಲಾಗುತ್ತದೆ. 

ಕ್ಷಯ ರೋಗದ ಸಾಮಾನ್ಯ ಲಕ್ಷಣಗಳೆಂದರೆ ಹಲವಾರು ಸಮಯದ ಕೆಮ್ಮು, ರಕ್ತ ಮಿಶ್ರಿತ ಕಫ, ಎದೆ ನೋವು, ತೂಕದಲ್ಲಿ ಗಣನೀಯ ಇಳಿಕೆ, ಹಸಿವಾಗದೇ ಇರುವುದು. ಈ ಲಕ್ಷಣಗಳನ್ನು ಹೊಂದಿರುವವರು ತಮ್ಮ ಕಫವನ್ನು ಪರೀಕ್ಷಿಸಿ ಕ್ಷಯ ರೋಗವಿದೆಯೇ ಎನ್ನುವುದನ್ಮು ಖಚಿತ ಪಡಿಸಿಕೊಳ್ಳಬಹುದು. ಈಗ ನೂತನ ವಿಧಾನಗಳಾದ ಕ್ಷ-ಕಿರಣ ಪರೀಕ್ಷೆ, ಕೇವಲ ಎರಡೇ ಗಂಟೆಯಲ್ಲಿ ಫಲಿತಾಂಶ ನೀಡುವ CBNAAT ಯಂತ್ರದ ಮೂಲಕ ಪರೀಕ್ಷೆ ಮಾಡಿ ರೋಗವಿದೆಯೇ ಎಂಬುವುದನ್ನು ತಿಳಿದುಕೊಳ್ಳಬಹುದಾಗಿದೆ. ಕ್ಷಯ ರೋಗವನ್ನು ಪ್ರಾಥಮಿಕ ಹಂತದಲ್ಲಿ ಗುರುತಿಸಿದರೆ ಬಹುಬೇಗನೇ ವಾಸಿ ಮಾಡಬಹುದು. ಆದರೆ ನಿರಂತರ ಔಷಧ ಸೇವನೆ ಹಾಗೂ ಜನರಿಂದ ಅಂತರವನ್ನು ಕಾಯ್ದುಕೊಳ್ಳುವುದು ಬಹು ಅಗತ್ಯ.

ಈ ರೋಗದ ರೋಗಾಣುಗಳು ಗಾಳಿಯ ಮೂಲಕ (ರೋಗಿಯ ಕೆಮ್ಮು, ಕಫ) ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶವನ್ನು ಸೇರಿದರೆ ಅಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಎಲ್ಲಿ ನೋಡಿದರಲ್ಲಿ ಉಗುಳುವ ದುರಾಭ್ಯಾಸವಿದ್ದರೆ ಕೂಡಲೇ ಅದನ್ನು ತ್ಯಜಿಸಬೇಕು. ಕ್ಷಯ ರೋಗವಿರುವ ವ್ಯಕ್ತಿಗಳು ತಮ್ಮ ಕಫವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಪ್ರತ್ಯೇಕ ಪಾತ್ರೆ, ಬಟ್ಟೆ ಹಾಗೂ ದೈನಂದಿನ ವಸ್ತುಗಳನ್ನು ಇಟ್ಟುಕೊಳ್ಳಬೇಕು. ಇವರು ತಕ್ಷಣ ಔಷಧವನ್ನು ಪ್ರಾರಂಭಿಸದಿದ್ದರೆ ಇವರ ಸಂಪರ್ಕಕ್ಕೆ ಬರುವ ಹಲವಾರು ಮಂದಿ ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ. ಕ್ಷಯ ರೋಗವು ಎಚ್ ಐ ವಿ ಸೋಂಕಿತರಲ್ಲಿ ಬಹಳ ಬೇಗನೇ ಉಲ್ಬಣಗೊಳ್ಳುತ್ತದೆ. ಏಕೆಂದರೆ ಅವರ ರೋಗ ನಿರೋಧಕ ಶಕ್ತಿ ಕಮ್ಮಿ ಇರುತ್ತದೆ. ಧೂಮಪಾನ ಹಾಗೂ ಮದ್ಯಪಾನ ಮಾಡುವ ಸಕ್ಕರೆ ಕಾಯಿಲೆ ಇರುವ ರೋಗಿಗಳಲ್ಲಿ, ಕಿಡ್ನಿ ಸಂಬಂಧಿತ ಸಮಸ್ಯೆಗಳಿಗೆ ಡಯಾಲಿಸಿಸ್ ಮಾಡಿಸಿಕೊಳ್ಳುವ ವ್ಯಕ್ತಿಗಳಲ್ಲಿ, ಕೊಳಚೆ ಪ್ರದೇಶದಲ್ಲಿ ವಾಸಿಸುವ ವ್ಯಕಿಗಳಲ್ಲಿ ಬಹುಬೇಗನೇ ಹರಡುತ್ತದೆ. 

ಈ ಮೇಲಿನ ಶ್ವಾಸಕೋಶದ ಕ್ಷಯ ರೋಗವಲ್ಲದೇ ಮೂಳೆ, ಕರುಳು, ಮೆದುಳಿನ ಪರದೆ, ಎದೆಗೂಡು ಹಾಗೂ ದುಗ್ದರಸ ಗ್ರಂಥಿಗಳಿಗೂ ಕ್ಷಯ ರೋಗ ಬರುತ್ತದೆ. ಆದರೆ ಇವುಗಳು ಹರಡುವ ಸಾಧ್ಯತೆ ಇರುವುದಿಲ್ಲ. ಕ್ರಮಬದ್ಧವಾದ ಆಹಾರ, ಔಷಧ ಹಾಗೂ ಶಿಸ್ತು ಬದ್ಧ ಜೀವನ ಕ್ರಮದಿಂದ ಕ್ಷಯ ರೋಗವನ್ನು ಬಹುಬೇಗನೇ ನಿವಾರಣೆ ಮಾಡಿಕೊಳ್ಳಬಹುದಾಗಿದೆ.

ಒಮ್ಮೆ ಕ್ಷಯ ರೋಗ ಪತ್ತೆಯಾದರೆ ಕ್ರಮವಾಗಿ ಔಷಧಿಯನ್ನು ಸೇವನೆ ಮಾಡಿದರೆ ೬ ತಿಂಗಳಲ್ಲಿ ರೋಗವನ್ನು ಸಂಪೂರ್ಣ ಗುಣಪಡಿಸಬಹುದಾಗಿದೆ. ಈಗ ಬಂದಿರುವ ವಿನೂತನ ಔಷಧ ವಿಧಾನದಿಂದ ಆ ವ್ಯಕ್ತಿಯ ತೂಕದ ಅನುಸಾರವಾಗಿ ಪ್ರತೀ ದಿನ ಔಷಧಿಯನ್ನು ಸುಮಾರು ೬ ತಿಂಗಳವರೆಗೆ ತೆಗೆದುಕೊಳ್ಳಬೇಕು. ಸ್ವಲ್ಪ ದಿನದಲ್ಲೇ ಮದ್ದಿನ ಪರಿಣಾಮವಾಗಿ ರೋಗ ಲಕ್ಷಣಗಳು ಕಮ್ಮಿ ಆಗುತ್ತವೆ. ಕೆಲವರು ರೋಗ ಗುಣವಾಯಿತು ಎಂದು ಮದ್ದನ್ನು ನಿಲ್ಲಿಸಿ ಬಿಡುತ್ತಾರೆ. ಇದು ತಪ್ಪು. ಹೊರಗಡೆ ಔಷಧಿಯ ಕಾರಣದಿಂದ ರೋಗ ಲಕ್ಷಣ ಕಮ್ಮಿಯಾದರೂ ಶ್ವಾಸಕೊಶದಲ್ಲಿ ಕ್ಷಯದ ರೋಗಾಣುಗಳು ಜೀವಂತವಾಗಿರುತ್ತವೆ. ನಿಮ್ಮ ಅಪೂರ್ಣವಾದ ಔಷಧ ಸೇವನೆಯಿಂದ ಮತ್ತೆ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಆದುದರಿಂದ ವೈದ್ಯರು ಹೇಳಿದ ಕ್ರಮದಲ್ಲೇ ನಿರಂತರವಾಗಿ ಔಷಧಿಯನ್ನು ಸೇವನೆ ಮಾಡಬೇಕು. 

