ನಮ್ಮ ಸರಕಾರ ಇದ್ದರೇನು ಇಲ್ಲದೇ ಇದ್ದರೇನು ಸ್ವಾಮೀ?

ನಮ್ಮ ಸರಕಾರ ಇದ್ದರೇನು ಇಲ್ಲದೇ ಇದ್ದರೇನು ಸ್ವಾಮೀ?

ಬರಹ

ಬೇರೆ ರಾಜ್ಯದ ಬಂಧುಗಳ ಬಡಿದೆಬ್ಬಿಸಿ ಹೊಡೆದೋಡಿಸಿದ
ಮಾತೃಭೂಮಿಯ ಸ್ವಯಂಘೋಷಿತ ಸೈನಿಕರು ಇಂದೆಲ್ಲಿ
ಬಚ್ಚಿಟ್ಟುಕೊಂಡಿದ್ದರು?

ಹೊರದೇಶದಿಂದ ನಮ್ಮೂರೊಳಗೆ ನುಸುಳಿ ಬಂದು
ನಮ್ಮವರನ್ನೇ ಹೊಡೆದುರುಳಿಸಿ ದೇಶವನೇ ನಡುಗಿಸಿ
ಮೆರೆದಾಗ ಇವರೆಲ್ಲಿದ್ದರು?

ತಮ್ಮ ಬಂಧುಗಳನ್ನೇ ನಿರ್ದಯಿಗಳಾಗಿ ಹೊಡೆಯಲು
ಹೇಸದವರು ಪರದೇಶೀಯರ ಮುಂದೆ ಅದೇಕೆ ಹೀಗೆ
ಹೇಡಿಗಳಾಗಿ ಉಳಿದು ಬಿಟ್ಟರು?

ದಿನಕ್ಕೊಂದು ಭಾಷಣ ಬಿಗಿದು ಜನರನ್ನು ರೊಚ್ಚಿಗೆಬ್ಬಿಸಿ
ಸಮಾಜದ ಶಾಂತಿ ಕೆಡಿಸುತ್ತಿದ್ದ ನಮ್ಮ ಮಣ್ಣಿನ ಮಕ್ಕಳು
ಇಂದೆಲ್ಲಿ ಮರೆಯಾಗಿ ಬಿಟ್ಟರು?

ನಮ್ಮನ್ನು ನಮ್ಮವರ ವಿರುದ್ಧವೇ ಎತ್ತಿ ಕಟ್ಟಿ ಜಗಳಕ್ಕಿಟ್ಟು
ದೂರದಲಿ ನಿಂತು ತಮಾಷೆ ನೋಡಿ ಆನಂದಿಸುವ ನಮ್ಮ
ನೆಚ್ಚಿನ ನಾಯಕರೆಲ್ಲಿದ್ದರು?

ಆಂತರಿಕ ಭದ್ರತೆಯ ಮಾತಂತಿರಲಿ, ಹೊರಗಿನವರಿಗೆಂತ
ಮುಕ್ತ ಪ್ರವೇಶ ಇಲ್ಲಿ, ನೌಕಾದಳ, ಕರಾವಳಿ ಕಾವಲುಪಡೆಯ
ಸೈನಿಕರು ಎಲ್ಲಿದ್ದರು?

ಮರಣಹೊಂದಿದವರ ಕುಟುಂಬಕ್ಕೆ ಪರಿಹಾರ ಧನ ಕೊಟ್ಟು
ಕೈತೊಳೆದುಕೊಳ್ಳುವುದಕ್ಕೆ ನಮ್ಮ ಸರಕಾರ ಇದ್ದರೇನು
ಇಲ್ಲದೇ ಇದ್ದರೇನು ಸ್ವಾಮೀ?

ಭ್ರಷ್ಟಾಚಾರ ಯಾವ ಮಟ್ಟಕ್ಕೆ ರಕ್ತಗತ ಆಗಿ ಬಿಟ್ಟಿದೆ ಇಲ್ಲಿ
ಅನ್ನುವುದರ್ಥವಾಗುತ್ತಿದೆಯಾದರೂ ಇದಕ್ಕೆ ಕಡಿವಾಣ
ಹಾಕುವವರು ಯಾರು ಸ್ವಾಮೀ?
*****************