ನಮ್ಮ ದೇಹದ ರಕ್ಷಾಕವಚ - ಚರ್ಮ

ನಮ್ಮ ದೇಹದ ರಕ್ಷಾಕವಚ - ಚರ್ಮ

ಚರ್ಮವು ನಮ್ಮ ಪಂಚೇಂದ್ರಿಯಗಳಲ್ಲಿ ಒಂದು. ನಾವು ಪ್ರಪಂಚದಾದ್ಯಂತ ಇರುವ ಮನುಷ್ಯರನ್ನು ಗಮನಿಸಿದರೆ ಅವರೆಲ್ಲರ ಚರ್ಮದ ಬಣ್ಣವು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಕೆಲವೆಡೆ ಗಾಢ ಕಪ್ಪು ಬಣ್ಣವಿದ್ದರೆ, ಕೆಲವೆಡೆ ಸ್ವಲ್ಪ ಕಪ್ಪು, ಕೆಲವರು ಗೋಧಿ ಬಣ್ಣ, ಕೆಲವು ಮಂದಿ ಬಿಳಿ ಚರ್ಮದವರು. ನಮ್ಮ ದೇಶದಲ್ಲಿ ಗೋಧಿ ವರ್ಣದವರೇ ಅಧಿಕ ಸಂಖ್ಯೆಯಲ್ಲಿ ಕಂಡು ಬರುತ್ತಾರೆ. ಕವಿಗಳಿಗೆ ತಮ್ಮ ಕವನಗಳನ್ನು ಬರೆಯುವಾಗ ಹಲವಾರು ಸಲ ಶ್ವೇತವರ್ಣದ ಸುಂದರಿ, ಕೃಷ್ಣವೇಣಿ (ಕೃಷ್ಣನ ಮೈ ಬಣ್ಣ ತುಸು ಕಪ್ಪು-ನೀಲಿ) ಎಂದೆಲ್ಲಾ ಚರ್ಮದ ಬಣ್ಣದ ಮೇಲೆ ವರ್ಣಿಸುತ್ತಾರೆ. 

ವೆಂಕಟೇಶ ಪುರಾಣದಲ್ಲಿ ಪದ್ಮಾವತಿಯು ಕಪ್ಪಾಗಿದ್ದರೂ ಮುಖವು ಕಳೆಯುಳ್ಳದ್ದಾಗಿತ್ತೆಂತಲೂ ಲಕ್ಷ್ಮಿಯು ಬೆಳ್ಳಗಿದ್ದಳೆಂದೂ ವರ್ಣಿಸುತ್ತಾರೆ. ಅನಾದಿ ಕಾಲದಿಂದಲೂ ಈ ಚರ್ಮದ ಬಣ್ಣದ ಮೂಲಕ ವರ್ಣವನ್ನು ವಿಂಗಡಿಸುವ ಕೆಲಸಗಳು ಆಗುತ್ತಲೇ ಇವೆ. ಈ ವರ್ಣಭೇಧ ನೀತಿಯಿಂದಾಗಿ ಹಲವಾರು ಯುದ್ಧಗಳೇ ಆಗಿಹೋಗಿವೆ. ಬಿಳಿ ವರ್ಣದವರ ಹಾಗೂ ಕಪ್ಪು ವರ್ಣದವರ ನಡುವಿನ ಕಾಳಗಕ್ಕೆ ಇತಿಹಾಸಗಳೇ ಸಾಕ್ಷಿ. ಬ್ರಿಟೀಷರು ಭಾರತಕ್ಕೆ ಬಂದಾಗ ನಮ್ಮನ್ನು ಅವರು ಕಪ್ಪು ವರ್ಣದವರೆಂದೇ ಗುರುತಿಸುತ್ತಿದ್ದರು. ಇದೆಲ್ಲಾ ಪಕ್ಕಕ್ಕಿಟ್ಟು ನಾವಿಂದು ನಮ್ಮ ಚರ್ಮದ ಕಾರ್ಯಕ್ಷಮತೆಯ ಬಗ್ಗೆ ಗಮನಹರಿಸೋಣ.

