ನಮ್ಮ ಹಳ್ಳಿಗಳನ್ನು ಉಳಿಸಬೇಕಾದರೆ. . . .

ನಮ್ಮ ಹಳ್ಳಿಗಳನ್ನು ಉಳಿಸಬೇಕಾದರೆ. . . .

ಗ್ರಾಮೀಣ ಭಾರತದಲ್ಲಿ ಏನಾಗುತ್ತಿದೆ? ಹಿಡುವಳಿಗಳು ತುಂಡುತುಂಡಾಗುತ್ತಿವೆ ಎಂಬುದನ್ನು ಅಂಕೆಸಂಖ್ಯೆಗಳು ಹೇಳುತ್ತಿವೆ. 1960-61ರಲ್ಲಿ ದೊಡ್ಡ (10 ಹೆಕ್ಟೇರಿಗಿಂತ ಹೆಚ್ಚು ವಿಸ್ತೀರ್ಣದ) ಹಿಡುವಳಿಗಳ ಸಂಖ್ಯೆ 43.7 ಲಕ್ಷ ಇದ್ದದ್ದು 2010-11ರಲ್ಲಿ 10 ಲಕ್ಷಕ್ಕೆ ಕುಸಿದಿದೆ.

ಜೊತೆಗೆ, ಇದೇ ಅವಧಿಯಲ್ಲಿ, ಗ್ರಾಮೀಣ ಭಾರತದ ಒಟ್ಟು ಹಿಡುವಳಿಗಳ ಸಂಖ್ಯೆ 4 ಕೋಟಿ 80 ಲಕ್ಷದಿಂದ 13 ಕೋಟಿ 70 ಲಕ್ಷಕ್ಕೆ ಏರಿದೆ! ಇವುಗಳಲ್ಲಿ ಶೇಕಡಾ 80 ಹಿಡುವಳಿಗಳ ವಿಸ್ತೀರ್ಣ 2 ಹೆಕ್ಟೇರಿಗಿಂತ ಕಡಿಮೆ. ಇದರ ಮಾಲೀಕರು ಸಣ್ಣ ಮತ್ತು ಅತಿಸಣ್ಣ ರೈತರು. ಇನ್ನು ಸುಮಾರು 20 ವರುಷಗಳಲ್ಲಿ, ಬಹುಪಾಲು ದೊಡ್ಡ ಹಿಡುವಳಿಗಳು ಕುಟುಂಬದ ಸದಸ್ಯರೊಳಗೆ ಪಾಲಾಗಿ, ಸಣ್ಣ ಹಿಡುವಳಿಗಳಾಗಿ ಹರಿದು ಹಂಚಿ ಹೋಗಲಿವೆ.

ಇದರ ಅರ್ಥವೇನೆಂದರೆ, ಇನ್ನು ಇಪ್ಪತ್ತೇ ವರುಷಗಳಲ್ಲಿ ಭಾರತವು ಸಣ್ಣರೈತರ ದೇಶವಾಗಲಿದೆ. ಈ ಕೋಟಿಗಟ್ಟಲೆ ಸಣ್ಣರೈತರಿಗೆ ಎಂತಹ ಭವಿಷ್ಯ ಕಾದಿದೆ? ಅವರ ಹಳ್ಳಿಗಳು ಉಳಿದಾವೇ? ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಕೇಂದ್ರ ಸರಕಾರ ಏಕಮುಖ ಧೋರಣೆ ತಳೆದಿದೆ; "ರೈತರೆಲ್ಲ ನಗರಪಟ್ಟಣಗಳಿಗೆ ವಲಸೆ ಹೊಗಲಿ" ಎನ್ನುತ್ತಿದೆ. ಯಾಕೆಂದರೆ ಕೇಂದ್ರ ಸರಕಾರಕ್ಕೆ ಅಮೆರಿಕದ "ಅಭಿವೃದ್ಧಿ ಮಾದರಿ" ನಮ್ಮ ದೇಶಕ್ಕೂ ಸೂಕ್ತ ಎಂಬ ಭ್ರಮೆ.

ಯುಎಸ್‍ಎ ದೇಶದಲ್ಲಿ 1850ರಲ್ಲಿ ಜನಸಂಖ್ಯೆಯ ಶೇಕಡಾ 80 ಕೃಷಿಯಲ್ಲಿ ತೊಡಗಿದ್ದರೆ, ಇಸವಿ 2000ದಲ್ಲಿ  ಅಂಥವರು ಜನಸಂಖ್ಯೆಯ ಕೇವಲ ಶೇಕಡಾ ಒಂದು ಪಾಲು. ಭಾರತದಲ್ಲಿ ಹೀಗಾಗಲು ಸಾಧ್ಯವೇ? ಅಂಕೆಸಂಖ್ಯೆಗಳನ್ನು ಪರಿಶೀಲಿಸೋಣ; ಯುಎಸ್‍ಎಯಲ್ಲಿ ರೈತರ ಜಮೀನಿನ ಸರಾಸರಿ ವಿಸ್ತೀರ್ಣ 1870ರಲ್ಲಿ 50 ಹೆಕ್ಟೇರ್ ಇದ್ದದ್ದು 2000ನೇ ಇಸವಿಯಲ್ಲಿ 200 ಹೆಕ್ಟೇರಿಗೆ ಜಿಗಿದಿದೆ. ಆದರೆ, ಭಾರತದಲ್ಲಿ ರೈತರ ಜಮೀನಿನ ಸರಾಸರಿ ವಿಸ್ತೀರ್ಣ 1970-71ರಲ್ಲಿ 2.3 ಹೆಕ್ಟೇರ್ ಇದ್ದದ್ದು 2010-11ರಲ್ಲಿ 1.16 ಹೆಕ್ಟೇರಿಗೆ ತಗ್ಗಿದೆ. 2020-21ರಲ್ಲಿ ಇದು ಇನ್ನಷ್ಟು ಕಡಿಮೆಯಾಗಿದೆ.

