ನಮ್ಮ ಸಂವಿಧಾನ ನಮ್ಮ ಹೆಮ್ಮೆಯ ಪ್ರತೀಕ

ನಮ್ಮ ಸಂವಿಧಾನ ನಮ್ಮ ಹೆಮ್ಮೆಯ ಪ್ರತೀಕ

ನಮ್ಮ ದೇಶದ ರಾಷ್ಟ್ರೀಯ ಹಬ್ಬಗಳಲ್ಲಿ ಗಣರಾಜ್ಯೋತ್ಸವವೂ ಒಂದಾಗಿದೆ. ನಾವು ಈ ದಿನವನ್ನು ನಮ್ಮ ರಾಷ್ಟ್ರದ ಸಂಸ್ಕೃತಿಯ ತಳಹದಿಯಲ್ಲಿ ಆಚರಿಸುತ್ತಿದ್ದೇವೆ. ಹಿರಿಯರು ಮಾತ್ರ ತಿಳಿದುಕೊಂಡರೆ ಸಾಕೇ? ಸಾಲದು. ನಮ್ಮ ಮಕ್ಕಳಲ್ಲಿ ದೇಶಾಭಿಮಾನ, ರಾಷ್ಟ್ರದ ಬಗ್ಗೆ ಪ್ರೀತಿ, ಒಲವು, ಅಭಿಮಾನ, ರಕ್ಷಣೆಯ ಕಿಚ್ಚು ಮತ್ತು ಕೆಚ್ಚು, ತ್ಯಾಗ, ಬಲಿದಾನಗಳ ಮಹತ್ವ, ಸಂಬಂಧಗಳ ಪರಸ್ಪರ ಉಳಿಸುವಿಕೆ ಇವೆಲ್ಲವನ್ನೂ  ತಿಳಿಯುವುದು ಅವಶ್ಯಕ.

ಹಾಗಾದರೆ ಹೇಗೆ ತಿಳಿಸಬಹುದು?: ಶಾಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಒಂದಷ್ಟು ರಾಷ್ಟ್ರೀಯ ನಾಯಕರ ಮಾತುಗಳು, ಹಿರಿಯರ ನುಡಿಗಳು, ರಾಷ್ಟ್ರದ ಏಳಿಗೆಗೆ ಇರಬೇಕಾದ ಸದ್ಗುಣಗಳು, ಆಚರಣೆಯ ಹಂತಗಳು ಎಲ್ಲವನ್ನೂ ಮಾಹಿತಿ ನೀಡಬೇಕು. ದೇಶವೆಂದರೆ ಅದು ಒಂದು ಸಣ್ಣ ತುಂಡು ನೆಲವಲ್ಲ ಎಂಬುದನ್ನು ಮಕ್ಕಳಿಗೆ ಮನದಟ್ಟು ಮಾಡಬೇಕು.

ದೇಶ, ರಾಷ್ಟ್ರ ಎಂದರೆ ಅದೊಂದು ಸಮಗ್ರವಾದ್ದು, ಪೀಳಿಗೆಯಿಂದ ಪೀಳಿಗೆಗೆ ವಾಸಿಸಲು ಬೇಕಾದ್ದು ಎಂಬ ನಾಗರಿಕ ಪ್ರಜ್ಞೆ ಮೂಡಿಸಬೇಕು. ‘ದೇಶ ನಮಗೇನು ಕೊಟ್ಟಿದೆ ಎಂಬುದಕ್ಕಿಂತಲೂ ದೇಶಕ್ಕೆ ನಾನೇನು ಕೊಡಬಲ್ಲೆ’ ಎಂಬುದನ್ನು ಮಕ್ಕಳಿಗೆ ಕಲಿಸಬೇಕು. ಹಾಗಾದರೆ ಗಣರಾಜ್ಯೋತ್ಸವದ ಈ ಸುಸಂದರ್ಭದಲ್ಲಿ ‘ಪ್ರಜೆಗಳಿಂದ ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ’ ಇರುವ ಚುನಾವಣೆ, ಆಡಳಿತ ಹಾಗೂ ರಾಜಕೀಯ ವ್ಯವಸ್ಥೆಯ ಮೂಲಸ್ವರೂಪವನ್ನು ಮಾಹಿತಿ ನೀಡಬೇಕು. ರಾಜ್ಯಗಳಲ್ಲಿ ಹಂಚಿ ಹೋದ ಆಡಳಿತವನ್ನು, ಸಮಗ್ರ ದೇಶಕ್ಕೆ ಅನ್ವಯವಾಗುವಂತೆ ಏಕರೂಪದಲ್ಲಿ ತರುವುದು, ದಾಸ್ಯದಿಂದ ಬಿಡುಗಡೆಯಾದ ಮೇಲೆ ಗಣರಾಜ್ಯಗಳನ್ನು ಒಟ್ಟುಗೂಡಿಸಿ ಸ್ವತಂತ್ರ ಗಣತಂತ್ರ ಜಾರಿಗೆ ಬಂದ ರೀತಿ ನೀತಿ, ಹಿನ್ನೆಲೆ, ಕಾರಣ ಎಲ್ಲವುಗಳನ್ನು ಹೇಳಬೇಕು.