ನಮ್ಮ ದೇಹದ ಮೇಲೆ ಆವರಿಸಿಕೊಂಡಿರುವ ಚರ್ಮವು ಎರಡು ತರಹದ ಪದರಗಳನ್ನು ಒಳಗೊಂಡಿದೆ. ಹೊರ ಭಾಗಕ್ಕೆ ಎಪಿಡರ್ಮಿಸ್ (Epidermis) ಎಂದೂ ಒಳ ಪದರಕ್ಕೆ ಡರ್ಮಿಸ್ (Dermis) ಎಂದು ಕರೆಯುತ್ತಾರೆ. ಡರ್ಮಿಸ್ ನ ಕೆಳಗಡೆ ಹೈಪೋ ಡರ್ಮಿಸ್ (Hypodermis) ಎಂಬ ಭಾಗವು ಇರುತ್ತದೆ. ಡರ್ಮಿಸ್ ನಲ್ಲಿ ನಾಲ್ಕು ಪದರಗಳು ಇರುತ್ತದೆ.

ನಮ್ಮ ದೇಹದ ಚರ್ಮವು ಎಲ್ಲಾ ಕಡೆಗಳಲ್ಲಿ ಒಂದೇ ರೀತಿಯಾಗಿ ಇರುವುದಿಲ್ಲ. ಮುಂಗೈ ಮತ್ತು ಅಂಗಾಲುಗಳಲ್ಲಿ ದಪ್ಪವಾಗಿರುತ್ತವೆ. ಯಾವ ಭಾಗವನ್ನು ನಾವು ಹೆಚ್ಚಾಗಿ ಬಳಸುತ್ತೇವೋ ಉದಾಹರಣೆಗೆ ನಡೆಯುವ ಪಾದದ ಚರ್ಮ, ಮುಂಗೈ ಇತ್ಯಾದಿಗಳು ದಪ್ಪವಾಗಿರುತ್ತವೆ. ಮಗು ಹುಟ್ಟಿದಾಗ ಚರ್ಮವು ಬಹಳ ಮೃದುವಾಗಿರುತ್ತದೆ. ನಂತರ ಕ್ರಮೇಣ ನಡೆದಾಡಲು ಪ್ರಾರಂಭ ಮಾಡುವಾಗ ಪಾದದ ಕೆಳಭಾಗಗಳು ದಪ್ಪವಾಗುತ್ತಾ ಹೋಗುತ್ತವೆ. ನಾವು ದೊಡ್ಡವರಾಗುತ್ತಿರುವಂತೆ ಮೈ ಮೇಲಿನ ಚರ್ಮದಲ್ಲಿರುವ ಕೂದಲುಗಳು ಹೆಚ್ಚಾಗುತ್ತಾ ಹೋಗುತ್ತವೆ. ತಲೆಯ ಮೇಲೆ ಕೂದಲು, ಕಣ್ಣಿನ ಮೇಲೆ ಹುಬ್ಬಿನಲ್ಲಿ ಕೂದಲುಗಳು ಬೆಳೆಯುತ್ತಾ ಇರುತ್ತವೆ. ಹುಡುಗರು ಪ್ರೌಢಾವಸ್ತೆಗೆ ಬಂದಾಗ ಗಡ್ಡ ಹಾಗೂ ಮೀಸೆಗಳು ಬೆಳೆಯುತ್ತವೆ. ಚರ್ಮವು ಒಂದು ರೀತಿಯಲ್ಲಿ ಎಲಾಸ್ಟಿಕ್ ಇದ್ದಂತೆ. ನಾವು ದಪ್ಪ ಆದಂತೆ ಅದು ವಿಸ್ತಾರವಾಗುತ್ತಾ ಹೋಗುತ್ತದೆ. ಸಪೂರವಾದರೆ ಕುಗ್ಗುತ್ತದೆ. ಗರ್ಭಿಣಿ ಸ್ತ್ರೀಯರಲ್ಲಿ ಗಮನಿಸಿದರೆ ಹೊಟ್ಟೆಯೊಳಗೆ ಮಗು ಇದ್ದಾಗ ಚರ್ಮವು ಹಿಗ್ಗುತ್ತದೆ. ನಂತರ ಹೆರಿಗೆಯಾದ ಬಳಿಕ ಹೊಟ್ಟೆಯ ಭಾಗದ ಚರ್ಮವು ಸಡಿಲವಾಗುತ್ತದೆ. 