ಆದರೂ, ಕೇಂದ್ರ ಸರಕಾರವು ಹೆಚ್ಚೆಚ್ಚು ಗ್ರಾಮೀಣ ಜನರನ್ನು ಹಳ್ಳಿಗಳಿಂದ ಹೊರದಬ್ಬಲು ಹವಣಿಸುತ್ತಿದೆ. ನಾಗರಿಕ ಸವಲತ್ತುಗಳನ್ನು ನಗರಪ್ರದೇಶಗಳಲ್ಲಿ ಒದಗಿಸಲಾಗುತ್ತಿದೆ ವಿನಃ ಗ್ರಾಮೀಣ ಪ್ರದೇಶಗಳಿಗೆ ಅವು ದಕ್ಕುತ್ತಿಲ್ಲ. ಉದಾಹರಣೆಗೆ, ಮಹಾನಗರಗಳ ಪ್ಲೈಓವರುಗಳಿಗೆ, ಮೆಟ್ರೋ ರೈಲುಗಳಿಗೆ ಆಗಿರುವ ವೆಚ್ಚ ಸಾವಿರಾರು ಕೋಟಿ ರೂಪಾಯಿಗಳು. ಆದರೆ, ನಮ್ಮ 6 ಲಕ್ಷದ 30 ಸಾವಿರ ಹಳ್ಳಿಗಳಲ್ಲಿ ಬಹುಪಾಲು ಹಳ್ಳಿಗಳಿಗೆ ಇಂದಿಗೂ ಒಂದು ಟಾರ್ ರಸ್ತೆಯನ್ನೂ ಸರಕಾರ ಒದಗಿಸಿಲ್ಲ.

ಗ್ರಾಮೀಣ ಜನರನ್ನು ಅವರ ತಲೆತಲಾಂತರದ ನೆಲದಿಂದ, ಸರಳ ಬದುಕಿನಿಂದ ಕಿತ್ತೊಗೆಯುವುದು ಭಾರತದ ಭವಿಷ್ಯಕ್ಕೆ ಕುತ್ತು. ಯಾಕೆಂದರೆ, ಆರ್ಥಿಕ ಅಭಿವೃದ್ಧಿಯ ಮೂಲಶಕ್ತಿ ಕೃಷಿ. ಅಂತಹ ಕೃಷಿರಂಗವನ್ನು ದುರ್ಬಲಗೊಳಿಸಿದರೆ, ಭಾರತದಂತಹ ಹಳ್ಳಿಗಳ ದೇಶದ ತಳಪಾಯವೇ ದುರ್ಬಲವಾದೀತು. ಅತ್ಯಧಿಕ ಜನಸಂಖ್ಯೆ ಹೊಂದಿದ್ದ ಚೀನಾ, ಜಾಗತಿಕ ಆರ್ಥಿಕ ಕುಸಿತವನ್ನು ಹೇಗೆ ಎದುರಿಸಿತು? ಆಗ ಚೀನಾದಲ್ಲಿ ನಗರಗಳ ಲಕ್ಷಗಟ್ಟಲೆ ಜನರು ತಮ್ಮ ಉದ್ಯೋಗ ಕಳೆದುಕೊಂಡರು; ಆದರೆ ಅವರು ತಮ್ಮ ಹಳ್ಳಿಗಳಿಗೆ ಹಿಂತಿರುಗಿ, ಕೃಷಿಯಲ್ಲಿ ತೊಡಗಿಕೊಂಡರು.

