ನಮ್ಮ ಸರಕಾರಗಳು ಇದ್ದ ಹಾಸುಗೆಯಲ್ಲಿ ಕಾಲು ಚಾಚದವು...ಸಮಸ್ಯೆಗಳು ‘ಜೈಸೆ ಥೇ’..!

ನಮ್ಮ ಸರಕಾರಗಳು ಇದ್ದ ಹಾಸುಗೆಯಲ್ಲಿ ಕಾಲು ಚಾಚದವು...ಸಮಸ್ಯೆಗಳು ‘ಜೈಸೆ ಥೇ’..!

ಬರಹ

"ನಾವು ಗೌರವಾನ್ವಿತ ಭಿಕ್ಷುಕರು. ವಿವಿಧ ಯೋಜನೆಗಳ ಅನುಷ್ಠಾನಕ್ಕೆ ನೆರವು ನೀಡುವಂತೆ ಕೇಂದ್ರದ ಬಾಗಿಲು ಬಡಿಯುತ್ತಿದ್ದೇವೆ"
-ಹೀಗೆಂದವರು ಪಾಂಡಿಚೆರಿಯ ಮುಖ್ಯಮಂತ್ರಿ ವೈದ್ಯಲಿಂಗಂ.

ಕೇಂದ್ರಾಡಳಿತ ಪ್ರದೇಶ ಪಾಂಡಿಚೆರಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಬೆನ್ನಲ್ಲಿಯೇ ಶುಕ್ರವಾರ ವೈದ್ಯಲಿಂಗಂ ಅವರು ತಮ್ಮನ್ನು ಹಾಗು ತಮ್ಮ ಸಚಿವ ಸಂಪುಟವನ್ನು ‘ಗೌರವಾನ್ವಿತ ಭಿಕ್ಷುಕರು’ ಎಂದು ಕರೆದುಕೊಂಡಿದ್ದಾರೆ. ಯಾಕೆಂದು ವಿವರಿಸಬೇಕಿಲ್ಲ ತಾನೇ?

ಇತ್ತ ನಮ್ಮ ಘನ ರಾಜ್ಯ ಸರಕಾರ ಇತ್ತೀಚೆಗೆ ಕೇಂದ್ರದ ಸಹಕಾರದಲ್ಲಿ, ಕೇಂದ್ರವೇ ರೂಪಿಸಿದ ಸರಕಾರಿ ಶಾಲೆಗಳ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ ‘ಜಲಮಣಿ’ ಅನುಷ್ಠಾನಗೊಳಿಸಲು ತುದಿಗಾಲ ಮೇಲೆ ನಿಂತಿದೆ. ಈ ಯೋಜನೆಯಡಿ ಮೊದಲ ಹಂತದಲ್ಲಿ ೬೦೦೦ ಶಾಲೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ವಿಚಾರ ಮಾಡಲಾಗಿದೆ.

ಪ್ರಾಯೋಗಿಕವಾಗಿ ಪ್ರತಿ ಜಿಲ್ಲೆಗಳಲ್ಲೂ ಎರಡು-ಮೂರು ಶಾಲೆಗಳಲ್ಲಿ ಯೋಜನೆ ಅನುಷ್ಠಾನಗೊಂಡಿದೆ. ಒಟ್ಟು ೨೦೦ ಸರಕಾರಿ ಶಾಲೆಗಳನ್ನು ಆಯ್ಕೆ ಮಾಡಿ ಡಿಸೆಂಬರ್ ಅಂತ್ಯದೊಳಗೆ ರವಾನಿಸುವಂತೆ ಈಗಾಗಲೇ ನಮ್ಮ ಜಿಲ್ಲಾ ಪಂಚಾಯ್ತಿಗಳಿಗೆ ಸೂಚನೆ ಹೋಗಿದೆ. ಸರಕಾರಿ ಶಾಲೆಗಳ ಮಕ್ಕಳಿಗೆ ಲಭ್ಯವಾಗುತ್ತಿರುವ ನೀರು ಶುದ್ಧವಾಗಿಲ್ಲ..ಆ ಮಕ್ಕಳ ಅನಾರೋಗ್ಯಕ್ಕೆ ಕುಡಿಯುವ ನೀರೇ ಮುಖ್ಯ ಕಾರಣ ಎಂಬ ಅಂಶವನ್ನು ಸರ್ವಶಿಕ್ಷಣ ಅಭಿಯಾನದಡಿ ನಡೆಸಿದ ವಿವಿಧ ಸಮೀಕ್ಷೆಗಳ ಮೂಲಕ ದೃಢಪಡಿಸಿಕೊಂಡಿರುವ ಸರಕಾರ, ಈ ಯೋಜನೆ ರೂಪಿಸಿದೆಯಂತೆ!