ನಮ್ಮ ದೇಹಕ್ಕೆ ಚರ್ಮವು ಒಂದು ರಕ್ಷಣಾ ಕವಚ ಇದ್ದಂತೆ. ಇದು ನಮ್ಮ ದೇಹವನ್ನು ರಾಸಾಯನಿಕ ಹಾಗೂ ಭೌತಿಕ ಆಘಾತಗಳಿಂದ ರಕ್ಷಿಸುತ್ತದೆ. ಹಲವಾರು ಬಗೆಯ ಸೂಕ್ಷ್ಮಾಣುಗಳು ನಮ್ಮ ದೇಹದೊಳಗೆ ಸೇರದಂತೆ ರಕ್ಷಾಕವಚದಂತೆ ಕೆಲಸಮಾಡುತ್ತದೆ. ಚರ್ಮದಿಂದ ನಮಗೆ ಸ್ವರ್ಷಜ್ಞಾನದ ಅನುಭವವಾಗುತ್ತದೆ. ಕುಷ್ಟರೋಗಿಗಳಲ್ಲಿ ಈ ಸ್ಪರ್ಷ ಜ್ಞಾನವು ಇರುವುದಿಲ್ಲ. ನಮ್ಮ ದೇಹಕ್ಕೆ ಬೇಕಾದ ‘ಡಿ' ಜೀವಸತ್ವವು ತಯಾರಾಗುವುದು ಚರ್ಮದಲ್ಲೇ. ಕೆಲವು ಜೀವಿಗಳಲ್ಲಿ (ಕಪ್ಪೆ ಇತ್ಯಾದಿ) ಚರ್ಮದ ಮೂಲಕ ಉಸಿರಾಟದ ಕ್ರಿಯೆಯೂ ನಡೆಯುತ್ತದೆ. ಸೂರ್ಯನ ಅತಿನೇರಳೆ (Ultraviolet) ಕಿರಣಗಳಿಂದಲೂ ನಮ್ಮ ದೇಹವನ್ನು ಬಹುಮಟ್ಟಿಗೆ ರಕ್ಷಿಸುತ್ತದೆ. ನಮ್ಮ ದೇಹಕ್ಕೆ ಬೇಕಾದ ನೀರಿನ ಪ್ರಮಾಣವನ್ನು ಕಾಯ್ದುಕೊಳ್ಳುವಲ್ಲಿ ಚರ್ಮದ ಪಾತ್ರ ಪ್ರಮುಖ. ವಿಪರೀತ ಸೆಕೆಯಾದಾಗ ಚರ್ಮದ ಸೂಕ್ಷ್ಮ ರಂಧ್ರಗಳಿಂದ ಬೆವರು ಹೊರ ಬಂದು ನಮ್ಮ ದೇಹದ ಉಷ್ಣತೆಯನ್ನು ಕಾಪಾಡುತ್ತದೆ. ಚಳಿಗಾಲದಲ್ಲಿ ಚರ್ಮವು ನಮಗೆ ವಿಪರೀತ ಚಳಿಯಾಗಿ ನಡುಗುವುದರಿಂದ ಬಹುಪಾಲು ತಪ್ಪಿಸುತ್ತದೆ.  

ನಮ್ಮ ದೇಹಕ್ಕೆ ವಯಸ್ಸಾಗುತ್ತಿದ್ದಂತೆ ಚರ್ಮವು ಸುಕ್ಕುಗಟ್ಟಲು ಪ್ರಾರಂಭವಾಗುತ್ತದೆ. ಬಹಳಷ್ಟು ಜನರಿಗೆ ಚರ್ಮವು ನಯವಾಗಿರಬೇಕೆಂಬ ಆಸೆ ಇರುತ್ತದೆ. ಅದಕ್ಕಾಗಿ ಹಿಂದಿನ ಕಾಲದಿಂದಲೂ ಚರ್ಮದ ಪೋಷಣೆಗಾಗಿ ಜನರು ಹಲವಾರು ಸೌಂದರ್ಯ ಸಾಧನಗಳನ್ನು ಕಂಡು ಹಿಡಿದಿದ್ದಾರೆ. ಚರ್ಮವು ಸುಂದರವಾಗಿ ಕಾಣಬೇಕೆಂದು ರಾಣಿ ಕ್ಲಿಯೋಪಾತ್ರ ಕತ್ತೆಯ ಹಾಲಿನಿಂದ ಸ್ನಾನ ಮಾಡುತ್ತಿದ್ದಳಂತೆ. ಹಲವಾರು ಮಹಾರಾಜರು ಮತ್ತು ಮಹಾರಾಣಿಯರು ತಮ್ಮ ಚರ್ಮದ ಹೊಳಪನ್ನು ಕಾಪಾಡಲು ಸುಗಂಧ ದ್ರವ್ಯಗಳನ್ನು ಬಳಕೆ ಮಾಡುತ್ತಿದ್ದರು. 

