ನಮ್ಮ ಹೆಮ್ಮೆಯ ಭಾರತ (ಭಾಗ 31 - 32)

ನಮ್ಮ ಹೆಮ್ಮೆಯ ಭಾರತ (ಭಾಗ 31 - 32)

೩೧.ಸಿಂಹಬಾಲದ ಕೋತಿ
ಪುರಾತನ ಸ್ಪಿಷೀಸ್ ಆಗಿರುವ ಸಿಂಹಬಾಲದ ಕೋಟಿ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡು ಬರುತ್ತದೆ. ಇವುಗಳಿಗೆ ಕಪ್ಪು ಬಣ್ಣದ ನಯವಾದ ರೋಮಗಳಿವೆ. ಮುಖಕ್ಕೆ ಮುಖವಾಡ ಇಟ್ಟಂತೆ ಕಂದು ಬಣದ ಕೂದಲು ಆವರಿಸಿಕೊಂಡಿದೆ. ಸಿಂಹದ ಬಾಲದಂತಹ ಬಾಲವಿರುವ ಕಾರಣ ಇವುಗಳಿಗೆ ಈ ಹೆಸರು.

ಮಳೆಕಾಡಿನ ಮರಗಳಲ್ಲಿ ಇವುಗಳ ವಾಸ. ಹಣ್ಣುಗಳು ಮತ್ತು ಎಲೆಗಳು ಪ್ರಧಾನ ಆಹಾರ. ಅವಲ್ಲದೆ, ಬೀಜಗಳು, ಚಿಗುರುಗಳು, ಬೇರುಗಳು ಮತ್ತು ಮರಗಳ ತೊಗಟೆಯನ್ನೂ ತಿನ್ನುತ್ತವೆ. ಹಲ್ಲಿಗಳು, ಕಪ್ಪೆಗಳು, ಕೀಟಗಳು ಮತ್ತು ಮೊಟ್ಟೆಗಳನ್ನೂ ತಿನ್ನುತ್ತವೆ.

ಮನೆಯಲ್ಲಿ ಸಾಕುಪ್ರಾಣಿಯಾಗಿ ಸಾಕಲಿಕ್ಕಾಗಿ, ಪ್ರಾಣಿ ಸಂಗ್ರಹಾಲಯಗಳಿಗಾಗಿ ಮತ್ತು ಸಂಶೋಧನಾಲಯಗಳಲ್ಲಿ ಸಂಶೋಧನೆಗಳಿಗಾಗಿ ಇವನ್ನು ಸಾವಿರಸಾವಿರ ಸಂಖ್ಯೆಯಲ್ಲಿ ಹಿಡಿಯಲಾಯಿತು. ಹಾಗಾಗಿ ಇವುಗಳ ಸಂಖ್ಯೆ ತೀರಾ ಕಡಿಮೆಯಾಗುತ್ತಾ ಬಂದು, ಈಗ ಇವುಗಳ ಹೆಸರು ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿದೆ.

೩೨.ಭಾರತ ಮತ್ತು ನೇಪಾಳದಲ್ಲಿ ಮಾತ್ರ ಇರುವ ಭಾರತೀಯ ಖಡ್ಗಮೃಗ
ಭಾರತೀಯ ಖಡ್ಗಮೃಗ ಒಂದು ಕೊಂಬಿನ ಪ್ರಾಣಿ (ಈ ಕೊಂಬು ಮೂತಿಯ ತುದಿಯಲ್ಲಿದೆ.) ಗಂಡು ಮತ್ತು ಹೆಣ್ಣು ಎರಡಕ್ಕೂ  ಕೊಂಬು ಇರುತ್ತದೆ. ಇದು ಉತ್ತರ ಭಾರತ ಮತ್ತು ನೇಪಾಳದಲ್ಲಿ ಮಾತ್ರ ಕಂಡು ಬರುತ್ತದೆ.

ಇವುಗಳ ಚರ್ಮ ಬಹಳ ದಪ್ಪ; ದೇಹದ ರಕ್ಷಣೆಗೆ ಸೂಕ್ತ. ದೈತ್ಯ ಗಾತ್ರದ ಪ್ರಾಣಿಯಾದರೂ ಸುಲಭವಾಗಿ ಜಿಗಿಯಬಲ್ಲದು ಮತ್ತು ಓಡುವ ದಿಕ್ಕನ್ನು ಫಕ್ಕನೆ ಬದಲಿಸಬಲ್ಲದು. ಇವು ನೀರಿನಲ್ಲಿ ಸಲೀಸಾಗಿ ಈಜಬಲ್ಲವು. ಇವುಗಳ ಕೊಂಬಿಗಾಗಿ ಇವನ್ನು ಈಗಲೂ ದುಷ್ಕರ್ಮಿಗಳು ಕೊಲ್ಲುತ್ತಲೇ ಇದ್ದಾರೆ; ಯಾಕೆಂದರೆ ಈ ಕೊಂಬಿಗೆ ಔಷಧೀಯ ಗುಣವಿದೆ ಎಂಬ ಮೂಢ ನಂಬಿಕೆಯಿಂದಾಗಿ ಇದಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ! ಇದರಿಂದಾಗಿ ಈಗ ಕೇವಲ ೨,೦೦೦ ಖಡ್ಗಮೃಗಗಳು ಉಳಿದಿವೆ.

ಚಿತ್ರ ಕೃಪೆ: ಸಿಂಹಬಾಲದ ಕೋತಿ - ದ ಹಿಂದೂ ಪತ್ರಿಕೆ

             ಭಾರತೀಯ ಖಡ್ಗಮೃಗ - ವಿಕಿಪೀಡಿಯಾ