ನಮ್ಮ ಮತ ಯಾರಿಗೆ?

ನಮ್ಮ ಮತ ಯಾರಿಗೆ?

ಬರಹ

ನಮ್ಮ ಮತ ಯಾರಿಗೆ?

ಈ ಚುನಾವಣೆಗಳಲ್ಲಿ ಎದ್ದು ಕಾಣುತ್ತಿರುವ ಅತಿ ದೊಡ್ಡ ಆತಂಕಕಾರಿ ಸಂಗತಿ ಎಂದರೆ, ರಾಜ್ಯದಲ್ಲಿ ಪಕ್ಷ ರಾಜಕಾರಣ ಚಿಂದಿ ಚಿಂದಿಯಾಗುತ್ತಿರುವುದು. ರಾಜ್ಯದ ರಾಜಕೀಯ ಇತಿಹಾಸದಲ್ಲೇ ಹಿಂದೆಂದೂ ಕಾಣದಿದ್ದಷ್ಟು - ಬಹುಶಃ, 1969ರ ಕಾಂಗ್ರೆಸ್ ವಿಭಜನೆಯ ನಂತರ ನಡೆದ 1971ರ ಚುನಾವಣಾ ಸಂದರ್ಭದ ಹೊರತಾಗಿ - ಪ್ರಮಾಣದಲ್ಲಿ ಚುನಾವಣಾ ಟಿಕೆಟ್‌ಗಾಗಿ ಪಕ್ಷಾಂತರ ನಡೆದಿದೆ. ಅದೂ, ಸಣ್ಣ ಪುಟ್ಟವರಿಂದಲ್ಲ; ಪಕ್ಷಗಳ ಮೊದಲ ಸಾಲಿನ ಅಥವಾ ಪ್ರಮುಖ ನಾಯಕರಿಂದಲೇ ಎಂದರೆ, ಯಾರಾದರೂ ನಿಜವಾಗಿ ಆತಂಕ ಪಡುವ ವಿಷಯವೇ ಆಗಿದೆ. ಕಾಂಗ್ರೆಸ್ ಪಕ್ಷವಂತೂ ಇತರ ಪಕ್ಷಗಳಿಗೆ ಅಭ್ಯರ್ಥಿಗಳನ್ನು ಒದಗಿಸುವ 'ಮಾತೃ' ಪಕ್ಷವಾಗಿ ಹೋಗಿದೆ! ಎಂ. ಮಹದೇವು, ಜಿ.ಮಾದೇಗೌಡ ಹಾಗೂ ನಾಗಮಾರಪಲ್ಲಿ ಅವರಂತಹ, ಬಹುಕಾಲ ಕಾಂಗ್ರೆಸ್ ಪಕ್ಷದಲ್ಲೇ ಬೇರು ಬಿಟ್ಟಿದ್ದ ನಾಯಕರು ಬೇರು ಕಿತ್ತುಕೊಂಡು ಹೊರಟಿದ್ದಾರೆಂದರೆ, ಕಾಂಗ್ರೆಸ್ ಪಕ್ಷದೊಳಗೆ ಸಣ್ಣದೊಂದು ಭೂಕಂಪವೇ ಆಗಿರಬೇಕು! ಪಕ್ಷ ಒಂದಿಷ್ಟು ಹೊಸ ಮುಖಗಳಿಗೆ ಅವಕಾಶ ಮಾಡಿಕೊಡುವ ಧೈರ್ಯ ತೋರಿಸಬೇಕು ಅಥವಾ ಪಕ್ಷದೊಳಗಿನ ಪ್ರಭಾವಿ ಗುಂಪೊಂದು ಚುನಾವಣೆ ನಂತರ ತನ್ನ ವಿರುದ್ಧ ಮೂಡಬಹುದಾದ ಗುಂಪನ್ನು ಈಗಲೇ ನಿಯಂತ್ರಿಸುವ ಪ್ರಯತ್ನ ಮಾಡುತ್ತಿರಬೇಕು! ಜಾಫರ್ ಷರೀಫರಂತಹ ಹಿರಿಯ ನಾಯಕರು ತಾವು ಪಕ್ಷ ಬಿಡುವುದಾಗಿ ಘೋಷಿಸಿದ್ದುದು, ಇಂತಹ ಕಾರಣಗಳ ಮೇಲೇ ತಾನೆ? ಅವರ ಪ್ರಕಾರ ಪಕ್ಷದಲ್ಲಿ ಎಲ್ಲವೂ ಸರಿಯಾಗಿಲ್ಲ!