ಹಾಗೆಯೇ ಶಾಲಾ ಮಕ್ಕಳಿಗೆ ಕುಡಿಯುವ ನೀರನ್ನು ಶುದ್ಧೀಕರಿಸಿ ನೀಡಲು ಜಲ ಶುದ್ಧೀಕರಣ ಯಂತ್ರವನ್ನು ಸಹ ಶಾಲೆಗೆ ಒದಗಿಸಲಾಗುತ್ತಿದೆ. ಬಹುಶ: ‘ಪ್ಯೂರ್ ಇಟ್’ ಮಾದರಿಯ ಅಕ್ವಾಗಾರ್ಡ್ ಉಪಕರಣ ಜಲ ಶುದ್ಧೀಕರಣಕ್ಕಾಗಿ ನೀಡಬಹುದು. ಆಯಾ ಶಾಲೆಗಳ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಸಾಮಾರ್ಥ್ಯದ ಶುದ್ಧೀಕರಣ ಯಂತ್ರ ಕೂಡ ಒದಗಿಸುವ ಯೋಚನೆ ಇದೆ. ಮುಖ್ಯವಾಗಿ ಮಧ್ಯಾನ್ಹ ಬಿಸಿ ಊಟದ ವೇಳೆಗೆ ಹೆಚ್ಚು ಶುದ್ಧೀಕರಣಗೊಂಡ ನೀರು ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಅದೂ ಕೇಂದ್ರದ ಅನುದಾನದಲ್ಲಿ!

ಈಗಾಗಲೇ ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿ ಶಾಲೆಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತದೆ. ಆದರೆ, ಕುಡಿಯುವ ನೀರಿನ ಮೂಲ ಬಹುತೇಕ ಬೋರವೆಲ್, ಬೃಹತ್ ಓವರ್ ಹೆಡ್ ನೀರಿನ ಟ್ಯಾಂಕ್ ಹಾಗು ಕಿರು ನೀರು ಯೋಜನೆಗಳಿಂದ ದೊರಕುತ್ತಿದೆ. ಓವರ್ ಹೆಡ್ ಟ್ಯಾಂಕ್ ನೀರನ್ನು ಹೊರತು ಪಡಿಸಿ, ಈ ಎಲ್ಲ ಮೂಲಗಳ ನೀರು ಶುದ್ಧವಾಗಿಲ್ಲ ಎನ್ನುವ ಅಂಶ ಈಗ ಗುಟ್ಟಾಗಿ ಉಳಿದಿಲ್ಲ.

ಇದಲ್ಲದೇ, ಇತ್ತೀಚೆಗೆ ಕರ್ನಾಟಕ ರಾಜ್ಯ ಸರಕಾರದ ಸಚಿವ ಸಂಪುಟ ಹೊಸ ಖನಿಜ ನೀತಿ- ೨೦೦೮ ಕ್ಕೆ ಅನುಮೋದನೆ ನೀಡಿದ್ದು..ಒಟ್ಟು ೧೫ ಜಿಲ್ಲೆಗಳ ೧೩೭೦ ಗ್ರಾಮಗಳಿಗೆ ಶುದ್ಧ ಕುಡಿಯುವ ಪೂರೈಕೆಗೆ ೧೫೦೦ ಕೋಟಿ ರೂಪಾಯಿಗಳ ನೆರವು ನೀಡುವಂತೆ ವಿಶ್ವ ಬ್ಯಾಂಕ್ ಗೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಪತ್ರಿಕಾ ಮಿತ್ರರಿಗೆ ಹೇಳಿದ್ದಾರೆ.

ಇದು ವಾಸ್ತವ....

ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಕಟ್ಟಕಡೆಯ ಹಳ್ಳಿ ಆಹೆಟ್ಟಿ (ಆಯಟ್ಟಿ). ಮೂರು ಸಾವಿರ ಜನಸಂಖ್ಯೆ. ಹದಿನೆಂಟುನೂರರಷ್ಟು ‘ಪ್ರೌಢ’ ಮತದಾರರನ್ನು ಹೊಂದಿರುವ ಗ್ರಾಮ. ಧಾರವಾಡ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ, ತೊಟ್ಟು ನೀರಿಗೂ ದೈನೇಸಿಯಾಗಿರುವ ಬಾಯಾರಿದ ಹಳ್ಳಿ. ಈ ಶಿರೂರಿನಲ್ಲಿ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಇದೆ. ಈ ಆವರಣದಲ್ಲಿರುವ ನೀರಿನ ಬೃಹತ್ ಟ್ಯಾಂಕ್ ನೆಲಕ್ಕುರುಳಿ ೨ ವರ್ಷಗಳೇ ಗತಿಸಿವೆ. "ಈ ಟ್ಯಾಂಕ್ ಕೆಡವಿ..ಬ್ಯಾರೆ ಮತ್ತೊಂದು ನೀರಿನ ಟ್ಯಾಂಕ್ ಕಟ್ಟಿಕೊಟ್ರೂ ಸಾಕು ನಾವು ಮಕ್ಕಳು-ಮರಿಗಳನ್ನ್ ಕಟ್ಟಗೊಂಡು ನೆಮ್ಮದಿಯಿಂದ ಬದುಕಬಹುದು" ಎನ್ನುತ್ತಾರೆ ಗ್ರಾಮದ ಬಶೀರ್ ಸಾಬ್ ಅಲೀಸಾಬ್ ನದಾಫ್.