ದೇಶದ ಪ್ರತಿಯೊಬ್ಬನಿಗೂ ಸಾಮಾಜಿಕ ಭದ್ರತೆ, ಆರ್ಥಿಕ ಸಮಾನತೆ, ಒಂದೇ ಕಾನೂನು ಇರಬೇಕು. ಅದೇ ತತ್ವದಡಿಯಲ್ಲಿಯೇ ನಮ್ಮ ಹೆಮ್ಮೆಯ ಬೃಹತ್ ಲಿಖಿತ ಸಂವಿಧಾನವಿದೆ. ಪ್ರತಿಯೋರ್ವನೂ ಸಂವಿಧಾನವನ್ನು ಗೌರವಿಸಬೇಕು, ಪ್ರೀತಿಸಬೇಕು. ತಮ್ಮ ಕೆಲಸ ಕಾರ್ಯಗಳನ್ನು ಕಾಲಕಾಲಕ್ಕೆ ನಿಯತ್ತಿನಿಂದ ಮಾಡಬೇಕು. ಗುಣಮಟ್ಟದ ಆರೋಗ್ಯ ‌ಸೇವೆ, ರಸ್ತೆಗಳು, ನೆಮ್ಮದಿ, ವೇತನ, ಶುದ್ಧ ಕುಡಿಯುವ ನೀರು, ವಿದ್ಯಾಭ್ಯಾಸಕ್ಕೆ ಬೇಕಾದ ಸಂಸ್ಥೆಗಳು ಎಲ್ಲಾ ಮೂಲಭೂತ ಸೌಲಭ್ಯಗಳೂ ಇರಬೇಕು. ಜಗತ್ತೇ ಗುರುತಿಸುವಂತೆ ಭಾರತ ಅಭಿವೃದ್ಧಿ ಸಾಧಿಸಬೇಕು. ಇಲ್ಲಿ ಧರ್ಮ ಮತ್ತು ರಾಷ್ಟ್ರೀಯತೆ ಎನ್ನುವುದು ಒಂದೇ ನಾಣ್ಯದ ಎರಡು ಮುಖಗಳಂತಿದೆ. ನಮ್ಮ ಉಸಿರೇ ನಮ್ಮ ಧರ್ಮ, ಇದನ್ನು ನಾವೆಲ್ಲ ಅರಿತಾಗ, ಅಖಂಡ ಭಾರತದ ಸಂವಿಧಾನದ ಆಶಯ ಸಫಲತೆಯನ್ನು ಖಂಡಿತಾ ಕಾಣಬಹುದು. ಹಿರಿಯರ ಚಿಂತನಗಳನ್ನು ಈಡೇರಿಸಲು ಸಂವಿಧಾನದಡಿ ಕಟಿಬದ್ಧರಾಗೋಣ.

ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತ್ರತ್ವದಲ್ಲಿ ಸಂವಿಧಾನದ ಕರಡು ಪ್ರತಿ ತಯಾರಿ, ಮುಂದೆ ೧೯೫೦ರ ಜನವರಿ ೨೬ರಂದು ಗಣರಾಜ್ಯ (ಪ್ರಜಾಪ್ರಭುತ್ವ) ದಿನ. ರಾಷ್ಟ್ರವ್ಯಾಪಿ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗದ ವೈಖರಿ, ಇದರ ಹಿಂದಿರುವ ರಾಷ್ಟ್ರ ನಾಯಕರ ಬಲಿದಾನ, ತ್ಯಾಗ, ಕಷ್ಟ ಎಲ್ಲವನ್ನೂ ಹೇಳಬೇಕು. ಜಾತಿ ಮತ, ಲಿಂಗ ತಾರತಮ್ಯ, ಧರ್ಮಾತೀತವಾದ ಭಾವನೆಗಳು, ಕಾನೂನು ಕಟ್ಟಳೆಗಳು ಸಂವಿಧಾನದಡಿಯಲ್ಲಿಯೇ ನಡೆಸಲ್ಪಡಬೇಕು. ಈ ದಿನವನ್ನು ತ್ರಿವರ್ಣ ರಾಷ್ಟ್ರಧ್ವಜ ಏರಿಸುವುದು, ಪ್ರಗತಿಯ ಸಂಕೇತ ಅಶೋಕಚಕ್ರ, ಅಮರ್ ಜವಾನ್ ಜ್ಯೋತಿಗೆ ಪುಷ್ಪನಮನ, ಕವಾಯತುಗಳು, ಸ್ಥಬ್ದ ಚಿತ್ರ ಮೆರವಣಿಗೆ, ಮನರಂಜನಾ ಕಾರ್ಯಕ್ರಮಗಳು ಇತ್ಯಾದಿಗಳನ್ನು ತಿಳಿಸಿಕೊಡಬೇಕು. ಮಾನವೀಯತೆಯ ಗುಣಗಳನ್ನು ತಿಳಿಸಬಹುದು. ಭಾತ್ರತ್ವದ ಸಂದೇಶ, ಕೃಷಿ ಕೆಲಸಕಾರ್ಯಗಳಲ್ಲಿ ಆಸಕ್ತಿ ಬಗ್ಗೆ ತಿಳಿಸಬೇಕು.

ನಮ್ಮನೆಲ, ನಮ್ಮ ಜಲ, ಸಂರಕ್ಷಣೆ, ಹಿರಿಯರಿಗೆ ಗೌರವ, ಕಿರಿಯರಿಗೆ ಪ್ರೀತಿ ತೋರಿಸುವುದನ್ನು ಕಲಿಸಬೇಕು. ನಮ್ಮ ತೋಳುಗಳ ಶಕ್ತಿಯ ಅರಿವಿನ ಬಗ್ಗೆ ಪ್ರೋತ್ಸಾಹಿಸಬೇಕು. ವಿಶ್ವದಲ್ಲಿಯೇ ಬೃಹತ್ ಲಿಖಿತ ಸಂವಿಧಾನ ಭಾರತ ದೇಶದ್ದು. ಈ ಅರಿವು, ಸಂವಿಧಾನ ಲಿಖಿತ ರೂಪದಲ್ಲಿದ್ದು, ಭಾರತೀಯ ಪ್ರಜೆಗಳ ‘ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ’ ಅರಿವನ್ನು ತಿಳಿಸಬೇಕು.

ನಮ್ಮ ರಕ್ಷಣಾ ವ್ಯವಸ್ಥೆಗಳ ಅರಿವಿರಬೇಕು.‌ ಸರ್ವ ಸ್ವತಂತ್ರ ಗಣತಂತ್ರ ಉದಯವಾದ ಈ ದಿನವನ್ನೇ ‘ಗಣರಾಜ್ಯೋತ್ಸವ’ ವೆಂದು ಪ್ರತಿವರ್ಷ ಆಚರಿಸಲಾಗುತ್ತದೆ. ಮಕ್ಕಳ ಚಿತ್ತಬಿತ್ತಿಯಲ್ಲಿ ‘ನಾವೆಲ್ಲರೊಂದೇ ಎಂಬ ಭಾವವಿರುವಂತಹ’ ರೀತಿಯಲ್ಲಿ ಶಿಕ್ಷಣವನ್ನು ನೀಡಬೇಕು. ನಾವೆಲ್ಲರೂ ಭಾರತಾಂಬೆಯ ಮಕ್ಕಳು ‘ಜನನಿ ಜನ್ಮ ಭೂಮಿ’ ಸ್ವರ್ಗದ ಐಶ್ವರ್ಯಕ್ಕಿಂತಲೂ ದೊಡ್ಡದು ಎಂಬುದನ್ನು ಪುಟ್ಟ ಮಕ್ಕಳಿಗೆ ತಿಳಿಸಬೇಕು. ಒಟ್ಟಿನಲ್ಲಿ ಸಂಭ್ರಮ ಸಡಗರಗಳಿಂದ ಗಣರಾಜ್ಯೋತ್ಸವವನ್ನು ಆಚರಿಸುತ್ತಾ ಮಹತ್ವವನ್ನು ತಿಳಿಸುತ್ತಾ ನಾವೆಲ್ಲರೊಂದಾಗಿ ‌ಪ್ರೀತಿ, ವಿಶ್ವಾಸದಿಂದ ಬಾಳೋಣ. ‘ಜೈ ಭಾರತ್ ಮಾತಾ’

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