ಆದರೆ, ಈ ಹಿರಿಯ ನಾಯಕರು ಪಕ್ಷದ ನಡಾವಳಿ ಬಗ್ಗೆ ಚುನಾವಣೆ ಹೊತ್ತಿಗಷ್ಟೇ ಚುರುಕಾಗುವುದರ ಮರ್ಮವಾದರೂ ಏನು? ಚುನಾವಣೆ ಹೊತ್ತಿಗೆ ತಮಗೆ ಬೇಕಾದವರಿಗೆಲ್ಲ - ಮಕ್ಕಳು, ಮೊಮ್ಮಕ್ಕಳು ಮತ್ತು ನೆಂಟರಿಷ್ಟರೂ ಸೇರಿದಂತೆ - ಟಿಕೆಟ್ ಕೊಡಿಸುವುದರ ಮೂಲಕ ಪಕ್ಷದಲ್ಲಿ ಸರಿಯಾಗಿರದ ಎಲ್ಲವನ್ನೂ ಸರಿಪಡಿಸಕೊಳ್ಳಬಹುದು ಎಂಬ ನಂಬಿಕೆ! ಹಾಗಾಗಿಯೇ, ಜಾಫರ್ ಷರೀಫರಂತಹ ವಯೋವೃದ್ಧ ನಾಯಕರೇ ಇಂದು 'ಮೌಲ್ಯ'ಗಳ ಬಗ್ಗೆ ಮಾತನಾಡಿದರೂ ಸಹ, ಜನ ಅದನ್ನು ನಂಬುವುದಿಲ್ಲ. ಏಕೆಂದರೆ, ಈ ಎಲ್ಲರೂ ಸೇರಿಯೇ ರಾಜಕಾರಣವನ್ನು ಸಂಪೂರ್ಣವಾಗಿ ಕುಟುಂಬ, ಜಾತಿ, ಧರ್ಮಗಳ ಹೆಸರಲ್ಲಿ, ಕೋಟಿಗಟ್ಟಲೆ ಹಣಕ್ಕೆ ಹರಾಜು ಹಾಕುತ್ತಿರುವ ಮೂಲಕ ಪ್ರಜಾಪ್ರಭುತ್ವದ ಅಡಿಗಲ್ಲುಗಳನ್ನೇ ಜಖಂ ಮಾಡುತ್ತಿರುವ ದೃಶ್ಯವನ್ನು ಜನ ಕಣ್ಣಾರೆ ಕಾಣುತ್ತಿದ್ದಾರೆ. ಚುನಾವಣೆ ಎಂದರೆ ಇಂದು ಮತ್ತೇನೂ ಆಗಿರದೆ, ಕೋಟ್ಯಾಧೀಶ್ವರರ ಭೀಕರ ಕಾಳಗವೇ ಆಗಿದೆ. ಇನ್ನೂ ಕಾಳಗ ಶುರುವಾಗುವ ಬಹುಮುನ್ನವೇ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಪಹರೆಯ ನಡುವೆಯೂ ರಾಜ್ಯಾದ್ಯಂತ ಕೋಟ್ಯಾಂತರ ರೂಪಾಯಿಗಳ ಬೆಲೆಯ ನಗದು, ಸೀರೆ, ಮದ್ಯ ಇತ್ಯಾದಿಗಳ ಸರಬರಾಜು ನಡೆದೇ ಇದೆ ಎಂದರೆ, ಈ ಕಾಳಗದಲ್ಲಿ ಗಣರಾಜ್ಯದ, ಪ್ರಜಾಪ್ರಭುತ್ವದ, ಶಾಸನಾಡಳಿತದ, ಜನಸೇವೆಯ ಯಾವ ಮೌಲ್ಯಗಳು ಉಳಿದಾವು?

