ನಮ್ಮ ಪುಟ್ಟ ಪಾಪಚ್ಚಿ- ಸಂಪದೆ !

ನಮ್ಮ ಪುಟ್ಟ ಪಾಪಚ್ಚಿ- ಸಂಪದೆ !

ಬರಹ

ನಮ್ಮ ಪುಟ್ಟ ಪಾಪಚ್ಚಿ- ಸಂಪದೆ !

ಪ್ರತಿ ಕಾಲಘಟ್ಟದಲ್ಲಿ ನಿಂತು ಈ ವಿಸ್ಮಯ ಜಗತ್ತನ್ನು ವೀಕ್ಷಿಸಿದಾಗ ಅದರ ವಿಸ್ತಾರದ ಅರಿವಾಗುತ್ತದೆ. ಕೆಲವೊಂದು ವಿದ್ಯಮಾನಗಳಲ್ಲಿ ಪ್ರಕೃತಿದತ್ತವಾದ ಹಲವು ಮಾರ್ಪಾಟುಗಳು ನಮ್ಮ ಗಮನವನ್ನು ಸೆಳೆಯುತ್ತವೆ. ನಮ್ಮ ಅರಿವಿಲ್ಲದೆಯೇ ಆಗುವ ನಿರಂತರ ಬದಲಾವಣೆಗಳೊಂದೆಡೆಯಾದರೆ, ಇನ್ನು ಕೆಲವು ಮಾರ್ಪಟುಗಳನ್ನು ನಾವೇ ಕಾಲಕಾಲಕ್ಕೆ ಮಾಡುವ ಅನಿವಾರ್ಯತೆಯನ್ನು ಮನಗಾಣುತ್ತೇವೆ. ಎಲ್ಲಾ ಬೆಳೆಯುತ್ತಿರುವ ಜೀವಕೋಟಿಗಳೆಲ್ಲಾ ಮಾಡಲೇಬೇಕಾದ ಪ್ರಕ್ರಿಯೆ ಇದು ! ಇವನ್ನೇ ನಾವು ಜೀವಂತಿಕೆಯ ಸಾಕ್ಷಿಯ ಪ್ರತೀಕಗಳೆಂದು ಕರೆಯುವುದು ಕೂಡ ! ಅಂತಹ ಚಿಕ್ಕ ಬದಲಾವಣೆ ನಮ್ಮ 'ಸಂಪದ' ದಲ್ಲೂ ಮೂಡಿಬಂದಿದೆ. ಶ್ರೀಯುತ. ನಾಡಿಗರು ಅದನ್ನು ಅತ್ಯಂತ ಪ್ರಭಾವಶಾಲಿಯಾಗಿ ನಿರ್ವಹಿಸಿರುವುದು ನಿಜಕ್ಕೂ ಶ್ಲಾಘನೀಯ ! ಸಂಪದದ ಬಳಗದ ಎಲ್ಲಾ ಸದಸ್ಯರಿಗೂ 'ಶುಭ'ಕೋರಿ ಈ ಹೊಸ ದಿಟ್ಟ ಹೆಜ್ಜೆಯನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತೇನೆ. ನನ್ನ ಪ್ರೀತಿಯ ಕಾಣಿಕೆಯಾಗಿ ಈ ಕವಿತೆಯನ್ನು ಈ ಸಂದರ್ಭದಲ್ಲಿ 'ಆಶೀರ್ವಾದಪೂರ್ವಕವಾಗಿ' ಸಮರ್ಪಿಸುತ್ತಿದ್ದೇನೆ. ಆಶೀರ್ವಾದವನ್ನು ಬೇಡವೆನ್ನುವ ಪರಿಪಾಟ ನಮ್ಮ ಭಾರತೀಯ ಸಂಸ್ಕೃತಿಯಲ್ಲಿಲ್ಲ !

ಬನ್ನಿರಿಲ್ಲಿ ನೋಡಿರೆಲ್ಲಾ ಮುದ್ದು 'ಸಂಪದೆಯನು'!
ಎಚ್.ಪಿ.ಎನ್ನರ ತೋಳಿನಿಂದ ಪುಟಿದೆದ್ದ ಮಿಂಚನು !
ಹುಸಿನಗು, ಬೆರಗು ಕಣ್ಣು, ತಲೆತುಂಬಾ ಕರಿಗೂದಲು!
ಹಾಲಗಲ್ಲ, ಬಾಯಿಯೊಳಗೆ ಇಣಕಿದೊಂದ
ಹಲ್ಲನು !

ಕೆನ್ನೆ ಕೆಂಪು, ಪೂಸಿದ ಟಾಲ್ಕಂ ಕಂಪು, ಅದರ ಮೇಲೆ 'ದೃಶ್ಟಿಬೊಟ್ಟು' !
ಕಣ್ಣಿನಂಚಿಗೆ ಕಾಡಿಗೆ, ಕಾಲಿನ ಗೆಜ್ಜೆಯಿಂಚರ !
ಕೈಯಲೋಂದೇ ಬಳೆ, ಮತ್ತೆ ಪುಟಾಣಿ ಜರಿಯ ಲಂಗವು !

ವಾರವೆಲ್ಲಾ ಕಾಣಲಿಲ್ಲ ಹೋದಳಿವಳೆಲ್ಲಿಗೆ ?
ಇಂದು ನೋಡೆ, ಚಿಮ್ಮಿ ಕುಣಿದು ನೋಟದಲ್ಲೇ ಇರಿವಳು !
ನಗಿಸುವಳೆಮ್ಮ ಬೀಳುತೇಳುತ, ಅವಳೀಗ ಪುಟ್ಟ ಬಾಲೆ ?
ನಮ್ಮೆಲ್ಲರ ಕಣ್ಮಣಿ !

ಕರೆದೊಡನೆ 'ಓ' ಎನ್ನಳು, ಅವಳಿಗಿನ್ನೂ ಮಾತು ಬಾರದು
ಮಾತಿನ್ಹಂಗ್ಯಾಕೆ ಕಣ್ಣೆ ಕಥೆಯ ಪೇಳ್ವುದು !
ನಾವು ನೀವು ಅವರು ಇವರು ಎಲ್ಲಾ ಅವಳ ಬಲ್ಲೆವು
'ಭ್ರಮೆಯೊ ಏನೋ,' ನಮ್ಮ ನೆನಪು ಅವಳಿಗೆಲ್ಲಿ ? ಎಂಬೆವು !

ಲಕ್ಷ್ಮೀವೆಂಕಟೇಶ ( ವೆಂಕಟೇಶ )