"ಶಾಲಾ ಆವರಣದಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಅಡಿಯಲ್ಲಿ ೨೦೦೨-೦೩ ಹಾಗು ೨೦೦೪-೦೫ನೇ ಸಾಲಿನಲ್ಲಿ ಎರೆಡೆರೆಡು ಬಾರಿ ಹತ್ತು ಸಾವಿರ ಖರ್ಚಿಸಿ ಎರಡು ಕುಡಿಯುವ ನೀರಿನ ಟ್ಯಾಂಕ್ ಗಳನ್ನು ನಿರ್ಮಿಸಲಾಗಿದೆ. ಆದರೆ ನೀರಿಲ್ಲ. ನಳಗಳು ಸಹ ಮಾಯವಾಗಿವೆ! ಬಿಸಿಯೂಟ ಯೋಜನೆಯ ಅಡಿಯಲ್ಲಿ ಮಧ್ಯಾನ್ಹ ಊಟ ಮಾಡುವ ಮಕ್ಕಳು ತಾಟು, ಕೈ, ಮುಸುರಿಯ ಬಾಯಿ ಯಾವುದನ್ನೂ ತೊಳೆಯದೇ ಹಾಗೆಯೇ ಇದ್ದು, ಶಾಲೆ ಬಿಡುವ ವರೆಗೆ ಕಾಯುತ್ತಾರೆ. ನಂತರ ಮನೆಗೆ ಹೋಗಿ ತುಪರಿಹಳ್ಳದ ನೀರಿನಲ್ಲಿಯೇ ಮತ್ತೆ ಎಲ್ಲ!" ಎಂದು ವಿಷಾದದಿಂದ ಹೇಳುತ್ತಾರೆ ಆಹೆಟ್ಟಿಯ ಚಂದ್ರು ಶಿಲೋಡಿ.

ಹೀಗೆ ಸಾಕಷ್ಟು ಸರಕಾರಿ ಶಾಲೆಗಳಿವೆ. ಜನ (ಸ್ವ)ಪ್ರತಿನಿಧಿಗಳಿಂದ ಯೋಜನೆಗಳು ಹೀಗೆಯೇ ಕೋಟ್ಯಂತರ ರೂಪಾಯಿ ಖರ್ಚಿನಲ್ಲಿ ತಯಾರಿಸಲ್ಪಟ್ಟು, ಜಿಡ್ಡುಗಟ್ಟಿರುವ, ಕೇಳುವವರೇ ಇಲ್ಲದ ಅಧಿಕಾರಶಾಹಿಯ ಕೈಯಲ್ಲಿ ಅನುಷ್ಠಾಗೊಳ್ಳದೇ, ಅನುಷ್ಠಾನಗೊಂಡರೂ ಸಮರ್ಪಕವಾಗಿರದೇ, ಒಟ್ಟಾರೆ ಫಲಾನುಭವಿಗಳು ಸರಕಾರಿ ಕಡತಗಳಲ್ಲಿ ಮಾತ್ರ ಫಲ ಉಣ್ಣುವುದು ಬಹುಶ: ತಪ್ಪುವುದಿಲ್ಲ! ಅನಿಸುತ್ತದೆ ನನಗೆ. ಇದ್ದ ಎರಡನ್ನು ಸಾಕಲಿಕ್ಕಾಗದವರು ಮೂರನೇಯ್ದನ್ನು ಹೆತ್ತೇನು ಪ್ರಯೋಜನ?

ಜನ ತಾವೇ ಮುಂದೆ ಬರಬೇಕು. ‘ಪಾರ್ಲಿಮೆಂಟ್ (ಲ್ಯಾಬ್) ಟು ಲ್ಯಾಂಡ್’ ಬಿರುಕು ಅವರಿಂದಲೇ ಕೂಡಿಕೊಳ್ಳುವಂತಾಗಬೇಕು. ನಾವೇ ನೈತಿಕವಾಗಿ ಜವಾಬ್ದಾರಿ ಹೊರಬೇಕು. ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮಾಧ್ಯಮಗಳಿಗೆ ನಾವೇ ಧ್ವನಿಯಾಗಬೇಕು. ಏಕೆಂದರೆ..ನಮ್ಮ ಸರಕಾರಗಳು ಇದ್ದ ಹಾಸುಗೆಯಲ್ಲಿ ಕಾಲು ಚಾಚದವು..ಸಾಲ ಮಾಡಿ ಹೋಳಿಗೆ ತಿಂದ ರುಚಿ ಮರೆಯೋದಕ್ಕೆ ಅವುಗಳಿಗೆ ಹೇಗೆ ಸಾದ್ಯ? ಲೆಕ್ಕ ಮಾತ್ರ ನಮ್ಮ (ಪ್ರಜೆಗಳ) ಪಾಲಿಗೆ..ಭೋಗ ಮಾತ್ರ ಅಧಿಕಾರದಲ್ಲಿದ್ದು (ಪ್ರಜಾಪತಿಗೆ) ಉಂಡವನಿಗೆ..ಇದು ಪ್ರಜಾಪ್ರಭುತ್ವದ ಅಣಕ..