ಹಾಗಾಗಿಯೇ, ಎಷ್ಟೇ ಹತಾಶೆಯಿದ್ದರೂ, ಈ ಚುನಾವಣೆಗಳಲ್ಲಿ 'ಮೌಲ್ಯ'ಗಳಿಗಾಗಿಯೇ ಸ್ಪರ್ಧಿಸಿರುವ 'ಸರ್ವೋದಯ ಕರ್ನಾಟಕ', 'ಸುವರ್ಣಯುಗ', 'ಲೋಕ ಪರಿತ್ರಾಣ'ದಂತಹ ಪಕ್ಷಗಳು ಮತ್ತು ರವಿಕೃಷ್ಣಾ ರೆಡ್ಡಿ (ಜಯನಗರ) ಹಾಗೂ ಆರ್.ಪಿ.ವೆಂಕಟೇಶಮೂರ್ತಿ (ಹಾಸನ)ಯವರಂತಹ ವ್ಯಕ್ತಿಗಳು ಗಮನ ಸೆಳೆಯುತ್ತಾರೆ. ಈ ಚುನಾವಣೆಗಳಲ್ಲಿ ಇವರ ಗೆಲವು ಅಸಾಧ್ಯವೆನಿಸುವಷ್ಟರ ಮಟ್ಟಿಗೆ (ಬಹುಶಃ ಶ್ರೀರಂಗಪಟ್ಟಣದ ನಂಜುಂಡೇ ಗೌಡ ಹಾಗೂ ಮೇಲ್ಕೋಟೆಯ ಪುಟ್ಟಣ್ಣಯ್ಯರ ಹೊರತಾಗಿ) ಇವರೆಲ್ಲ ದುರ್ಬಲ ಅಭ್ಯರ್ಥಿಗಳೇ, ನಿಜ. ಆದರೆ ಇವರೆಲ್ಲ ವ್ಯವಸ್ಥೆಯ ಭ್ರಷ್ಟತೆಯನ್ನು ಇನ್ನೂ ಸಹಿಸುತ್ತಾ ಕೂತರೆ, ಸಮಾಜಕ್ಕೆ ಸರ್ವ ರೀತಿಯಲ್ಲೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಪ್ರಾಮಾಣಿಕ ಆತಂಕದಿಂದ ನಮ್ಮೆಲ್ಲರ ಧ್ವನಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಇವರ್ಯಾರೂ, ಸದ್ಯಕ್ಕೆ ಕೋಟ್ಯಾಧೀಶರೂ ಅಲ್ಲ, ಪಟ್ಟಭದ್ರರೂ ಅಲ್ಲ. ಹಾಗಾಗಿ, ಸದ್ಯದ ವ್ಯವಸ್ಥೆ ಬಗ್ಗೆ ಆತಂಕಿತರಾದವರೆಲ್ಲ, ಅವರ ಸೋಲು ಗೆಲುವುಗಳ ಸಾಧ್ಯತೆಗಳನ್ನು ಪರಿಗಣಿಸದೇ, ಅವರಿಗೆ ಮತ ಹಾಕಬೇಕಾಗಿದೆ. ಇವರು ನಮ್ಮೆಲ್ಲರ ಪರವಾಗಿ ಇಂದು ಸಣ್ಣ ಪ್ರಮಾಣದಲ್ಲಾದರೂ ಆರಂಭಿಸಿರುವ ಹೋರಾಟ, ಮುಂದಿನ ದಿನಗಳಲ್ಲಿ ದೊಡ್ಡ ರೂಪ ತಾಳುವಂತೆ ನಾವು ಮಾಡಬಹುದಾದದ್ದು ಸದ್ಯಕ್ಕೆ ಹೀಗೆ ಮಾತ್ರ.