ಚೀನಾದಂತೆ 140 ಕೋಟಿಗಿಂತ ಅಧಿಕ ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿಯೂ ಕೃಷಿರಂಗವನ್ನು ಬಲಪಡಿಸಬೇಕಾದ ಜವಾಬ್ದಾರಿ ಕೇಂದ್ರ ಸರಕಾರಕ್ಕಿದೆ. ಈಗಲೂ ಕಾಲ ಮಿಂಚಿಲ್ಲ. ನಮ್ಮ ದೇಶದಲ್ಲಿ ನೀರಾವರಿ ಕೃಷಿ ಜಮೀನಿನ ಬೆಳೆಗಳ ಉತ್ಪಾದಕತೆಗೆ ಹೋಲಿಸಿದಾಗ, ಮಳೆಯಾಧಾರಿತ ಕೃಷಿ ಜಮೀನಿನದ್ದು ಅರ್ಧಕ್ಕಿಂತ ಕಡಿಮೆ. ಹಾಗೆಯೇ, ಮುಂದುವರಿದ ದೇಶಗಳ ಬೆಳೆಗಳ ಉತ್ಪಾದಕತೆಗೆ ಹೋಲಿಸಿದಾಗ, ನಮ್ಮ ನೀರಾವರಿ ಜಮೀನಿನ ಬೆಳೆಗಳ ಉತ್ಪಾದಕತೆ ಹಲವು ಪಟ್ಟು ಕಡಿಮೆ. ಅಂದರೆ, ನಮ್ಮ ದೇಶದಲ್ಲಿ ವಿವಿಧ ಬೆಳೆಗಳ ಉತ್ಪಾದಕತೆ ಹೆಚ್ಚಿಸಲು ಅವಕಾಶ ವಿಪುಲ. ಸರಕಾರವು ಇದಕ್ಕೆ ಬೆಂಬಲ ನೀಡಿದರೆ, ರೈತರು ಹಳ್ಳಿಗಳಲ್ಲಿಯೇ ಉಳಿಯುತ್ತಾರೆ; ನಮ್ಮ ಹಳ್ಳಿಗಳೂ ಉಳಿಯುತ್ತವೆ.

ನಮ್ಮ ಸರಕಾರಗಳು, "ಹಳ್ಳಿಗಳಲ್ಲೇ ಉಳಿಯಿರಿ" ಎಂದು ನಮ್ಮ ರೈತರನ್ನು ಪುಸಲಾಯಿಸಬೇಕಾಗಿಲ್ಲ. ಯಾಕೆಂದರೆ ನಮ್ಮ ರೈತರು ಹಳ್ಳಿಗಳಲ್ಲೇ ಇದ್ದಾರೆ.

ಹಾಗಾದರೆ, ಸರಕಾರ ಮಾಡಬೇಕಾದ್ದೇನು? ನಮ್ಮ ರೈತರು ತಲೆತಲಾಂತರದ ಕೃಷಿಯನ್ನು ತೊರೆಯಲು ತಯಾರಾಗಿದ್ದಾರೆ ಎಂಬ ತಪ್ಪುಕಲ್ಪನೆಯನ್ನು ತೊಡೆದು ಹಾಕಬೇಕಾಗಿದೆ. ಹಳ್ಳಿಗಳಿಂದ ನಗರಪಟ್ಟಣಗಳಿಗೆ ವಲಸೆ ಸಹಜ. ಕೃಷಿಕುಟುಂಬಗಳ ಕೆಲವು ಸದಸ್ಯರು ಉದ್ಯೋಗ ಹುಡುಕುತ್ತಾ ನಗರಪಟ್ಟಣಗಳಿಗೆ ಬರುತ್ತಾರೆ. ಅವರು ಸ್ವಯಂಪ್ರೇರಿತರಾಗಿ ಬರುವುದರಿಂದ ತೊಂದರೆಯಿಲ್ಲ. ಆದರೆ, ಕೃಷಿಕುಟುಂಬಗಳು ಹಳ್ಳಿಗಳಲ್ಲಿ ಬದುಕಲಾಗದಂತಹ ಪರಿಸ್ಥಿತಿ ಉಂಟು ಮಾಡಿ, ಅವರನ್ನು ನಗರಪಟ್ಟಣಗಳಿಗೆ ಬಲವಂತವಾಗಿ ವಲಸೆ ಹೋಗುವಂತೆ ಮಾಡಿದರೆ, ಅದರಿಂದಲೇ ನಮ್ಮ ದೇಶಕ್ಕೆ ತೊಂದರೆ ಕಾದಿದೆ.

ಇಂದಿಗೂ ಭಾರತದ ಶೇಕಡಾ 60ರಷ್ಟು ಜನರು ಬದುಕುತ್ತಿರುವುದು ನಮ್ಮ ಹಳ್ಳಿಗಳಲ್ಲಿ. ಅವರೆಲ್ಲರೂ, (ಅಮೆರಿಕದಲ್ಲಿ ಆದಂತೆ) ನಗರಪಟ್ಟಣಗಳಿಗೆ ವಲಸೆ ಬಂದು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಹಾಗಾಗಿ, ಸರಕಾರಗಳು ನಮ್ಮ ರೈತರಿಗೆ ತಮ್ಮತಮ್ಮ ಹಳ್ಳಿಗಳಲ್ಲೇ ಬದುಕು ಕಟ್ಟಿಕೊಳ್ಳಲು ಬೆಂಬಲ ನೀಡಲಿ. ಆ ಮೂಲಕ ನಮ್ಮ ಹಳ್ಳಿಗಳನ್ನೂ ಉಳಿಸಲಿ.