ನೀವು ಕ್ಷಯ ರೋಗಿಯಾಗಿದ್ದರೆ ಹಲವಾರು ರೀತಿಯ ಮುನ್ನೆಚ್ಚರಿಕೆಯ ಕ್ರಮವನ್ನು ತೆಗೆದುಕೊಳ್ಳಲೇಬೇಕು. ಏಕೆಂದರೆ ಇದು ವೇಗವಾಗಿ ಹರಡುವ ಸಾಂಕ್ರಮಿಕ ರೋಗವಾಗಿರುತ್ತದೆ. ರೋಗಿ ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಥವಾ ಮಾಸ್ಕ್ ಬಳಸಬೇಕು. ಉಗುಳುವ ಅಭ್ಯಾಸವಿದ್ದರೆ ಕೂಡಲೇ ನಿಲ್ಲಿಸಬೇಕು. ಚಿಕ್ಕ ಮಕ್ಕಳನ್ನು ಮುದ್ದುಮಾಡುವುದನ್ನು ನಿಲ್ಲಿಸಬೇಕು. ಏಕೆಂದರೆ ಅವರಲ್ಲಿ ರೋಗ ನಿರೋಧಕ ಶಕ್ತಿ ಕಮ್ಮಿ ಇರುತ್ತದೆ. ಹುಟ್ಟಿದ ಮಕ್ಕಳಿಗೆ ತಪ್ಪದೇ ನಿಗದಿತ ಸಮಯದ ಒಳಗೆ ಬಿ.ಸಿ.ಜಿ ಲಸಿಕೆಯನ್ನು ಹಾಕಿಸಬೇಕು. ಪೌಷ್ಟಿಕ ಹಾಗೂ ಸಮತೋಲಿತ ಆಹಾರ ಸೇವನೆ ಮತ್ತು ದುಷ್ಟ ಚಟಗಳಿಂದ ದೂರವಿರಬೇಕು.

ನಮ್ಮ ದೇಶದ ದೊಡ್ಡ ಸಮಸ್ಯೆ ಎಂದರೆ ಅಶುದ್ಧ ಪರಿಸರ ಹಾಗೂ ಅಪೌಷ್ಟಿಕ ಆಹಾರ. ಇದರಿಂದ ಬಹುಬೇಗನೇ ಕ್ಷಯ ರೋಗ ಹರಡುತ್ತದೆ. ಈ ಸಮಸ್ಯೆಗಳನ್ನು ನಿರಂತರ ಕ್ರಮಗಳ ಮೂಲಕ ಸರಕಾರ ನಿಯಂತ್ರಣಕ್ಕೆ ತರಬೇಕು. ಸರಕಾರೇತರ ಸಂಘ ಸಂಸ್ಥೆಗಳೂ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬಹುದಾಗಿದೆ. ‘ಟಿಬಿ ಸೋಲಿಸಿ, ದೇಶ ಗೆಲ್ಲಿಸಿ' ಘೋಷವಾಕ್ಯದಂತೆ ನಾವು ಭಾರತ ದೇಶದಿಂದ ಕ್ಷಯ ರೋಗವನ್ನು ನಿರ್ಮೂಲಕ ಮಾಡಲು ಸಹಕಾರ ನೀಡಲೇಬೇಕು. ನಿರಂತರ ಪ್ರಚಾರ ಮತ್ತು ತಿಳುವಳಿಕೆ ನೀಡುವುದರಿಂದ ಕ್ಷಯವನ್ನು ನಿರ್ಮೂಲನೆ ಮಾಡಲು ಸಾಧ್ಯ. ಪಲ್ಸ್ ಪೋಲಿಯೋ ಅಭಿಯಾನ ಮಾಡಿ ಬಹುತೇಕ ನಾವು ಪೋಲಿಯೋ ರೋಗವನ್ನು ನಿರ್ಮೂಲನೆ ಮಾಡಿದ್ದೇವೆ. ಹಲವಾರು ವರ್ಷದಿಂದ ದೇಶದಾದ್ಯಂತ ಒಂದೇ ಒಂದು ಪೋಲಿಯೋ ಕೇಸ್ ಗಳು ಕಂಡು ಬಂದಿಲ್ಲ. ಇದೇ ರೀತಿ ಮುಂದೊಂದು ದಿನ (ಬಹುಷಃ ೨೦೨೫ರ ಹೊತ್ತಿಗೆ) ಮಾರಣಾಂತಿಕ, ಸಾಂಕ್ರಾಮಿಕ ಕ್ಷಯ ರೋಗವನ್ನು ಸಂಪೂರ್ಣ ನಿರ್ಮೂಲ ಮಾಡಬಹುದಾಗಿದೆ.