ಮಿಕ್ಕಂತೆ ಇಂದಿನ ಜಟಿಲ ಪರಿಸ್ಥಿತಿಯಲ್ಲಿ, ಪಕ್ಷ ಮತ್ತು ಅಭ್ಯರ್ಥಿ - ಈ ಎರಡನ್ನೂ ನೋಡಿ ಮತ ಹಾಕುವುದೇ ಒಳ್ಳೆಯದೆಂದು ತೋರುತ್ತದೆ. ಕಳೆದ ಮೂರು - ಮೂರೂವರೆ ವರ್ಷಗಳಲ್ಲಿ ಸಮ್ಮಿಶ್ರ ಸರ್ಕಾರಗಳ ಹೆಸರಲ್ಲಿ ರಾಜ್ಯದ ಮೂರೂ ಪ್ರಮುಖ ಪಕ್ಷಗಳು ಆಡಿರುವ ಆಟಗಳ ಪರಿಯನ್ನು ನಾವು ನೋಡಿದ್ದೇವೆ. ವಿಶೇಷವಾಗಿ ಕಳೆದ ಒಂದೂವರೆ ವರ್ಷದಲ್ಲಿ ಎರಡನೇ ಸಮ್ಮಿಶ್ರ ಸರ್ಕಾರ ರಚನೆಯಾದ ಮತ್ತು ಇಪ್ಪತ್ತು ತಿಂಗಳ ನಂತರ ಅದು ದಿಢೀರನೆ ಕೊನೆಗೊಂಡ ಅಸಹ್ಯಕರ ರೀತಿ ನೀತಿಗಳನ್ನು ಗಮನಿಸಿದವರಿಗೆ, ಈ ಚುನಾವಣೆಗಳಲ್ಲಿ ಮತ ಹಾಕುವುದು ಎಷ್ಟು ಕಷ್ಟ ಎಂಬುದು ಅರಿವಾಗಿರುತ್ತದೆ. ಮುಖ್ಯವಾಗಿ ಬಳ್ಳಾರಿಯ ಇಬ್ಬರು ಗಣಿ ಉದ್ಯಮಿಗಳಿಂದ ಹರಿದು ಬಂದ ಅಪಾರ ಪ್ರಮಾಣದ ಹಣದ ಬೆಂಬಲದಿಂದ ಎಲ್ಲ ಪ್ರಾಥಮಿಕ ರಾಜಕೀಯ ತತ್ವಗಳನ್ನೂ - ಸಾಮಾನ್ಯ ನೈತಿಕತೆಯನ್ನೂ ಧಿಕ್ಕರಿಸಿ ರೂಪುಗೊಂಡ ಈ ಮೈತ್ರಿ, ರಾಜ್ಯ ರಾಜಕಾರಣವನ್ನು ಹೇಗೆ ಕೋಟ್ಯಾಂತರ ರೂಪಾಯಿಗಳ ದಂಧೆಯನ್ನಾಗಿ ಪರಿವರ್ತಿಸಿತು ಎಂಬುದನ್ನು ನಾವು ಕಂಡಿದ್ದೇವೆ. ಇದರಿಂದಾಗಿ, ಮೊದಲೇ ಕುಸಿದಿದ್ದ ರಾಜಕೀಯ ನೈತಿಕತೆ ಹೇಗೆ ಪಾತಾಳ ಮುಟ್ಟಿ, ಹುಟ್ಟಾ ರಾಜಕೀಯ ಕುತಂತ್ರಿಗಳ ಬಾಯಲ್ಲಿ ಹೇಗೆ ದಿನ ದಿನವೂ ಹೊಸ ಹೊಸ ವ್ಯಾಖ್ಯಾನಗಳನ್ನು ಪಡೆದು ಜನರಲ್ಲಿ ಜಿಗುಪ್ಸೆಯನ್ನುಂಟು ಮಾಡಿತು ಎಂಬುದನ್ನೂ ನೋಡಿದ್ದೇವೆ. ಹಾಗೇ, ಎರಡೂ ಕಡೆ ವ್ಯಕ್ತವಾದ ಅಧಿಕಾರದ ಹಪಾಹಪಿ ಎರಡೂ ಕಡೆಯ ಮುಖಂಡರನ್ನೂ ಹೇಗೆ ಎಲ್ಲ ನಾಚಿಕೆ ಬಿಟ್ಟು, ಮತ್ತೆ ಮತ್ತೆ ಎಲ್ಲ ರಾಜಕೀಯ ಮರ್ಯಾದೆಯ ಎಲ್ಲೆಗಳನ್ನೂ ಮೀರಿ ವರ್ತಿಸುವಂತೆ ಮಾಡಿತು ಎಂಬುದನ್ನೂ ಗಮನಿಸಿದ್ದೇವೆ. ಇಂದಿನ ಚುನಾವಣೆಗಳ ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿಗಳು ತಮ್ಮ ವೈಯುಕ್ತಿಕ ಜನಪ್ರಿಯತೆಗಾಗಿ ಖಜಾನೆಯ ಹಣವನ್ನು ತಮಗೆ ಬೇಕಾದವರಿಗೆಲ್ಲ ಹೇಗೆ ಎಗ್ಗಿಲ್ಲದೆ ಹಂಚಿದರು ಮತ್ತು ತಮ್ಮ ಅಧಿಕಾರಕ್ಕೆ ಕುತ್ತು ಬಂದಾಗ ಜನಶಕ್ತಿಯಲ್ಲಿ ನಂಬಿಕೆಯನ್ನೇ ಕಳೆದುಕೊಂಡವರಂತೆ, ಕಂಡ ಕಂಡ ದೇವರು ದೆವ್ವಗಳಿಗೆಲ್ಲ ಮೊರೆ ಹೋಗಿ; ಹೂವು - ಕುಂಕುಮ - ತೆಂಗಿನಕಾಯಿ - ದಕ್ಷಿಣೆಗಳ ರಾಶಿಯಲ್ಲಿ ಹೇಗೆ ಕಳೆದು ಹೋಗಿದ್ದರು ಎಂಬುದೂ ಜನರ ನೆನಪಿನಲ್ಲಿದೆ. ಹಾಗಾಗಿ ರಾಜ್ಯದ ಜನತೆ ಈಗ ವೈಚಾರಿಕವಾಗಿ ಪ್ರಬುದ್ಧವಾದ ಮತ್ತು ಸಾಮಾನ್ಯ ನೈತಿಕತೆಯ ಬಗ್ಗೆ ಕಿಂಚಿತ್ತಾದರೂ ಗೌರವವುಳ್ಳ ರಾಜಕೀಯ ನಾಯಕತ್ವಕ್ಕಾಗಿ ಕಾಯುತ್ತಿದೆ.