ನಮ್ಮ ಚರ್ಮದಲ್ಲಿ ಎಪೋಕ್ರಿನ್ (Apocrine) ಮತ್ತು ಎಕ್ರಿನ್ (Eccrine) ಎಂಬ ಗ್ರಂಥಿಗಳಿವೆ. ಚರ್ಮದಲ್ಲಿ ವಾಸನಾರಹಿತ ದ್ರವಗಳನ್ನು ಈ ಗ್ರಂಥಿಗಳು ಸ್ರವಿಸುತ್ತವೆ. ಆದರೆ ಬ್ಯಾಕ್ಟೀರಿಯಾ ಇದರ ಜೊತೆ ಸೇರಿ ದುರ್ವಾಸನೆಯನ್ನು ಮೂಡಿಸುತ್ತದೆ. ಇದರಿಂದಾಗಿಯೇ ಹೆಚ್ಚು ಬೆವರುವ ವ್ಯಕ್ತಿಗಳ ಮೈಯಿಂದ ದುರ್ವಾಸನೆ ಬರುತ್ತಿರುತ್ತದೆ. ಇವರು ಚರ್ಮದ ಸುರಕ್ಷತೆಗಾಗಿ ದಿನಕ್ಕೆರಡು ಬಾರಿ ಸಾಬೂನಿನಿಂದ ಸ್ನಾನ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳಿತು. 

ತಲೆಯ ಮೇಲ್ಭಾಗದ ಚರ್ಮದಲ್ಲಿ ಕೂದಲುಗಳು ಬೆಳೆಯುತ್ತವೆ. ಮಹಿಳೆಯರಿಗೆ ಈ ಕೂದಲು ಒಂದು ಸೌಂದರ್ಯ ಸಾಧನವೇ ಸರಿ. ಮೊದಲಿನ ಕಾಲದಲ್ಲಿ ಉದ್ದವಾದ ಕೂದಲಿನಿಂದ ಜಡೆ ಹಾಕಿಸಿಕೊಳ್ಳುವುದೇ ಫ್ಯಾಶನ್ ಆಗಿತ್ತು. ಆದರೆ ಕಾಲ ಬದಲಾಗುತ್ತಾ ಕೂದಲಿಗೆ ಕತ್ತರಿ ಹಾಕತೊಡಗಿದರು. ಆ ಕೂದಲನ್ನು ನೇರ ಮಾಡುವುದು, ಸುರುಳಿ (ಕರ್ಲಿ) ಮಾಡುವುದು, ಬಣ್ಣವನ್ನು ಬದಲಾಯಿಸುವುದನ್ನೂ ಮಾಡಲು ಶುರು ಮಾಡಿದರು. ಕೆಲವೊಮ್ಮೆ ಇದಕ್ಕೆ ಬಳಸುವ ರಾಸಾಯನಿಕಗಳಿಂದ ಚರ್ಮಕ್ಕೆ ಅಲರ್ಜಿಯಾಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ತುರಿಕೆ, ಕಜ್ಜಿ ಮೊದಲಾದ ಸಮಸ್ಯೆಗಳು ತಲೆದೋರುತ್ತವೆ. ಕೂದಲು ಉದುರಲೂ ಬಹುದು. ಈ ಕಾರಣದಿಂದ ನಾವು ಚರ್ಮಕ್ಕೆ ಉಪಯೋಗಿಸುವ ಕ್ರೀಂ, ಎಣ್ಣೆ ಅಥವಾ ಯಾವುದೇ ವಸ್ತುಗಳನ್ನು ಬಳಕೆಗೆ ಮೊದಲು ಪರೀಕ್ಷಿಸುವುದು ಒಳಿತು. 

ಚರ್ಮದ ಸ್ವಾಸ್ಥ್ಯವನ್ನು ಕಾಪಾಡುವುದು ಅತೀ ಮುಖ್ಯ. ಯಾವುದೋ ನಕಲಿ, ಕಳಪೆಯಾದ ಸೌಂದರ್ಯ ವರ್ಧಕ ಕ್ರೀಂ, ಮದ್ದುಗಳು, ಮಾತ್ರೆಗಳನ್ನು ಬಳಸಿ ನಿಮ್ಮ ಚರ್ಮದ ತ್ವಚೆಯನ್ನು ಹಾಳು ಮಾಡಬೇಡಿ. ಚರ್ಮವನ್ನು ಚೆನ್ನಾಗಿ ಕಾಪಾಡಿಕೊಂಡರೆ ನಿಮ್ಮ ದೈಹಿಕ ಆರೋಗ್ಯವೂ ಉತ್ತಮ ರೀತಿಯಲ್ಲಿರುತ್ತದೆ. 

ಚಿತ್ರ ಕೃಪೆ: ಅಂತರ್ಜಾಲ ತಾಣ