ಇಂತಹ ನಾಯಕತ್ವವನ್ನು ಕಾಂಗ್ರೆಸ್ ಕೊಡಬಲ್ಲದೇ ಎಂದು ನೋಡಿದರೆ, ಅದು ಕಳೆದ ಚುನಾವಣೆಗಳ ಸೋಲಿನಿಂದ ಏನೂ ಪಾಠ ಕಲಿತಂತೇ ಕಾಣುವುದಿಲ್ಲ. ಕಳೆದ ಬಾರಿಯ ಸೋಲು ಬರೀ ಆಕಸ್ಮಿಕವೇನೋ ಎಂಬ ನಿರಾಳತೆಯಲ್ಲಿ ಅದು ಆ ಹಳೆಯ ಪಕ್ಷವಾಗೇ ಉಳಿದಿದೆ! ಒಂದೇ ಗಮನಾರ್ಹ ಬದಲಾವಣೆ ಎಂದರೆ, ಈಗ ಅದರ ನಾಯಕತ್ವವನ್ನು ಅಷ್ಟೇನೂ ಹೆಸರು ಕೆಡಿಸಿಕೊಳ್ಳದ ಮತ್ತು ಒಂದಿಷ್ಟು ಸ್ವಾಭಿಮಾನಿಯಂತೆ ಕಾಣುವ ಜಾತ್ಯತೀತ ದೃಷ್ಟಿಯ ದಲಿತ ಮುಖಂಡರೊಬ್ಬರು ವಹಿಸಿಕೊಂಡಿದ್ದಾರೆ ಎನ್ನುವುದು. ತೀರಾ ಸಂಪ್ರದಾಯವಾದಿಯೂ ಅಲ್ಲದ ಹಾಗೇ ತೀರಾ ಆಧುನಿಕರೂ ಅಲ್ಲದ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಇಂದಿನ ಎಲ್ಲ ಪಕ್ಷಗಳ ನಾಯಕರ ಪೈಕಿ ಮುಖ್ಯಮಂತ್ರಿ ಸ್ಥಾನಕ್ಕೆ ಹೆಚ್ಚು ಅರ್ಹರಂತೆ ಕಾಣುತ್ತಾರೆ. ಆದರೆ ಅವರ ಪಕ್ಷ ಚುನಾವಣೆಗಳಲ್ಲಿ ಈ ಮೊದಲು ನಿರೀಕ್ಷಿಸಿದಂತೆ, ಟಿಕೆಟ್ ಹಂಚಿಕೆಯನ್ನು ಸ್ವಯಂ - ನಂಬಿಕೆಯ ವಿಶ್ವಾಸ ಮತ್ತು ಧೈರ್ಯಗಳೊಂದಿಗೆ ನಿರ್ವಹಿಸುವಲ್ಲ್ಲಿ ಸೋತಿದೆ ಎಂದೇ ಹೇಳಬೇಕು. ಕೊನೇ ನಿಮಿಷದಲ್ಲಿ ಅದು ಎಲ್ಲ ರೀತಿಯ ಒತ್ತಡಗಳಿಗೆ ಮಣಿದಂತೆ ತೋರುತ್ತದೆ. ಪಕ್ಷ ಹಿರಿಯ ನಾಯಕರನ್ನು ಎದುರು ಹಾಕಿಕೊಳ್ಳುವಲ್ಲಿ ತೋರಿಸಿದ ಧೈರ್ಯವನ್ನು, ಹಣದ ಥೈಲಿಗಳೊಂದಿಗೆ ಬಂದ ರಿಯಲ್ ಎಸ್ಟೇಟ್ ಖದೀಮರಿಗೆ, ಗಣಿ ಕುಳಗಳಿಗೆ ಹಾಗೂ ಬಾಯಿ ಬಡುಕರಾದ ಸಿನೆಮಾ ನಟ ನಟಿಯರಿಗೆ ಟಿಕೆಟ್ ನಿರಾಕರಿಸುವಲ್ಲಿ ತೋರಲಾಗಿಲ್ಲ. ಇತರ ಪಕ್ಷಗಳೂ ಇಂತಹ ಅನೇಕ ಖದೀಮ ಹಾಗೂ ಖೊಟ್ಟಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ ಎಂದಷ್ಟೇ ಈ ಪಕ್ಷ ಈ ವಿಷಯವಾಗಿ ಸಮಾಧಾನ ಪಟ್ಟುಕೊಳ್ಳಬಹುದಾಗಿದೆ. ಆದರೂ, ಇತರ ಪಕ್ಷಗಳಿಗೆ ಹೋಲಿಸಿದರೆ, ಈ ಪಕ್ಷದಲ್ಲಿ ಟಿಕೆಟ್‌ಗಾಗಿ ಎದ್ದಿರುವ ಹಾಹಾಕಾರ ಮತ್ತು ಇದರ ಪರಿಣಾಮವಾಗಿ ಸ್ಫೋಟಗೊಂಡಿರುವ ಬಂಡಾಯದ ಪ್ರಮಾಣ ನೋಡಿದರೆ, ಇದು ಜನರ ಕಣ್ಣಲ್ಲಿ ಗೆಲ್ಲುವ ಪಕ್ಷವಾಗಿ ಕಂಡಿರಬಹುದೇ ಎನ್ನುವ ಅನುಮಾನವೂ ಉಂಟಾಗುತ್ತದೆ!

ಇನ್ನು ಬಿ.ಎಸ್.ಪಿ.ಯಾದರೋ, ಮಾಯಾವತಿಯವರು ತಮ್ಮ ಎಂದಿನ ಧಾಷ್ಟ್ರ್ಯತೆಯಿಂದ ಬೆಂಗಳೂರಿನ ಸಾರ್ವಜನಿಕ ಸಭೆಯೊಂದರಲ್ಲೇ ಉಪ ಜಾತಿ ರಾಜಕಾರಣದ ಲೆಕ್ಕಾಚಾರದ ಮೇಲೆ ಬಿ.ಗೋಪಾಲರನ್ನು ಪಕ್ಷದ ನಾಯಕತ್ವದಿಂದ ಉಚ್ಛಾಟಿಸಿದ ನಂತರ ಮಂಕಾಗಿದ್ದುದು, ಈಗ ಚುನಾವಣೆ ಹೊತ್ತಿಗೆ ಇತರ ಪಕ್ಷಗಳ ಅತೃಪ್ತರ ವಲಸೆಯಿಂದಾಗಿ ಚುರುಕಾದಂತಿದೆ. ಆದರೆ ಎಲ್ಲೂ ಸಲ್ಲಲಾಗದ ಹಂತ ತಲುಪಿರುವ ಎಚ್.ಎನ್.ನಂಜೇಗೌಡ, ಹನುಮೇಗೌಡ, ಡಿ.ಟಿ.ಜಯಕುಮಾರರಂತಹ ನಾಯಕರು ಚುನಾವಣೆ ಮುಗಿಯುವವರೆಗೆ ಮಾತ್ರ ಈ ಪಕ್ಷದಲ್ಲಿರಬಲ್ಲರೆಂಬುದು ಬಹುಶಃ ಪಿ.ಜಿ.ಆರ್.ಸಿಂಧ್ಯಾ ಅವರಿಗೂ ಗೊತ್ತಿದೆ. ಆದರೆ ತನ್ನ ಪೂರ್ವ ಯೋಜನೆಯಂತೆ, ಬ್ರಾಹ್ಮಣ ನಾಯಕರನ್ನಾಗಲೀ, ಲಿಂಗಾಯ್ತ ನಾಯಕರನ್ನಾಲೀ ಸೆಳೆಯಲಾಗದ ಪಕ್ಷ; ಸದ್ಯಕ್ಕೆ ಖಾಲಿ ಇರುವುದಕ್ಕಿಂತ ಇಂತಹ 'ಗಣನೀಯ'ರಾದ ಒಂದಷ್ಟು ಜನರನ್ನು ಇರಿಸಿಕೊಳ್ಳುವುದು ಒಳ್ಳೆಯದೆಂದು ಅವರು ಭಾವಿಸಿದಂತಿದೆ! ಹಾಗೆ ನೋಡಿದರೆ, ಸಿಂಧ್ಯಾರ ಸ್ಥಾನ ಮಾನವೇ ಆ ಪಕ್ಷದಲ್ಲಿ ಭದ್ರವಾದಂತಿಲ್ಲ. ರಾಜ್ಯದ ಯಾವ ನಾಯಕರಿಗೂ ಯಾವುದೇ ಅಧಿಕಾರ ನೀಡದ ಮಾಯಾವತಿ, ಕರ್ನಾಟಕದಲ್ಲಿನ ತಮ್ಮ ರಾಜಕಾರಣವನ್ನೆಲ್ಲ ತಮ್ಮ ಪ್ರತಿನಿಧಿ ವೀರ್ ಸಿಂಗ್ ಅವರ ಮೂಲಕವೇ ಮಾಡಿಸುತ್ತಿದ್ದಾರೆ. ಸಿಂಧ್ಯಾರ ಕೆಲಸವೇನಿದ್ದರೂ, ದಲಿತರಲ್ಲಷ್ಟೇ - ಇತ್ತೀಚೆಗಂತೂ ಬಲಗೈನವರಲ್ಲಷ್ಟೇ - ಸಂಘಟನೆಗೊಂಡತ್ತಿದ್ದ ಈ ಪಕ್ಷವನ್ನು ಈಗ ಎಲ್ಲ ಜಾತಿಗಳ ಜನರ ಪಕ್ಷವೆಂದು ಬಿಂಬಿಸುವುದಾಗಿದೆ. ಇದು ಕೂಡಾ ಮಾಯಾವತಿಯವರನ್ನು ದೇಶದ ಪ್ರಧಾನ ಮಂತ್ರಿ ಮಾಡುವುದರ ಹೊರತಾಗೊ ಬೇರಾವ ಉದಾತ್ತ ಉದ್ದೇಶವನ್ನೂ ಬಿಂಬಿಸುತ್ತಿಲ್ಲವಾದ್ದರಿಂದ; ಪಕ್ಷ ಈ ಚುನಾವಣೆಗಳಲ್ಲಿ ಹಲವು 'ಪಕ್ಷಾಂತರಿ'ಗಳಿಗೆ ತನ್ನ ಕಡೆಯಿಂದ ಸ್ಪರ್ಧೆಯ ಅವಕಾಶ ಮಾಡಿಕೊಟ್ಟು, ಇತರ ಪ್ರಮುಖ ಪಕ್ಷಗಳ ಅಭ್ಯರ್ಥಿಗಳಲ್ಲಿ ಆತಂಕ ಉಂಟು ಮಾಡುವ ಮಟ್ಟಿಗೆ 'ಸುದ್ದಿ' ಮಾಡಬಹುದು ಇದರ ಹೊರತಾಗಿ ಇನ್ನಾವ ಪರಿಣಾಮವನ್ನೂ ಉಂಟುಮಾಡಲಾರದೆಂದು ತೋರುತ್ತದೆ. ಹೆಚ್ಚೆಂದರೆ, ಹೋದ ಬಾರಿ ಮಾಡಿದಂತೆ, ಕೆಲವೆಡೆ ಪ್ರಮುಖ ಪಕ್ಷಗಳ ಸೋಲಿಗೆ ಕಾರಣವಾಗಬಹುದು.

ಪರಿಸ್ಥಿತಿ ಹೀಗಿರುವಾಗ ಜನ ಏನು ನೋಡಿ ಮತ ಹಾಕಬೇಕು? ನೈತಿಕತೆ ಹಾಗೂ ರಾಜಕೀಯ ತಾತ್ವಿಕತೆ ಬಗ್ಗೆ ಉಡಾಫೆಯಿಂದ ಮಾತಾಡುವವರನ್ನು ಮೊದಲು ತಿರಸ್ಕರಿಸಬೇಕು. ಜಾತಿ ಹಾಗೂ ಧರ್ಮಗಳ ಹೆಸರಲ್ಲಿ ರಾಜಕಾರಣ ಮಾಡುವವರನ್ನು ತಿರಸ್ಕರಿಸಬೇಕು. ಅಕ್ರಮ ಮಾರ್ಗಗಳ ಮೂಲಕ ದಿಢೀರ್ ಆಸ್ತಿ ಮಾಡಿರುವವರನ್ನು ತಿರಸ್ಕರಿಸಬೇಕು. ಆದಷ್ಟೂ ಸಾತ್ವಿಕರನ್ನು; ಆದರೆ ಕ್ರಿಯಾಶೀಲರಾಗಿರುವವರನ್ನು ಮತ್ತು ಸಭ್ಯ ಜೀವನವನ್ನು ನಡೆಸುತ್ತಿರುವ, ಮಿತವಾದ ಆಸ್ತಿಯನ್ನಷ್ಟೇ ಹೊಂದಿರುವವರನ್ನು ಆರಿಸುವ ಕಡೆ ಗಮನ ಹರಿಸಬೇಕು. ಹೀಗೆ ಆರಿಸುವಾಗ, ಪಕ್ಷ ಅಡ್ಡ ಬಂದರೂ ಅದನ್ನು ತಿರಸ್ಕರಿಸಬೇಕು. ಉದಾಹರಣೆಗೆ, ಸುರೇಶ್ ಕುಮಾರ್, ವಿ.ಎಸ್.ಆಚಾರ್ಯ, ಬಸವರಾಜ ಯತ್ನಾಳ್ ಅಥವಾ ವಿಶ್ವೇಶ್ವರ ಕಾಗೇರಿಯಂತಹವರನ್ನು ಕೋಮುವಾದಿ ಪಕ್ಷಕ್ಕೆ ಸೇರಿದವರೆಂದು ತಿರಸ್ಕರಿಸಲಾದೀತೇ? ಹಾಗೇ, ಪುಟ್ಟೇಗೌಡ, ಸಿ.ನಾರಾಯಣ ಸ್ವಾಮಿ, ಎ.ಟಿ.ರಾಮಸ್ವಾಮಿ ಅಥವಾ ಅಮರನಾಥ ಶೆಟ್ಟಿಯವರಂತಹವರನ್ನು ಕುಟುಂಬ ರಾಜಕಾರಣದ ಸಮರ್ಥಕರೆಂದು ತಿರಸ್ಕರಿಸಲಾದೀತೇ? ಇಂತಹವರು ಯಾವ, ಎಂತಹ ಪಕ್ಷಲ್ಲಿದ್ದರೂ - ಅವರೆಲ್ಲ ವೈಯುಕ್ತಿಕ ದೌರ್ಬಲ್ಯಗಳ ನಡುವೆಯೂ - ಜನ ವಿರೋಧಿಗಳಾಗಲಾರರು. ಏಕೆಂದರೆ ಇಂತಹವರಿನ್ನೂ ಸಾರ್ವಜನಿಕ ಜೀವನದಲ್ಲಿ ನಾಚಿಕೆ ಎಂಬುದನ್ನು ಕಾಪಾಡಿಕೊಂಡು ಬಂದಂತಿದೆ!

ಅಂದ ಹಾಗೆ: ಕಸ್ತೂರಿ ಟಿ.ವಿ. ವಾಹಿನಿ ಆರಂಭವಾದಾಗ, ಅದರ ಮುಖ್ಯಸ್ಥೆ ಅನಿತಾ ಕುಮಾರಸ್ವಾಮಿಯವರು, ಇದಕ್ಕೂ ತಮ್ಮ ಪತಿಯ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಘೋಷಿಸಿದ್ದರು. ಅದನ್ನು ನಂಬಿದ್ದ ಜನ ಈಗ ಕಸ್ತೂರಿ ವಾರ್ತೆಗಳನ್ನು ಕೇಳಿ ಗಾಬರಿಗೊಳ್ಳತೊಡಗಿದ್ದಾರೆ. ಅದು ಎಲ್ಲ ಮಾಧ್ಯಮ ಸಂಹಿತೆ - ಮರ್ಯಾದೆಗಳನ್ನು ಮೀರಿ ಜೆಡಿಎಸ್ ಪಕ್ಷದ ರಣ ಕಹಳೆಯಾಗಿ ಮಾರ್ಪಾಡಾಗಿದೆ!